ಸದನದಲ್ಲಿ ಪೆನ್ ಡ್ರೈವ್ ಸದ್ದು: ಸ್ಪೀಕರ್ ಒಪ್ಪಿದರೆ ಇಲ್ಲೇ ಆಡಿಯೋ ಹಾಕಿಸುತ್ತೇನೆ ಎಂದ ಕುಮಾರಸ್ವಾಮಿ
ಇಂದು ಸದನದಲ್ಲಿ ಕೆ.ಜೆ.ಜಾರ್ಜ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರ ನಡುವೆ ವಾಗ್ವಾದ ನಡೆಯಿತು. ಪೆನ್ಡ್ರೈವ್ ವಿಚಾರವಾಗಿ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಬೆಂಗಳೂರು: 6ನೇ ವಿಧಾನಸಭೆಯ ಮೊದಲ ಅಧಿವೇಶನ (Legislature Session) ಆರಂಭವಾಗಿದೆ. ಮೊದಲ ದಿನದ ಅಧಿವೇಶನ ಆರಂಭವಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumarswamy) ಅವರು ಮುಖ್ಯಮಂತ್ರಿ ಕಚೇರಿ (Chief Minister Office) ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಶಾಸಕರ ಶಿಫಾರಸ್ಸು ತಂದರೇ ಸಾಲದು 30 ಲಕ್ಷ ದುಡ್ಡು ತನ್ನಿ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದರು. ಈ ವಿಚಾರವಾಗಿ ಕಾಂಗ್ರೆಸ್ (Congress) ನಾಯಕರು ಸಾಕ್ಷಿ ಕೇಳಿದ್ದರು. ಇದಕ್ಕೆ ಶಾಸಕ ಹೆಚ್.ಡಿ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ ಮಾಧ್ಯಮಗಳ ಮುಂದೆ ಪೆನ್ ಡ್ರೈವ್ (Pen Drive) ತೋರಿಸಿ ಇದರಲ್ಲಿ ವರ್ಗಾವಣೆ ಕುರಿತಾದ ಆಡಿಯೋ ಇದೆ ಎಂದು ಹೇಳಿದ್ದರು. ಈ ವಿಚಾರವನ್ನು ಹೆಚ್.ಡಿ ಕುಮಾರಸ್ವಾಮಿಯವರು ಸದನದಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಗದ್ದಲ ಎದ್ದಿತು.
ಹೌದು ವಿಧಾನಸಭೆಯಲ್ಲಿ ಕೆ.ಜೆ.ಜಾರ್ಜ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರ ನಡುವೆ ವಾಗ್ವಾದ ನಡೆಯಿತು. ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಹೆಚ್ಡಿ ಕುಮಾರಸ್ವಾಮಿಯವರು ಆರೋಪ ಮಾಡಿದರು. ಇದಕ್ಕೆ ಸಚಿವ ಕೆಜೆ ಜಾರ್ಚ್ ಅವರು ಪ್ರತ್ಯುತ್ತರ ನೀಡಿ ನನ್ನ ಬಳಿ ಪೆನ್ಡ್ರೈವ್ ಇದೆ, ಅದರಲ್ಲಿ ಸಾಕ್ಷ್ಯವಿದೆ ಎಂದು ಹೇಳುತ್ತೀರಿ. ನಿಮ್ಮ ಬಳಿ ಯಾವ ಸಾಕ್ಷ್ಯವಿದೆ, ಅದನ್ನು ಸ್ಪೀಕರ್ಗೆ ನೀಡಿ ಎಂದರು.
ಇದನ್ನೂ ಓದಿ: ಸಿಎಂ ಆಗಿದ್ದಾಗ ವರ್ಗಾವಣೆಯಲ್ಲಿ ಮಕ್ಕಳು ಭಾಗಿ ಆರೋಪ: ಸಾಬೀತಾದರೇ ರಾಜಕೀಯ ನಿವೃತ್ತಿ ಘೋಷಿಸುವೆ ಎಂದ ಹೆಚ್ಡಿ ಕುಮಾರಸ್ವಾಮಿ
ಇದಕ್ಕೆ ಹೆಚ್ಡಿ ಕುಮಾರಸ್ವಾಮಿ “ಡ್ರೈವ್ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ. ಸ್ಪೀಕರ್ ಒಪ್ಪಿದರೆ ಸದನದಲ್ಲೇ ಪೆನ್ಡ್ರೈವ್ ಪ್ರದರ್ಶನ ಮಾಡುತ್ತೇನೆ. ಇಲ್ಲೇ ಆಡಿಯೋ ಹಾಕಿಸುತ್ತೇನೆ” ಎಂದರು. ಈ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರುಗೆ ಬಿಜೆಪಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
ಅಲ್ಲದೇ ಹೆಚ್.ಡಿ ಕುಮಾರಸ್ವಾಮಿಯವರು ಕೆಎಸ್ಆರ್ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣವನ್ನು ಪ್ರಸ್ತಾಪಿಸಿದರು. ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದ ಪತ್ರವನ್ನು ಓದಿದರು. ಈ ವಿಚಾರವಾಗಿಯೂ ಕೆ.ಜೆ ಜಾರ್ಜ ಮತ್ತು ಹೆಚ್ ಡಿ ಕುಮಾರಸ್ವಾಮಿ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ವರ್ಗಾವಣೆ ದಂಧೆ ಮತ್ತು ಚಾಲಕನ ಆತ್ಮಹತ್ಯೆ ಯತ್ನದ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುವಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಳಿದರು. ಈ ವೇಳೆ ಸಭಾಪತಿ ಯುಟಿ ಖಾದರ್ ಅವರು ಸದನವನ್ನು 2:45ಕ್ಕೆ ಮುಂದೂಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Thu, 6 July 23