ಬೆಂಗಳೂರು: ಕೊರೊನಾ ಎಂಟ್ರಿ ಕೊಟ್ಟಾಗ ನೆಮ್ಮದಿಯಾಗಿದ್ದ ರಾಜ್ಯಗಳಲ್ಲಿ ಈಗ ಸೋಂಕಿನ ಅಬ್ಬರ ಶುರುವಾಗಿದೆ. ಇದು ಕೇಂದ್ರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ. ಕರ್ನಾಟಕವೂ ಕೂಡ ಈ ಪಟ್ಟಿಗೆ ಸೇರಿದೆ. ಇದ್ದನ್ನೆಲ್ಲಾ ಅಳೆದು-ತೂಗಿ ಲೆಕ್ಕಾಚಾರ ಹಾಕಿರುವ ಐಐಟಿ ಸಂಶೋಧಕರು ಹೇಳಿದ್ದು ಏನು ಗೊತ್ತಾ?
ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಲ್ಲೆಲ್ಲೋ ಮರೆಯಾಗಿದ್ದ ಕರ್ನಾಟಕ ಈಗ 4ನೇ ಸ್ಥಾನಕ್ಕೆ ಬಂದಿದೆ. ಈ ಬೆಳವಣಿಗೆಯ ನಡುವೆಯೇ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿರೋದು ಭಾರಿ ಆತಂಕ ಹುಟ್ಟುಹಾಕಿದೆ.
ತಮಿಳುನಾಡನ್ನೂ ಹಿಂದಿಕ್ಕಿ ಹೊಸ ದಾಖಲೆ ನಿರ್ಮಾಣ!
ದೇಶದಲ್ಲಿ ಆರ್ಭಟ ನಡೆಸುತ್ತಿರುವ ಕೊರೊನಾ ಕರ್ನಾಟಕದಲ್ಲಿ ತನ್ನ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದೆ. ಫಸ್ಟ್ ಇನ್ನಿಂಗ್ಸ್ನಲ್ಲಿ ಕೇಂದ್ರದಿಂದ ಬೆನ್ನು ತಟ್ಟಿಸಿಕೊಂಡಿದ್ದ ಕರ್ನಾಟಕ ಈಗ ಅತೀ ಹೆಚ್ಚು ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ. ಕರ್ನಾಟಕದಲ್ಲಿ ನಿನ್ನೆ ವೇಳೆಗೆ 55,388 ಸಕ್ರಿಯ ಪ್ರಕರಣಗಳಿದ್ದು, ತಮಿಳುನಾಡಿನಲ್ಲಿ 52,273 ಸಕ್ರಿಯ ಕೇಸ್ಗಳಿವೆ. ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರಕ್ಕೆ ಮೊದಲ ಸ್ಥಾನ ಪಕ್ಕಾ ಆಗಿದ್ದು, ಇಲ್ಲಿ 1.44 ಲಕ್ಷ ಸಕ್ರಿಯ ಕೇಸ್ಗಳಿವೆ.
ಮಳೆಗಾಲ, ಚಳಿಗಾಲ ಎರಡೂ ಡೇಂಜರ್!
ಲಾಕ್ಡೌನ್ ಜಂಜಾಟ ಅಂದುಕೊಂಡವರಿಗೆ ವರದಿಯೊಂದು ಶಾಕ್ ನೀಡಿದೆ. ಐಐಟಿ ಭುವನೇಶ್ವರ ಹಾಗೂ ಏಮ್ಸ್ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ಆತಂಕದ ವಿಚಾರ ಗೊತ್ತಾಗಿದೆ. ಈ ಅಧ್ಯಯನದಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಸೋಂಕು ಮತ್ತಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಸಲಾಗಿದೆ. ಚಳಿಗಾಲ ಹಾಗೂ ಮಳೆಗಾಲದಲ್ಲಿ ತಾಪಮಾನ ಕುಸಿತದಿಂದ ಕೊರೊನಾ ವೈರಸ್ಗೆ ಪೂರಕ ವಾತವರಣ ಸೃಷ್ಟಿಯಾಗಿದೆ. ಇದು ವೈರಸ್ ಹರಡುವಿಕೆ ವೇಗ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದು ಅಧ್ಯಯನ ಹೇಳಿದೆ.
ಈ ಹಿಂದೆ ಯುರೋಪ್ನ ವಿಚಾರದಲ್ಲಿ ಚೀನಾ ತಜ್ಞರು ಇದೇ ರೀತಿ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದರು. ಆಗ ಇದಕ್ಕೆ ಪೂರಕವಾಗಿ ಯುರೋಪಿಯನ್ ದೇಶಗಳಲ್ಲಿ ಸೋಂಕು ಹೆಚ್ಚಾಗಿತ್ತು. ಭಾರತದ ತಜ್ಞರೂ ಇಂತಹದ್ದೊಂದು ಮಾಹಿತಿ ಹೊರಹಾಕಿದ್ದು, ಮತ್ತಷ್ಟು ಭೀತಿ ಹೆಚ್ಚಿಸಿದೆ. ದೇಶದ ಹಲವೆಡೆ ಅತಿವೃಷ್ಠಿ ಉಂಟಾಗಿರುವುದು ಕೂಡ ದೊಡ್ಡ ಅವಾಂತರ ಸೃಷ್ಟಿ ಮಾಡಲಿದೆ.
ಒಟ್ನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲೇ ವಾತಾವರಣ ಕೂಡ ಕೊರೊನಾ’ಗೆ ಪೂರಕವಾಗಿಯೇ ಇದೆ. ಇದನ್ನೆಲ್ಲಾ ತಾಳೆಹಾಕಿ ಹೇಳೋದಾದ್ರೆ ಸದ್ಯದ ಮಟ್ಟಿಗೆ ಯಾವುದೂ ಮೊದಲಿನಂತೆ ಆಗಲ್ಲ.
Published On - 7:44 am, Sun, 26 July 20