ಬೆಂಗಳೂರು: ಕನ್ನಡ ಹಾಡುಗಳನ್ನು ಹಾಕದ ಸಿಲಿಕಾನ್ ಸಿಟಿಯ ಪಬ್ಗಳ ವಿರುದ್ಧ ಱಪರ್ ಚಂದನ್ ಮತ್ತೆ ಗುಡುಗಿದ್ದಾರೆ. ಪಬ್ನಲ್ಲಿ ಕನ್ನಡ ಹಾಡುಗಳನ್ನ ಹಾಕೋದಿಲ್ಲ ಎಂಬ ಕಾರಣಕ್ಕೆ ಚಂದನ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ, ನಗರದ ಮಾರತ್ಹಳ್ಳಿಯಲ್ಲಿರುವ ಬ್ಲ್ಯಾಕ್ ಪರ್ಲ್ ಪಬ್ನಲ್ಲಿ ನಿನ್ನೆ ಕೆಲ ಕನ್ನಡಿಗರು ಕನ್ನಡ ಹಾಡುಗಳನ್ನು ಹಾಕಲು ಮನವಿ ಮಾಡಿದ್ದಕ್ಕೆ ಸಿಬ್ಬಂದಿ ನಿರಾಕರಿಸಿದ್ದರಂತೆ. ಇದರ ಬಗ್ಗೆ ಅರಿತ ಚಂದನ್ ಶೆಟ್ಟಿ ಇದೀಗ ಹೋರಾಟಕ್ಕೆ ಮುಂದಾಗಿದ್ದಾರೆ.
ಹಾಗಾಗಿ, ಚಂದನ್ ಶೆಟ್ಟಿ ನಾಳೆ ಪಬ್ ವಿರುದ್ಧ ಹೋರಾಟಕ್ಕಿಳಿಯೋ ಸಾಧ್ಯತೆಯಿದೆ. ಈ ನಡುವೆ, ಬ್ಲ್ಯಾಕ್ ಪರ್ಲ್ ಆಡಳಿತ ಮಂಡಳಿಗೆ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದರು.
ಕನ್ನಡ ಗೀತೆ ಪ್ರಸಾರ ಮಾಡುವುದಿಲ್ಲ ಎಂದು ಉದ್ಧಟತನ ಮೆರೆದ ಪಬ್ಗೆ ಪ್ರವೀಣ್ ಶೆಟ್ಟಿ ಭೇಟಿ ನೀಡಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಈ ನಡುವೆ, ಪಬ್ನ ಆಡಳಿತ ಮಂಡಳಿ ಇನ್ನು ಮುಂದೆ ಕನ್ನಡ ಗೀತೆಗಳನ್ನ ಹಾಕುವುದಾಗಿ ಭರವಸೆ ನೀಡಿದ ಜೊತೆಗೆ ನಿನ್ನೆ ಉದ್ಧಟತನ ತೋರಿದ ಮ್ಯಾನೇಜರ್ನ ಕೆಲಸದಿಂದ ವಜಾಗೊಳಿಸುವುದಾಗಿ ಆಶ್ವಾಸನೆ ಕೊಟ್ರು.
ಅಂದ ಹಾಗೆ, ಚಂದನ್ ಶೆಟ್ಟಿ ಈ ಹಿಂದೆ ಸಹ ಪಬ್‌ಗಳಲ್ಲಿ ಕನ್ನಡ ಹಾಡುಗಳನ್ನೇ ಹಾಕುವುದಿಲ್ಲ. ನಾವು ಎಷ್ಟೇ ಕೇಳಿಕೊಂಡರೂ ಹಾಡು ಹಾಕಲ್ಲ. ಪರಿಸ್ಥಿತಿ ಕೈಮೀರುವುದಕ್ಕೆ ಮೊದಲು ಜಾಗೃತರಾಗಬೇಕು ಎಂದು ಕನ್ನಡ ಱಪರ್ ಚಂದನ್ ಶೆಟ್ಟಿ ತಮ್ಮ ನೋವು ತೋಡಿಕೊಂಡಿದ್ದರು.
ಇದಲ್ಲದೆ, ಪಬ್ ಮಾಲೀಕರ ಧೋರಣೆಯನ್ನ ಖಂಡಿಸಿದ ಚಂದನ್ ಶೆಟ್ಟಿ ಅವರೆಲ್ಲ ಕನ್ನಡದವರೇ ಅಲ್ಲ. ಅವರಿಗೆ ಪಬ್ ನಡೆಸೋಕೆ ಕರ್ನಾಟಕದಲ್ಲಿ ಜಾಗ ಬೇಕು, ಇಲ್ಲಿನ ಎಲ್ಲಾ ಸೌಲಭ್ಯಗಳು ಬೇಕು. ಆದ್ರೆ ಕನ್ನಡ ಮಾತ್ರ ಬೇಡ ಎಂದು ತಮ್ಮ ಸಿಟ್ಟು ಹೊರಹಾಕಿದ್ದರು.
ಕನ್ನಡ ಹಾಡುಗಳನ್ನೇ ಹಾಕಿ ಅಂತಾ ನಾವು ಹೇಳುತ್ತಿಲ್ಲ. ಬದಲಿಗೆ ಕನ್ನಡ ಹಾಡುಗಳನ್ನೂ ಹಾಕಿ ಅಂತಾ ಕೇಳ್ತಿದ್ದೀವಿ ಎಂದು ವಿಡಿಯೋ ಮೂಲಕ ಚಂದನ್ ಶೆಟ್ಟಿ ಮಾತನಾಡಿದರು. ಇತ್ತೀಚೆಗೆ ಪಬ್ ಒಂದಕ್ಕೆ ಭೇಟಿ ನೀಡಿದ್ದ ಚಂದನ್ ಶೆಟ್ಟಿ ತಮಗಾದ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: UPSC ಮಾದರಿಯಲ್ಲೇ ಕೆಪಿಎಸ್ಸಿ ಪರೀಕ್ಷೆ: ಟಿವಿ9ಗೆ ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ಮಾಹಿತಿ