Ramadevara Betta: ಚುನಾವಣೆ ನಿಮಿತ್ತ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಯ್ತಾ ಬಿಜೆಪಿ?
ಚುನಾವಣೆ ಹೊತ್ತಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ರಾಮ ಮಂದಿರದ ಜಪ ಮಾಡುತ್ತಿದೆ. ಈ ವಿಚಾರ ಸರ್ಕಾರ ಹಾಗೂ ವಿರೋಧ ಪಕ್ಷದವರ ಮಾತಿನ ಸಮರಕ್ಕೂ ಕೂಡ ಕಾರಣವಾಗಿದೆ.
ಅದು ಶ್ರೀರಾಮ ವನವಾಸದ ಕಾಲದಲ್ಲಿ ಬಂದಿದ್ದ ಸ್ಥಳ. ಅಲ್ಲಿ ಶ್ರೀ ಪಟ್ಟಾಭಿರಾಮನ ಅಪರೂಪದ ದೇವಸ್ಥಾನ ಕೂಡ ಇದೆ. ಅಷ್ಟೇ ಅಲ್ಲದೆ ಅದನ್ನ ಶೋಲೆ ಬೆಟ್ಟ ಎಂತಲೂ ಕೂಡ ಕರೆಯಲಾಗುತ್ತದೆ. ಇದೇ ಬೆಟ್ಟದಲ್ಲಿ ಇದೀಗ ರಾಮ ಮಂದಿರ ನಿರ್ಮಾಣ ಮಾಡಲು ಬಿಜೆಪಿ ಪ್ಲಾನ್ ರೂಪಿಸುತ್ತಿದೆ. ಚುನಾವಣೆ ಹೊತ್ತಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ರಾಮ ಮಂದಿರದ (Ram Mandir) ಜಪ ಮಾಡುತ್ತಿದೆ. ಈ ವಿಚಾರ ಸರ್ಕಾರ ಹಾಗೂ ವಿರೋಧ ಪಕ್ಷದವರ ಮಾತಿನ ಸಮರಕ್ಕೂ ಕೂಡ ಕಾರಣವಾಗಿದೆ. ಹೌದು ರಾಮನಗರದ ಶ್ರೀರಾಮ ದೇವರ ಬೆಟ್ಟದಲ್ಲಿ (Ramdevara Betta) ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಪ್ಲಾನ್ ರೂಪಿಸಿದೆ. ಅಂದಹಾಗೆ ಸಿಲಿಕಾನ್ ಸಿಟಿ ಜನರ ಅಚ್ಚುಮೆಚ್ಚಿನ ತಾಣ ಇದು. ಪಕ್ಷಿ ಪ್ರಿಯರ ನೆಚ್ಚಿನ ಸ್ಥಳ. ಶೋಲೆ ಬೆಟ್ಟ ಎಂತಲೇ ಖ್ಯಾತಿ ಪಡೆದಿರೋ ಸ್ಥಳ. ರಣಹದ್ದುಗಳ ವನ್ಯಜೀವಿಧಾಮ. ಇಂತಹ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ರಾಜ್ಯ ಬಿಜೆಪಿ ಸರ್ಕಾರ (C N Ashwath Narayan) ಪ್ಲಾನ್ ರೂಪಿಸಿದ್ದು, ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಭದ್ರಕೋಟೆ ರಾಮನಗರದಲ್ಲಿ (Ramanagara) ಬಿಜೆಪಿಯನ್ನ ಬಲವರ್ಧಿಸಲು ಮಾಸ್ಟರ್ ಪ್ಲಾನ್ ಮಾಡಿದೆ.
ಅಂದಹಾಗೆ ರಾಮನಗರದ ರಾಮದೇವರಬೆಟ್ಟ ವಿನಾಶದ ಅಂಚಿನಲ್ಲಿರುವ ರಣಹದ್ದುಗಳ ವನ್ಯಜೀವಿಧಾಮ. ಇನ್ನು ಈ ಬೆಟ್ಟಕ್ಕೆ ಸಾಕಷ್ಟು ಇತಿಹಾಸವಿದೆ. ಬೆಟ್ಟದ ಮೇಲೆ ಶ್ರೀ ಪಟ್ಟಾಭಿರಾಮ ದೇವಸ್ಥಾನವಿದ್ದು, ತನ್ನದೆ ಆದ ಇತಿಹಾಸವಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀ ರಾಮ ದೇವನು, ಏಕಶಿಲೆಯಲ್ಲಿ ಕುಳಿತ ಭಂಗಿಯಲ್ಲಿ ಕೆತ್ತತ್ತಾದ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ವಿಗ್ರಹದ ಎಡಭಾಗದ ತೊಡೆಯ ಮೇಲೆ ಸೀತಾ ದೇವಿ ಕುಳಿತಿದ್ದರೇ, ಬಲ ಭಾಗದಲ್ಲಿ ಲಕ್ಷಣ ದೇವರ ವಿಗ್ರಹವಿದೆ. ಇನ್ನು ಪಾದದ ಬಳಿ ಆಂಜನೇಯ ಸ್ವಾಮಿಯ ವಿಗ್ರಹವಿದೆ. ಇನ್ನು ಈ ಹಿಂದೆ ಸುಗ್ರೀವ ಈ ರಾಮನ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬ ಪ್ರತೀತಿ ಇದೆ. ರಾಮನು ಇದೇ ಸ್ಥಳದಲ್ಲಿ ನಾಲ್ಕೈದು ವರ್ಷಗಳ ಕಾಲ ಸೀತೆಯೊಂದಿಗೆ ವನವಾಸವನ್ನ ಕಳೆದಿರುತ್ತಾನೆ.
ವನವಾಸವನ್ನ ಮುಗಿಸಿ ಹೋದನಂತರ ಪಟ್ಟಾಭಿಷೇಕ ಆಗುತ್ತದೆ. ಆನಂತರ ರಾಮನ ಮೂರ್ತಿಯನ್ನ ಸುಗ್ರೀವ ಅಯೋಧ್ಯೆಯಿಂದ ಕಿಷ್ಕಿಂದೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸುಗ್ರೀವನ ಮೇಲೆ ಸುಖಾಸುರ ಎಂಬ ರಾಕ್ಷಸ ದಾಳಿ ಮಾಡುತ್ತಾನೆ. ಈ ವೇಳೆ ಸುಗ್ರೀವ ಆ ಮೂರ್ತಿಯನ್ನ ಕೆಳಗೆ ಇಡುತ್ತಾನೆ. ಈ ವೇಳೆ ಸುಗ್ರೀವನಿಗೂ ಸುಖಾಸುರ ಎಂಬ ರಾಕ್ಷಸನಿಗೂ ಯುದ್ಧ ನಡೆದು ಸುಖಾಸುರನ್ನ ಸಂಹಾರ ಮಾಡುತ್ತಾನೆ. ಆದ್ರೆ ಆನಂತರ ಮೂರ್ತಿಯನ್ನ ಎತ್ತಿಕೊಳ್ಳಲು ಮುಂದಾದರೂ ಸಾಧ್ಯವಾಗುವುದಿಲ್ಲ. ಜಾಗ ಪ್ರಶಾಂತವಾಗಿದೆ. ಇಲ್ಲಿಯೇ ಇರಲಿ ಎಂದು ಸುಗ್ರೀವಾ ಪ್ರತಿಷ್ಠಾಪನೆ ಮಾಡಿದ ಎಂಬ ಪ್ರತೀತಿ ಇದೆ.
ಇನ್ನು ದೇವಸ್ಥಾನದ ಮುಂಭಾಗ ರಾಮತೀರ್ಥ ಎಂಬ ಕಲ್ಯಾಣಿ ಸಹಾ ಇದ್ದು, ವನವವಾಸದ ಕಾಲದಲ್ಲಿ ಸೀತೆಗೆ ಬಾಯರಿಕೆ ಆದಾಗ ಎಲ್ಲೂ ನೀರು ಸಿಗದೇ ಇದ್ದಾಗ, ರಾಮ ಬಾಣ ಬಿಟ್ಟು ನೀರು ಬರಿಸಿದ ಎಂಬ ನಂಬಿಕೆ. ಹೀಗಾಗಿ ಇದಕ್ಕೆ ರಾಮತೀರ್ಥ ಎಂದು ಕರೆಯಲಾಗುತ್ತದೆ. ಇಂತಹ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಮುಂದಾದೆ. ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿರುವ ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್ ಅವರು ರಾಮನಗರ ನಾಮಕರಣ ಆಗಿರುವುದೇ ರಾಮನ ಹೆಸರಲ್ಲಿ. ರಾಮಮಂದಿರ ನಿರ್ಮಾಣಕ್ಕೆ ಸಿಎಂ ಭರವಸೆ ನೀಡಿದ್ದಾರೆ. ಶ್ರೀರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ.
ಸಚಿವ ಅಶ್ವತ್ಥ್ ನಾರಾಯಣ್ ಗೆ ಟಾಂಗ್ ಕೊಟ್ಟ ಡಿಕೆ ಶಿವಕುಮಾರ್
ಅಂದಹಾಗೆ ಚುನಾವಣೆಗೆ ಇನ್ನು ಕೆಲವು ತಿಂಗಳುಗಳು ಬಾಕಿ ಇರುವಾಗ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ಹೇಳುತ್ತಿರುವುದರ ಹಿಂದೆ ದೊಡ್ಡ ಮಾಸ್ಟರ್ ಪ್ಲಾನ್ ಸಹಾ ಇದೆ. ಇನ್ನು ರಾಮನಗರ ಜಿಲ್ಲೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಭದ್ರಕೋಟೆ. ಇಲ್ಲಿ ಬಿಜೆಪಿ ಅಷ್ಟಕಷ್ಟೆ. ಹೀಗಾಗಿ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಒಂದಾದ ರಾಮನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಬಿಜೆಪಿಯನ್ನ ಗೆಲ್ಲಿಸಲು ಮಂದಿರ ನಿರ್ಮಾಣಕ್ಕೆ ಮುಂದಾಗಿದೆ. ಇನ್ನು ಈ ಬಗ್ಗೆ ವ್ಯಂಗವಾಗಿ ಪ್ರತಿಕ್ರಿಯೆ ನೀಡಿರೋ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಶ್ರೀ ರಾಮಮಂದಿರ ಕಟ್ಟಲಿ, ಸೀತಾ ಮಾತೆ ಮಂದಿರ ಕಟ್ಟಲಿ. ಅಶ್ವತ್ಥ್ ನಾರಾಯಣ್ ಮಂದಿರನೇ ಕಟ್ಟಲಿ. ನಮಗೇನೂ ಬೇಜಾರು ಇಲ್ಲ. ಜಿಲ್ಲಾ ಮಂತ್ರಿ ಮಂದಿರ ಕಟ್ಟಬೇಡಿ ಅಂದಿದ್ಯಾರು? 35 ವರ್ಷಗಳಿಂದ ನಾನು ಇಂತಹ ಗಂಡುಗಳನ್ನ ಬಹಳ ನೋಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ ಕೆಪಿಸಿಸಿ ಅಧ್ಯಕ್ಷ, ಡಿ ಕೆ ಶಿವಕುಮಾರ್.
ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮನಗರದಲ್ಲಿ ರಾಮಮಂದಿರದ ವಿಚಾರ ಚರ್ಚೆ ಆಗುತ್ತಿದೆ. ರಾಮದೇವರ ಬೆಟ್ಟದಲ್ಲಿ ಮಂದಿರಾ ನಿರ್ಮಾಣ ಆಗುತ್ತಾ ಇಲ್ಲವಾ ಕಾದು ನೋಡಬೇಕಿದೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9, ರಾಮನಗರ
Published On - 6:06 am, Thu, 29 December 22