ಮೈಸೂರು ಅತ್ಯಾಚಾರದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಗೆ ಕ್ರಮ; ಮೈಸೂರು ಪೊಲೀಸರ ಕುರಿತು ಕಲಾಪದಲ್ಲಿ ಶ್ಲಾಘನೆ

Karnataka Assembly Session: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸುದೀರ್ಘ ಆಕ್ಷೇಪಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ‘ಯಾರಾದರೂ ನನ್ನ ತಂದೆಯನ್ನು ವ್ಯಭಿಚಾರಿ ಎಂದರೆ ನನಗೆ ಅಷ್ಟು ಬೇಸರವಾಗದು. ಆದರೆ ತಾಯಿಯನ್ನು ಹಾಗೆ ಕರೆದರೆ ಖಂಡಿತ ಸುಮ್ಮನಿರಲಾರೆ’ ಎಂದು ಮಹಿಳೆಯರ ಗೌರವದ ಕುರಿತು ವ್ಯಾಖ್ಯಾನಿಸಿದರು.

ಮೈಸೂರು ಅತ್ಯಾಚಾರದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಗೆ ಕ್ರಮ; ಮೈಸೂರು ಪೊಲೀಸರ ಕುರಿತು ಕಲಾಪದಲ್ಲಿ ಶ್ಲಾಘನೆ
ಆರಗ ಜ್ಞಾನೇಂದ್ರ, ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ
Follow us
TV9 Web
| Updated By: guruganesh bhat

Updated on: Sep 22, 2021 | 7:19 PM

ವಿಧಾನಸೌಧ: ಮೈಸೂರಿನಲ್ಲಿ ಯುವತಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲೇ ಮಾಡುತ್ತೇವೆ. ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಮೈಸೂರಿನಲ್ಲೇ ನಡೆದ ಇನ್ನೊಂದು ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸುತ್ತೇವೆ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರಿನಲ್ಲಿ ಯುವತಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ತೀವ್ರ ಹಣಾಹಣಿಯೇ ನಡೆಯಿತು. ಈವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕಿಯರಾದ ಸೌಮ್ಯಾ ರೆಡ್ಡಿ, ಅಂಜಲಿ ನಿಂಬಾಳ್ಕರ್ ಮೊದಲಾದವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನೂ ಸೇರಿ ತೀವ್ರ ತರಾಟೆಗೆ ತೆಗೆದುಕೊಂಡರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸುದೀರ್ಘ ಆಕ್ಷೇಪಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ‘ಯಾರಾದರೂ ನನ್ನ ತಂದೆಯನ್ನು ವ್ಯಭಿಚಾರಿ ಎಂದರೆ ನನಗೆ ಅಷ್ಟು ಬೇಸರವಾಗದು. ಆದರೆ ತಾಯಿಯನ್ನು ಹಾಗೆ ಕರೆದರೆ ಖಂಡಿತ ಸುಮ್ಮನಿರಲಾರೆ’ ಎಂದು ಮಹಿಳೆಯರ ಗೌರವದ ಕುರಿತು ಸ್ವಉದಾಹರಣೆ ನೀಡಿ ವ್ಯಾಖ್ಯಾನಿಸಿದರು. ಈಮುನ್ನ ಶಾಸಕಿ ಅಂಜಲಿ ನಿಂಬಾಳ್ಕರ್ ಮುಂತಾದವರು ಅತ್ಯಾಚಾರ ಪ್ರಕರಣಗಳ ಕುರಿತು ಮಾತನಾಡುವಾಗ ಲಿಂಗ ತಾರತಮ್ಯತೆಯ ಬಗ್ಗೆ ಆಡಿದ್ದ ಮಾತುಗಳಿಗೆ ಇದು ವಿರೋಧಾಭಾಸದಂತಿತ್ತು.

ಮುಂದುವರೆದು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಮೈಸೂರಿನ ಪೊಲೀಸರ ಬಗ್ಗೆ ವಿರೋಧ ಪಕ್ಷದವರು ಏನೇನೋ ಹೇಳಿದ್ದಾರೆ. ಮೈಸೂರಿನಲ್ಲಿ 1 ಲಕ್ಷಕ್ಕೆ 313 ಪೊಲೀಸರಿದ್ದಾರೆ. ಪ್ರತೀ ಲಕ್ಷಕ್ಕೆ ಹೆಚ್ಚು ಪೊಲೀಸರು ಇರುವ ನಂಬರ್ ಒನ್ ಜಿಲ್ಲೆ ಮೈಸೂರು. ಮೈಸೂರಿನಲ್ಲಿ 250 ಜನ ಪೊಲೀಸರು ರಾತ್ರಿ‌ ಗಸ್ತಿನಲ್ಲಿರುತ್ತಾರೆ. ಕರ್ನಾಟಕದಲ್ಲಿ 2013-21 ರವರೆಗೆ 131 ಅತ್ಯಾಚಾರ ಪ್ರಕರಣಗಳಾಗಿವೆ. ಕೃತ್ಯ ಮಾಡುವವರಿಗೆ ಯಾವ ಸರ್ಕಾರವಿದೆ ಎಂಬುದು ಮುಖ್ಯವಲ್ಲ. ಆರೋಪಿಗೆ ಕೃತ್ಯ ಮಾಡುವುದಷ್ಟೇ ಮುಖ್ಯ. ಯಾದಗಿರಿ ಪ್ರಕರಣ ನನಗೆ ಗೊತ್ತಾದ ಅರ್ಧ ಗಂಟೆಯಲ್ಲಿ ಪೊಲೀಸರು ಕ್ರಮ ತೆಗೆದುಕೊಂಡರು. ಬಹಳ ಹಿಂದೆಯೇ ಅಮಾನವೀಯ ಘಟನೆ ನಡೆದಿದ್ದರೂ ಸಂತೃಸ್ತ ಮಹಿಳೆಯೇ ದೂರು ನೀಡಿರಲಿಲ್ಲ. ಆದರೂ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

ಮೈಸೂರು ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿಲ್ಲ. ಸಿದ್ದರಾಮಯ್ಯ ಅವರ ಈ ಅನುಮಾನ ನಿರಾಧಾರ. ಪ್ರಕರಣದಲ್ಲಿ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ಪೊಲೀಸರ ಮೇಲೆ ಅನುಮಾನ ಬೇಡ. ಪೊಲೀಸರಿಗೆ ಯಾವುದೇ ದುರುದ್ದೇಶವಿಲ್ಲ. ನನಗೆ ಗೊತ್ತಾಗದಿದ್ದರೆ ಸಿಎಂ ಮಾರ್ಗದರ್ಶನ ಪಡೆಯುತ್ತೇನೆ. ಯಡಿಯೂರಪ್ಪ ಸಹ ನಮಗೆ ಸದಾ ಕಾಲ ಬೆನ್ನೆಲುಬಾಗಿರುತ್ತಾರೆ. ಚಿತ್ರದುರ್ಗದಲ್ಲಿ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದರು.

ಇಂಥ ನೀಚ ಕೆಲಸ ಮಾಡಿದವರಿಗೆ ಈ ಸದನದಿಂದ ಸಂದೇಶ ಕಳಿಸಬೇಕು ನೀಚರಿಗೆ ಒಂದು ಸಂದೇಶ ಹೋಗಬೇಕು. ನಾನು ಈ ವ್ಯವಸ್ಥೆ ಹಾಳು ಮಾಡಲ್ಲ, ಸರಿಪಡಿಸಲು ಯತ್ನಿಸುತ್ತೇನೆ. ಪ್ರಕರಣಕ್ಕೆ ಸಂಬಂಧ ಯಾವುದೇ ದುರುದ್ದೇಶವಿಲ್ಲ. ಪ್ರಕರಣ ಮುಚ್ಚಿಹಾಕುವ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ಇದನ್ನೂ ಓದಿ: 

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೈಸೂರು ಅತ್ಯಾಚಾರ ಪ್ರಕರಣ: ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್

Instant Justice: ಅತ್ಯಾಚಾರಿಗಳ ವಿರುದ್ಧ ಆಂಧ್ರ ಸ್ಟೈಲ್​ ಕ್ರಮಕ್ಕೆ ಒತ್ತಾಯಿಸಿದ ಸಾರಾ ಮಹೇಶ್: ಆಂಧ್ರ ಸ್ಟೈಲ್ ಅಂದ್ರೆ ಏನು? ಇಲ್ಲಿದೆ ಮಾಹಿತಿ

(Karnataka Assembly Session 2021 CM Basavaraj Bommai says will take action as Death penalty for Mysuru rape offenders)