ಬೆಂಗಳೂರು: ವಿಧಾನಸೌಧದಲ್ಲಿ ಇಂದು ವಿಧಾನಪರಿಷತ್ ಕಲಾಪ ಆರಂಭವಾಗಿದೆ. ಇತ್ತೀಚೆಗೆ ನಿಧನ ಹೊಂದಿದ ನಿವೃತ್ತ ನ್ಯಾಯಮೂರ್ತಿ ಹಾಗೂ ರಾಜ್ಯಪಾಲರಾಗಿದ್ದ ರಾಮಜೋಯಿಸ್ ರವರಿಗೆ ಪರಿಷತ್ನಲ್ಲಿ ಸಂತಾಪ ಸೂಚನೆ ಬಳಿಕ ಪ್ರಶ್ನೋತ್ತರ ಕಲಾಪ ಆರಂಭವಾಗಿದೆ. ವಿಧಾನಸಭೆಯಲ್ಲಿ ‘ಒನ್ ನೇಷನ್, ಒನ್ ಎಲೆಕ್ಷನ್’ ಬಗ್ಗೆ ಸ್ಪೀಕರ್ ಕಾಗೇರಿ ಪ್ರಸ್ತಾಪಿಸಿದ್ದಾರೆ. ಇದು RSS ಅಜೆಂಡಾ ಎಂದು ಸಿದ್ದರಾಮಯ್ಯ ಜೋರಾಗಿ ಕೂಗಿದ್ರು.
ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಸ್ಪೀಕರ್ ಪ್ರಸ್ತಾಪ ಮಾಡುತ್ತಿದ್ದಂತೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ಬೇರೆ ಸಿದ್ಧಾಂತವಿಟ್ಟುಕೊಂಡು ಇಂಥಾ ವಿಚಾರದ ಚರ್ಚೆ ಬೇಡ ಎಂದು ವಿಧಾನಸಭೆಯಲ್ಲಿ ಕೆ.ಆರ್.ರಮೇಶ್ ಕುಮಾರ್ ಹೇಳಿದ್ರು. ರಮೇಶ್ ಕುಮಾರ್ ಮಾತಿಗೆ ಸ್ಪೀಕರ್ ಅಸಮಾಧಾನಗೊಂಡಿದ್ದು ಸ್ಪೀಕರ್ ವಿಶೇಷಾಧಿಕಾರ ದುರುಪಯೋಗ ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯ ಕೆ.ಆರ್.ರಮೇಶ್ ಕುಮಾರ್ ಹೇಳಿದ್ರು. ನಿಮ್ಮ ಮಾತು ನಿಮ್ಮ ಘನತೆಗೆ ಸರಿಹೋಗಲ್ಲ ಎಂದು ಸ್ಪೀಕರ್ ಹೇಳಿದ್ರು.
ಮತ್ತೆ ಇದಕ್ಕೆ ನಿಮ್ಮ ಕೃಪೆಯಿಂದ ನನ್ನ ಘನತೆ ಹೆಚ್ಚಿಸಿಕೊಳ್ಳಬೇಕಿಲ್ಲ ಎಂದು ಕೆ.ಆರ್.ರಮೇಶ್ ಉತ್ತರಿಸಿದ್ರು. ಸ್ಪೀಕರ್ ಕ್ರಮಕ್ಕೆ ವಿಪಕ್ಷ ಕಾಂಗ್ರೆಸ್ ನಿಂದ ವಿರೋಧ ಉಂಟಾಗಿದ್ದು ಸದನದ ಬಾವಿಗಿಳಿದು ಕಾಂಗ್ರೆಸ್ ಪಕ್ಷದ ಸದಸ್ಯರು ಧರಣಿ ನಡೆಸಿದ್ದಾರೆ. ಕಾಂಗ್ರೆಸ್ ವಿರೋಧದ ನಡುವೆ ಸ್ಪೀಕರ್ ಚರ್ಚೆಗೆ ಮುಂದಾಗಿದ್ದಾರೆ. ಬಳಿಕ ಕಾಂಗ್ರೆಸ್ ಸದಸ್ಯರು ಪಾಯಿಂಟ್ ಆಫ್ ಆರ್ಡರ್ ಎತ್ತಿದ್ದಾರೆ. ಕಾಂಗ್ರೆಸ್ ಸದಸ್ಯರಿಂದ ತೀವ್ರ ಗದ್ದಲ ಹಿನ್ನೆಲೆಯಲ್ಲಿ ಸ್ಪೀಕರ್ ವಿಧಾನಸಭಾ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದ್ದಾರೆ.
ಸದನದಲ್ಲಿ ಶರ್ಟ್ ಬಿಚ್ಚಿದ ಭದ್ರಾವತಿ ಶಾಸಕ ಸಂಗಮೇಶ್
ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆ ವೇಳೆ ಭದ್ರಾವತಿ ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಸಂಗಮೇಶ್ ನಡೆಗೆ ಸ್ಪೀಕರ್ ಕಾಗೇರಿ ತೀವ್ರ ಅಸಮಾಧಾನಗೊಂಡಿದ್ದು ಸಂಗಮೇಶ್ ಸದನದಲ್ಲಿ ಗೌರವದಿಂದ ನಡೆದುಕೊಳ್ಳಿ. ಕ್ಷೇತ್ರದ ಜನತೆಗೆ ಅಗೌರವ ತರಬೇಡಿ. ಅಶಿಸ್ತಿನಿಂದ ನಡೆದುಕೊಂಡರೆ ಹೊರಗೆ ಹಾಕಬೇಕಾಗುತ್ತದೆ. ಸದನದಿಂದ ಹೊರಗೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ರು. ಬಳಿಕ ಸಂಗಮೇಶ್‌ಗೆ ಡಿ.ಕೆ.ಶಿವಕುಮಾರ್ ಶರ್ಟ್ ಹಾಕಿಸಿದ್ರು.
ಒಂದು ದೇಶ – ಒಂದು ಚುನಾವಣೆ ವಿಶೇಷ ಚರ್ಚೆ ವೇಳೆ ಸಿಎಂ ಯಡಿಯೂರಪ್ಪ ಮಾತು
ಒಂದು ದೇಶ – ಒಂದು ಚುನಾವಣೆ ವಿಶೇಷ ಚರ್ಚೆ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇದು ಸಮಯ ಮತ್ತು ಸಂಪನ್ಮೂಲಗಳ ದೃಷ್ಟಿಯಿಂದ ಒಳ್ಳೆಯದು. ಒಂದು ದೇಶ – ಒಂದು ಚುನಾವಣೆ ನಿಯಮದಿಂದ ಕೆಲವು ರಾಜಕೀಯ ಹೊಂದಾಣಿಕೆ ಅನಿವಾರ್ಯ ಆಗಲಿದೆ. ಲೋಕಸಭಾ – ವಿಧಾನಸಭಾ ಅವಧಿಯಲ್ಲಿ ಏರಿಳಿತಗಳು ಆಗಬಹುದು. ಇದನ್ನು ಜಾರಿ ಮಾಡುವುದು ಬಹುದೊಡ್ಡ ಸವಾಲು. ಆದರೆ, ಏಕಕಾಲದಲ್ಲಿ ಚುನಾವಣೆ ನಡೆದರೆ ಆಡಳಿತ ಯಂತ್ರದ ಸುಗಮ ಹಾಗೂ ದಕ್ಷ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ. ಈ ನಿಯಮ ಕುರಿತು ಆಳವಾದ ಅಧ್ಯಯನ ಮತ್ತು ಸಮಾಲೋಚನೆ ಅಗತ್ಯವಿದೆ. ಈ ಕುರಿತು ನಿರ್ಣಯ ಕೈಗೊಂಡು ಶಿಫಾರಸು ಮಾಡಲಿ ಎಂದು ತಿಳಿಸಿದ್ದಾರೆ.
Published On - 12:29 pm, Thu, 4 March 21