ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಕಾಂಗ್ರೆಸ್​ ಶಾಸಕ ಬಿ.ಕೆ.ಸಂಗಮೇಶ್ ಒಂದು ವಾರಗಳ ಕಾಲ ಅಮಾನತು

ವಿಧಾನಸಭೆ ಕಲಾಪದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದ ಭದ್ರಾವತಿ ಶಾಸಕ ಸಂಗಮೇಶ್ ಅವರನ್ನು ಒಂದು ವಾರದ ತನಕ ಸದನದಿಂದ ಅಮಾನತು ಮಾಡಲಾಗಿದೆ.

  • TV9 Web Team
  • Published On - 13:55 PM, 4 Mar 2021
ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಕಾಂಗ್ರೆಸ್​ ಶಾಸಕ ಬಿ.ಕೆ.ಸಂಗಮೇಶ್ ಒಂದು ವಾರಗಳ ಕಾಲ ಅಮಾನತು
ಬಿ.ಕೆ.ಸಂಗಮೇಶ್​

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಶರ್ಟ್ ಬಿಚ್ಚಿದ ಕಾರಣಕ್ಕಾಗಿ ಕಾಂಗ್ರೆಸ್​ ಪಕ್ಷದ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಒಂದು ವಾರ ಕಾಲ ಸದನದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಭದ್ರಾವತಿ ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಸಂಗಮೇಶ್ ನಡೆಗೆ ಸ್ಪೀಕರ್ ಕಾಗೇರಿ ತೀವ್ರ ಅಸಮಾಧಾನಗೊಂಡು ಸದನದಲ್ಲಿ ಗೌರವದಿಂದ ನಡೆದುಕೊಳ್ಳಿ ಎಂದು ಹೇಳಿದ್ದರು. ಕ್ಷೇತ್ರದ ಜನತೆಗೆ ಅಗೌರವ ತರಬೇಡಿ. ಅಶಿಸ್ತಿನಿಂದ ನಡೆದುಕೊಂಡರೆ ಹೊರಗೆ ಹಾಕಬೇಕಾಗುತ್ತದೆ. ಸದನದಿಂದ ಹೊರಗೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಬಳಿಕ ಸಂಗಮೇಶ್‌ಗೆ ಡಿ.ಕೆ.ಶಿವಕುಮಾರ್ ಶರ್ಟ್ ಹಾಕಿಸಿದ್ದರು.

ಅಂಗಿ ಬಿಚ್ಚಿದ್ದು ಅತಿರೇಕವೇನಲ್ಲ
ಅಮಾನತು ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಶಾಸಕ ಬಿ.ಕೆ. ಸಂಗಮೇಶ್, ಭದ್ರಾವತಿ ಜನ ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಆರ್​ಎಸ್​ಎಸ್​, ಬಿಜೆಪಿ, ಬಜರಂಗದಳದವರು ಭದ್ರಾವತಿಯಲ್ಲಿ ಕೋಮುಗಲಭೆ ಮಾಡಬೇಕು ಅನ್ಕೊಂಡಿದ್ದಾರೆ. ಕರಾವಳಿಯ ರೀತಿಯಲ್ಲೇ ಹಿಂದುತ್ವದಿಂದ ಗೆಲ್ಲಬಹುದು ಎಂದು ನನ್ನ ಮೇಲೆ, ಕುಟುಂಬದ ಮೇಲೆ ಅಟ್ರಾಸಿಟಿ ಕೇಸ್ ಹಾಕಿದ್ದಾರೆ. ನಾನು ಕಾಂಗ್ರೆಸ್ ಶಾಸಕನಾಗಿರುವ ಕಾರಣ ಬಿಜೆಪಿ ನಾಯಕರು ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಘವೇಂದ್ರ ಶಿವಮೊಗ್ಗ ಜಿಲ್ಲೆಗೆ ಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ವಾರ ಭದ್ರಾವತಿಗೆ ಬಂದು ಅವರ ಹಲ್ಕಾಗಿರಿ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನನಗೆ ನ್ಯಾಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸದನದಲ್ಲಿ ಶರ್ಟ್ ಬಿಚ್ಚುವ ಹಂತಕ್ಕೆ ಹೋದೆ. ಸ್ಪೀಕರ್ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಅವರಿಗೆ ಪತ್ರ ಕೊಟ್ಟರೂ ಸರ್ಕಾರಕ್ಕೆ ಸೂಚನೆ ಕೊಟ್ಟಿಲ್ಲ. ಹೀಗಾಗಿ ಮನಸ್ಸಿಗೆ ನೋವಾಗಿ ಪ್ರತಿಭಟನೆ ಮಾಡಿದೆ. ಶರ್ಟ್ ಬಿಚ್ಚಿದರೆ ಕ್ಷೇತ್ರದ ಜನರಿಗೆ ಏಕೆ ಅವಮಾನ ಆಗುತ್ತೆ? ನ್ಯಾಯ ಸಿಗದೇ ಇದ್ದಾಗ ನಾನು ಏನು ಮಾಡಬೇಕು? ನನ್ನ ಭಾವನೆ ಪ್ರಕಾರ ಅದು ಅತಿರೇಕ ಆಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಈ ಎಲ್ಲಾ ಪಿತೂರಿ ಯಡಿಯೂರಪ್ಪ, ಅವರ ಪುತ್ರ ಹಾಗೂ ಈಶ್ವರಪ್ಪ ಅವರದ್ದು ಎಂದು ಗೊತ್ತಿದೆ. ಅಧಿಕಾರ ಇದೆ ಎಂದು ಸ್ಪೀಕರ್ ಹೊರ ಹಾಕಬಹುದು, ಹಾಕಲಿ. ನಾನು ಹೋಗಿ ಜನರಿಗೆ ಹೇಳುತ್ತೇನೆ, ಧರಣಿ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.