ಗಡಿ ತಂಟೆಯೆಂದು 2ನೇ ಗುಂಡಿ ತೋಡಿ ಅಂತ್ಯಸಂಸ್ಕಾರ ಮಾಡಿದರು, ಮೊದಲ ಗುಂಡಿಯಲ್ಲಿ ಕೋಳಿ-ತೆಂಗಿನಕಾಯಿ ಹಾಕಿ ಮುಚ್ಚಿದ್ದರು! ಅಪಶಕುನ ಎಂದು ರೊಚ್ಚಿಗೆದ್ದರು ಗ್ರಾಮಸ್ಥರು

Burial ground: ‘ಅಂತ್ಯಕ್ರಿಯೆಗಾಗಿ ತೋಡಿದ್ದ ಗುಂಡಿಯನ್ನು ಮುಚ್ಚೋವಾಗ ಕೋಳಿ ಹಾಗೂ ಟೆಂಗಿನಕಾಯಿ ಹಾಕಿ ಮುಚ್ಚಿದ್ದಕ್ಕೆ ಮೃತ ವ್ಯಕ್ತಿಯ ಕುಟುಂಬದವರೂ ನೋವು ತೋಡಿಕೊಂಡಿದ್ದಾರೆ. ತಂದೆಯನ್ನು ಕಳೆದುಕೊಂಡ ದುಖಃದಲ್ಲಿದ್ದೆವು. ಇದೀಗ ಅಂತ್ಯಕ್ರಿಯೆಗಾಗಿ ತೋಡಿದ್ದ ಗುಂಡಿ ಮುಚ್ಚಿಸಿದ್ದಾರೆ. ನಮಗೆ ಆದಂತೆ ಇತರರಿಗೆ ಆಗಬಾರದು’

ಗಡಿ ತಂಟೆಯೆಂದು 2ನೇ ಗುಂಡಿ ತೋಡಿ ಅಂತ್ಯಸಂಸ್ಕಾರ ಮಾಡಿದರು, ಮೊದಲ ಗುಂಡಿಯಲ್ಲಿ ಕೋಳಿ-ತೆಂಗಿನಕಾಯಿ ಹಾಕಿ ಮುಚ್ಚಿದ್ದರು!  ಅಪಶಕುನ ಎಂದು ರೊಚ್ಚಿಗೆದ್ದರು ಗ್ರಾಮಸ್ಥರು
ಸ್ಮಶಾನ ಸಮಸ್ಯೆ, ಅಧಿಕಾರಿಗಳ ಹೊಣೆಗೇಡಿತನ: ವಿಧಿಯಲ್ಲದೆ ಮತ್ತೊಂದು ಗುಂಡಿ ತೋಡಿ ಅಂತ್ಯಸಂಸ್ಕಾರ, ಅಪಶಕುನವೆಂದು ರೊಚ್ಚಿಗೆದ್ದ ಗ್ರಾಮಸ್ಥರು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 09, 2023 | 11:58 AM

ಅಂತ್ಯಕ್ರಿಯೆ ಮಾಡಲು ಸ್ಮಶಾನ ಜಾಗವಿಲ್ಲದ (cemetery) ಕಾರಣ ಸಮಸ್ಯೆಯಾಗಿರುವುದನ್ನು ನಾವೆಲ್ಲಾ ನೋಡಿದ್ದೇವೆ, ಕೇಳಿದ್ದೇವೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಎರಡು ಎಕರೆ ಸ್ಮಶಾನ ಜಾಗವಿದ್ದರೂ ಸಮಸ್ಯೆಯಾಗಿದೆ! ವ್ಯಕ್ತಿಯೋರ್ವ ಮೃತಪಟ್ಟಿದ್ದ ವೇಳೆ ಅಂತ್ಯಕ್ರಿಯೆ ಮಾಡಲು ತೋಡಿದ್ದ ಗುಂಡಿಯಲ್ಲಿ ಶವವನ್ನು ಹೂಳಲು ಬಿಟ್ಟಿಲ್ಲ ಎಂಬ ಗಂಭೀರ ಸಮಸ್ಯೆ ಎದುರಾಗಿದೆ. ತೋಡಿದ್ದ ಗುಂಡಿಯನ್ನು ಮುಚ್ಚಿ, ಮತ್ತೊಂದು ಗುಂಡಿ ತೋಡಿ (cemetery) ಅಂತ್ಯಕ್ರಿಯೆ ಮಾಡಲಾಗಿದೆ. ಶವ ಹೂಳಲು ತೋಡಿದ್ದ ಗುಂಡಿಯಲ್ಲಿ ಶವವಿಟ್ಟು ಅಂತ್ಯಕ್ರಿಯೆ ಮಾಡದೇ ಹಾಗೆಯೇ ಮುಚ್ಚಿದ್ದು ಅಪಶಕುನ (bad omen). ನಮ್ಮೂರಿಗೆ ಕೇಡು ಕಾದಿದೆ ಎಂದು ಗ್ರಾಮದ ಜನರು ಭಯಗೊಂಡಿದ್ಧಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ. ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ತೋಡಿದ್ದ ಗುಂಡಿಯಲ್ಲಿ ಜಮೀನು ಗಡಿ ಸಮಸ್ಯೆಯಿಂದ ಅಂತ್ಯಸಂಸ್ಕಾರ ಮಾಡಲು ಜಮೀನು ಮಾಲೀಕರು ತಡೆಯೊಡ್ಡಿದರು. ವಿಧಿಯಿಲ್ಲದೆ ಗ್ರಾಮಸ್ಥರು ಬೇರೊಂದು ಗುಂಡಿಯಲ್ಲಿ ಶವದ ಅಂತ್ಯಸಂಸ್ಕಾರ ನಡೆಸಿದರು. ಶವ ಹೂಳಲು ತೋಡಿದ್ದ ಗುಂಡಿ ಹಾಗೇ ಮುಚ್ಚಿದ್ದಕ್ಕೆ ಅಪಶಕುನವಾಗಿ, ಕೇಡಾಗುತ್ತದೆ ಎಂದು ಗ್ರಾಮದ ಜನರು ಭಯಗೊಂಡರು. ಇಂಥ ಘಟನೆಗೆ ವಿಜಯಪುರ (vijayapura) ತಾಲೂಕಿನ ಬುರಣಾಪೂರ ಗ್ರಾಮ ಸಾಕ್ಷಿಯಾಗಿದೆ (Smashana Samasye).

ಮಂಗಳವಾರ ಬುರಣಾಪೂರ ಗ್ರಾಮದಲ್ಲಿ ಬಸವರಾಜ ಚಿಮಟೆ (70) ಎಂಬ ವ್ಯಕ್ತಿ ಮೃತಪಟ್ಟಿದ್ದರು. ಗ್ರಾಮದ ಹೊರ ಭಾಗದಲ್ಲಿರೋ ಸರ್ವೇ ನಂಬರ್ 33 ಬ ದ ಪೈಕಿ 2 ಎಕರೆ ಜಮೀನನ್ನು ಸ್ಮಶಾನಕ್ಕಾಗಿ ಬಿಡಲಾಗಿದೆ. ಆರ್ ಟಿ ಸಿಯಲ್ಲೂ ಎರಡು ಎಕರೆ ಜಮೀನು ಸ್ಮಶಾನಕ್ಕಾಗಿ ಮೀಸಲಾಗಿದೆ. ಇಲ್ಲಿ ಅಂತ್ಯಕ್ರಿಯೆಗಾಗಿ ಗುಂಡಿ ತೋಡಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಇದೇ ವೇಳೆ ಪಕ್ಕ ಜಮೀನಿನ ಮಾಲೀಕ ಭೀಮಸಿ ಒಂಬಾಸೆ, ಸಾಯಬಣ್ಣಾ ಹಡಪದ ಎಂಬುವರು ಬಂದು ಇದು ನಮ್ಮ ಜಮೀನು ಸ್ಮಶಾನ ಭೂಮಿ ಅತ್ತ ಇದೆ. ಇಲ್ಲಿ ಅಂತ್ಯ ಸಂಸ್ಕಾರ ಮಾಡಬೇಡಿ ಎಂದು ತಗಾದೆ ತೆಗೆದಿದ್ದಾರೆ.

ಪರಿಣಾಮ ಅಂತ್ಯಕ್ರಿಯೆಗಾಗಿ ತೋಡಿದ್ದ ಗುಂಡಿಯಲ್ಲಿ ಒಂದು ಕೋಳಿ ಮತ್ತು ಒಂದು ತೆಂಗಿನಕಾಯಿ ಹಾಕಿ ಮುಚ್ಚಲಾಗಿದೆ. ಇದನ್ನು ಮುಚ್ಚಿ ಬೇರೆ ಕಡೆಯಲ್ಲೂ ಮತ್ತೊಂದು ಗುಂಡಿ ತೆಗೆದು ಅಂತ್ಯಸಂಸ್ಕಾರ ಮಾಡಲಾಗಿದೆ. ಕಾರಣ ಗ್ರಾಮಕ್ಕೆ ಇರುವ ಎರಡು ಎಕರೆ ಸ್ಮಶಾನಕ್ಕೆ ಗುರುತು ಇಲ್ಲ, ಚಕಬಂದಿ ಎಲ್ಲ ಇಲ್ಲ. ಎರಡು ಎಕರೆ ಜಮೀನಿನ ಆಕಾರವೂ ಇಲ್ಲ. ಸುತ್ತಲಿನ ರೈತರು ನಾಲ್ಕೂ ಕಡೆಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದು, ಒಡ್ಡು ಮಾತ್ರ ಉಳಿಸಿದ್ದಾರೆ. ಅದೇ ಒಡ್ಡಿನಲ್ಲಿ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಲ್ಲಿಯೇ ಹೂಳಬೇಕಿದೆ. ಅಲ್ಲಿ ಹೂಳಲೂ ಸಹ ಇದೀಗಾ ಸಮಸ್ಯೆ ಆರಂಭಗೊಂಡಿದೆ. ಸುತ್ತಲಿನ ರೈತರು ಸ್ಮಶಾನ ಜಾಗ ಇಲ್ಲಿಲ್ಲ/ಅಲ್ಲಿಲ್ಲ ಎನ್ನುತ್ತಿರುವುದು ತೆಗೆದ ಗುಂಡಿಯನ್ನು ಮುಚ್ಚುವಂತಾಗಿದೆ. ಸರ್ಕಾರದಿಂದ ಸ್ಮಶಾನಕ್ಕೆ ನೀಡಲಾಗಿರೋ ಜಮೀನೇ ಇಲ್ಲಿ ಕಳೆದು ಹೋಗಿದೆ!

ಮಂಗಳವಾರ ನಡೆದಿರೋ ಈ ಘಟನೆ ಗ್ರಾಮದಲ್ಲಿ ಆತಂಕವನ್ನೂ ಸಹ ಹುಟ್ಟಿಸಿದೆ. ಕಾರಣ ಅಂತ್ಯಕ್ರಿಯೆಗೆ ತೆಗೆದ ಗುಂಡಿಯನ್ನು ಹಾಗೇ ಮುಚ್ಚಿದರೆ ಅಪಶಕುನ ಉಂಟಾಗುತ್ತದೆ. ಗ್ರಾಮಕ್ಕೆ ಕೇಡು ಉಂಟಾಗುತ್ತದೆ. ಮಳೆ ಬೆಳೆ ಸರಿಯಾಗಿ ಆಗಲ್ಲಾ. ಗ್ರಾಮದಲ್ಲಿ ಕೆಟ್ಟ ಘಟನೆಗಳು ಜರುಗುತ್ತವೆ ಎಂದು ಗ್ರಾಮದ ಜನರು ಆತಂಕ ಹೊಂದಿದ್ದಾರೆ. ಶವ ಸಂಸ್ಕಾರಕ್ಕೆ ತೆಗೆದ ಗುಂಡಿಯನ್ನು ಮುಚ್ಚಿದರೆ ಅಪಾಯ ಮಾತ್ರ ಗ್ಯಾರಂಟಿ ಎಂಬಂತಾಗಿದೆ. ಮಂಗಳವಾರದಿಂದ ಜನ ಇದೇ ವಿಚಾರದಲ್ಲಿ ಮಗ್ನರಾಗಿದ್ಧಾರೆ.

ಇನ್ನು ಸಾವನ್ನಪ್ಪಿದ್ದ ಬಸವರಾಜ ಚಿಮಟೆ ಅಂತ್ಯಕ್ರಿಯೆಗಾಗಿ ತೋಡಿದ್ದ ಗುಂಡಿಯನ್ನು ಮುಚ್ಚೋವಾಗ ಕೋಳಿ ಹಾಗೂ ಟೆಂಗಿನಕಾಯಿ ಹಾಕಿ ಮುಚ್ಚಿದ್ದರ ಬಗ್ಗೆಯೂ ಜನರು ಕಳವಳ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆಗಾಗಿ ತೆಗದ ಗುಂಡಿಯನ್ನು ಮುಚ್ಚಿದ್ದಕ್ಕೆ ಮೃತ ವ್ಯಕ್ತಿಯ ಕುಟುಂಬದವರೂ ಸಹ ನೋವನ್ನು ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ತಂದೆಯನ್ನು ಕಳೆದುಕೊಂಡ ದುಖಃದಲ್ಲಿದ್ದೆವು. ಇಲ್ಲಿ ಅಂತ್ಯಕ್ರಿಯೆಗಾಗಿ ತೋಡಿದ್ದ ಗುಂಡಿಯನ್ನು ಮುಚ್ಚಿಸಿದ್ದಾರೆ. ನಮಗೆ ಆದಂತೆ ಇತರರಿಗೆ ಆಗಬಾರದು ಎಂದು ನೋವನ್ನು ಹೊರ ಹಾಕಿದ್ದಾರೆ.

ಸದ್ಯ ಇಡೀ ಬುರಣಾಪೂರ ಗ್ರಾಮದ ಜನರ ಪ್ರಕಾರ ಸರ್ವೇ ನಂಬರ್ 33 ಬ ಪ್ರಕಾರ ಸರ್ಕಾರ ಎರಡು ಎಕರೆ ಜಮೀನನನ್ನು ಗ್ರಾಮಕ್ಕೆ ಸ್ಮಶಾನಕ್ಕಾಗಿ ನೀಡಿದೆ. ಇದೀಗಾ ಎರಡು ಎಕರೆ ಗಡಿಯನ್ನು ಗುರುತಿಸಿಲ್ಲ. ಜಿಲ್ಲಾಡಳಿತ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಭೂಮಾಪನ ಇಲಾಖೆಯವರು ಗ್ರಾಮದ ಸ್ಮಶಾನಕ್ಕೆ ಮೀಸಲಾಗಿಟ್ಟಿರೋ ಎರಡು ಎಕರೆ ಜಮೀನನ್ನು ಗುರುತಿಸಿಕೊಡಬೇಕು.

ಎರಡು ಎಕರೆ ಸ್ಮಶಾನ ಭೂಮಿಗೆ ತಂತಿ ಬೇಲಿ ಅಂತಾ ಗೋಡೆಯನ್ನಾದರೂ ನಿರ್ಮಿಸಬೇಕು. ಅಲ್ಲಿಯವರೆಗೆ ಈ ಸಮಸ್ಯೆ ಇತ್ಯರ್ಥವಾಗೋಲ್ಲ. ಕೂಡಲೇ ಸಂಬಂಧಿಸಿದ ಆಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಸದ್ಯ ಶವ ಹೂಳಲು ಮುಚ್ಚಿದ ಗುಂಡಿಯನ್ನು ಮುಚ್ಚಿದ್ದಕ್ಕೆ ನಮಗೆ ಕೇಡಾಗುತ್ತದೆ ಎಂದು ಗ್ರಾಮದ ಜನರು ಭಯಗೊಂಡಿದ್ದಾರೆ.

ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ 

Published On - 11:57 am, Thu, 9 February 23