ಇಂದಿನಿಂದ 2 ವಾರ ವಿಧಾನಮಂಡಲ ಅಧಿವೇಶನ: ಸರ್ಕಾರದ ವಿರುದ್ಧ ಸಮರಕ್ಕೆ ಬಿಜೆಪಿ, ಜೆಡಿಎಸ್ ರಣತಂತ್ರ

ವಿಧಾನಮಂಡಲದ ಮಳೆಗಾಲದ ಅಧಿವೇಶನಕ್ಕೆ ಇಂದಿನಿಂದ ಚಾಲನೆ ಸಿಗಲಿದೆ. ರಾಹುಲ್​ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿಯ ಬಳಿಕ ಪ್ರಾರಂಭವಾಗುತ್ತಿರುವ ಅಧಿವೇಶನದಲ್ಲಿ ಈ ಬಾರಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ದೊಡ್ಡ ಸಮರ ಏರ್ಪಡುವ ಸಾಧ್ಯತೆ ಇದೆ. ಸರ್ಕಾರದ ವಿರುದ್ಧ ಸಮರಕ್ಕೆ ಬಿಜೆಪಿ, ಜೆಡಿಎಸ್ ರಣತಂತ್ರ ರೂಪಿಸಿವೆ.

ಇಂದಿನಿಂದ 2 ವಾರ ವಿಧಾನಮಂಡಲ ಅಧಿವೇಶನ: ಸರ್ಕಾರದ ವಿರುದ್ಧ ಸಮರಕ್ಕೆ ಬಿಜೆಪಿ, ಜೆಡಿಎಸ್ ರಣತಂತ್ರ
ಇಂದಿನಿಂದ 2 ವಾರ ವಿಧಾನಮಂಡಲ ಅಧಿವೇಶನ
Updated By: Ganapathi Sharma

Updated on: Aug 11, 2025 | 6:54 AM

ಬೆಂಗಳೂರು, ಆಗಸ್ಟ್ 11: ಮುಂಗಾರು ಮಳೆಯ ತಣ್ಣನೆಯ ವಾತಾವರಣದಲ್ಲಿ ಕೆಲದಿನಗಳಿಂದ ತಣ್ಣಗಿದ್ದ ರಾಜಕೀಯ ವಾಕ್ಸಮರ ಇಂದಿನಿಂದ ಕಾವೇರುವ ಸಾಧ್ಯತೆಯಿದೆ. ಯಾಕಂದರೆ, ಮಳೆಗಾಲದ ವಿಧಾಮಂಡಲ ಅಧಿವೇಶನ (Karnataka Assembly Session) ಇಂದಿನಿಂದ ಶುರುವಾಗುತ್ತಿದೆ. ಎರಡು ವಾರಗಳ ಕಾಲ, ಅಂದರೆ ಆಗಸ್ಟ್ 22ವರೆಗೆ ಅಧಿವೇಶನ ನಡೆಯಲಿದ್ದು, ಪ್ರಮುಖವಾಗಿ ಈ ಬಾರಿ ಹತ್ತು ಹಲವು ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ (BJP), ಜೆಡಿಎಸ್ ಸಜ್ಜಾಗಿವೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳ ಅಸ್ತ್ರ ಏನು?

ಆರ್‌ಸಿಬಿ ಸಂಭ್ರಮಾಚರಣೆ ಸಂದರ್ಭದ ದುರಂತದಲ್ಲಿ 11 ಮಂದಿ ಅಮಾಯಕರ ಸಾವಿನ ವಿಚಾರ ಮುಂದಿಟ್ಟು ವಿಪಕ್ಷಗಳು ಮುಗಿಬೀಳುವ ಸಾಧ್ಯತೆಯಿದೆ. ಪೊಲೀಸ್ ಅಧಿಕಾರಿಗಳ ಅಮಾನತು ಹಾಗೂ ಸರ್ಕಾರದ ದ್ವಂದ್ವ ನಿರ್ಧಾರಗಳ ಬಗ್ಗೆ ಬಿಜೆಪಿ ಸಮರಕ್ಕೆ ಪ್ಲ್ಯಾನ್ ಮಾಡಿದೆ. ಇನ್ನು ರಾಜ್ಯದಲ್ಲಿ ರೈತರಿಗೆ ಯೂರಿಯಾ ಕೊರತೆ ವಿಚಾರದಲ್ಲೂ ಜಟಾಪಟಿ ನಡೆಯುವ ಸಾಧ್ಯತೆಯಿದೆ. ಗುತ್ತಿಗೆದಾರರಿಂದ 60 ಪರ್ಸೆಂಟ್ ವಸೂಲಿ ಆರೋಪ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಆರೋಪ, ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪ ಕೇಸ್ ಸದ್ದು ಮಾಡುವ ಸಾಧ್ಯತೆಯಿದೆ.

ರಾಹುಲ್ ಗಾಂಧಿ ಮಾಡಿರುವ ‘ಮತಗಳ್ಳತನ’ ಆರೋಪ ಸಂಬಂಧ ಜಟಾಪಟಿ ನಡೆಯುವ ಸಾಧ್ಯತೆಯಿದ್ದು, ದ್ವೇಷ ಭಾಷಣ ನಿಯಂತ್ರಣ ಸಂಬಂಧ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದ್ದು ಈ ಬಗ್ಗೆಯೂ ವಾಕ್ಸಮರ ನಡೆಯುವ ಸಾಧ್ಯತೆ ಇದೆ.

ಬಿಜೆಪಿ, ಜೆಡಿಎಸ್ ಸಮನ್ವಯ ಸಭೆ: ಸರ್ಕಾರಕ್ಕೆ ಚಾಟಿ ಬೀಸಲು ರೆಡಿ

ಮೈತ್ರಿ ಮಾಡಿಕೊಂಡಿದ್ದರೂ ಆಡಳಿತ ಪಕ್ಷದ ವಿರುದ್ಧ ಹೋರಾಟದಲ್ಲಿ ನಾನೊಂದು ತೀರ ನೀನೊಂದು ತೀರ ಎಂಬಂತಿದ್ದ ಬಿಜೆಪಿ, ಜೆಡಿಎಸ್ ಭಾನುವಾರ ಸಮನ್ವಯ ಸಮಿತಿ ಸಭೆ ನಡೆಸಿವೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಬಿಜೆಪಿ, ಜೆಡಿಎಸ್ ಶಾಸಕರು ಮತ್ತು ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿದಿನ ಒಂದೊಂದು ವಿಚಾರದಲ್ಲಿ ಸರ್ಕಾರದ ವಿರುದ್ಧ ಧ್ವನಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್ ಮಾಡಲಾಗಿದೆ. ರೈತರ ಸಮಸ್ಯೆ, ಉತ್ತರ ಕರ್ನಾಟಕಕ್ಕೆ ಅನ್ಯಾಯ, ಸರ್ಕಾರದ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತುವುದಾಗಿ ನಾಯಕರು ಹೇಳಿದ್ದಾರೆ.

ವಿಪಕ್ಷಗಳಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ತಂತ್ರವೇನು?

ವಿಪಕ್ಷಗಳಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕೂಡ ತಂತ್ರ ಹೆಣೆದಿದೆ. ಮತಗಳ್ಳತನ ಆರೋಪ, ಕೇಂದ್ರದಿಂದ ಅನುದಾನ ತಾರತಮ್ಯ ಮುಂತಾದ ವಿಚಾರ ಮುಂದಿಟ್ಟು ಕೌಂಟರ್ ಕೊಡಲಿದೆ.

ಇದನ್ನೂ ಓದಿ: ಮತಗಳ್ಳತನ: ಪಕ್ಷವನ್ನ ಮುಜುಗರಕ್ಕೀಡು ಮಾಡಿದ ಸಚಿವ ರಾಜಣ್ಣ, ಇದನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ

ಒಟ್ಟಾರೆ ಬಿಜೆಪಿ, ದಳ ನಾಯಕರು ಒಟ್ಟಾಗಿ ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿದ್ದು ಹೋರಾಟ ಕಾವೇರುವ ಸಾಧ್ಯತೆ ದಟ್ಟವಾಗಿದೆ.

ಒಟ್ಟು 27 ವಿಧೇಯಕ ಮಂಡನೆಗೆ ಸರ್ಕಾರ ನಿರ್ಧಾರ

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕ, ಬಾಲ್ಯ ವಿವಾಹ ತಿದ್ದುಪಡಿ ವಿಧೇಯಕ, ಫೇಕ್ ನ್ಯೂಸ್ ಮತ್ತು ತಪ್ಪು ಮಾಹಿತಿ ನಿರ್ಬಂಧಕ ವಿಧೇಯಕ, ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ ಸೇರಿ ಒಟ್ಟು 27 ವಿಧೇಯಕಗಳನ್ನು ಈ ಬಾರಿಯ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧಾರ ಮಾಡಿದೆ. ಮಂಗಳವಾರ ನಡೆಯುವ ಸದನ ಸಲಹಾ ಸಮಿತಿಯಲ್ಲಿ ಸರ್ಕಾರ ತರಲಿಚ್ಚಿಸುವ ವಿಧೇಯಕ ಪಟ್ಟಿಯನ್ನು ಸರ್ಕಾರ ಮಂಡಿಸಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 am, Mon, 11 August 25