ಖಾಸಗಿ ಬಸ್​​ಗಳಲ್ಲಿ ಕನ್ನಡ ಮಾಯ! ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ, ಕ್ರಮಕ್ಕೆ ಆಗ್ರಹ

ಕರ್ನಾಟಕದಲ್ಲಿ ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆಯ ಬಳಕೆ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ ವ್ಯಕ್ತಪಡಿಸಿದೆ. ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಗಳನ್ನು ಬಳಸಲಾಗುತ್ತಿದೆ. ಈ ಬಗ್ಗೆ ಸಾರಿಗೆ ಇಲಾಖೆಗೆ ಪ್ರಾಧಿಕಾರದ ಅಧ್ಯಕ್ಷ ಪತ್ರ ಬರೆದು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಖಾಸಗಿ ಬಸ್​​ಗಳಲ್ಲಿ ಕನ್ನಡ ಮಾಯ! ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ, ಕ್ರಮಕ್ಕೆ ಆಗ್ರಹ
ಖಾಸಗಿ ಬಸ್​
Edited By:

Updated on: Aug 20, 2025 | 8:32 AM

ಬೆಂಗಳೂರು, ಆಗಸ್ಟ್​ 20: ಇತ್ತೀಚಿನ ದಿನಗಳಲ್ಲಿ ಕರ್ನಾಟಕದೊಳಗೆ (Karnataka) ಸಂಚರಿಸುವ ಸ್ಥಳೀಯರ ಮಾಲೀಕತ್ವದ ಖಾಸಗಿ ಬಸ್​​ಗಳ ಮೇಲೆ ಕನ್ನಡ (kannada) ಸಂಪೂರ್ಣವಾಗಿ ಮಾಯವಾಗಿದೆ. ಇದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಅಂತಹವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸಾರಿಗೆ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ.

ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್​ಗಳ ಮೇಲೆ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಗಳನ್ನು ಬಳಸಲಾಗುತ್ತಿದೆ. ಹಾಗಾಗಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಬಸ್​​ಗಳ ಮೇಲೆ ಕನ್ನಡ ಇರುವಂತೆ ನೋಡಿಕೊಳ್ಳಲು ರಾಜ್ಯ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ ಸಂಸ್ಥೆಗಳು ಮತ್ತು ಮಾಲೀಕರ ಮೇಲೆ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ
ಗೊಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ ಸರ್ಕಾರದ ​ಶಕ್ತಿ ಯೋಜನೆ
ಬೆಂಗಳೂರು: ಹಳದಿ ಮೆಟ್ರೋ ಮಾರ್ಗ ಆರಂಭ ಬೆನ್ನಲ್ಲೇ ಉಚಿತ ಫೀಡರ್ ಬಸ್ ಸೇವೆ
ಮಹಿಳಾ ಅಧಿಕಾರಿ ವಿರುದ್ಧ ಅವಾಚ್ಯ ಪದಗಳ ಬಳಕೆ, ನಿಂದನೆ
ಪ್ರಯಾಣಿಕರನ್ನ ಕರೆದೊಯ್ಯಲು ಪೈಪೋಟಿ: ಕ್ಲೀನರ್​​ನ ಕೂಡಿಹಾಕಿದ ಸಿಬ್ಬಂದಿ

ಇದನ್ನೂ ಓದಿ: ಗೊಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ ಸಿದ್ದರಾಮಯ್ಯ ಸರ್ಕಾರದ ​ಶಕ್ತಿ ಯೋಜನೆ

ಕರ್ನಾಟಕ ರಾಜ್ಯದ ಒಳಗೆ ಸಂಚರಿಸುವ ಸ್ಥಳೀಯರ ಮಾಲೀಕತ್ವದ ಅನೇಕ ಬಸ್​ಗಳ ಮೇಲೆ ಇರುವ ಫಲಕಗಳು ಹಾಗೂ ಬಸ್​ ಹೆಸರುಗಳಲ್ಲಿ ಕೂಡ ಕನ್ನಡ ಭಾಷೆ ಸಂಪೂರ್ಣವಾಗಿ ಕಾಣೆಯಾಗಿದ್ದು, ಸಾರಿಗೆ ಇಲಾಖೆ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಪತ್ರ ಬರೆದಿದ್ದಾರೆ.

ಚರ್ಚೆ ಮಾಡಿ ಕ್ರಮವೆಂದ ಸಿ.ಮಲ್ಲಿಕಾರ್ಜುನ

ಇನ್ನು ಈ ಬಗ್ಗೆ ಮಾತನಾಡಿದ ರಾಜ್ಯ ಸಾರಿಗೆ ಇಲಾಖೆ ಆಯುಕ್ತ ಸಿ.ಮಲ್ಲಿಕಾರ್ಜುನ, ಈಗಾಗಲೇ ಪತ್ರ ನಮಗೆ ತಲುಪಿದೆ. ಈ ಬಗ್ಗೆ ಚರ್ಚೆ ಮಾಡಿ ಯಾವ ಕ್ರಮಕೈಗೊಳ್ಳಬಹುದು ಎಂದು ತಿರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ಕುರಿತಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ಆಯುಕ್ತರಿಗೆ ಪತ್ರ ಬರೆದಿರುವ ಬಿಳಿಮಲೆ, ಖಾಸಗಿ ಸಾರಿಗೆ ಸಂಸ್ಥೆಗಳು ಅನಿಯಂತ್ರಿತವಾಗಿ ಕನ್ನಡವನ್ನು ಕಡೆಗಣಿಸುವುದು ಸಾಮಾಜಿಕವಾಗಿ ತಪ್ಪು ಸಂದೇಶವನ್ನು ರವಾನಿಸುತ್ತದೆ. ವಾಹನಗಳ ಸಂಚಾರಕ್ಕೆ ಪರವಾನಗಿ ನೀಡುವ ಅಥವಾ ನವೀಕರಣ ಮಾಡುವ ಸಂದರ್ಭದಲ್ಲಿ ಇದನ್ನು ಹೆಚ್ಚಿನ ಮುತುವರ್ಜಿಯಿಂದ ಇಲಾಖೆ ಗಮನ ವಹಿಸಬೇಕಾಗುತ್ತದೆ ಎಂದಿದ್ದಾರೆ.

ಕೂಡಲೇ ಈ ವಿಷಯವನ್ನು ಸಾರಿಗೆ ಇಲಾಖೆ ಅಭಿಯಾನದ ಮಾದರಿಯಲ್ಲಿ ಕೈಗೆತ್ತಿಕೊಂಡು ರಾಜ್ಯದಲ್ಲಿ ವ್ಯವಹರಿಸುವ ಖಾಸಗಿ ಸಾರಿಗೆ ಸಂಸ್ಥೆಗಳು ತಮ್ಮ ವಾಹನಗಳ ಮೇಲೆ ಕನ್ನಡ ಭಾಷೆಯಲ್ಲಿ ಫಲಕಗಳು ಮತ್ತು ಹೆಸರುಗಳನ್ನು ಅಳವಡಿಸುವಲ್ಲಿ ಕೂಡಲೇ ಕ್ರಮವಹಿಸಲು ನಿರ್ದೇಶನ ನೀಡಬೇಕು. ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪುರುಷೋತ್ತಮ ಬಿಳಿಮಲೆ ವಿರುದ್ಧ ನಟರಾಜ್ ಶರ್ಮ ಕಿಡಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ, ರಾಜ್ಯದ ಖಾಸಗಿ ಬಸ್ ಮಾಲೀಕರು ಕನ್ನಡಿಗರು. ಕೆಎಸ್​​ಆರ್​​ಟಿಸಿ, ಬಿಎಂಟಿಸಿ ಬಸ್​ಗಳ ಮೇಲೂ ಕನ್ನಡ ಇಲ್ಲ, ಅವರ ಮೇಲೆ ಕ್ರಮಕ್ಕೆ ಮುಂದಾಗುತ್ತಾರೆ ಎಂದು ಪ್ರಶ್ನಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪ್ರಚಾರ ಬೇಕು ಹಾಗಾಗಿ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಬಸ್ ಬ್ರೇಕ್ ಫೇಲ್, ಮುಂದೇನಾಯ್ತು ನೋಡಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ಮರೆಯುತ್ತಿರುವ ಖಾಸಗಿ ಬಸ್​ಗಳ ಮೇಲೆ ಕ್ರಮಕೈಗೊಳ್ಳಿ ಎಂದು ಪತ್ರ ಬರೆದಿದ್ದಾರೆ. ಆದರೆ ಈ ಬಗ್ಗೆ ಸಾರಿಗೆ ಇಲಾಖೆ ಆಯುಕ್ತರು ಯಾವ ಕ್ರಮ ಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.