
ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕೆಆರ್ಎಸ್ ಜಲಾಶಯದ ಮೂಲಕ ಕಾವೇರಿ ನೀರು ಬಿಡುತ್ತಿರುವ ವಿಚಾರ ರೈತರ ಮತ್ತು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಂಡ್ಯ, ಮೈಸೂರು, ರಾಮನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಶನಿವಾರ ಜಿಟಿ ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಇನ್ನು ರಾಜ್ಯದಲ್ಲಿ ಪಕ್ಷಾಂತರದ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ. ಕಾಂಗ್ರೆಸ್ನ 45 ಜನ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿಕೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೈಕೊಟ್ಟಿದ್ದ ಮಳೆ, ಸೆಪ್ಟೆಂಬರ್ ತಿಂಗಳಲ್ಲಿ ಚುರುಕುಕೊಂಡಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ ಇಂದಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ…
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪ್ರತಿಭಟನೆ ಮಾಡಲಾಗಿದೆ. ಸಂಘಟನೆ ರಾಜ್ಯಾಧ್ಯಕ್ಷ ಕೃಷ್ಣೇಗೌಡ ನೇತೃತ್ವದಲ್ಲಿ ಸೂರ್ಯನಗರದಿಂದ ಚಂದಾಪುರದವರೆಗೆ ಪಂಜಿನ ಮೆರವಣಿಗೆ ಮಾಡಲಾಗಿದೆ.
ಸಾಹಿತಿ ದೇವನೂರು ಮಹದೇವರನ್ನು ಕನ್ನಡ & ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಇಂದು ಮೈಸೂರಿನ ಕುವೆಂಪುನಗರದ ನವಿಲು ರಸ್ತೆಯಲ್ಲಿರುವ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಸಾಹಿತಿ ದೇವನೂರು ಮಹದೇವ ಜೊತೆ ಶಿವರಾಜ ತಂಗಡಗಿ ಮಾತುಕತೆ ಮಾಡಿದ್ದಾರೆ. ಮೈಸೂರಿನಲ್ಲಿ ನಾಳೆ ವಿವಿಧ ಕಾರ್ಯಕ್ರಮಗಳಲ್ಲಿ ತಂಗಡಗಿ ಭಾಗಿಯಾಗಲಿದ್ದಾರೆ.
ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಮಳೆಯ ಅಬ್ಬರದಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳದ ನೀರಿನಲ್ಲಿ ಸೇತುವೆ ಕೊಚ್ಚಿಹೋಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಚಿಂಚೋಳಿ-ಸಂಗಾಪುರ ತಾಂಡಾ ನಡುವೆ ಸಂಪರ್ಕ ಕಡಿತವಾಗಿದೆ.
ಬಿಜೆಪಿಯಿಂದ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದೀರಿ. ನಿಮ್ಮಿಂದ ಇಂತಹ ಹೇಳಿಕೆ ನೀರಿಕ್ಷೆ ಮಾಡಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ವಿರುದ್ಧ ಪತ್ರಿಕಾ ಪ್ರಕಟನೆ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಿತ್ಯ-L1 ಯೋಜನೆ ಬಗ್ಗೆ ಇಸ್ರೋದಿಂದ ಹೊಸ ಅಪ್‌ಡೇಟ್ ನೀಡಿದ್ದು, ಉಪಗ್ರಹ ಆರೋಗ್ಯಕರವಾಗಿದೆ, ನೆಪಮಾತ್ರಕ್ಕೆ ಕಾರ್ಯನಿರ್ವಹಣೆ ಮಾಡುತ್ತಿದ್ದು, EBN1ನ್ನು ISTRACನಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಹೊಸ ಕಕ್ಷೆಯು 245 ಕಿ.ಮೀ X 22459 ಕಿ.ಮೀ ತಲುಪಿದೆ. ಮುಂದಿನ ಕಾರ್ಯಕ್ಷಮತೆಯನ್ನು ಸೆ.5ರಂದು ನಿಗದಿಪಡಿಸಲಾಗಿದೆ.
ಸರ್ಕಾರ ಕೂಡಲೇ ವಿಧಾನಸಭೆ ವಿಶೇಷ ಅಧಿವೇಶನ ಕರೆದು ಬರ ಎಂದು ಅಧಿಕೃತವಾಗಿ ಘೋಷಿಸಲಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದ ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಎಂದರು.
ಬಿಜೆಪಿಯ ಮಾಜಿ ಶಾಸಕರು, ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಕಾಂಗ್ರೆಸ್ ಪಕ್ಷ ಸೇರಲು ಬಹಳಷ್ಟು ಜನ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಯಾರು ಸೇರುತ್ತಾರೆಂದು ಹೇಳಲ್ಲ, ನಿರ್ಧಾರವಾದಾಗ ಹೆಸರು ಹೇಳುತ್ತೇನೆ. ಮಾಜಿ ಸಚಿವ ಬಿ.ಸಿ.ಪಾಟೀಲ್ ಸಂಪರ್ಕದಲ್ಲಿಲ್ಲ ಎಂದು ಗದಗದಲ್ಲಿ ಬಿಜೆಪಿ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹಾಸನ ಹಾಸನದ ಹೇಮಾವತಿ ಜಲಾಶಯದಿಂದ 16 ಟಿಎಂಸಿ ನೀರು ಬಿಟ್ಟಿದಾರೆ. ಈ ನೀರು ಎಲ್ಲಿಗೆ ಬಿಟ್ಟರು, ಈ ನೀರಲ್ಲಿ ನಮ್ಮ ರೈತರು ಒಂದು ಬೆಳೆ ಬೆಳೆಯುತ್ತಿದ್ದರು. ನೀರಾವರಿ ಸಲಹಾ ಸಮಿತಿ ಸಭೆ ಮಾಡದೆ ಹೇಗೆ ನೀರು ಬಿಟ್ಟರು ಎಂದು ಹಾಸನದಲ್ಲಿ ಮಾಜಿ ಸಚಿವ ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಪಕ್ಷದವರೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ರನ್ನು ಭೇಟಿ ಮಾಡಲೇಬೇಕಾಗುತ್ತದೆ. ಇಂಥ ಭೇಟಿಗಳಿಗೆಲ್ಲ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಆದರೆ ಕಾಂಗ್ರೆಸ್ಗೆ ಭವಿಷ್ಯ ಇಲ್ಲ. ಕಾಂಗ್ರೆಸ್ನವರೇ ಕೆಲವರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅವರ ಬ್ಲಾಕ್‌ಮೇಲ್ ವಿಫಲ ಆಗುತ್ತೆ ಎಂದು ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ನವರೇ ಕೆಲವರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ: ಬಿಜೆಪಿ ಶಾಸಕ ಡಾ ಸಿಎನ್ ಅಶ್ವತ್ಥ್ ನಾರಾಯಣ ಆರೋಪ
ಬೆಳಗಾವಿ: ರಾಜ್ಯ ಸರ್ಕಾರದ ವಿರುದ್ಧ ಸೆ.8ರಂದು ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ ನಡೆಸಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ರಾಜ್ಯಸಭಾ ಬಿಜೆಪಿ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ವೀರಶೈವ ಲಿಂಗಾಯತರಿಗೆ ಹೆಚ್ಚು ಸ್ಥಾನ ಕೊಡಿ. ಲಿಂಗಾಯತ ನಾಯಕರಿಗೆ ನಾಯಕತ್ವ ಕೊಟ್ಟರೇ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ. ಬಿಜೆಪಿಯಲ್ಲಿ ಹೇಳೋರು ಇಲ್ಲ, ಕೇಳುವವರು ಇಲ್ಲದಂತಾಗಿದೆ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಸಿದರು. ಬಿಜೆಪಿಯಲ್ಲಿ ಇರುವುದೇ ಅಲ್ಪ ಸ್ವಲ್ಪ ಲಿಂಗಾಯತ ನಾಯಕರು. ಅವರನ್ನೂ ಅವೈಡ್ ಮಾಡಿದರೇ ಬಿಜೆಪಿ ಕೆಟ್ಟಸ್ಥಿತಿಗೆ ಹೋಗಲಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಬದಲಾಗಬೇಕು ಎಂದು ಪ್ರದೀಪ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ: ರಾಜ್ಯ ಬಿಜೆಪಿಯಲ್ಲಿ ಲಿಂಗಾಯತರಿಗೆ ನಾಯಕತ್ವ ಕೊಡಬೇಕು. ಲಿಂಗಾಯತ ನಾಯಕರನ್ನು ತುಳದಿದ್ದೆ ಸೋಲಿಗೆ ವಿಧಾನಸಭೆಯಲ್ಲಿ ಕಾರಣವಾಗಿದೆ. ಲಿಂಗಾಯತ ನಾಯಕರು ಒಂದು ಕಾಲು ಪಕ್ಷದಿಂದ ಹೊರಗಿಟ್ಟಿದ್ದಾರೆ ಎಂದು ಎಂಎಲ್ಸಿ ಪ್ರದೀಪ್ ಶೆಟ್ಟರ್ ಹೇಳಿದರು.
ಬೆಂಗಳೂರು: ನಮ್ಮ ಪಕ್ಷದಲ್ಲೂ ಅಸಮಾಧಾನ, ಬೇಸರ ಇರೋದು ಸತ್ಯ. ಚರ್ಚೆ ವೇಳೆ ವಿಪಕ್ಷ ನಾಯಕರ ಆಯ್ಕೆ ಮಾಡಿ ಅಂತ ಹೇಳಿದ್ದೇವೆ. ವಿಪಕ್ಷ ನಾಯಕರ ಆಯ್ಕೆಯಿಂದ ಅನುಕೂಲ ಆಗಲಿದೆ. ಪಕ್ಷದ ವೇದಿಕೆಯಲ್ಲಿ ಎಲ್ಲ ವಿಚಾರಗಳನ್ನು ನಾನು ಮಾತನಾಡಿದ್ದೇನೆ. ವಿಪಕ್ಷ ನಾಯಕ, ಪಕ್ಷದ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಬೇಕಿದೆ. ಬಾಂಬೆ ಟೀಂ ಅನ್ನೋದು ತಪ್ಪು. 17 ಶಾಸಕರು ಬರದಿದ್ದರೇ ನಾವು ಅಧಿಕಾರ ಹಿಡಿಯಲು ಆಗುತ್ತಿರಲಿಲ್ಲ. ಬಿ.ಎಲ್. ಸಂತೋಷ್ ಅವರ ಜೊತೆ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ. ಬಸವರಾಜ ರಾಯರೆಡ್ಡಿ ಪತ್ರ ಬಂದ ಮೇಲೆ ಚರ್ಚೆ ಶುರುವಾಯ್ತು. ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ನನಗೆ ಕಾಂಗ್ರೆಸ್ನಿಂದ ಆಹ್ವಾನ ಬಂದಿಲ್ಲ, ಯಾರೂ ಸಂಪರ್ಕಿಸಿಲ್ಲ ಎಂದು ಬಿಜೆಪಿಯ ಮಾಜಿ ಶಾಸಕ ರಾಜುಗೌಡ ಹೇಳಿದ್ದಾರೆ.
ಬೆಂಗಳೂರು: ನಾನು ಆಪರೇಷನ್ ಆಗೋಕೆ ಕ್ಯಾನ್ಸರ್ ಆಗಿಲ್ಲ, ನನಗೆ ಗಡ್ಡೆಯೂ ಆಗಿಲ್ಲ. ನಿನ್ನೆ ಸ್ಯಾಂಡಲ್ವುಡ್ ನಟ ಸುದೀಪ್ ಹುಟ್ಟುಹಬ್ಬ ಇತ್ತು. ಹೋಟೆಲ್‌ನಲ್ಲಿ ನಡೆದ ಪಾರ್ಟಿಗೆ ಬಿ.ಸಿ.ಪಾಟೀಲ್, ಡಿಕೆ ಶಿವಕುಮಾರ್ ಸಹ ಬಂದಿದ್ದರು. ಬರ್ತ್ಡೇ ಪಾರ್ಟಿಯಲ್ಲಿ ಫಿಲ್ಮ್ ಪ್ರೊಡ್ಯೂಸರ್, ನಟರು ಕೂಡ ಇದ್ದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಿಸಲ್ಟ್ ಬಗ್ಗೆ ಕೇಳಿದರು. ರಾಜು ಚೆನ್ನಾಗಿ ಕೆಲಸ ಮಾಡಿದ್ದೆ ಅದು ಹೇಗೆ ಸೋತೆ ಅಂತ ಕೇಳಿದರು. ನಿಮ್ಮ ಪ್ರಭಾವ ಮತ್ತು ಸಿದ್ದರಾಮಯ್ಯನವರ ಪ್ರಭಾವ ಅಂತ ಹೇಳಿದೆ. ಸುದೀಪ್ ಹುಟ್ಟುಹಬ್ಬಕ್ಕಿಂತ ನಮ್ಮದೇ ಹೆಚ್ಚು ಸುದ್ದಿಯಾಗಿದೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ, ಉತ್ತಮ ಸ್ಥಾನಮಾನ ನೀಡಿದ್ದಾರೆ ಎಂದು ಬಿಜೆಪಿಯ ಮಾಜಿ ಶಾಸಕ ರಾಜುಗೌಡ ಹೇಳಿದರು.
ಬೆಂಗಳೂರು: ಎರಡನೇ ಬಾರಿ ನನಗೆ ಪಾರ್ಶ್ವವಾಯು ಆಗಿದೆ. ಈ ಬಾರಿ ಪಾರ್ಶ್ವವಾಯುವಾದಾಗ ಹೆಚ್ಚು ಡ್ಯಾಮೇಜ್ ಆಗಿದೆ. ಭಗವಂತನ ದಯೆಯಿಂದ ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ. ಪಾರ್ಶ್ವವಾಯು ಆದಾಗ ಒಂದು ಕ್ಷಣವೂ ವ್ಯರ್ಥ ಮಾಡಬೇಡಿ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಆದರೇ ಕೂಡಲೇ ಚಿಕಿತ್ಸೆ ಕೊಡಿಸಿ. ಹಣದ ಬಗ್ಗೆ ಯೋಚಿಸಬೇಡಿ, ಜೀವ ಉಳಿಸಿ. ನಾನು ನಿರ್ಲಕ್ಷ್ಯ ಮಾಡಿದ್ದರೇ ಬೆಡ್ ಮೇಲೆಯೇ ಇರಬೇಕಾಗಿತ್ತು. ನಾಲ್ಕು ಜನಕ್ಕೆ ಸಹಾಯ ಮಾಡಿದ್ದಕ್ಕೆ ಭಗವಂತ ಉಳಿಸಿದ್ದಾನೆ. ಯಾರೂ ಸಹ ಪಾರ್ಶ್ವವಾಯುವನ್ನು ನಿರ್ಲಕ್ಷಿಸಬೇಡಿ ಎಂದು ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡರು.
ಬೆಂಗಳೂರು: ಭಗವಂತನ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ದೇವರು, ತಂದೆ, ತಾಯಿ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ. ಕಳೆದ ಐದು ದಿನಗಳಿಂದ ಸ್ನೇಹಿತರಲ್ಲಿ ಭಯದ ವಾತಾವರಣ ಇತ್ತು
ನಿಖರವಾದ ಆರೋಗ್ಯದ ಮಾಹಿತಿಯನ್ನೂ ನೀವು ಕೊಟ್ಟಿದ್ದೀರಿ. ತಂದೆ-ತಾಯಿ ಆಶೀರ್ವಾದದಿಂದ ಪುನರ್ಜನ್ಮ ಸಿಕ್ಕಿದೆ. ಮೊದಲು ಫ್ಯಾಮಿಲಿ ವೈದ್ಯರಾದ ಡಾ.ಮಂಜುನಾಥ್ಗೆ ಕರೆ ಮಾಡಿದ್ದೆ, ನಂತರ ಅಪೋಲೊ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾದೆ. ಅಪೋಲೊ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಡಿಸ್ಚಾರ್ಜ್ ಬಳಿಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಜಯನಗರದ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಧಿಡೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಹಾಸನ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಇಂದು ಹಾಸನ ತಾಲ್ಲೂಕಿನ ಬೈಲಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪತ್ನಿ ಚೆನ್ನಮ್ಮ ಜೊತೆ ವಿಶೇಷ ಪೂಜೆ ಸಲ್ಲಿಸಿದರು. ಹೆಚ್.ಡಿ.ದೇವೇಗೌಡ ದಂಪತಿಗೆ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಸಾಥ್ ನೀಡಿದರು.
ವಿಜಯಪುರ: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವಿಲಾಸಬಾಬು ಆಲಮೇಲಕರ (64) ನಿಧನರಾಗಿದ್ದಾರೆ. ವಿಲಾಸಬಾಬು ಆಲಮೇಲಕರ ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ವಿಲಾಸಬಾಬು ವಿಜಯಪುರ ಜಿಲ್ಲೆಯ ಬಳ್ಳೊಳ್ಳಿ ಕ್ಷೇತ್ರದ ಶಾಸಕರಾಗಿದ್ದರು. ವಿಲಾಸಬಾಬು ನಿಧನಕ್ಕೆ ಜನಪ್ರತಿನಿಧಿಗಳು, ಮಠಾಧೀಶರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಗುಣಮುಖರಾದ ಹಿನ್ನೆಲೆಯಲ್ಲಿ
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸ್ಚಾರ್ಜ್ ಬಳಿಕ ಬೆಳಗ್ಗೆ 11:30ಕ್ಕೆ ಹೆಚ್.ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಜೆಡಿಎಸ್ ಕಾರ್ಯಕರ್ತರ ಸಿದ್ದತೆ ನಡೆಸಿದ್ದಾರೆ.
ಬೆಂಗಳೂರು: ಶಾಸಕರ ನಡೆ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಚಿವರು ಪತ್ರ ಬರೆದಿದ್ದಾರೆ. ಶಾಸಕರಿಗೆ ಲಗಾಮು ಹಾಕಿ. ಹೊಸ ಶಾಸಕರು ಪಕ್ಷದ ಚೌಕಟ್ಟಿನಲ್ಲಿ ಇಲ್ಲ
ಬಹಿರಂಗವಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕ್ತಿದ್ದಾರೆ. ಮಾಧ್ಯಮಗಳ ಎದುರು ಸಚಿವರ ಗೌರವಕ್ಕೆ ಧಕ್ಕೆ ತರುವಂತೆ ಹೇಳಿಕೆ ನೀಡುತ್ತಿದ್ದಾರೆ. ಹೀಗೆ ಮುಂದುವರಿದರೆ ನೂತನ ಶಾಸಕರಿಂದಲೇ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೊಸ ಶಾಸಕರನ್ನು ಕರೆದು ಹದ್ದುಬಸ್ತಿನಲ್ಲಿ ಇರುವಂತೆ ಬುದ್ದಿ ಹೇಳಿ ಎಂದು ವಿಕಾಸಸೌಧದಲ್ಲಿ ಸಾರ್ವಜನಿಕರ ಎದುರೇ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಶಾಸಕ ಶಿವಗಂಗಾ ಬಸವರಾಜ್ ವಿರುದ್ದ ದೂರು ನೀಡಿದ್ದಾರೆ.
ಕಲಬುರಗಿ: ನಿನ್ನೆ (ಸೆ.03) ರಾತ್ರಿ ಕಲಬುರಗಿ ಜಿಲ್ಲೆಯ ಹಲವೆಡೆ ಮಳೆಯಾಗುದ್ದು ಚಿಂಚೋಳಿ ತಾಲೂಕಿನ ಬೆಡಗಪಲ್ಲಿ ಗ್ರಾಮದ ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು, ವಸ್ತುಗಳು ನೀರುಪಾಲಾಗಿವೆ.
ಮೈಸೂರು: ಮೈಸೂರಿನ ಲಿಂಗಾಬುಧಿ ಕೆರೆಯಲ್ಲಿ ಮೀನುಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಂಗಾಬುಧಿ ಕೆರೆ ಅಭಿವೃದ್ಧಿಪಡಿಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕೆರೆ ಒಳಚರಂಡಿ ತ್ಯಾಜ್ಯದಿಂದ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಇದರಿಂದ ಲಿಂಗಾಬುಧಿ ಕೆರೆಯಲ್ಲಿನ ಮೀನು ಮತ್ತು ಪಕ್ಷಿಗಳು ಮೃತಪಟ್ಟಿದ್ದವು. ಮೀನುಗಳ ಸಂರಕ್ಷಣೆಗಾಗಿ ಕೆರೆ ನೀರಿನ ಶುದ್ಧೀಕರಣ ಘಟಕ ಜೊತೆಗೆ ಕೆರೆ ತುಂಬಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಥಳೀಯರು ಪತ್ರ ಬರೆದಿದ್ದರು. ಸ್ಥಳೀಯ ನಿವಾಸಿಗಳ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಬುಧಿ ಕೆರೆ ಅಭಿವೃದ್ಧಿಗೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಲಬುರಗಿ: ಕಲಬುರಗಿ ಜಿಲ್ಲೆಗೆ ಇಂದು ಮತ್ತು ನಾಳೆ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ. ಕಳೆದ ರಾತ್ರಿಯಿಂದ ಜಿಲ್ಲೆಯಲ್ಲಿ ತುಂತುರು ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ.
ಮಂಡ್ಯ: ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ಇಂದು (ಆ.03) ಬೆಳಗ್ಗೆ 9 ಗಂಟೆಗೆ ಬಿಜೆಪಿ ಪ್ರತಿಭಟನೆ ಮಾಡಲಿದೆ. ಬೆಳಗ್ಗೆ 11 ಗಂಟೆಗೆ ಕನ್ನಡಸೇನೆ ಕಾರ್ಯಕರ್ತರು ಪ್ರತಿಭಟನೆ, ಮಧ್ಯಾಹ್ನ 12 ಗಂಟೆಗೆ ಶ್ರೀರಂಗಪಟ್ಟಣದಲ್ಲಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಮಾಡಲಿದ್ದಾರೆ. ಇನ್ನು ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
Published On - 8:05 am, Sun, 3 September 23