Latest Breaking Karnataka News in Kannada Highlights Updates: ಐದು ಗ್ಯಾರಂಟಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪ್ರಚಂಡ ಗೆಲುವು ನೀಡಿವೆ. ಇಡೀ ರಾಜ್ಯಕ್ಕೆ ರಾಜ್ಯವೇ ಎದುರು ನೋಡುತ್ತಿರುವ ಗ್ಯಾರಂಟಿ, ಹಾದಿ ಬೀದಿಯಲ್ಲಿ ಚರ್ಚೆ ಆಗುತ್ತಿವೆ. ಇದೀಗ ಇದೇ ಗ್ಯಾರಂಟಿ ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು (ಜೂ.02) ಸಭೆ ನಡೆಯಲಿದೆ. ಸಭೆ ಬಳಿಕ ಯೋಜನೆಗಳು ಜಾರಿಯಾಗುವ ಸಾಧ್ಯತೆ ಇದೆ. ಇನ್ನು ರಾಜ್ಯದಲ್ಲಿ ಮಳೆ-ಬಿಸಿಲಿನ ಆಟ ಜೋರಾಗಿಯೇ ನಡೆಯುತ್ತಿದೆ. ಕೆಲವು ಜಿಲ್ಲೆಗಳಲ್ಲಿ ವಿಪರೀತ ಮಳೆಯಾದರೇ ಇನ್ನು ಕೆಲವು ಕಡೆ ಬಿರಿ ಬಿರಿ ಬಿಸಿಲು ಜನರನ್ನು ಬಾದಿಸುತ್ತಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ
ಗ್ಯಾರಂಟಿಗಳ ಬಗ್ಗೆ ಚರ್ಚೆ ಅಥವಾ ವಿಮರ್ಶೆಗೆ ನನಗೆ ಆತುರವಿಲ್ಲ, ನನಗೆ ತಾಳ್ಮೆ ಇದೆ. ಆದರೆ, ಮತ ಗಳಿಕೆಗೆ ಮುನ್ನ ಕೊಟ್ಟ ಭರವಸೆಗಳು ಅಧಿಕಾರಕ್ಕೆ ಬಂದ ಮೇಲೆ ‘ಷರತ್ತು ಸಹಿತ’ ಎಂದಾಗಿದ್ದರ ಬಗ್ಗೆ ನನಗೆ ನೋವಿದೆ. ಜನರ ಸಹನೆ ಎನ್ನುವುದು ಖಂಡಿತಾ ಕಟ್ಟೆಯೊಡೆಯುತ್ತದೆ, ನಾನು ಕಾಯುತ್ತೇನೆ ಹಾಗೂ ಅವರ ಜತೆ ನಿಲ್ಲುತ್ತೇನೆ ಎಂದಿದ್ದಾರೆ.
ಗ್ಯಾರಂಟಿಗಳ ಬಗ್ಗೆ ಚರ್ಚೆ ಅಥವಾ ವಿಮರ್ಶೆಗೆ ನನಗೆ ಆತುರವಿಲ್ಲ, ನನಗೆ ತಾಳ್ಮೆ ಇದೆ. ಆದರೆ, ಮತ ಗಳಿಕೆಗೆ ಮುನ್ನ ಕೊಟ್ಟ ಭರವಸೆಗಳು ಅಧಿಕಾರಕ್ಕೆ ಬಂದ ಮೇಲೆ ‘ಷರತ್ತು ಸಹಿತ’ ಎಂದಾಗಿದ್ದರ ಬಗ್ಗೆ ನನಗೆ ನೋವಿದೆ. ಜನರ ಸಹನೆ ಎನ್ನುವುದು ಖಂಡಿತಾ ಕಟ್ಟೆಯೊಡೆಯುತ್ತದೆ, ನಾನು ಕಾಯುತ್ತೇನೆ ಹಾಗೂ ಅವರ ಜತೆ ನಿಲ್ಲುತ್ತೇನೆ.2/6
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 2, 2023
ಷರತ್ತುಸಹಿತವಾಗಿ ಘೋಷಣೆ ಮಾಡಲಾಗಿರುವ 5 ಗ್ಯಾರಂಟಿಗಳ ಬಗ್ಗೆ ಈಗಾಗಲೇ ಜನರಿಗೆ ಒಂದು ನಿರ್ದಿಷ್ಟ ಅಭಿಪ್ರಾಯ ಬಂದಿದೆ. ಹರುಷದ ಕೂಳಿಗೆ ಆಸೆಪಟ್ಟು ವರುಷದ ಕೂಳು ಕಳೆದುಕೊಂಡರು ಎನ್ನುವ ಮಾತನ್ನು ಹೇಳಲಾರೆ. ಆದರೆ, ರಾಜ್ಯದ ಜನತೆಗೆ ಇದರ ಒಳಮರ್ಮ ಅರ್ಥವಾಗಲು ಬಹಳ ದಿನ ಬೇಕಿಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಟ್ವೀಟ ಮೂಲಕ ಕಿಡಿಕಾರಿದ್ದಾರೆ.
ಷರತ್ತುಸಹಿತವಾಗಿ ಘೋಷಣೆ ಮಾಡಲಾಗಿರುವ 5 ಗ್ಯಾರಂಟಿಗಳ ಬಗ್ಗೆ ಈಗಾಗಲೇ ಜನರಿಗೆ ಒಂದು ನಿರ್ದಿಷ್ಟ ಅಭಿಪ್ರಾಯ ಬಂದಿದೆ. ಹರುಷದ ಕೂಳಿಗೆ ಆಸೆಪಟ್ಟು ವರುಷದ ಕೂಳು ಕಳೆದುಕೊಂಡರು ಎನ್ನುವ ಮಾತನ್ನು ಹೇಳಲಾರೆ. ಆದರೆ, ರಾಜ್ಯದ ಜನತೆಗೆ ಇದರ ಒಳಮರ್ಮ ಅರ್ಥವಾಗಲು ಬಹಳ ದಿನ ಬೇಕಿಲ್ಲ.1/6#ಷರತ್ತು_ಸರಕಾರ #ಕಂಡಿಷನ್ಸ್_ಕಾಂಗ್ರೆಸ್
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 2, 2023
ರಾಮನಗರ: ಇಂದು ಐದು ಗ್ಯಾರಂಟಿ ಯೋಜನೆಗಳ ಜಾರಿ ಹಿನ್ನೆಲೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ಗೆ ಮಹಿಳೆಯರು ಆರತಿ ಬೆಳಗಿ, ಹಣೆಗೆ ತಿಲಕ ಇಟ್ಟಿದ್ದಾರೆ. ಟಿವಿ9 ನಲ್ಲಿ ಕಾರ್ಯಕ್ರಮ ಪ್ರಸಾದ ವೇಳೆ ತಾಯಿ, ಮಗಳು ಆರತಿ ಬೆಳಗಿ, ಹಣೆಗೆ ತಿಲಕವಿಟ್ಟಿದ್ದಾರೆ.
ಬೆಳಗಾವಿ: ರಾಜ್ಯ ಸರ್ಕಾರದಿಂದ 5 ಗ್ಯಾರಂಟಿ ಜಾರಿ ಹಿನ್ನೆಲೆ ರಾಜ್ಯದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಮಾಡಿದರು. ಜಿಲ್ಲೆಯ ಚಿಕ್ಕೋಡಿ ನಗರದ ಬಸವ ವೃತ್ತದಲ್ಲಿ ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.
ಕೊಪ್ಪಳ: ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದ್ದು ತುಂಬ ಖುಷಿಯಾಗಿದೆ ಎಂದು ಟಿವಿ9 ಗೆ ಮಹಿಳಾ ಮಣಿಗಳು ಹೇಳಿಕೆ ನೀಡಿದ್ದು, ಬೆಲೆ ಏರಿಕೆಯಿಂದ ನಮಗೆ ಜೀವನ ನಡೆಸೋಕು ಕಷ್ಟವಾಗಿತ್ತು. 2 ಸಾವಿರದ ನೀಡೋದ್ರಿಂದ ಹೆಣ್ಮಕ್ಕಳಿಗೆ ತುಂಬಾ ಸಹಾಯವಾಗುತ್ತೆ. ನಾವೆಲ್ಲಾ ಆ ಗ್ಯಾರೆಂಟಿ ನಂಬಿ ಮತ ಹಾಕಿದ್ದೆವು. ಅದನ್ನ ಸಿದ್ದರಾಮಯ್ಯನವರು ಜಾರಿ ಮಾಡಿದ್ದು ತುಂಬಾ ಖುಷಿಯಾಗಿದೆ. ಬಸ್ ಪ್ರಯಾಣ ಉಚಿತ ನೀಡಿದ್ದು ನಮಗೆಲ್ಲಾ ಬಹಳ ಖುಷಿಯಾಗಿದೆ. ಸರ್ಕಾರಕ್ಕೆ ಧನ್ಯವಾದ ಎಂದರು.
ಧಾರವಾಡ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಘೋಷಣೆ ಹಿನ್ನೆಲೆ ನಗರದ ಮದಿಹಾಳ ಡಿಪೋ ಸರ್ಕಲ್ ಬಳಿ ಸಾರ್ವಜನಿಕರಿಗೆ ಪೇಡೆ ಹಂಚಿ ಮಹಿಳೆಯರಿಂದ ಸಂಭ್ರಮಾಚರಣೆ ಮಾಡಲಾಯಿತು.
ಗ್ಯಾರಂಟಿಯಲ್ಲಿ ಮೋಸ ಮಾಡ್ತಿದ್ದಾರೆ ಎಂಬುದನ್ನು ಮೊದಲೇ ಹೇಳಿದ್ದೆ. ಕೇಂದ್ರ ಸರ್ಕಾರ ಉಚಿತವಾಗಿ ತಲಾ 5 ಕೆಜಿ ಅಕ್ಕಿ ಕೊಡುತ್ತಿದೆ. ಕಾಂಗ್ರೆಸ್ ಸರ್ಕಾರ ಉಳಿದ 5 ಕೆಜಿ ಅಕ್ಕಿಯನ್ನು ಮಾತ್ರ ಕೊಡುತ್ತಿದೆ. 10 ಕೆಜಿಯಲ್ಲಿ ರಾಗಿ, ಜೋಳ ಸೇರಿದೆಯಾ, ಹೆಚ್ಚುವರಿ ಕೊಡ್ತಿದ್ದಾರಾ? ಅನ್ನಭಾಗ್ಯ ಯೋಜನೆ ಬಗ್ಗೆಯೂ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿಲ್ಲ. 10 ಕೆಜಿಯಲ್ಲಿ ಅಕ್ಕಿ ಜತೆ ರಾಗಿ, ಜೋಳ ಇದೆಯೋ ಇಲ್ಲವೋ ಸ್ಪಷ್ಟವಿಲ್ಲ ಎಂದು ಬೊಮ್ಮಾಯಿ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ನಿಜಬಣ್ಣ ಈಗ ಬಯಲಾಗಿದೆ. ಇದು ಕಾಂಗ್ರೆಸ್ನ ಹಿಡನ್ ಅಜೆಂಡಾ. ಗ್ಯಾರಂಟಿಯಲ್ಲಿ ಮೋಸ ಮಾಡ್ತಿದ್ದಾರೆ ಎಂಬುದು ಮೊದಲೇ ಹೇಳಿದ್ದೆ ಎಂದು ಹೇಳಿದರು.
ಬೆಂಗಳೂರು: ಸಿಎಂ ಗ್ಯಾರಂಟಿ ಯೋಜನೆ ಜಾರಿ ಘೋಷಣೆ ಬೆನ್ನಲ್ಲೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ಮಾಡಿದ್ದು, ಸಿದ್ದರಾಮಯ್ಯ ಚುನಾವಣೆ ಪೂರ್ವದಲ್ಲಿ ಹೇಳಿರುವ ಮಾತುಗಳು, ಚುನಾವಣೆ ಬಳಿಕ ಹೇಳಿದ ಮಾತಿಗೂ ವ್ಯತ್ಯಾಸವಿದೆ. ಪ್ರತಿ ಮನೆಗೆ ಉಚಿತ 200 ಯೂನಿಟ್ ವಿದ್ಯುತ್ ಎಂದು ಹೇಳಿದ್ದರು. 200 ಯೂನಿಟ್ ಒಳಗೆ ಬಳಸಿದ್ರೆ ಉಚಿತ ವಿದ್ಯುತ್ ನೀಡಬೇಕು. ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್ ಎಂದು ಸಿಎಂ ಹೇಳಿದ್ದಾರೆ ಎಂದರು.
ಬೆಂಗಳೂರು: ಯುವನಿಧಿ ಯೋಜನೆ ಅಡಿ 2022-23 ರಲ್ಲಿ ವ್ಯಾಸಂಗ ಮಾಡಿ ಪಾಸ್ ಆಗಿ, ನೋಂದಾಯಿಸಿಕೊಂಡವರಿಗೆ ಪ್ರತಿ ತಿಂಗಳು ಪಧವಿದರರಿಗೆ 3 ಸಾವಿರ ರೂ., ಡಿಪ್ಲೋಮಾದವರಿಗೆ 1.500 ಸಾವಿರ ರೂ. 24 ತಿಂಗಳು ನೀಡುತ್ತೇವೆ. ಆದರೆ ಇದರ ಒಳಗೆ ಯಾರಾದರೂ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಿಗೆ ಸೇರಿದರೇ ಅವರಿಗೆ ನೀಡುವುದಿಲ್ಲ. ಇವರು ನಿರುದ್ಯೋಗಿಗಳು ಎಂದು ಘೋಷಿಸಿಕೊಂಡಿರಬೇಕು. ಮತ್ತು ಇದಕ್ಕೆ ಅರ್ಜಿಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಶಕ್ತಿ ಗ್ಯಾರೆಂಟಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ, ವಿದ್ಯಾರ್ಥಿಗಳು ಉಚಿತವಾಗಿ ಸರ್ಕಾರಿ ಬಸ್ನಲ್ಲಿ ಸಂಚರಿಸಬಹುದಾಗಿದೆ. ಆದರೆ ರಾಜ್ಯದ ಒಳಗೆ ಮಾತ್ರ. ಆದರೆ ಎಸಿ ಮತ್ತು ಲಗ್ಜುರಿ ಬಸ್ಗಳು ಹೊರತುಪಡಿಸಿ ಈ ತಿಂಗಳು 11ನೇ ತಾರಿಕಿನಿಂದ ಸಂಚರಿಸಬಹುದು.
ಬೆಂಗಳೂರು: ಜುಲೈ 1 ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಂತೆ ಪ್ರತಿ ತಿಂಗಳು ಮನೆಯ ಒಡತಿಗೆ 2 ಸಾವಿರ ರೂಪಾಯಿ ವಿಚಾರವಾಗಿ ಮಾತನಾಡಿ ಮನೆ ಯಜಮಾನಿಯ ಅಕೌಂಟ್ಗೆ ತಿಂಗಳಿಗೆ 2000 ಸಾವಿರ ರೂ. ಹಾಕುತ್ತವೇ. ಹೀಗಾಗಿ ಅವರು ಅರ್ಜಿ ಸಲ್ಲಿಸಬೇಕು. ಜೂನ್ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಸಮಯವಾಕಶ ನೀಡಲಾಗುವುದು. ಮನೆ ಯಜಮಾನಿ ಕಡ್ಡಾಯವಾಗಿ ಆದಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಪಾಸ್ಬುಕ್ ಜರಾಕ್ಸ್ ನೀಡಬೇಕು. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ದಾರರಿಗೂ ಕೂಡ ಈ ಯೋಜನೆ ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ಧಾರೆ.
ಬೆಂಗಳೂರು: ಗೃಹಜ್ಯೋತಿ ಯೋಜನೆ ಅಡಿ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಯಾರು 200 ಯುನಿಟ್ ಒಳಗಡೆ ವಿದ್ಯುತ್ ಬಳಸುತ್ತಾರೆ ಅವರು ಬಿಲ್ ಕಟ್ಟಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: 5 ಗ್ಯಾರೆಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಅಂತ್ಯವಾಗಿದೆ. ಕೆಲವೇ ನಿಮಿಷಗಳಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಕೊಪ್ಪಳ: ರಾಜಭವನದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಕೊಪ್ಪಳ ವಿಶ್ವವಿದ್ಯಾಲಯದ ಲಾಂಛನ ಅನಾವರಣಗೊಳಿಸಿದ್ದಾರೆ. ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಕೆ.ರವಿ, ಕೊಡಗು ವಿವಿ ಕುಲಪತಿ ಡಾ.ಅಶೋಕ್ ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು.
ಚಿತ್ರದುರ್ಗ: ಕಾಂಗ್ರೆಸ್ ಗ್ಯಾರಂಟಿ ಯೋಜನೆ ರಾಜ್ಯದ ಜನರನ್ನು ಭಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ ನಡೆದಿದೆ. ಜನರನ್ನು ಭಿಕ್ಷಾಟನೆ ಸರದಿಗೆ ನಿಲ್ಲಿಸಿ ಅಧಿಕಾರ ಪಡೆಯಲು ಷಡ್ಯಂತ್ರ ಮಾಡಲಾಗಿದೆ. ಕಾಂಗ್ರೆಸ್ ಸಿದ್ಧಾಂತವನ್ನು ಗಾಳಿಗೆ ತೂರಿ ಮತದಾರರಿಗೆ ಆಮಿಷಯೊಡ್ಡಿದೆ. ಕಾಂಗ್ರೆಸ್ನಿಂದ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಕೆಲಸ ನಡೆದಿದೆ ಎಂದು ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ಮಕ್ಕಳಿಗೆ ಸಮಸ್ಯೆಯಾಗದಂತೆ ಪಠ್ಯ ಪರಿಷ್ಕರಣೆ ಮಾಡಲಾಗುವುದು. ಮಕ್ಕಳ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಪಠ್ಯಪರಿಷ್ಕರಣೆ ಮಾಡುತ್ತೇವೆ. ಪಠ್ಯ ಪುಸ್ತಕ ಪರಿಷ್ಕರಣೆ ಈಗಾಗಲೇ ಒಂದು ಹಂತಕ್ಕೆ ಬಂದಿದೆ. ಶಾಲಾ ತರಗತಿ ಪ್ರಾರಂಭ ಮಾಡಲು ಇನ್ನೂ 15 ದಿನಗಳು ಬೇಕು. ಮಕ್ಕಳಿಗೆ ತೊಂದರೆ ಆಗದಂತೆ ಪಠ್ಯಪರಿಷ್ಕರಣೆ ಮಾಡಲಾಗುತ್ತೆ. ನಿರ್ದಿಷ್ಟವಾಗಿ ಇಂತಹ ಪಾಠವೇ ತೆಗೆಯುತ್ತೇವೆ ಅಂತ ಹೇಳಲ್ಲ ಎಂದು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಳಗಾವಿ: ಜಾರಕಿಹೊಳಿ ಹಿರಿಯ ಸಹೋದರಿ ಲಗಮವ್ವ ನಿಂಗಪ್ಪ ಸುಲಧಾಳ (67) ಹೃಯಾಘಾತದಿಂದ ಗೋಕಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಲಗಮವ್ವ ಗೋಕಾಕ್ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪತಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಸಂಪುಟ ಸಭೆ ಹಿನ್ನೆಲೆಯಲ್ಲಿ ಸಹೋದರಿಯ ಅಂತ್ಯಕ್ರಿಯೆಗೆ ಸಚಿವ ಸತೀಶ್ ಜಾರಕಿಹೊಳಿ ಗೈರಾಗಿದ್ದಾರೆ.
ಬೆಂಗಳೂರು: ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದ್ದು, ಆರ್ಥಿಕ ಇಲಾಖೆ ಅಧಿಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ತಗಲುವ ಖರ್ಚು-ವೆಚ್ಚದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರ ಮುಂದೆ ನೀಲನಕ್ಷೆ ಇಟ್ಟಿದ್ದಾರೆ. ಯಾವ ಹಂತದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದು ಸೂಕ್ತ, ತಕ್ಷಣ ಅನುಷ್ಠಾನವಾದರೇ ಆಗಬಹುದಾದ ವೆಚ್ಚದ ವಿವರ ನೀಡುತ್ತಿದ್ದಾರೆ.
ಮಂಡ್ಯ: ತಂಗಿ ಸಾವಿನಿಂದ ಮನನೊಂದು ಅಣ್ಣ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕಿನ ಕುದುರುಗುಂಡಿ ಗ್ರಾಮದ ಬಳಿ ನಡೆದಿದೆ. ಅಣ್ಣ, ವೈದ್ಯ ವೇಣುಗೋಪಾಲ್(58) ಮೃತ ದುರ್ದೈವಿ.
ಮೈಸೂರು: ಸರಗೂರು ತಾಲೂಕಿನ ಹಿರೇಹಳ್ಳಿ ಬಳಿ ಕಾಡಾನೆ ದಾಳಿಗೆ ರೈತ ರವಿ (42) ಸಾವನ್ನಪ್ಪಿದ್ದಾನೆ. ಬೆಳೆ ಕಾಯಲು ಜಮೀನಿಗೆ ಹೋಗಿದ್ದಾಗ ಕಾಡಾನೆ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ, ಪರಿಶೀಲನೆ ಮಾಡಿದ್ದಾರೆ. ಮೃತ ರೈತನ ಕುಟುಂಬಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರು: ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜೊತೆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಅಂತ್ಯವಾಗಿದೆ. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಸಂಪುಟ ಸಭೆಯಲ್ಲಿ ಮಂಡಿಸಬೇಕಾದ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳ ಆರ್ಥಿಕ ನೀಲನಕ್ಷೆ, ಅನುಷ್ಠಾನದ ಬಗ್ಗೆ ಚರ್ಚಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಲಿದೆ.
ಬೆಂಗಳೂರು: ಗ್ಯಾರಂಟಿಯಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ. ಆದರೆ ಗ್ಯಾರಂಟಿ ಜಾರಿಯಿಂದ ಬಡವರಿಗೆ ಅನುಕೂಲವಾಗಲಿದೆ ಎಂದು ವಿಧಾನಸೌಧದಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರು: 5 ಗ್ಯಾರಂಟಿ ಜಾರಿ ಸಂಬಂಧ ಇಂದು (ಜೂ.02) ಕೆಲವೇ ಹೊತ್ತಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ಆರಂಭವಾಗಲಿದೆ. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಬೆಂಗಳೂರು: ರಾಜ್ಯದ 4 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂ.4ರಂದು ನೈಋತ್ಯ ಮಾನ್ಸೂನ್ ಕೇರಳ ಪ್ರವೇಶಿಸುವ ಸೂಚನೆ ಹಿನ್ನೆಲೆ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರು: ಹಾಲಿನ ಪ್ರೋತ್ಸಾಹ ಧನ ಲೀಟರ್ಗೆ 1.50 ರೂ. ದಷ್ಟು ಕಡಿತಗೊಳಿಸಿ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಆದೇಶ ಹೊರಡಿಸಿದೆ. ಜಿಲ್ಲಾ ಹಾಲು ಒಕ್ಕೂಟ ಬೇಸಿಗೆ ಸಮಯದಲ್ಲಿ ಪ್ರತಿ ಲೀಟರ್ ಹಾಲಿಗೆ 2.85 ರೂ. ವಿಶೇಷ ಪ್ರೋತ್ಸಾಹ ಧನ ಘೋಷಿಸಿತ್ತು.
ಮೈಸೂರು: ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಳಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಶಿಕುಮಾರ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಕಲಬುರಗಿ: ಕಲುಷಿತ ಆಹಾರ ಸೇವಿಸಿ 21 ಜನರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಅಸ್ವಸ್ಥರು ವಿಜಯಪುರ ಜಿಲ್ಲೆಯ ಚಡಚಣದ ಡೋಣಿ ನಿವಾಸಿಗಳು ಎಂದು ತಿಳಿದುಬಂದಿದೆ. ಡೋಣಿ ನಿವಾಸಿಗಳು ನಿನ್ನೆ (ಜೂನ್.01) ರಂದು ಲಾಡ್ಲೇ ಮಶಾಕ್ ದರ್ಗಾಕ್ಕೆ ಹರಕೆ ತೀರಿಸಲು ಬಂದಿದ್ದರು. ಊಟ ಸೇವಿಸಿದ್ದ ಬಳಿಕ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರಿಗೆ ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್ ಫೋಸ್ಟ್ ಆಫೀಸ್ ಹತ್ತಿರದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ 82 ವರ್ಷದ ಕಮಲಮ್ಮ ಎಂಬುವವರನ್ನ ಕೈ ಕಾಲು ಕಟ್ಟಿ ಹಾಕಿ ಮೇ.28ರಂದು ಕೊಲೆ ಮಾಡಿ, ಬಂಗಾರ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು: ನಗರ ಪೊಲೀಸರು ಡ್ರಗ್ಸ್ ದಂಧೆ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದು, ಕಳೆದ 2-3 ದಿನಗಳಿಂದ ನಗರದ ಶಾಲಾ-ಕಾಲೇಜು, ಪಿಜಿ ಸುತ್ತಮುತ್ತ ಪ್ರದೇಶಗಳಲ್ಲಿ ದಾಳಿ ಮಾಡಿದ್ದಾರೆ. ಇದೀಗ ಶಾಲಾ-ಕಾಲೇಜು ಆರಂಭ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ನಗರದ ಎಲ್ಲಾ ವಿಭಾಗದ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದು, ನಗರದ 250ಕ್ಕೂ ಹೆಚ್ಚು ಪ್ರದೇಶಗಳಲ್ಲಿ ದಾಳಿ ನಡೆಸಿ ಗಾಂಜಾ, ಎಂಡಿಎಂಎ ಸೇರಿದಂತೆ ಹಲವಾರು ಮಾದರಿಯ ಡ್ರಗ್ಸ್ಗಳನ್ನು ಜಪ್ತಿ ಮಾಡಿದ್ದಾರೆ.
ಚಿತ್ರದುರ್ಗ: ಜಿಲ್ಲೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಬಳಿ ಕಳಪೆ ಕಾಮಾಗಿರಿಯಿಂದ ಕೂಡಿದ ಚೆಕ್ ಡ್ಯಾಮ್ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿಬಂದಿದೆ. 70 ಲಕ್ಷ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ಕಾಮಗಾರಿ ನಡೆಯುತ್ತಿದೆ. ಗ್ರಾಮದ ಬಳಿ ಈಗಾಗಲೆ ನಿರ್ಮಿಸಿರುವ ಹಳೇ ಚೆಕ್ ಡ್ಯಾಂ ಬಳಿಯೇ ಈಗ ಮತ್ತೊಂದು ಚೆಕ್ ಡ್ಯಾಂ ನಿರ್ಮಾಣ ಮಾಡುತ್ತಿದ್ದು, ಈ ಕಾಮಗಾರಿ ಕಳಪೆಯಿಂದ ಕೂಡಿದೆ. ಈ ಹಿನ್ನೆಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಂಗಳೂರು: ಮಂಗಳೂರಿನ ಸೋಮೇಶ್ವರ ಬೀಚ್ನಲ್ಲಿ ನೈತಿಕ ಪೊಲೀಸ್ಗಿರಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆಗಾಗಿ ಎರಡು ತಂಡಗಳನ್ನು ರಚಿಸಿದ್ದಾರೆ. ಕೇರಳ ಮೂಲದ ಮೂವರು ಯುವಕರ ಮೇಲೆ ನಿನ್ನೆ (ಜೂ.02) ರಾತ್ರಿ ಹಲ್ಲೆ ನಡೆದಿತ್ತು.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಾದ 5 ಗ್ಯಾರೆಂಟಿಗಳು ಇಂದು (ಜೂ.02) ಜಾರಿಯಾಗುವ ಸಾಧ್ಯತೆ ಇದೆ. ಈ ಸಂಬಂಧ ಇಂದು (ಶುಕ್ರವಾರ) ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಇವತ್ತಿನ ಸಭೆಯಲ್ಲೇ ಐದು ಗ್ಯಾರಂಟಿಗಳಿಗೆ ಅಂತಿಮ ಮುದ್ರೆ ಬೀಳಲಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಬಳಿಕ ಗ್ಯಾರಂಟಿ ಘೋಷಣೆಗೆ ಸಜ್ಜಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಎಲ್ಲಾ ಇಲಾಖೆ ಜತೆ ಸಭೆ ನಡೆಸಿದ್ದು, ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ರಾಜ್ಯದ ಜನರಿಗೆ ಫ್ರೀ ಗಿಫ್ಟ್ ಕೊಡಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.
Published On - 7:41 am, Fri, 2 June 23