ಬೆಂಗಳೂರು: ಲೋಕಾಯುಕ್ತ ದಾಳಿಯಲ್ಲಿ ಪುತ್ರನ ಮನೆಯಲ್ಲಿ ಸಿಕ್ಕ ಕೋಟಿ ಕೋಟಿ ಅಕ್ರಮ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ(Madal Virupakshappa) ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಅಲ್ಲಿಸಿದ್ದಾರೆ. ಕಳೆದ ಐದು ದಿನಗಳಿಂದ ನಾಪತ್ತೆಯಾಗಿರುವ ವಿರೂಪಾಕ್ಷಪ್ಪ ಅಜ್ಞಾತ ಸ್ಥಳದಿಂದಲೇ ತಮ್ಮ ವಕೀಲರಿಂದ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆ ನಡೆಸುವಂತೆ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Lokayukta: ನಾಪತ್ತೆಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪತ್ತೆಗಾಗಿ 3 ವಿಶೇಷ ತಂಡ ರಚನೆ
ಇಂದೇ (ಮಾರ್ಚ್ 06) ವಿಚಾರಣೆಗೆ ಮಾಡಾಳ್ ವಿರೂಪಾಕ್ಷಪ್ಪ ಪರ ವಕೀಲ ಸಂದೀಪ್ ಪಾಟೀಲ್ ಕೋರ್ಟ್ಗೆ ಮನವಿ ಮಾಡಿದರು. ಆದ್ರೆ, ಹೈಕೋರ್ಟ್ ನ್ಯಾಯಮೂರ್ತಿ ಕೆ.ನಟರಾಜನ್ ಅವರು ನಾಳೆಗೆ(ಮಾರ್ಚ್ 07) ವಿಚಾರಣೆ ನಿಗದಿಪಡಿಸಿದ್ದಾರೆ.
ಶಾಸಕ ಮಾಡಾಳ್ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಬೆನ್ನಲ್ಲೇ ಇಂದಿಗೆ ಐದು ದಿನಗಳು ಆದರೂ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರತ್ಯಕ್ಷವಾಗಿಲ್ಲ. ಪುತ್ರನ ಬಂಧನದ ಬಳಿಕ ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ಮತ್ತೆಗೆ ಲೋಕಾಯುಕ್ತ ಅಧಿಕಾರಿಗಳು ತಂಡ ಕಟ್ಟಿಕೊಂಡು ಕಾರ್ಯಚರಣೆ ನಡೆಸಿದ್ದಾರೆ.
ಪತ್ತೆಗೆ ಲೋಕಾಯುಕ್ತ ಮೂರು ತಂಡ ರಚಿಸಿದೆ. ಮೂವರು ಡಿವೈಎಸ್ ಪಿ ಗಳ ನೇತೃತ್ವದಲ್ಲಿ ಸುಮಾರು ಹದಿನೈದು ಜನರ ಅಧಿಕಾರಿಗಳ ಒಳಗೊಂಡಿರುವ ಮೂರು ಟೀಮ್ ರಚನೆ ಮಡಲಾಗಿದ್ದು, ಮಾಡಾಳ್ಗಾಗಿ ಹುಡುಕಾಟ ಆರಂಭಿಸಿವೆ.
ಪೊಲೀಸರು ನೋಟಿಸ್ ನೀಡಿದ ಬಳಿಕ ವಿಚಾರಣೆಗೆ ಹಾಜರಾಗುವ ಲೆಕ್ಕಾಚಾರದಲ್ಲಿ ಮಾಡಾಳ್ ಇದ್ದಾರೆ. ಆದ್ರೆ, ನೋಟಿಸ್ ನೀಡದೇ ಎಂಎಲ್ಎ ಲಾಕ್ ಮಾಡಲು ಲೋಕಾಯುಕ್ತ ಅಧಿಕಾರಿಗಳ ಪ್ಲಾನ್ ಮಾಡಿದ್ದಾರೆ. ನೋಟಿಸ್ ನೀಡಿದ ತಕ್ಷಣ ಬಂಧನ ಮಾಡುವಂತಿಲ್ಲ. ಕನಿಷ್ಠ ಮೂರು ಬಾರಿ ವಿಚಾರಣೆ ಮಾಡಿ ನಂತರ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂದು ಅರೆಸ್ಟ್ ಮಾಡಬಹುದು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡದೇ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವ ಚಿಂತನೆ ನಡೆಸಿದೆ.
ಇದೀಗ ಮಾಡಾಳ್ ಅಜ್ಞಾತ ಸ್ಥಳದಿಂದಲೇ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದು, ನಾಳೆ ಜಾಮೀನು ಸಿಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
Published On - 11:40 am, Mon, 6 March 23