ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ: ಮುಡಾ, ವಾಲ್ಮೀಕಿ ನಿಗಮ ಅಕ್ರಮ ಗದ್ದಲ ಸಾಧ್ಯತೆ

| Updated By: Ganapathi Sharma

Updated on: Jul 15, 2024 | 6:48 AM

16ನೇ ವಿಧಾನಮಂಡಲ‌ ಅಧಿವೇಶನ ಆರಂಭ ಕ್ಷಣಗಣನೆ ಶುರುವಾಗಿದೆ. ಮುಡಾ, ವಾಲ್ಮೀಕಿ ಅಕ್ರಮಗಳ ಮಧ್ಯೆ ಕಲಾಪ ಶುರುವಾಗುತ್ತಿದೆ. ಈ ಜೋಡಿ ಅಸ್ತ್ರಗಳನ್ನೇ ಹೆಗಲಿಗೇರಿಸಿಕೊಂಡು ವಿಪಕ್ಷಗಳು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ಸನ್ನದ್ಧವಾಗಿವೆ. ಇದಕ್ಕೆ ಪ್ರತ್ಯಸ್ತ್ರ ಹೂಡಲು ಕಾಂಗ್ರೆಸ್ ಕೂಡ ತಂತ್ರ ಹೂಡಿದೆ.

ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ: ಮುಡಾ, ವಾಲ್ಮೀಕಿ ನಿಗಮ ಅಕ್ರಮ ಗದ್ದಲ ಸಾಧ್ಯತೆ
ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ
Image Credit source: PTI
Follow us on

ಬೆಂಗಳೂರು, ಜುಲೈ 15: ರಾಜ್ಯದಲ್ಲಿ ಮುಡಾ ಹಗರಣ ಕೋಲಾಹಲ ಸೃಷ್ಟಿಸಿದೆ. ವಾಲ್ಮೀಕಿ ನಿಗಮದ ಕರ್ಮಕಾಂಡ ಬಿರುಗಾಳಿ ಎಬ್ಬಿಸಿದೆ. ರಾಜ್ಯಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ವಾಕ್ಸಮರವನ್ನೇ ಸಾರಿಗೆ. ಜತೆಗೆ ಬೀದಿಗಿಳಿದು ಹೋರಾಟ ನಡೆಸಿ ಸಿಎಂ ರಾಜೀನಾಮೆಗೆ ಪಟ್ಟುಹಿಡಿದಿದೆ. ಈ ಜಂಗೀಕುಸ್ತಿಯ ನಡುವೆ ಇಂದಿನಿಂದ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ.

ಜುಲೈ 26ರವರೆಗೆ 16ನೇ ವಿಧಾನಸಭೆಯ 4ನೇ ಮುಂಗಾರು ಅಧಿವೇಶನ ನಡೆಯಲಿದೆ. ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ, ವಾಲ್ಮೀಕಿ ನಿಗಮದಲ್ಲಿನ 187 ಹಗರಣ ಆರೋಪ ಬಿಜೆಪಿಗೆ ಅಸ್ತ್ರವಾಗಿದೆ. ಇದೆ ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಜಂಟಿ ಹೋರಾಟಕ್ಕೆ ಸಜ್ಜಾಗಿವೆ.

ಬಿಜೆಪಿ, ಜೆಡಿಎಸ್ ರಣತಂತ್ರ

ಅಧಿವೇಶನದಲ್ಲಿ ಮುಡಾ ಸೈಟ್ ಹಂಚಿಕೆ, ವಾಲ್ಮೀಕಿ ಅಕ್ರಮವನ್ನೇ ಪ್ರಧಾನವಾಗಿ ಪ್ರಸ್ತಾಪಿಸಲು ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಿರ್ಧರಿಸಿವೆ. ಈ 2 ವಿಷಯಗಳ ತಾರ್ಕಿಕ ಅಂತ್ಯಕ್ಕೆ ತಲುಪುವವರೆಗೂ ಹೋರಾಟ ಮುಂದಾಗಿವೆ. ಇದಲ್ಲದೆ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿಗೆ ಬಳಕೆ, ಬೆಲೆ ಏರಿಕೆ, ಡೆಂಘೀ ನಿರ್ಲಕ್ಷ್ಯ, ಕಾನೂನು ಸುವ್ಯವಸ್ಥೆ ವಿಷ್ಯಗಳನ್ನು ಸನ್ನಿವೇಶ ಆಧಾರಿತವಾಗಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಸದನದಲ್ಲಿ ಯಾವುದೇ ವಿಷಯಕ್ಕೆ ಆರಂಭದಲ್ಲೇ ಪ್ರತಿಭಟನೆ ಬೇಡ. ವಿಷಯಗಳನ್ನು ಪ್ರಸ್ತಾಪಿಸಿದ ಬಳಿಕವೇ ಕೊನೆಯಲ್ಲಿ ಪ್ರತಿಭಟನೆ ಮಾಡಲು ತಂತ್ರ ರೂಪಿಸಿವೆ.

ಬಿಜೆಪಿ, ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ತಂತ್ರ

ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ಆರೋಪಗಳನ್ನ ಮುಂದಿಟ್ಟುಕೊಂಡು ತಿರುಗೇಟು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಆರೋಪ, ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಶೇ 40 ಕಮಿಷನ್ ಆರೋಪ, ಕೊರೊನಾ ಕಾಲದ ಹಗರಣ, ಬಿಟ್ ಕಾಯಿನ್ ಹಗರಣ ಹಾಗೂ ದೇವರಾಜ ಅರಸು ಟ್ರಕ್ ಟರ್ಮಿನಲ್​​​ನಲ್ಲಿ 47ಕೋಟಿ ರೂಪಾಯಿ ಹಗರಣದಲ್ಲಿ ಬಿಜೆಪಿಯ ಮಾಜಿ ಶಾಸಕ ವೀರಯ್ಯನನ್ನು ಬಂಧಿಸಲಾಗಿದೆ. ಈ ವಿಚಾರಗಳನ್ನು ಪ್ರಸ್ತಾಪಿಸಿ ವಿಪಕ್ಷಗಳಿಗೆ ತಿರುಗೇಟು ನೀಡುವ ಸಾಧ್ಯತೆ ಇದೆ.

ವಾಲ್ಮೀಕಿ ಹಗರಣ ನಿಲುವಳಿ ಮಂಡನೆಗೆ ಬಿಜೆಪಿ ಚಿಂತನೆ

ಈ ಮಧ್ಯೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಬಗ್ಗೆ ನಿಲುವಳಿ ಮಂಡಿಸಲು ವಿಪಕ್ಷ ಬಿಜೆಪಿ ಮುಂದಾಗಿದೆ. ವಿಧಾನಸಭೆ ಕಲಾಪದಲ್ಲಿ ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಮಂಡಲಿಸಲಿದೆ. ಬೆಳಗ್ಗೆ ಬಿಜೆಪಿ ನಾಯಕರು ಸ್ಪೀಕರ್ ಯು.ಟಿ.ಖಾದರ್​​​ಗೆ ನಿಲುವಳಿ ನೋಟಿಸ್ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ನಿವೃತ್ತ ನ್ಯಾ ಪಿಎನ್​ ದೇಸಾಯಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆಯೋಗ ರಚಿಸಿದ ಸರ್ಕಾರ

ಮತ್ತೊಂದೆಡೆ ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರೋ ಶಾಸಕ ಬಸನಗೌಡ ದದ್ದಲ್, ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ನಾಪತ್ತೆಯಾಗಿದ್ದಾರೆ. ಇಂದಿನಿಂದ ಆರಂಭವಾಗುವ ಅಧಿವೇಶನಕ್ಕೆ ಬರುತ್ತಾರಾ ಎಂಬ ಅನುಮಾನ ಶುರುವಾಗಿದೆ. ಒಟ್ಟಿನಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಆಡಳಿತರೂಢ ಮತ್ತು ವಿಪಕ್ಷಗಳ ನಡುವೆ ಗದ್ದಲ ಜೋರಾಗಿ ನಡೆಯುವ ಸಾಧ್ಯತೆಗಳು ಗೋಚರವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:47 am, Mon, 15 July 24