
ವಿಜಯಪುರ: ಜಿಲ್ಲೆಯಲ್ಲಿನ ಪದ್ಧತಿ ಆಚರಣೆಗಳು ಬಲು ವಿಶಿಷ್ಟ. ಇಲ್ಲಿನ ಜಾತ್ರೆ, ಹಬ್ಬಗಳು ಸಹ ವಿಶೇಷವಾಗಿರುತ್ತವೆ. ಇಂತಹ ವಿಶೇಷ ಆಚರಣೆಗಳಲ್ಲಿ ಒಂದಾದ ಖಾರ ಕಟಾಂಬಲಿ ಆಚರಣೆಯನ್ನು ಇತ್ತೀಚಿಗೆ ಆಚರಿಸಲಾಯಿತು. ವಿಜಯಪುರ ತಾಲೂಕಿನ ರಂಭಾಪುರ ಗ್ರಾಮದಲ್ಲಿ ಹಲವಾರು ತಲೆಮಾರುಗಳಿಂದ ನಡೆದುಕೊಂಡು ಬಂದ ಈ ಆಚರಣೆಯನ್ನು ಇಂದಿನ ತಲೆಮಾರಿನ ಯುವಕರು ಮುಂದುವರೆಸಿಕೊಂಡು ಬಂದಿದ್ದಾರೆ. ಹಿಂಗಾರು ಬೆಳೆಗಳನ್ನು ಕಟಾವು ಮಾಡಿ ರಾಶಿಹಾಕಿ ಫಸಲನ್ನು ಮನೆಗೆ ತಂದ ಬಳಿಕ ನಡೆಯುವ ಆಚರಣೆ ಇದಾಗಿದ್ದು, ಧವಸ ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ದೇವರಿಗೆ ಸಮರ್ಪಿಸಿ, ಸಹಭೋಜನ ಮಾಡಲಾಗುತ್ತದೆ.
ವಿಜಯಪುರ ತಾಲೂಕಿನ ರಂಭಾಪುರ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಅದಕ್ಕೆ ಖಾರ ಕಟಾಂಬಲಿ ಆಚರಣೆ ಪ್ರಮುಖ ಕಾರಣವಾಗಿತ್ತು. ಹಲವಾರು ತಲೆಮಾರುಗಳಿಂದ ಗ್ರಾಮದಲ್ಲಿ ಕಟಾಂಬಲಿ ಆಚರಣೆ ನಡೆದುಕೊಂಡು ಬಂದಿದೆ. ಹಿಂಗಾರು ಹಂಗಾಮಿನಲ್ಲಿ ಬೆಳೆದ ಜೋಳ, ಗೋಧಿ, ಕಡಲೆ, ಕುಸುವೆ, ಅಲಸಂಡೆ ಸೇರಿದಂತೆ ಇತರೆ ಬೆಳೆಗಳನ್ನು ಕಟಾವು ಮಾಡಿ ರಾಶಿ ಮಾಡಲಾಗುತ್ತದೆ. ಹೀಗೆ ರಾಶಿ ಮಾಡಿಕೊಂಡು ಬಂದ ಈ ವರ್ಷದ ಧವಸ ಧಾನ್ಯಗಳನ್ನು ಗ್ರಾಮದಲ್ಲಿ ಕಟಾಂಬಲಿ ಆಚರಣೆ ಮಾಡಿದ ಬಳಿಕವೇ ಬಳಕೆ ಮಾಡಲಾಗುತ್ತದೆ.
ಹಿಂಗಾರು ಬೆಳೆಗಳ ಕಟಾವು ಮಾಡಿ ರಾಶಿ ಮಾಡಿಕೊಂಡು ಬಂದ ಬಳಿಕ ಗ್ರಾಮದ ಎಲ್ಲಾ ಮನೆಗಳಲ್ಲಿ ಹೊಸ ಧವಸ ಧಾನ್ಯಗಳಿಂದ ಅಡುಗೆ ತಯಾರಿಸುತ್ತಾರೆ. ಜೋಳದಿಂದ ಮಾಡಿದ ಅಂಬಲಿ, ರೊಟ್ಟಿ, ಕಾಳು ಪಲ್ಯ, ಚಟ್ನಿಯನ್ನು ಮಾಡುತ್ತಾರೆ. ಗ್ರಾಮದ ಪ್ರತಿಯೊಬ್ಬರ ಮನೆ ಮನೆಗಳಲ್ಲಿ ಮಾಡಿದ ಈ ಅಡಿಗೆ ಪದಾರ್ಥಗಳನ್ನು ಗ್ರಾಮದ ದೇವರಾದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತರುತ್ತಾರೆ.
ಧವಸ ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ದೇವರಿಗೆ ಸಮರ್ಪಿಸಿದ ಕ್ಷಣ
ಗ್ರಾಮದ ಮೆಂಡೆಗಾರ ಮನೆತನದಿಂದ ಮಣ್ಣಿನ ಮಡಿಕೆಯಲ್ಲಿ ಜೋಳದ ಅಂಬಲಿಯನ್ನು ತಲೆಯ ಮೇಲೆ ಹೊತ್ತು ದೇವಸ್ಥಾನಕ್ಕೆ ತರುತ್ತಾರೆ. ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನದ ಬಳಿಕ ಅಂಬಲಿ, ರೊಟ್ಟಿ, ಪಲ್ಯ ಹಾಗೂ ಚಟ್ನಿಯನ್ನು ನೈವೇದ್ಯ ಮಾಡುತ್ತಾರೆ. ನಂತರ ಗ್ರಾಮದ ಎಲ್ಲರೂ ದೇವಸ್ಥಾನದಲ್ಲಿ ಸಹಭೋಜನ ಮಾಡುತ್ತಾರೆ. ಈ ಪದ್ಧತಿ ಹಲವಾರು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ನಾವು ಸಹ ಇದನ್ನು ಪಾಲಿಸುತ್ತೇವೆ ಎಂದು ಅಂಬಲಿ ಮಾಡುವ ಮನೆತನದವರಾದ ಭೀಮು ಮೆಂಡೆಗಾರ ಹೇಳಿದ್ದಾರೆ.
ಮನೆಯಲ್ಲಿ ತಯಾರಿಸಿದ ಪದಾರ್ಥವನ್ನು ದೇವಾಲಯಕ್ಕೆ ಹೊತ್ತು ತಂದ ಮಹಿಳೆಯರು
ಪ್ರತಿ ವರ್ಷ ಹಿಂಗಾರು ಸುಗ್ಗಿ ಮುಕ್ತಾಯವಾದ ಬಳಿಕ ಗ್ರಾಮದವರೆಲ್ಲಾ ಸೇರಿ ಕಟಾಂಬಲಿ ಆಚರಣೆ ಮಾಡುವ ದಿನವನ್ನು ನಿರ್ಣಯ ಮಾಡುತ್ತಾರೆ. ಗ್ರಾಮದ ಜನರ ಒಮ್ಮತದ ನಿರ್ಧಾರದಂತೆ ನಿಗದಿಯಾದ ದಿನ ಗ್ರಾಮದ ಜನರೆಲ್ಲ ಎಲ್ಲೂ ಹೋಗದೇ ಕಟಾಂಬಲಿ ಆಚರಣೆಗೆ ಅಣಿಯಾಗುತ್ತಾರೆ. ಎಲ್ಲಾ ಪದ್ಧತಿಗಳು ಮುಗಿದ ಬಳಿಕ ಎಲ್ಲರ ಮನೆಯ ಅಂಬಲಿ, ರೊಟ್ಟಿ, ಪಲ್ಯ, ಚಟ್ನಿಗಳನ್ನು ಕೂಡಿಸಿ ಎಲ್ಲರಿಗೂ ಬಡಿಸಲಾಗುತ್ತದೆ. ದೇವಸ್ಥಾನದಲ್ಲಿ ಎಲ್ಲರೂ ಸಹಭೋಜನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಗ್ರಾಮದಲ್ಲಿ ಸಾಮರಸ್ಯ ಹಾಗೂ ಕೋಮು ಸೌಹಾರ್ದತೆ ಬೆಳೆಯುತ್ತದೆ. ಈ ಆಚರಣೆ ವೇಳೆ ಯಾವುದೇ ಜಾತಿ ವರ್ಣ ಬೇಧ ಮಾಡದೇ ಎಲ್ಲರೂ ಸಹಭೋಜನ ಮಾಡುವುದರಿಂದ ನಾವೆಲ್ಲಾ ಸಹೋದರತ್ವದಿಂದ ಜೀವನ ಮಾಡುತ್ತೇವೆ ಎಂದು ಗ್ರಾಮಸ್ಥರಾದ ಈರನಗೌಡ ಹೇಳುತ್ತಾರೆ.
ಇದನ್ನೂ ಓದಿ:
ಸುಗ್ಗಿ ಆಚರಣೆ: ಸೀತನಿಯ ಸಿಹಿ ತಿಂದು ಸಂಭ್ರಮಿಸಿದ ಕಲಬುರಗಿ ಗ್ರಾಮಸ್ಥರು