ದೇಶ, ರಾಜ್ಯ, ವಿದೇಶ, ಅಪರಾಧ, ಶೈಕ್ಷಣಿಕ ಮತ್ತು ವಾಣಿಜ್ಯ ಕುರಿತಾದ ಇಂದಿನ ಪ್ರಮುಖ ಸುದ್ದಿಗಳು: ಬೆಂಗಳೂರಲ್ಲಿ ಕೋವಿಶೀಲ್ಡ್ ಲಸಿಕೆ ನೋ ಸ್ಟಾಕ್, ಯುಎಇಯಿಂದ ಭಾರತಕ್ಕೆ ಪ್ರಯಾಣಿಸುವವರಿಗೆ ಕೋವಿಡ್ ಮಾರ್ಗಸೂಚಿ, ಆರ್.ವಿ. ದೇಶಪಾಂಡೆಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಗರಿ, 17 ವರ್ಷದ ಬಾಲಕಿಯ ಕತ್ತು ಸೀಳಿ ಹತ್ಯೆ, ಪ್ರೇಮಿಯ ಬಂಧನ, ಡಿ.29 ರಂದು PGCET 2022 ಫಲಿತಾಂಶ ಪ್ರಕಟ, ಪರಿಶೀಲಿಸುವುದು ಹೇಗೆ? ಎಂಬುವುದನ್ನು ಒಳಗೊಂಡ ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ ಓದಿ.
ಪ್ರಧಾನಿ ಮೋದಿ ತಾಯಿ ಆರೋಗ್ಯ ಸುಧಾರಿಸುತ್ತಿದೆ ಎಂದು ಯುಎನ್ ಮೆಹ್ತಾ ಆಸ್ಪತ್ರೆಯ ವೈದ್ಯರು ಈ ಮಾಹಿತಿಯನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯುಎನ್ ಮೆಹ್ತಾ ಆಸ್ಪತ್ರೆಯಿಂದ ದೆಹಲಿಗೆ ತೆರಳಿದ್ದಾರೆ. ಅವರು ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಸುಮಾರು ಒಂದೂವರೆ ಗಂಟೆಗಳವರೆಗೆ ತಾಯಿ ಜೊತೆಗೆ ಸಮಯ ಕಳೆದಿದ್ದಾರೆ. ಇದೇ ವೇಳೆ ವೈದ್ಯರಿಂದ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಕೋವಿಡ್ನ BF.7 ತಳಿ ಆತಂಕ ಹುಟ್ಟಿಸಿದೆ. ಅದೇ ವೇಳೆ ಬೇರೆ ಯಾವುದೇ ಕೊರೊನಾವೈರಸ್ ಅಲೆ ಇರುವುದಿಲ್ಲ ಎಂದು ತಜ್ಞರು ಸೂಚಿಸಿದ್ದರೂ, ಹೆಚ್ಚುತ್ತಿರುವ ಪ್ರಕರಣಗಳ ಭಯ ಇದ್ದೇ ಇದೆ. ಮುಂದಿನ 40 ದಿನಗಳು ನಿರ್ಣಾಯಕವಾಗಲಿವೆ. ಏಕೆಂದರೆ ಭಾರತವು ಜನವರಿ ಮಧ್ಯದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣವನ್ನು ಹಿಂದಿನ ಪ್ರವೃತ್ತಿಗಳ ಮೂಲಕ ನೋಡಬಹುದು ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ಯಾವ ರೀತಿಯ ಕೊವಿಡ್ ನಿಯಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಯುಎಇಯಿಂದ ಭಾರತಕ್ಕೆ ಬರುವ ಎಲ್ಲ ಪ್ರಯಾಣಿಕರು ತಮ್ಮ ದೇಶದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣಪತ್ರವನ್ನು ಹೊಂದಿರಬೇಕು. ವಿಮಾನದಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್‌ಗಳ ಬಳಕೆ ಮಾಡಬೇಕು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ದೇಶದಲ್ಲಿ ಕೊರೊನಾ ರೂಪಾಂತರ ತಳಿ ಬಿಎಫ್.7 ಸೋಂಕು ಪತ್ತೆಯಾಗಿದ್ದು, ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಬೆನ್ನಲ್ಲೇ ಕೊರೊನಾ ರೂಪಾಂತರ ತಳಿ ಬಿಎಫ್.7 ಸೋಂಕು ಪತ್ತೆಯಾದ ರೋಗಿಗಳಿಗೆ ರಾಜ್ಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್ ನೌ ವರದಿ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಶಾಸಕ, ಮಾಜಿ ಸಚಿವ ರಘುನಾಥರಾವ ವಿಶ್ವನಾಥರಾವ್ ದೇಶಪಾಂಡೆ ಅವರಿಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
ನೆರೆ ರಾಷ್ಟ್ರಗಳಲ್ಲಿ ಮಾಹಾಮಾರಿ ಕೊರೊನಾ ನರ್ತನ ಹೆಚ್ಚಾಗಿದ್ದು ರಾಜ್ಯದಲ್ಲೂ ಕೊರೊನಾ ಆತಂಕ ಹುಟ್ಟುಕೊಂಡಿದೆ. ಹೀಗಿರುವಾಗ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಜನರು ಪರದಾಡುವಂತ್ತಾಗಿದೆ. ಸಿಲಿಕಾನ್ ಸಿಟಿಯ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಇಲ್ಲ. ಕೋವಿಶಿಲ್ಡ್ ವ್ಯಾಕ್ಸಿನ್ ಲಭ್ಯ ಇಲ್ಲದ ಹಿನ್ನಲೆ ಲಸಿಕಾ ಕೇಂದ್ರಗಳು ಪರ್ಯಾಯವಾಗಿ ಕೋರ್ಬಿವ್ಯಾಕ್ಸ್ ಲಸಿಕೆ ನೀಡುತ್ತಿವೆ. ಕೋವಿಶಿಲ್ಡ್ ಪಡೆದವರು ಕೋರ್ಬಿವ್ಯಾಕ್ಸ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಉಜ್ಬೇಕಿಸ್ತಾನ್: ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿನ ಪ್ರಕರಣದ ನಂತರ, ಉಜ್ಬೇಕಿಸ್ತಾನ್‌ನ ಆರೋಗ್ಯ ಸಚಿವಾಲಯವು ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿ ದೇಶದಲ್ಲಿ 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ. ತೀವ್ರ ಉಸಿರಾಟದ ಕಾಯಿಲೆ ಇರುವ 21 ಮಕ್ಕಳಲ್ಲಿ 18 ಮಕ್ಕಳು ಡಾಕ್-1 ಮ್ಯಾಕ್ಸ್ ಸಿರಪ್ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಕುಖ್ಯಾತ ರೌಡಿಶೀಟರ್ ಸಮ್ಮೀರ್ ಖಾನ್ ಅಲಿಯಾಸ್ ಬಾಸ್ನನ್ನು ಶೇಷಾದ್ರಿಪುರಂ ಎಸಿಪಿ ತಂಡದ ನೇತೃತ್ವದಲ್ಲಿ ಅರೆಸ್ಟ್ ಮಾಡಲಾಗಿದೆ. ದೆಹಲಿಯ ದರ್ಗಾವೊಂದರಲ್ಲಿ ತಲೆಮರೆಸಿಕೊಂಡಿದ್ದಾಗ ಅರೆಸ್ಟ್ ಮಾಡಿದ್ದಾರೆ. ಸಮ್ಮೀರ್ ಖಾನ್ 16 ಕೇಸ್ಗಳಲ್ಲಿ ಆರೋಪಿಯಾಗಿದ್ದಾನೆ. ಬೆಂಗಳೂರಿನ ಎಸ್ಜಿ ಪಾಳ್ಯ, ಮೈಕೋ ಲೇಔಟ್, ವಿಲ್ಸನ್ ಗಾರ್ಡನ್, ಶೇಷಾದ್ರಿಪುರಂ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.
ತಿರುವನಂತಪುರಂ ಸಮೀಪದ ವರ್ಕಲದ ವಡಸ್ಸೆರಿಕೋಣಂ ಎಂಬಲ್ಲಿ ಬುಧವಾರ ಮುಂಜಾನೆ 17 ವರ್ಷದ ಬಾಲಕಿಯೊಬ್ಬಳು ಮನೆಯ ಹೊರಗೆ ಕತ್ತು ಸೀಳಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಮಾಡಲಾಲಗಿದೆ. ಮೃತ ಬಾಲಕಿ ಕೆಲ ದಿನಗಳಿಂದ ಪ್ರೀತಿಸುತ್ತಿದ್ದಳು ಎನ್ನಲಾದ ಆಕೆಯ ಸ್ನೇಹಿತ ಗೋಪು (20) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ 2022 ಪರೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 29, 2022 ರಂದು ಪ್ರಕಟಿಸುತ್ತದೆ. ಪರೀಕ್ಷೆ ಹಾಜರಾಗಿರುವ ಅಭ್ಯರ್ಥಿಗಳು PGCET 2022 ಪರೀಕ್ಷೆಯು kea.kar.nic.in ನಲ್ಲಿ KEA ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕರ್ನಾಟಕ PGCET 2022 ಫಲಿತಾಂಶವನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಸಂಜೆ 4 ಗಂಟೆಯ ನಂತರ ಫಲಿತಾಂಶ ಹೊರಬೀಳಲಿದೆ. (ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:36 pm, Wed, 28 December 22