ಬೆಂಗಳೂರು: ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಧೀಶರ ಮೇಲೆ ಆರೋಪಗಳನ್ನು (Wild Allegations Against Judicial System) ಮಾಡಿದ ಕಾರಣಕ್ಕೆ ವಕೀಲರೊಬ್ಬರಿಗೆ ಒಂದು ವಾರ ಸಜೆ ವಿಧಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಅಡ್ವೊಕೇಟ್ ಕೆ.ಎಸ್. ಅನಿಲ್ (Advocate KS Anil) ಅವರನ್ನು ಒಂದು ವಾರ ಕಾಲ ಜೈಲಿಗೆ ಕಳುಹಿಸಲಾಗಿದೆ. ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ ವರಲೆ ಮತ್ತು ನ್ಯಾ| ಅಶೋಕ್ ಎಸ್ ಕಿಣಗಿ ಅವರಿರುವ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠವೊಂದು ಫೆಬ್ರುವರಿ 2ರಂದು ಈ ಆದೇಶ ನೀಡಿರುವುದು ತಿಳಿದುಬಂದಿದೆ. ನಾಳೆ, ಅಂದರೆ ಫೆಬ್ರುವರಿ 10ರಂದು ಅಡ್ವೊಕೇಟ್ ಅನಿಲ್ ಅವರನ್ನು ಮತ್ತೊಮ್ಮೆ ನ್ಯಾಯಪೀಠದ ಮುಂದೆ ಹಾಜರುಪಡಿಸಲಾಗುತ್ತಿದೆ.
ವಕೀಲ ಕೆಎಸ್ ಅನಿಲ್ ವಿರುದ್ಧ ನ್ಯಾಯಾಂಗ ನಿಂದನೆ (Contempt of Court) ಆರೋಪಗಳ ಪ್ರಕರಣಗಳಿವೆ. ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಅವಹೇಳನಕಾರಿಯಾಗುವಂತಹ ಹೇಳಿಕೆಗಳನ್ನು ಅವರು ನೀಡಿರುವ ಆರೋಪಗಳಿವೆ.
2019ರಲ್ಲಿ ಅನಿಲ್ ವಿರುದ್ಧ ಕ್ರಿಮಿನಲ್ ನಿಂದನೆ ಪ್ರಕರಣ ದಾಖಲಾಗಿತ್ತು. ನಂತರ ಮತ್ತೊಂದು ಸ್ವಯಂಪ್ರೇರಿತ ಪ್ರಕರಣ ಅವರ ಮೇಲೆ ದಾಖಲಾಯಿತು. ಪೊಲೀಸರು ಜಾಮೀನುಸಹಿತ ವಾರಂಟ್ ನೀಡಲು ಹೋದಾಗ ಅನಿಲ್ ಸ್ಪಂದಿಸಿಲ್ಲ. ಅಲ್ಲದೇ ಈ ಪ್ರಕರಣದಲ್ಲಿ ತಾನು ಮುಖ್ಯನ್ಯಾಯಾಧೀಶರ ವಿರುದ್ಧ ಆರೋಪ ಮಾಡಿರುವುದರಿಂದ ಪ್ರಕರಣದ ವಿಚಾರಣೆಯನ್ನು ಬೇರೊಂದು ನ್ಯಾಯಪೀಠಕ್ಕೆ ವರ್ಗಾಯಿಸಬೇಕೆಂಬುದು ಅನಿಲ್ ಅವರ ವಾದ.
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ಧೋರಣೆ ನೋಡಿದರೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇದ್ದಂತಿಲ್ಲ. ನ್ಯಾಯಾಂಗ ಭ್ರಷ್ಟಾಚಾರವನ್ನು ಜೀವಂತವಾಗಿ ಇಡಲಾಗಿದೆ. ನ್ಯಾಯಾಂಗ ವಿಚಾರಣೆ ಪ್ರಕ್ರಿಯೆಯ ನೇರ ಪ್ರಸಾರ ವ್ಯವಸ್ಥೆಯನ್ನು ಪೂರ್ಣವಾಗಿ ಮಾಡುತ್ತಿಲ್ಲ ಎಂದು ವಕೀಲ ಅನಿಲ್ ಹೇಳಿದ್ದರು.
ಇದನ್ನೂ ಓದಿ: BMRCL SOP: ನಿರ್ಮಾಣ ಕಾಮಗಾರಿ ವೇಳೆ ಅನುಸರಿಸಬೇಕಾದ ಮಾರ್ಗಸೂಚಿ ಪರಿಷ್ಕರಿಸಿದ ಮೆಟ್ರೋ ನಿಗಮ, ಅವಘಡ ತಡೆಗೆ ಕ್ರಮ
ಈ ವಿಚಾರಗಳನ್ನು ಫೆಬ್ರುವರಿ 2ರಂದು ನಡೆದ ವಿಚಾರಣೆ ವೇಳೆ ಪರಿಗಣನೆಗೆ ತೆಗೆದುಕೊಂಡ ಹೈಕೋರ್ಟ್ ನ್ಯಾಯಪೀಠ, ಆರೋಪಿಯು ನ್ಯಾಯಾಂಗ ವ್ಯವಸ್ಥೆಗಿರುವ ಗೌರವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ. ಅವರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸದೇ ಬೇರೆ ದಾರಿ ಇಲ್ಲ ಎಂದು ಆದೇಶ ಹೊರಡಿಸಿತು.