
ಬೆಂಗಳೂರು, ನವೆಂಬರ್ 17: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಒತ್ತು ನೀಡಿರುವ ಸರ್ಕಾರ, ಮುಖ್ಯಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 6,000 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಮಂಗಳವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಸಂಬಂಧ ನವೆಂಬರ್ 17ರಂದು ಆದೇಶ ಹೊರಡಿಸಲಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚು ಹಾಳಾಗಿರುವ ರಸ್ತೆಗಳಿಗೆ ಯೋಜನೆಯಡಿ ಮೊದಲ ಆದ್ಯತೆ ನೀಡಬೇಕು. ಹೊಸ ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಕೂಡ ಅಭಿವೃದ್ಧಿಗೆ ಪರಿಗಣಿಸಬಹುದು ಎಂದು ಸೂಚಿಸಲಾಗಿದೆ. ನಿರ್ಮಾಣವಾಗುವ ಬೀದಿಗಳು ಕನಿಷ್ಠ 20 ವರ್ಷ ಬಾಳಿಕೆ ಬರುವಂತೆ ಗುಣಮಟ್ಟ ಕಾಯ್ದುಕೊಳ್ಳಬೇಕು. ಅನುಮೋದಿತ ಕಾಮಗಾರಿಗಳನ್ನು 15 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.
ಕಾಮಗಾರಿ ಆರಂಭಿಸುವ ಮೊದಲು ಹಾಗೂ ಪೂರ್ಣಗೊಂಡ ಬಳಿಕ ಜಿಪಿಎಸ್ ಆಧಾರಿತ ಫೋಟೊ ಮತ್ತು ವಿಡಿಯೊಗಳನ್ನು ಕಡ್ಡಾಯವಾಗಿ ದಾಖಲಿಸಬೇಕು. ಬೇರೆ ಯೋಜನೆಗಳಡಿ ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪುನರಾವರ್ತನೆಯಾಗದಂತೆ ದೃಢೀಕರಣ ಪಡೆಯಬೇಕು. ಸ್ಥಳೀಯ ಶಾಸಕರ ಸಹಮತಿಯೊಂದಿಗೆ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಅನುಮೋದನೆ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಾಮಗಾರಿ ಆರಂಭಿಸಲು ರಾಜ್ಯಮಟ್ಟದ ಸಮಿತಿಯ ಪ್ರತ್ಯೇಕ ಅನುಮೋದನೆಗಾಗಿ ಕಾಯುವ ಅಗತ್ಯವಿಲ್ಲ. ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವಿವರಗಳನ್ನು ಸಂಬಂಧಿತ ತಂತ್ರಾಂಶದಲ್ಲಿ ದಾಖಲಿಸುವಂತೆಯೂ ಸೂಚಿಸಲಾಗಿದೆ.
ಇನ್ನು ಆದೇಶದ ಅನುಬಂಧದಲ್ಲಿ 4,904.50 ಕೋಟಿ ರೂಪಾಯಿಗಳ ಜಿಲ್ಲಾವಾರು ಅನುದಾನ ಹಂಚಿಕೆಯ ವಿವರ ನೀಡಲಾಗಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚು 399.50 ಕೋಟಿ ರೂಪಾಯಿ ಹಂಚಿಕೆಯಾಗಿದೆ.
ತುಮಕೂರಿಗೆ 277.50 ಕೋಟಿ ರೂ, ಕಲಬುರಗಿಗೆ 229 ಕೋಟಿ ರೂ, ಚಿಕ್ಕಮಗಳೂರಿಗೆ 226 ಕೋಟಿ ರೂ, ಮೈಸೂರಿಗೆ 225 ಕೋಟಿ ರೂ, ಹಾವೇರಿಗೆ 223 ಕೋಟಿ ರೂ ಹಾಗೂ ಮಂಡ್ಯ ಜಿಲ್ಲೆಗೆ 216.50 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಗೆ 56.50 ಕೋಟಿ ರೂಪಾಯಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 95 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಒಟ್ಟಾರೆ 6,000 ಕೋಟಿ ರೂಪಾಯಿ ಯೋಜನೆಯಡಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಅನುಮೋದನೆ ನೀಡಿದ್ದು, ಕಾಮಗಾರಿಗಳ ಗುಣಮಟ್ಟ ಮತ್ತು ಕಾಲಮಿತಿಯ ಅನುಷ್ಠಾನಕ್ಕೆ ಹಲವು ಷರತ್ತುಗಳನ್ನು ವಿಧಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ