ದಾವಣಗೆರೆ: ಆಫ್ರಿಕಾ (Africa) ರಾಷ್ಟ್ರ ಸುಡಾನ್‌ನಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಣ ಸಂಘರ್ಷ ನಡೆಯುತ್ತಿದೆ. ಈ ಘರ್ಷಣೆಯಲ್ಲಿ ಈವರೆಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 1,800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಆಫ್ರಿಕಾದಲ್ಲಿ ದಾವಣಗೆರೆ (Davangere), ಶಿವಮೊಗ್ಗ ಮತ್ತು ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ 181 ಜನ ಕನ್ನಡಿಗರು ಸಿಲುಕಿಹಾಕಿಕೊಂಡಿದ್ದಾರೆ. ಇವರಲ್ಲಿ ದಾವಣಗೆರೆಯ 40 ಜನ ಇದ್ದಾರೆ.
ಸುಡಾನ್‌ನಲ್ಲಿ (Sudan) ಸಿಲುಕಿಕೊಂಡಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೋಪನಾಳ್ ಗ್ರಾಮದ ನಿವಾಸಿ ಎಸ್. ಪ್ರಭು (36) ಮಾತನಾಡಿ ನಾಲ್ಕು ದಿನಗಳ ಹಿಂದಷ್ಟೇ ಮನೆಯಲ್ಲಿನ ನೀರು ಖಾಲಿಯಾಯಿತು. ಕುಡಿಯಲು ನೀರಿಲ್ಲ. ನಿನ್ನೆ ಅರ್ಧ ಗಂಟೆ ಅಂಗಡಿ ತೆರೆದಿದ್ದು, 2 ಕೆ.ಜಿ. ಅಕ್ಕಿ ತಂದು ತೊಟ್ಟಿ ನೀರಿನಲ್ಲಿ ಅಡುಗೆ ಮಾಡಿ ತಿಂದಿದ್ದೇವೆ ಎಂದು ತಮ್ಮ ಕಷ್ಟದ ಬಗ್ಗೆ ಟಿವಿ9 ಜೊತೆ ನೋವು ತೋಡಿಕೊಂಡಿದ್ದಾರೆ.
ಸೇನೆ ಮತ್ತು ಅರೆಸೇನಾ ಪಡೆ ನಡುವಣ ಘರ್ಷಣೆ ನಡೆಯುತ್ತಿದ್ದು, ಮದ್ದು ಗುಂಡುಗಳು ನಮ್ಮ ಮನೆಯ ಮೇಲೆ ಹಾದು ಹೋಗುತ್ತಿವೆ. ಈ ಶಬ್ಧಕ್ಕೆ ನಮ್ಮೆಲ್ಲರ ಎದೆ ನಡುಗುತ್ತಿದೆ. ಒಂದು ಗುಂಡು ನಮ್ಮ ಹುಡುಗನ ತಲೆಯ ಮೇಲೆ 3 ಅಡಿ ಅಂತರದಲ್ಲಿ ಹಾದು ಹೋದಾಗ ನಮಗೆ ಆದ ಭಯ ಅಷ್ಟಿಷ್ಟಲ್ಲ. ಪ್ರತಿಯೊಬ್ಬರೂ ಇಲ್ಲಿ ಖಿನ್ನತೆಗೆ ಒಳಗಾಗಿದ್ದೇವೆ ಎಂದು ಖಾರ್ಟೂಮ್ ನಗರದಲ್ಲಿ ಸಿಲುಕಿಕೊಂಡಿರುವ ಎಸ್. ಪ್ರಭು ತಮ್ಮ ಸಂಕಷ್ಟವನ್ನು ಹೇಳಿಕೊಂಡರು.
ಇದನ್ನೂ ಓದಿ: ಸುಡಾನ್ನಲ್ಲಿರುವ ಭಾರತೀಯರ ಬಗ್ಗೆ ಟ್ವೀಟ್ ಮಾಡಿದ ಸಿದ್ದರಾಮಯ್ಯ ವಿರುದ್ಧ ಗುಡುಗಿದ ವಿದೇಶಾಂಗ ಸಚಿವ ಎಸ್ ಜೈಶಂಕರ್
ಗುಂಡಿನ ಸಪ್ಪಳ ನಾವು ಸಿನಿಮಾದಲ್ಲಷ್ಟೇ ನೋಡಿದ್ದೇವು. ಈಗ ಅದನ್ನು ಕಣ್ಣಾರೆ ನೋಡುತ್ತಿದ್ದೇವೆ. ಗುಂಡಿನ ಶಬ್ಧಕ್ಕೆ ನಾವು ಇರುವ ಮನೆ ಅಲುಗಾಡುತ್ತಿದೆ. ಬೆಂಕಿಯ ಮಧ್ಯೆ ನಾವು ಬದುಕುತ್ತಿದ್ದೇವೆ. ಪ್ರತಿ ಎರಡು ಇಲ್ಲವೇ ಮೂರು ಗಂಟೆಗಳಿಗೊಮ್ಮೆ ಬರುವ ಗುಂಡಿನ ಶಬ್ಧಗಳು ನಮ್ಮನ್ನು ಭಯಬೀತರನ್ನಾಗಿಸಿದೆ ಎಂದರು.
ಯಾವುದೇ ರೀತಿಯ ಊಟದ ಸಾಮಗ್ರಿಗಳು, ನೀರು ಸಿಗುತ್ತಿಲ್ಲ. ಬಹಳ ತೊಂದರೆಯಲ್ಲಿ ಇದ್ದೇವೆ. ನಮ್ಮ ರಕ್ಷಣೆಗೆ ಸಹಾಯ ಮಾಡಿ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್ ರಾಜನ್ ಅವರಿಗೆ ಮನವಿ ಮಾಡಿದ್ದು, ದೆಹಲಿಯ ರಾಯಭಾರ ಕಚೇರಿಗೆ ಈ ಕುರಿತು ವರದಿ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಪ್ರಭು ತಿಳಿಸಿದರು.
ಸುಡಾನ್ ರಾಜಧಾನಿ ಖಾರ್ಟೂಮ್ ಸಿಲುಕಿಕೊಂಡಿರುವ ಚನ್ನಗಿರಿ ತಾಲ್ಲೂಕಿನ ಅಸ್ತಾಫ್ ನಗರದ 10 ಹಾಗೂ ಗೋಪನಾಳ್ ಗ್ರಾಮದ 30 ಜನರನ್ನು ಪಟ್ಟಿ ಮಾಡಿದ್ದೇವೆ. ಇಂದು ನಮ್ಮ ತಂಡವನ್ನು ಗ್ರಾಮಗಳಿಗೆ ಕಳುಹಿಸಿ ಅವರ ಮಾಹಿತಿ ಕಲೆಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 am, Wed, 19 April 23