ಬೆಂಗಳೂರು: UPSC ಮಾದರಿಯಲ್ಲೇ ಕೆಪಿಎಸ್ಸಿ ಪರೀಕ್ಷೆ ನಡೆಯಲಿದೆ ಎಂದು ಟಿವಿ9ಗೆ ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ಮಾಹಿತಿ ನೀಡಿದ್ದಾರೆ. ಇದರ ಪ್ರಕಾರ, ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಜಾಮರ್ ಅಳವಡಿಕೆ ಮಾಡಲಾಗುವುದು. ಜೊತೆಗೆ, ಪಿಯು ಪರೀಕ್ಷಾ ಮಂಡಳಿಯ ವ್ಯವಸ್ಥೆ ಅಳವಡಿಕೆ ಮಾಡಲಾಗುವುದು. ಕರ್ನಾಟಕ ಸೆಕ್ಯೂರ್ಡ್ ಎಕ್ಸಾಮಿನೇಷನ್ ಸಿಸ್ಟಂ ಅಳವಡಿಕೆಯ ಜೊತೆಗೆ ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ಫೋನ್, ಬ್ಲೂ ಟೂತ್, ವೈಫೈ, ಮೈಕ್ರೋಚಿಪ್, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಲೋಹದ ವಸ್ತುಗಳನ್ನು ಕೊಂಡೊಯ್ಯದಂತೆ ತೀವ್ರ ನಿಗಾ ವಹಿಸಲಾಗುವುದು ಎಂದು ಸತ್ಯವತಿ ಹೇಳಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಅಧಿಕಾರಿಗಳು ಪರಿಶೀಲನೆ ಸಹ ನಡೆಸಲಿದ್ದಾರೆ. ಇದಲ್ಲದೆ, ಪರೀಕ್ಷಾ ಸಾಮಗ್ರಿ ಸಾಗಿಸುವ ವಾಹನಗಳಿಗೆ GPS ಅಳವಡಿಕೆ ಮಾಡಲಾಗುವುದು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ನಿರೀಕ್ಷಕರನ್ನು ನೇಮಿಸುವ ಜೊತೆಗೆ ದಿನದ 24 ಗಂಟೆಯೂ ಶಿಫ್ಟ್ ಪ್ರಕಾರ ಕಾರ್ಯ ನಿರ್ವಹಣೆ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಟಿವಿ9ಗೆ ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ಹೇಳಿದ್ದಾರೆ.
ಮುಂದೂಡಲಾಗಿದ್ದ FDA ಪರೀಕ್ಷೆ ನಾಳೆ ನಡೆಯಲಿದೆ
ಇನ್ನು, ಮುಂದೂಡಲಾಗಿದ್ದ FDA ಪರೀಕ್ಷೆ ನಾಳೆ ನಡೆಯಲಿದೆ ಎಂದು ಟಿವಿ9ಗೆ ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದ್ದಾರೆ. ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿ ಕಡ್ಡಾಯ ಎಂದು ಸಹ ಹೇಳಿದರು.
ನಾಳೆ ಬೆಳಗ್ಗೆ 10 ರಿಂದ 11.30ರವರೆಗೆ ಸಾಮಾನ್ಯ ಜ್ಞಾನ ಮತ್ತು ಮಧ್ಯಾಹ್ನ 2-3.30 ರವರೆಗೆ ಸಾಮಾನ್ಯ ಕನ್ನಡ/ ಇಂಗ್ಲಿಷ್ ಪರೀಕ್ಷೆ ಇರಲಿದೆ. ರಾಜ್ಯದ 1,057 ಕೇಂದ್ರಗಳಲ್ಲಿ ನಾಳೆ ಪರೀಕ್ಷೆ ನಡೆಯಲಿದೆ. 433 ಕೇಂದ್ರಗಳನ್ನ ಸೂಕ್ಷ್ಮ ಎಂದು ಗುರುತಿಸಲಾಗಿದೆ. 3.74 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. 1,253 ಹುದ್ದೆಗಳಿಗೆ FDA ಪರೀಕ್ಷೆ ನಡೆಯಲಿದೆ.
ಬೆಂಗಳೂರಿನಲ್ಲಿ 78 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜನವರಿ 24 ರಂದು ನಿಗದಿಯಾಗಿದ್ದ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಂದೂಡಲಾಗಿತ್ತು.
ನಾಳಿನ KPSC ಪರೀಕ್ಷೆ ಮೇಲೆ ಸಿಸಿಬಿ ಪೊಲೀಸರ ಹದ್ದಿನ ಕಣ್ಣು ಇಡಲಿದ್ದಾರೆ. ಕೆಪಿಎಸ್ಸಿ ಜೊತೆಗೆ ಸಿಸಿಬಿ ಪೊಲೀಸರಿಂದಲೂ ಪರೀಕ್ಷಾ ಕೇಂದ್ರಗಳನ್ನು ಮಾನಿಟರ್ ಮಾಡಲಾಗುವುದು. ಇದಲ್ಲದೆ, ಪೇಪರ್ ಪ್ರಿಂಟ್ ಆಗಿ ಪರೀಕ್ಷೆ ನಡೆಯೋವರೆಗೆ ತೀವ್ರ ನಿಗಾ ವಹಿಸಲಾಗುವುದು. ಕೆಪಿಎಸ್ಸಿಯಿಂದ ಜಿಲ್ಲಾ ಖಜಾನೆಯವರೆಗೆ ಹದ್ದಿನ ಕಣ್ಣು ಇಡಲಾಗುವುದು.
ಜಿಲ್ಲಾ ಖಜಾನೆ ಆಧಿಕಾರಿಗಳ ಜೊತೆ ಸಿಸಿಬಿ ಪೊಲೀಸರು ಸಂಪರ್ಕದಲ್ಲಿದ್ದು ಪೇಪರ್ ಖಜಾನೆ ಸೇರಿ ಎಕ್ಸಾಂ ಸೆಂಟರ್ ತಲುಪೋವರೆಗೆ ನಿಗಾ ವಹಿಸಲಾಗುವುದು. FDA ಪರೀಕ್ಷೆ ಸಂಬಂಧ ಅಧಿಕಾರಿ, ಸಿಬ್ಬಂದಿ ಮೇಲೂ ಸಹ ನಿಗಾ ಇರಿಸಲಾಗುವುದು ಎಂದು ತಿಳಿದುಬಂದಿದೆ. ಕಳೆದ ಬಾರಿಯಾದ ಎಡವಟ್ಟು ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದು ಸಿಬ್ಬಂದಿ ದೂರವಾಣಿ ಕರೆಗಳು, ಚಲನವಲನ ಬಗ್ಗೆಯೂ ನಿಗಾ ಇಡಲಾಗುವುದು.
ಜೊತೆಗೆ, ಈಗಾಗಲೇ ಲೀಕಾಸುರರ ಮೇಲೆ ಕಣ್ಣಿಟ್ಟಿರುವ ಪೊಲೀಸರು ವೇಣುಗೋಪಾಲ್ ನೇತೃತ್ವದ ವಿಶೇಷ ತಂಡದಿಂದ ಪರೀಕ್ಷಾ ಪ್ರಕ್ರಿಯೆ ಮೇಲೆ ನಿಗಾ ಇರಿಸಲಾಗುವುದು. ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ಪರೀಕ್ಷೆ ಮೇಲೆ ಹದ್ದಿನ ಕಣ್ಣು ಇಡಲಾಗುವುದು.
ಇದನ್ನೂ ಓದಿ: ಮದುವೆಗೆ ಅಡ್ಡಿಯಾದ ಕೊರೊನಾ ರೂಲ್ಸ್: ವಧು ಮಡಿಕೇರಿಯಲ್ಲಿ.. ವರ ಕೇರಳದಲ್ಲಿ ಲಾಕ್!