ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭೈರತಿ ಬಸವರಾಜ್, ಡಾ. ಕೆ ಸುಧಾಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳಿಗೆ ಏಕಕಾಲಕ್ಕೆ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಪತ್ರಗಳು ಬಂದಿವೆ. ಇಷ್ಟು ದೊಡ್ಡ ಮಟ್ಟದ ಟಪಾಲು ನೋಡಿ ವಿಧಾನಸಭೆ ಸಿಬ್ಬಂದಿ ಕಂಗಾಲಾಗಿದ್ದಾರೆ. ಒಂದೇ ಕವರ್, ಒಂದೇ ವಿಷಯ ಹೊಂದಿರುವ ಸಾವಿರಾರು ಪತ್ರಗಳು ಬಂದಿದ್ದು, ಬೆಂಗಳೂರಿನ ಅಂಗಡಿ ಮುಂಗಟ್ಟುಗಳ ಮಾಲೀಕರಿಂದ ಸಿಎಂ ಹಾಗೂ ಸಚಿವರಿಗೆ ಪತ್ರ ಬರೆಯಲಾಗಿದೆ. ಸಿಗರೇಟ್ ತಂಬಾಕು ಉತ್ಪನ್ನ ಮಾರಾಟ ಮಾಡುವ ಸ್ಥಳಗಳ ನಿಯಂತ್ರಣ ಕಾಯ್ದೆ ವಿರೋಧಿಸಿ ಅಂಗಡಿ ಮುಂಗಟ್ಟು ಮಾಲೀಕರು ಪತ್ರ ಬರೆದಿದ್ದಾರೆ.
ಸಾರಿಗೆ ನೌಕರರು ಒಟ್ಟು 9 ಬೇಡಿಕೆಗಳನ್ನು ಇಟ್ಟಿದ್ದು, ಆ ಪೈಕಿ ಈಗಾಗಲೇ 3 ಬೇಡಿಕೆ ಈಡೇರಿಸಲಾಗಿದೆ. ಉಳಿದ ಬೇಡಿಕೆಗಳನ್ನು ಈಡೇರಿಸುತ್ತೇವೆ. ಯಾರೂ ನೌಕರರನ್ನು ತಪ್ಪು ದಾರಿಗೆ ಎಳೆಯಬಾರದು ಎಂದು ವಿಧಾನಸೌಧದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ನೌಕರರಿಗೆ ನಮ್ಮ ಮೇಲೆ ನಂಬಿಕೆ ಇದೆ, ಅವರ ಮೇಲೆ ನಮಗೆ ಭರವಸೆ ಇದೆ. ನಾವೆಲ್ಲಾ ಒಂದು ಕುಟಂಬದಂತೆ ಇದ್ದೇವೆ. ಹೀಗಿರುವಾಗ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ತೇಜಸ್ನಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಪರಿಕರಗಳನ್ನು ಉತ್ಪಾದಿಸಲಾಗುತ್ತದೆ. ವಿಶ್ವದ ಇತರ ದೇಶಗಳಿಗಿಂತ ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡುವ ಕುರಿತು ನಮಗೆ ಹೆಮ್ಮೆ ಇದೆ. ಇದು ದೇಶಕ್ಕೆ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಕೊಡುತ್ತಿರುವ ಕೊಡುಗೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮ್ಯಾನ್ಹೋಲ್ಗೆ ಇಳಿದ ಇಬ್ಬರು ಕಾರ್ಮಿಕರು ಸಾವಿಗೀಡಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮ್ಯಾನ್ಹೋಲ್ಗಳಲ್ಲಿ ಕಾರ್ಮಿಕರ ಬಳಕೆ ಮಾಡುವುದಕ್ಕೆ ನಿಷೇಧವಿದ್ದರೂ ಇಂತಹ ಘಟನೆ ಮರುಕಳಿಸುತ್ತಿರುವುದಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಹೈಕೋರ್ಟ್ ನಿರ್ದೇಶನಗಳನ್ನು ಸರ್ಕಾರ ಪಾಲಿಸುತ್ತಿಲ್ಲ, ಆದೇಶ ಪಾಲಿಸದಿದ್ದರೆ ಗಂಭೀರ ಕ್ರಮ ಕೈಗೊಂಡು, ನ್ಯಾಯಾಂಗ ನಿಂದನೆ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಮಾರ್ಚ್ 1ರೊಳಗೆ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿದೆ.
ಪಂಚಮಸಾಲಿ, ಕುರುಬ ಸಮುದಾಯಕ್ಕೆ ಮೀಸಲಾತಿ ವಿಚಾರ ಸಂಬಂಧಿಸಿದಂತೆ ಸರ್ಕಾರದ ಉತ್ತರಕ್ಕೆ ಅಸಮಾಧಾನಗೊಂಡು ಆಡಳಿತ ಪಕ್ಷದ ಶಾಸಕರೇ ವಿಧಾನಸಭೆಯಲ್ಲಿ ಧರಣಿ ನಡೆಸಿದ್ದಾರೆ. ಪಂಚಮಸಾಲಿ, ಕುರುಬ ಸಮುದಾಯಕ್ಕೆ ಮೀಸಲಾತಿ ವಿಚಾರ ಚರ್ಚೆಯಾಗುವ ವೇಳೆ ಸರ್ಕಾರ ನೀಡಿದ ಉತ್ತರದಿಂದ ಬೇಸರಗೊಂಡ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಧರಣಿ ನಡೆಸಿದ್ದು, ಅವರಿಗೆ ವಿಪಕ್ಷದ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಬಂಡೆಪ್ಪ ಕಾಶಂಪುರ್, ರಾಘವೇಂದ್ರ ಹಿಟ್ನಾಳ್, ಭೈರತಿ ಸುರೇಶ್, ಕುಸುಮಾ ಶಿವಳ್ಳಿ, ತುಕಾರಾಮ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ. ಯತ್ನಾಳ್ ಜತೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಕೂಡ ಧರಣಿ ನಡೆಸಿದ್ದು ಆಡಳಿತ ಪಕ್ಷಕ್ಕೆ ಮುಜುಗರ ತಂದಿದೆ.
ಬೆಂಗಳೂರಿನ ದೊಡ್ಡನೆಕ್ಕುಂದಿಯಲ್ಲಿರುವ LCA ತೇಜಸ್ ಡಿವಿಜನ್ ಪ್ಲಾಂಟ್-2 ಉದ್ಘಾಟಿಸಿ ಮಾತನಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ತೇಜಸ್ ಘಟಕ ಉದ್ಘಾಟಿಸಿ ಖುಷಿಯಾಗಿದೆ. ಇದು ನಮ್ಮ ಸ್ವಾಭಿಮಾನದ ಸಂಕೇತ. ಕೊರೊನಾ ಮಾರಿಯ ನಡುವೆ ಇಂತಹ ಘಟಕ ನಿರ್ಮಾಣ ಮಾಡಲಾಗಿದೆ. ನಮ್ಮ ದೇಶದ ಸುರಕ್ಷತೆ ವಿಚಾರದಲ್ಲಿ ನಮ್ಮನ್ನೇ ನಾವು ಅವಲಂಬಿಸಬೇಕು. ಇದು ಆತ್ಮನಿರ್ಭರತೆಯ ಸಂದೇಶ. ಇದು ಕೇವಲ ಭಾರತಕ್ಕಲ್ಲ ವಿಶ್ವಕ್ಕೆ ಕೊಡುವ ಸಂದೇಶ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಗಳ ಮದುವೆಗೆ ಮಠಾಧೀಶರನ್ನು ಆಹ್ವಾನಿಸುತ್ತಿರುವ ಡಿ.ಕೆ.ಶಿವಕುಮಾರ್ ಚಿತ್ರದುರ್ಗದ ಬೋವಿ ಗುರುಪೀಠಕ್ಕೆ ಭೇಟಿ ನೀಡಿ ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳನ್ನು ಆಹ್ವಾನಿಸಿದ್ದಾರೆ. ಜೊತೆಗೆ ಮೇದಾರ ಮಠದ ಬಸವ ಕೇತೇಶ್ವರ ಶ್ರೀ, ಹೊಸದುರ್ಗದ ಕುಂಚಿಟಿಗ ಮಠದ ಶಾಂತವೀರ ಶ್ರೀಗಳನ್ನೂ ಮದುವೆಗೆ ಆಹ್ವಾನಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆಯವರು ಬೈಕ್‌ಗಳಿಗೆ ಶ್ರದ್ಧಾಂಜಲಿ ಮಾಡಿ, ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದ್ದಾರೆ. ಬೈಕ್ ಬಿಟ್ಟು ಮತ್ತೆ ಬೈಸಿಕಲ್‌ಗೆ ಹೋಗೋಣ ಎಂದು ಪ್ರತಿಭಟಿಸುತ್ತಿದ್ದು, ಕೇಂದ್ರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ ಪ್ರಧಾನಿ ಮೋದಿ ನೀಡಿದ ಭರವಸೆಗಳು ಸುಳ್ಳಾಗಿವೆ, ಬೈಕ್ ಸುಟ್ಟು ಹಾಕಿ ಸೈಕಲ್ ಬಳಸುವ ಪರಿಸ್ಥಿತಿ ತಂದಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರನ್ನು ತಡೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ದೆಹಲಿ ಗಡಿ ಗಾಜಿಪುರ ಬಳಿ ಭಾರಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಹೆದ್ದಾರಿಯಲ್ಲಿ ಬ್ಯಾರಿಕೇಡ್, ರಸ್ತೆಗೆ ವೈರ್, ಟ್ರ್ಯಾಕ್ಟರ್ ಟೈರ್ ಪಂಕ್ಚರ್ ಮಾಡಲು ರಸ್ತೆಗೆ ಕಬ್ಬಿಣದ ಮೊಳೆ ಅಳವಡಿಸಿ ದೆಹಲಿಯತ್ತ ರೈತರು ಹೋಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಂಸತ್ ಕಲಾಪ ನಡೆಯುತ್ತಿರುವ ಹಿನ್ನೆಲೆ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.
ಬಜೆಟ್ ಮಂಡನೆ ಬಳಿಕ ಇಂದು ಸಹ ಷೇರುಪೇಟೆಯಲ್ಲಿ ಏರಿಕೆಯಾಗಿದೆ. ಇಂದು ಷೇರು ಸಂವೇದಿ ಸೂಚ್ಯಂಕ 50,154ಕ್ಕೆ ಏರಿಕೆಯಾಗಿದ್ದು, 49,193 ರಲ್ಲಿ ಆರಂಭವಾಗಿದ್ದ ಸೆನ್ಸೆಕ್ಸ್ ಈಗ 50 ಸಾವಿರದ ಗಡಿ ದಾಟಿ 50,154 ಪಾಯಿಂಟ್ಗೆ ತಲುಪಿದೆ. ಸದ್ಯ 49,607 ಪಾಯಿಂಟ್ನಲ್ಲಿ ಸೆನ್ಸೆಕ್ಸ್ ವಹಿವಾಟು ನಡೆಯುತ್ತಿದೆ.
ಸಣ್ಣ ನೀರಾವರಿ ಇಲಾಖೆ ಇಇ ದೇವರಾಜ್ ಶಿಗ್ಗಾಂವಿ ಅವರ ಮನೆ ಮೇಲೆ ಎಸಿಬಿ ರೇಡ್ ಮಾಡಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಮನೆ, ವಿದ್ಯಾನಗರದ ಮನೆ ಕೋಟಿಲಿಂಗೇಶ್ವರ ನಗರದ ಮನೆ ಮೇಲೆ ಎಸಿಬಿ ದಾಳಿ ಮಾಡಲಾಗಿದ್ದು, ನಗರದ ಮೂರು ಕಡೆ ಇರುವ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳ ಮೂರು ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.
ಕಳೆದ ಡಿಸೆಂಬರ್ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿ ಸರ್ಕಾರದ ಮುಂದೆ 10 ಬೇಡಿಕೆಗಳನ್ನು ಇರಿಸಿದ್ದರು. ಅವುಗಳನ್ನು ಈಡೇರಿಸಲು ಸರ್ಕಾರಕ್ಕೆ ಮೂರು ತಿಂಗಳ ಗಡುವು ನೀಡಲಾಗಿತ್ತು. ಆದರೆ, ಸರ್ಕಾರ ಆ ಕುರಿತು ಗಂಭೀರವಾಗಿ ಯೋಚಿಸಿದಂತೆ ಕಾಣುತ್ತಿಲ್ಲ. ಇನ್ನು ಒಂದೂವರೆ ತಿಂಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಾಂತ ಮತ್ತೆ ಬಸ್ ನಿಲ್ಲಿಸಿ ಮುಷ್ಕರ ನಡೆಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯಿದೆ ತಿದ್ದುಪಡಿ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು ಫೆಬ್ರವರಿ 6 ರಂದು ಮೂರು ಗಂಟೆಗಳ ಕಾಲ ದೇಶದ ಹೆದ್ದಾರಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಈ ಕುರಿತು ಸ್ವರಾಜ್ ಇಂಡಿಯಾ ಸಂಘಟನೆಯ ಯೋಗೇಂದ್ರ ಯಾದವ್ ಮತ್ತು ಇತರ ರೈತ ನಾಯಕರು ನಿರ್ಧಾರ ಮಾಡಿದ್ದು, ದೇಶಾದ್ಯಂತ ಹೆದ್ದಾರಿ ಬಂದ್ ಆಗಲಿದೆ.
ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿದ್ದಾರೆ. ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಜೊತೆ ಆಪ್ತ ಸಮಾಲೋಚನೆ ನಡೆಸಿರುವ ಡಿ.ಕೆ.ಶಿವಕುಮಾರ್, ಶ್ರೀಗಳನ್ನು ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ಅಂತೆಯೇ, ವಿವಿಧ ಮಠಗಳಿಗೆ ಭೇಟಿ ಮಾಡಿ ಮಠಾಧೀಶರಿಗೆ ಆಹ್ವಾನ ನೀಡಲು ಡಿ.ಕೆ.ಶಿವಕುಮಾರ್ ಯೋಚಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಶಿವಸೇನೆ ಬೆಂಬಲ ವ್ಯಕ್ತಪಡಿಸಿದೆ. ಪ್ರತಿಭಟನಾ ಸ್ಥಳಕ್ಕೆ ತೆರಳಲಿರುವ ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರಾವತ್, ಗಾಜಿಪುರ ಗಡಿಗೆ ತೆರಳಿ ರೈತರೊಂದಿಗೆ ಹೋರಾಡಿ ಬೆಂಬಲ ಸೂಚಿಸಿದ್ದಾರೆ.
ದೆಹಲಿ ರೈತ ಪ್ರತಿಭಟನೆಗೆ ರಾಜ್ಯದ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ ಗಂಗಾಧರ ಸೇರಿದಂತೆ ಪ್ರಮುಖ ರೈತ ಮುಖಂಡರು ಭಾಗಿಯಾಗಿದ್ದು, ನಗರ ಪ್ರದೇಶದವರು ಕೂಡ ಈ ಹೋರಾಟದ ಜತೆ ಕೈಜೋಡಿಸಬೇಕೆಂದು ಕರೆ ನೀಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟ ಮಾತ್ರವಲ್ಲ. ಅನ್ನ, ಊಟ ಮಾಡುವವರೆಲ್ಲರೂ ಹೋರಾಟ ಮಾಡಬೇಕಿದೆ. ಇದು ಜನಸಾಮಾನ್ಯರ ಹೋರಾಟ ಆಗಬೇಕಿದೆ. ಈ ಬಗ್ಗೆ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವವರ ಬಗ್ಗೆ ಚರ್ಚಿಸಿದ್ದೇವೆ. ಮುಂದೆ ರಾಜ್ಯದಲ್ಲೂ ಜನಾಭಿಪ್ರಾಯ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ಕೇವಲ 6 ತಿಂಗಳ ಹಿಂದೆಯಷ್ಟೇ ₹24 ಲಕ್ಷ ಕೊಟ್ಟು ಖರೀದಿಸಿದ ಎಂಜಿ ಕಂಪೆನಿಯ ಕಾರು ಹಲವು ದೋಷಗಳಿಂದ ಕೆಟ್ಟು ನಿಂತಿದ್ದಕ್ಕೆ ಬೇಸರಗೊಂಡು ಕಾರಿನ ಮಾಲಿಕ ಕಂಪೆನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರನಹಳ್ಳಿ ಸರ್ವಿಸ್ ಸೆಂಟರ್ ಎದುರು ಕಾರನ್ನು ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿರುವ ಕಾರಿನ ಮಾಲಿಕ ಮುನೇಗೌಡ, ಹೊಸ ಕಾರು ರಿಪೇರಿಗೆ ಬಂದಿದೆ ಅಂದ್ರೆ ಶೋರೂಂನಿಂದ ಉಡಾಪೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಖರೀದಿಸಿದ ಆರು ತಿಂಗಳಿಗೆ ಕ್ಲಚ್, ಡೀಸೆಲ್ ಟ್ಯಾಂಕ್ ಮತ್ತು ಇಂಜಿನ್ನಲ್ಲಿ ತೋಂದರೆಯಾಗಿದೆ ಎಂದಿರುವ ಮುನೇಗೌಡ, ಎಂಜಿ ಕಂಪನಿ ವಿರುದ್ದ ದಿಕ್ಕಾರ ಕೂಗಿದ್ದು, ಹೊಸ ಕಾರು ನೀಡುವಂತೆ ಒತ್ತಾಯ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಅಂದರೆ ಭ್ರಷ್ಟಾಚಾರ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಚಿತ್ರದುರ್ಗದಲ್ಲಿ ತಿರುಗೇಟು ನೀಡಿದ್ದಾರೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಸರ್ಕಾರ ಎಂದಿರುವ ಡಿ.ಕೆ.ಶಿವಕುಮಾರ್, ಕೊರೊನಾ ವಿಚಾರದಲ್ಲೂ ಬಿಜೆಪಿಯವರು ಹಣ ಲೂಟಿ ಮಾಡಿದ್ದಾರೆ. ಕೇಂದ್ರ ಅತ್ಯಂತ ಕಳಪೆ ಬಜೆಟ್ ಮಂಡಿಸಿದೆ. ಜನರಿಗೆ ಉತ್ಸಾಹವೇ ಇಲ್ಲ ಎಂಬಂತಾಗಿದೆ. ರೈತ, ಕಾರ್ಮಿಕ, ಸರ್ಕಾರಿ ನೌಕರರು ಸೇರಿ ಎಲ್ಲಾ ವರ್ಗದ ಜನರಿಗೆ ತೊಂದರೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಪಂಜಾಬ್ ರಾಜ್ಯಸ ಕಾಂಗ್ರೆಸ್ ನಾಯಕ ಮನ್‌ಪ್ರೀತ್ ಬಾದಲ್ ಪಾಕಿಸ್ತಾನವನ್ನು ಪ್ರಶಂಸಿದ್ದಾರೆ. ಪಾಕಿಸ್ತಾನ ಭಾರತಕ್ಕಿಂತಲೂ ಚೆನ್ನಾಗಿ ತನ್ನ ಗಡಿಯನ್ನು ರಕ್ಷಣೆ ಮಾಡಿಕೊಳ್ಳುತ್ತಿದೆ ಎಂದು ಹೇಳಿರುವ ಮನ್‌ಪ್ರೀತ್ ಬಾದಲ್, ಪಾಕಿಸ್ತಾನ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವ ರೀತಿಗೆ ಈ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗಿನ್ನೆಸ್ ದಾಖಲೆಗಾಗಿ 6 ಸಾವಿರ ಕಿಲೋಮೀಟರ್ ಓಡಿದ ಸೂಫಿಯಾ ಅವರನ್ನು ಕ್ರೀಡಾ ಸಚಿವ ನಾರಾಯಣಗೌಡ ವಿಧಾನಸೌಧದ ಕೆಂಗಲ್ ಪ್ರತಿಮೆ ಎದುರು ಸ್ವಾಗತಿಸಿದ್ದಾರೆ. ಡಿಸೆಂಬರ್ 16ರಂದು ಇಂಡಿಯಾ ಗೇಟ್‌ನಿಂದ ಓಟ ಆರಂಭಿಸಿದ್ದ ಸೂಫಿಯಾ ಆರು ಸಾವಿರ ಕಿ.ಮೀ ಓಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಿ ಗೌರವಿಸಲಾಗಿದೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಸಚಿವರು, ಶಾಸಕರು ಭೇಟಿ ನೀಡಿದ್ದಾರೆ. ಸಚಿವರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ಪ್ರಭು ಚೌಹಾಣ್, ಮುರುಗೇಶ್ ನಿರಾಣಿ. ಶಾಸಕರಾದ ರಾಜುಗೌಡ, ವಿರೂಪಾಕ್ಷಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಚರ್ಚೆ ಮಾಡಿದ್ದಾರೆ.
ಎಸ್ಎಸ್ಎಲ್ಸಿ ಪಠ್ಯಕ್ರಮವನ್ನು ಜೂನ್ ಒಳಗೆ ಮುಗಿಸೋದು ಕಷ್ಟ ಎಂದು ಶಿಕ್ಷಕರ ಸಂಘ ಅಭಿಪ್ರಾಯಪಟ್ಟಿದೆ. ಶೇ.70 ರಷ್ಟು ಪಠ್ಯಕ್ರಮವನ್ನು ಮುಗಿಸಬೇಕಿದೆ. ಆದರೆ, ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿ ಇರಲಿದ್ದು ಮಕ್ಕಳಿಗೆ ಪಾಠ ಮಾಡೋದು ಕಷ್ಟವಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪ ಕೈಮೀರಿ ಹೋಗುತ್ತದೆ. ಇಂತಹ ವಾತಾವರಣದಲ್ಲಿ ಮಕ್ಕಳನ್ನ ಪರೀಕ್ಷೆಗೆ ತಯಾರಿ ಮಾಡೋದು ದೊಡ್ಡ ಸವಾಲು ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ನಾಳೆಯಿಂದ 3 ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ‘ಏರೋ ಇಂಡಿಯಾ ಶೋ’ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಫೆಬ್ರವರಿ 3 ರಿಂದ ಫೆ.5ರವರೆಗೆ ಏರ್ಪೋರ್ಟ್ಗೆ ತೆರಳುವ ಮಾರ್ಗ ಬದಲಾವಣೆ ಮಾಡಲಾಗಿದೆ. ಮೂರು ದಿನಗಳ ಕಾಲ ಬೆಳಗ್ಗೆ 5ರಿಂದ ರಾತ್ರಿ 10ರವರೆಗೆ ಮಾರ್ಗದಲ್ಲಿ ಬದಲಾವಣೆ ಇರಲಿದ್ದು, ಬೆಂಗಳೂರು ಪಶ್ಚಿಮ, ಉತ್ತರದಿಂದ ಬರುವ ವಾಹನಗಳು ಗೊರಗುಂಟೆಪಾಳ್ಯ, ಬಿಇಎಲ್ ಸರ್ಕಲ್, MS ಪಾಳ್ಯ, ಯಲಹಂಕ ಮದರ್ ಡೈರಿ, ರಾಜಾನುಕುಂಟೆ, MVIT ಜಂಕ್ಷನ್, ಚಿಕ್ಕಜಾಲ ಮೂಲಕ ಏರ್‌ಪೋರ್ಟ್ ಟೋಲ್‌ಗೇಟ್ ತಲುಪಬೇಕಿದೆ. ಬೆಂಗಳೂರು ದಕ್ಷಿಣ, ಕೇಂದ್ರದಿಂದ ಬರುವ ವಾಹನಗಳು ಬಸವೇಶ್ವರ ಸರ್ಕಲ್, ಸದಾಶಿವನಗರ ಪೊಲೀಸ್ ಠಾಣೆ, ಹೆಬ್ಬಾಳ ಸರ್ಕಲ್, ನಾಗವಾರ ಜಂಕ್ಷನ್, ಥಣಿಸಂದ್ರ ಮುಖ್ಯರಸ್ತೆ, ರೇವಾ ಕಾಲೇಜು ಜಂಕ್ಷನ್, ಬಾಗಲೂರು, ಮೈಲನಹಳ್ಳಿ ಮೂಲಕ ಏರ್‌ಪೋರ್ಟ್ ಟೋಲ್‌ಗೇಟ್ ತಲುಪಬೇಕಿದೆ. ಬೆಂಗಳೂರು ಪೂರ್ವದಿಂದ ಏರ್‌ಪೋರ್ಟ್ ತಲುಪಲು ಟಿನ್‌ಫ್ಯಾಕ್ಟರಿ, ರಾಮಮೂರ್ತಿನಗರ, ಹೆಣ್ಣೂರು ಕ್ರಾಸ್, ಭೈರತಿ ಕ್ರಾಸ್, ಹೊಸೂರು ಬಂಡೆ, ಜಾಗಲಹಟ್ಟಿ, ಗುಂಡಪ್ಪ ಸರ್ಕಲ್, ಬಾಗಲೂರು, ಬಿ.ಕೆ.ಹಳ್ಳಿ, ಬೇಗೂರು ಬ್ಯಾಕ್‌ಗೇಟ್‌ನಿಂದ ಏರ್‌ಪೋರ್ಟ್ ತಲುಪಬೇಕಿದೆ.
ಬೆಂಗಳೂರಿನ ಲಾಲ್‌ಬಾಗ್ ಪ್ರವೇಶ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ವಯಸ್ಕರಿಗಿದ್ದ ₹25 ಪ್ರವೇಶ ಶುಲ್ಕವನ್ನು ₹30ಕ್ಕೆ ಏರಿಸಲಾಗಿದೆ. ಈ ಹಿಂದೆ 6-12 ವರ್ಷದ ಮಕ್ಕಳಿಗಿದ್ದ ಉಚಿತ ಪ್ರವೇಶ ಮೊಟಕುಗೊಳಿಸಿ ₹10 ಶುಲ್ಕ ನಿಗದಿ ಮಾಡಲಾಗಿದೆ. ಬೈಕ್ ಪಾರ್ಕಿಂಗ್ ಶುಲ್ಕ ₹5ರಿಂದ ₹10ಕ್ಕೆ, ಕಾರಿಗೆ 3 ಗಂಟೆ ಅವಧಿಯ ಪಾರ್ಕಿಂಗ್ ಶುಲ್ಕ ₹50ಕ್ಕೆ, ಟಿಟಿಗೆ 3 ಗಂಟೆ ಅವಧಿಗೆ ಪಾರ್ಕಿಂಗ್ ಶುಲ್ಕ ₹80 ಮತ್ತು ಬಸ್‌ಗೆ 3 ಗಂಟೆ ಅವಧಿಗೆ ಪಾರ್ಕಿಂಗ್ ಶುಲ್ಕ ₹130 ಕ್ಕೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರದಿಂದ ಅನುಮತಿ ನೀಡಲಾಗಿದೆ.
ಸರ್ಕಾರದ ನಿಯಮ ಉಲ್ಲಂಘನೆ ಮಾಡಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್, ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳ ಆನ್ಲೈನ್ ಕ್ಲಾಸ್ ID ಬಂದ್ ಮಾಡಿದೆ. ಶೇ.70ರಷ್ಟು ಬೋಧನಾ ಶುಲ್ಕ ಸ್ವೀಕರಿಸಲು ಸರ್ಕಾರ ಆದೇಶ ಮಾಡಿದ್ದರೂ ಪೂರ್ತಿ ಶುಲ್ಕ ಪಾವತಿ ಮಾಡಬೇಕೆಂದು ಒತ್ತಡ ಹೇರುತ್ತಿರುವ ಶಾಲಾ ಆಡಳಿತ ಮಂಡಳಿಯವರು ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಐಡಿಯನ್ನೇ ತಡೆಹಿಡಿದಿದ್ದಾರೆ.
ಆಂಧ್ರದ ತಿರುಮಲ ದೇವಸ್ಥಾನದ ಹುಂಡಿಗೆ ಕಳೆದ 24ಗಂಟೆಗಳಲ್ಲಿ ಭಾರೀ ಆದಾಯ ಹರಿದು ಬಂದಿದೆ. ಒಟ್ಟು ₹3.02 ಕೋಟಿ ನಗದು ಹುಂಡಿಯಲ್ಲಿ ಸಂಗ್ರಹವಾಗಿದ್ದು, 43,313 ಭಕ್ತರು ಬಾಲಾಜಿಯ ದರ್ಶನ ಪಡೆದಿದ್ದಾರೆ. ಇದರೊಂದಿಗೆ 21,013 ಭಕ್ತರಿಂದ ಬಾಲಾಜಿಗೆ ಮುಡಿ ಸಮರ್ಪಣೆಯನ್ನೂ ಮಾಡಲಾಗಿದೆ.
ಭಾರೀ ಹಿಮ ಬಿರುಗಾಳಿ ಹಾವಳಿಯಿಂದ ಅಮೆರಿಕದ ಪೂರ್ವ ಕರಾವಳಿ ತೀರ ಅಲ್ಲೋಲ ಕಲ್ಲೋಲವಾಗಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ವಿಮಾನಗಳ ಹಾರಾಟ ರದ್ದು ಮಾಡಲಾಗಿದ್ದು, ಶಾಲಾ-ಕಾಲೇಜುಗಳನ್ನೂ ಮುಚ್ಚಲಾಗಿದೆ. ಜೊತೆಗೆ, ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮವನ್ನೂ ಮುಂದೂಡಲಾಗಿದೆ.
ರಾಷ್ಟ್ರಪತಿ ಭವನಕ್ಕೆ ಫೆಬ್ರವರಿ 6 ರಿಂದ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಕಳೆದ ಮಾರ್ಚ್ 13ರಿಂದ ಸಾರ್ವಜನಿಕರ ಭೇಟಿಗೆ ನಿಷೇಧ ಹೇರಲಾಗಿತ್ತು. ರಾಷ್ಟ್ರಪತಿ ಭವನದ ವೆಬ್‌ಸೈಟ್ ಮೂಲಕ ಭೇಟಿಗೆ ಸಮಯ ನಿಗದಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಫೆ.6ರಂದು ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಬಲ್ಬೀರ್ ಸಿಂಗ್ ರಾಜೇವಾಲ ಹೇಳಿಕೆ ನೀಡಿದ್ದಾರೆ. ಫೆ.6ರಂದು ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಧರಣಿ ಎಲ್ಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಬಲ್ಜೀರ್ ಸಿಂಗ್ ಹೇಳಿದ್ದಾರೆ.
APMC ಕಾಯ್ದೆ ವಿರುದ್ಧ ಜನಾಂದೋಲನ ಸಭೆ ನಡೆಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 3ರಂದು ಸಂಜೆ 6.30ಕ್ಕೆ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ರೈತ ಧ್ವನಿ ಮಾದರಿಯಲ್ಲೇ ಮತ್ತೊಂದು ಜನಾಂದೋಲನ ಸಭೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಇಂದು ಬೆಂಗಳೂರಿಗೆ ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. ದೊಡ್ಡನೆಕ್ಕುಂದಿ ರಸ್ತೆಯಲ್ಲಿರುವ ಎಲ್‌ಸಿಎ ತೇಜಸ್ ಡಿವಿಜನ್ ಪ್ಲಾಂಟ್-2ಗೆ ಭೇಟಿ ನೀಡಲಿರುವ ಸಚಿವರು ಸೆಕೆಂಡ್ LCA ಪ್ರೊಡಕ್ಷನ್ ಲೈನ್ ಉದ್ಘಾಟಿಸಲಿದ್ದಾರೆ.
Published On - 2:34 pm, Tue, 2 February 21