ಕೇರಳದಲ್ಲಿ ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕ ಮುಕ್ತ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದು, 72 ಗಂಟೆಗಳ ಮುಂಚಿನ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಭಾನುವಾರ ಸರ್ಕಾರಿ ಪ್ರಯೋಗಾಲಯ ಬಂದ್ ಆಗಿದ್ದು, ಕೊರೊನಾ ವರದಿ ಸಿಗದೆ ವರನ ಕಡೆಯವರು ಪರದಾಟ ನಡೆಸುವಂತಾಗಿದೆ.
ವಧುವಿನ ಕುಟುಂಬದವರಲ್ಲಿ ಆತಂಕ
ಭಾನುವಾರ ಸರ್ಕಾರಿ ಪ್ರಯೋಗಾಲಯ ಮುಚ್ಚಿದ್ದು, ಖಾಸಗಿ ಪ್ರಯೋಗಾಲಯದಲ್ಲಿ 2,500 ರೂಪಾಯಿ ಶುಲ್ಕ ತೆಗೆದುಕೊಳ್ಳುತ್ತಾರೆ. ಇನ್ನು ಮಡಿಕೇರಿಗೆ ವಿವಾಹಕ್ಕೆ ಬರಲು 15 ಮಂದಿ ಹೊರಟಿದ್ದು, ಖಾಸಗಿ ಪ್ರಯೋಗಾಲಯದಲ್ಲಿ 15 ಮಂದಿಗೆ 35,000 ರೂಪಾಯಿ ಶುಲ್ಕವಾಗುತ್ತದೆ. ಹೀಗಾಗಿ ಅಷ್ಟೊಂದು ಹಣವಿಲ್ಲದೆ ವರನ ಕಡೆಯವರು ಪರದಾಡುತ್ತಿದ್ದು, ಮದುವೆ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕ ಮೂಡಿದೆ.
ವರದಿ ಇಲ್ಲದೆ ಪ್ರವೇಶ ನೀಡುವಂತೆ ವಧು ಕಡೆಯವರು ಸದ್ಯ ಜಿಲ್ಲಾಡಳಿತದ ಮೊರೆ ಹೋಗಿದ್ದು, ಮದುವೆಗೆ ವರನ ಕಡೆಯವರು ಮಡಿಕೇರಿಗೆ ಬರಲು ಮುಕ್ತ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಕೊರೊನಾ ದೇಶವನ್ನು ವ್ಯಾಪಿಸಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಕಳೆದರೂ ಇನ್ನೂ ಕೂಡ ವಿವಾಹದಂತಹ ಸಮಾರಂಭಗಳನ್ನು ನಡೆಸಲು ಜನರು ಆತಂಕ ಪಡುವಂತಾಗಿದೆ.