ಬೆಂಗಳೂರು: ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ವಿಧಾನಸಭೆ ಕಲಾಪದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ವಿರೋಧ ಪಕ್ಷದವರು ವಿಧಾನಸಭೆ ಕಲಾಪ ಪುನಾರಂಭವಾಗುತ್ತಿದ್ದಂತೆ ಧರಣಿ ಆರಂಭಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಕಾಂಗ್ರೆಸ್ ಶಾಸಕರು ನೀವೆಲ್ಲಾ ಆರ್ಎಸ್ಎಸ್ ಎಂದು ಬಿಜೆಪಿ ಶಾಸಕರನ್ನು ದೂಷಿಸಿದರು. ಇದಕ್ಕೆ ಪ್ರತ್ಯುತ್ತರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಹೌದು, ನಾನು ಆರ್ಎಸ್ಎಸ್, ನೀವ್ಯಾರು?’ ಎಂದು ಸಮರ್ಥಿಸಿಕೊಂಡು ಕಾಂಗ್ರೆಸ್ ಶಾಸಕರನ್ನು ಪ್ರಶ್ನಿಸಿದರು. ಸದನ ಆರಂಭವಾದಾಗ ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ನಮ್ಮ ಪಾಯಿಂಟ್ ಆಫ್ ಆರ್ಡರ್ ಅನ್ನು ನೀವು ಕೇಳಲೇ ಇಲ್ಲ ಎಂದು ಕಾಂಗ್ರೆಸ್ ಶಾಸಕರು ತಕರಾರು ತೆಗೆದರೆ, ಜೆಡಿಎಸ್ ನಾಯಕರು ವಿಶೇಷ ಚರ್ಚೆ ವಿರೋಧಿಸಿ ಸಭಾತ್ಯಾಗ ಮಾಡಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ ಕಲಾಪದಲ್ಲಿ ಅಂಗಿ ಬಿಚ್ಚಿದ ಕಾರಣಕ್ಕಾಗಿ ಸದನದಿಂದ ಒಂದು ವಾರ ಅಮಾನತುಗೊಂಡಿರುವ ಭದ್ರಾವತಿ ಶಾಸಕ ಸಂಗಮೇಶ್ರನ್ನು ಸಿದ್ದರಾಮಯ್ಯ ತಮ್ಮ ಜೊತೆಯಲ್ಲೇ ಕರೆದುಕೊಂಡು ಬಂದರಾದರೂ ಸಂಗಮೇಶ್ ಕಲಾಪಕ್ಕೆ ತೆರಳದಂತೆ ಮಾರ್ಷಲ್ಸ್ ಬಾಗಿಲಿನಲ್ಲಿ ತಡೆದರು. ಹೀಗಾಗಿ ಅವರನ್ನು ಲಾಂಜ್ನಲ್ಲಿ ಕೂರಿಸಲು ಹೇಳಿದ ಸಿದ್ದರಾಮಯ್ಯ ಸದನದೊಳಗೆ ಕಾಲಿಟ್ಟರು.
ನಂತರ ಸಂಗಮೇಶ್ ಏನು ತಪ್ಪು ಮಾಡಿದರೆಂದು ಸಿದ್ದರಾಮಯ್ಯ ಸ್ಪೀಕರ್ಗೆ ಪ್ರಶ್ನಿಸಿದಾಗ ಮರುಪ್ರಶ್ನೆ ಮಾಡಿದ ಸ್ಪೀಕರ್ ಕಾಗೇರಿ, ಸಂಗಮೇಶ್ ಅಶಿಸ್ತನ್ನು ಒಪ್ತೀರಾ ಎಂದು ಕೇಳಿದರು. ಆಗ ಸಿದ್ದರಾಮಯ್ಯ, ಸದನದಲ್ಲಿ ಬೆತ್ತಲೆ ಆಗಿರೋದನ್ನೂ ನಾವು ನೋಡಿದ್ದೇವೆ. ಗೂಳಿಹಟ್ಟಿ ಶೇಖರ್ ಏನು ಮಾಡಿದ್ದರೆಂದು ನೋಡಿದ್ದೇವೆ ಎಂದು ತಿರುಗೇಟು ನೀಡಿದರು. ಇದಾದ ನಂತರ ಸದನದಲ್ಲಿ ಮತ್ತೆ ಗದ್ದಲ ಮುಂದುವರಿದ ಕಾರಣ ಸಭಾಪತಿಗಳು ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದ್ದಾರೆ.
ಅಂಗಿ ಬಿಚ್ಚಿದ್ದು ಅತಿರೇಕವೇನಲ್ಲ
ಅಮಾನತು ಬಗ್ಗೆ ಬೆಳಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಶಾಸಕ ಬಿ.ಕೆ. ಸಂಗಮೇಶ್, ಭದ್ರಾವತಿ ಜನ ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಆರ್ಎಸ್ಎಸ್, ಬಿಜೆಪಿ, ಬಜರಂಗದಳದವರು ಭದ್ರಾವತಿಯಲ್ಲಿ ಕೋಮುಗಲಭೆ ಮಾಡಬೇಕು ಅನ್ಕೊಂಡಿದ್ದಾರೆ. ಕರಾವಳಿಯ ರೀತಿಯಲ್ಲೇ ಹಿಂದುತ್ವದಿಂದ ಗೆಲ್ಲಬಹುದು ಎಂದು ನನ್ನ ಮೇಲೆ, ಕುಟುಂಬದ ಮೇಲೆ ಅಟ್ರಾಸಿಟಿ ಕೇಸ್ ಹಾಕಿದ್ದಾರೆ. ನಾನು ಕಾಂಗ್ರೆಸ್ ಶಾಸಕನಾಗಿರುವ ಕಾರಣ ಬಿಜೆಪಿ ನಾಯಕರು ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಘವೇಂದ್ರ ಶಿವಮೊಗ್ಗ ಜಿಲ್ಲೆಗೆ ಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ವಾರ ಭದ್ರಾವತಿಗೆ ಬಂದು ಅವರ ಹಲ್ಕಾಗಿರಿ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನನಗೆ ನ್ಯಾಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸದನದಲ್ಲಿ ಶರ್ಟ್ ಬಿಚ್ಚುವ ಹಂತಕ್ಕೆ ಹೋದೆ. ಸ್ಪೀಕರ್ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಅವರಿಗೆ ಪತ್ರ ಕೊಟ್ಟರೂ ಸರ್ಕಾರಕ್ಕೆ ಸೂಚನೆ ಕೊಟ್ಟಿಲ್ಲ. ಹೀಗಾಗಿ ಮನಸ್ಸಿಗೆ ನೋವಾಗಿ ಪ್ರತಿಭಟನೆ ಮಾಡಿದೆ. ಶರ್ಟ್ ಬಿಚ್ಚಿದರೆ ಕ್ಷೇತ್ರದ ಜನರಿಗೆ ಏಕೆ ಅವಮಾನ ಆಗುತ್ತೆ? ನ್ಯಾಯ ಸಿಗದೇ ಇದ್ದಾಗ ನಾನು ಏನು ಮಾಡಬೇಕು? ನನ್ನ ಭಾವನೆ ಪ್ರಕಾರ ಅದು ಅತಿರೇಕ ಆಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಈ ಎಲ್ಲಾ ಪಿತೂರಿ ಯಡಿಯೂರಪ್ಪ, ಅವರ ಪುತ್ರ ಹಾಗೂ ಈಶ್ವರಪ್ಪ ಅವರದ್ದು ಎಂದು ಗೊತ್ತಿದೆ. ಅಧಿಕಾರ ಇದೆ ಎಂದು ಸ್ಪೀಕರ್ ಹೊರ ಹಾಕಬಹುದು, ಹಾಕಲಿ. ನಾನು ಹೋಗಿ ಜನರಿಗೆ ಹೇಳುತ್ತೇನೆ, ಧರಣಿ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಒಂದು ವಾರಗಳ ಕಾಲ ಅಮಾನತು
ಕಲಾಪ ಆರಂಭದಲ್ಲೇ ಗೊಂದಲ.. RSS ಅಜೆಂಡಾ ವಿರುದ್ಧ ಸಿದ್ದರಾಮಯ್ಯ ಕಿಡಿ, 15 ನಿಮಿಷ ಕಾಲ ಕಲಾಪ ಮುಂದೂಡಿಕೆ
Published On - 5:13 pm, Thu, 4 March 21