ಕರ್ನಾಟಕದಲ್ಲಿ ಕಳೆದ 3-4 ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಕೈಕೊಟ್ಟಿದ್ದು, ಹಿಂಗಾರು ರೈತನ ಕೈಹಿಡಿದೆ. ಮಳೆಯಾಗುತ್ತಿರುವುದರಿಂದ ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದೆ. ಇದರಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಮಳೆಯಾಗುತ್ತಿರುವುರಿಂದ ರಾಜ್ಯದ ಕೆಲವು ನದಿಗಳಲ್ಲಿ ಒಳಹರಿವು ಕೊಂಚ ಹೆಚ್ಚಾಗಿದೆ. ಆದರೆ ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿಲ್ಲ. ಇದರಿಂದ ಪ್ರಮುಖ ಜಲಾಶಯ ಆಲಮಟ್ಟಿಗೆ ಶೂನ್ಯ ಒಳಹರಿವು ಇದೆ. ಇನ್ನು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಡಿವಿ ಸದಾನಂದ ಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಘೋಷಿಸಿದ್ದಾರ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರು ನಾಯಕರ ನಡುವೆ ವಾಕ್ಸಮರ ಶುರುವಾಗಿದೆ. ಇದರೊಂದಿಗೆ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ…
ಮೈಸೂರು: ಮಾರ್ಚ್ 17 ಕ್ಕೆ ನಾನು ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ. ನಂತರ ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ.
ಯಾವ ಪಕ್ಷಕ್ಕೂ ಸಲಹೆ ಸೂಚನೆ ನೀಡುವುದಿಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು ‘ರಾಜಕೀಯದ ಎಲ್ಲಾ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿಯುತ್ತೇನೆ. ಮಾರ್ಚ್ 17 ಕ್ಕೆ ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷವಾಗುತ್ತದೆ. ಅಂದೆ ಬೃಹತ್ ಕಾರ್ಯಕ್ರಮ ಮಾಡಿ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದರು.
ಬೆಂಗಳೂರು: ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ನೇಮಕಕ್ಕೆ ಕಾಂಗ್ರೆಸ್ ಲೇವಡಿ ಮಾಡಿದೆ. ‘ಬಿ.ಎಸ್.ಯಡಿಯೂರಪ್ಪನವರ ಮಗ ಎಂಬ ಅರ್ಹತೆಯಲ್ಲಿ
ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯಡಿಯೂರಪ್ಪನವರ ಮಗನಿಗೆ ಅಭಿನಂದನೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗವಾಡಿದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
“ಯಡಿಯೂರಪ್ಪನವರ ಮಗ” ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ “ಯಡಿಯೂರಪ್ಪನವರ ಮಗ”ನಿಗೆ ಅಭಿನಂದನೆಗಳು..
“ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ” ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ!
— Karnataka Congress (@INCKarnataka) November 10, 2023
ಬೆಂಗಳೂರು: ವಿಜಯೇಂದ್ರಗೆ ದೂರವಾಣಿ ಮೂಲಕ ಕರೆ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.
ಬೆಂಗಳೂರು: ಕೆಲವೇ ಹೊತ್ತಿನಲ್ಲಿ ವಿಜಯೇಂದ್ರ ಆರ್ ಎಸ್ ಎಸ್ ಕಚೇರಿ ಕೇಶವಕೃಪಾಕ್ಕೆ ಭೇಟಿ ನೀಡುವ ಸಾಧ್ಯತೆ
ಬೆಂಗಳೂರು ಗ್ರಾಮಾಂತರ, ನ.10: ಇಂದು ಟಿಪ್ಪು ಸುಲ್ತಾನ್ ಜಯಂತಿ ಹಿನ್ನಲೆ ಟಿಪ್ಪು ಜನ್ಮಸ್ಥಳಕ್ಕೆ ಭೇಟಿ ನೀಡಿದ್ದ ಆಹಾರ ಸಚಿವ ಕೆಹೆಚ್ ಮುನಿಯಪ್ಪ ಅವರು ಮಾತನಾಡಿ ‘ಟಿಪ್ಪು ಜನ್ಮಸ್ಥಳವನ್ನು ಒಂದು ಯಾತ್ರಾ ಸ್ಥಳವನ್ನಾಗಿ ಮಾಡಬೇಕು ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾತನಾಡಿದ ಅವರು ‘ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ ನೆನಪುಗಳನ್ನು ಸ್ಮರಿಸಬೇಕು. ಆ ನಿಟ್ಟಿನಲ್ಲಿ ಇಲ್ಲಿ ಸ್ಮಾರಕವನ್ನು ಮುಂದಿನ ದಿನಗಳಲ್ಲಿ ಮಾಡಬೇಕು ಎಂದರು.
ದಾವಣಗೆರೆ: ಜಾತಿ ಜನಗಣತಿ ಬಿಡುಗಡೆಗೆ ಶಾಮನೂರು ಶಿವಶಂಕರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು ‘ಸರ್ಕಾರದ ಬಳಿ ಹಳೇ ವರದಿ ಇದೆ, ಹೊಸದಾಗಿ ಮಾಡಲು ಹೇಳಿದ್ದೇನೆ. ಪಂಚಮಸಾಲಿ ಸಮಾಜಕ್ಕೆ ಒಳ್ಳೆಯದಾಗಲೆಂದು ಹೋರಾಟ ಮಾಡ್ತಿದ್ದಾರೆ. ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತ ಸಮುದಾಯ ಸೇರ್ಪಡೆಗೆ ಒತ್ತಾಯಿಸುತ್ತೇವೆ ಎಂದರು.
ಬೆಂಗಳೂರು ಗ್ರಾಮಾಂತರ, ನ.10: ಇಂದು ಟಿಪ್ಪು ಜಯಂತಿ ಹಿನ್ನೆಲೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್x
ದೇವನಹಳ್ಳಿ ಪಟ್ಟಣದ ಟಿಪ್ಪು ಜನ್ಮ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಟಿಪ್ಪು ಪಾರ್ಕ್ನಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ.
ಇನ್ನು ವಾಟಾಳ್ ಬರ್ತಿದ್ದಂತೆ ಟಿಪ್ಪು ಪ್ರತಿಮೆ ಬಳಿಗೆ ಬಂದ ಸಚಿವ ಕೆಹೆಚ್ ಮುನಿಯಪ್ಪ, ವಾಟಾಳ್ ನಾಗರಾಜ್ ಜೊತೆ ನಿಂತು ಟಿಪ್ಪು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ರಾಮನಗರ: ಬಿಡದಿಯನ್ನು ಗ್ರೇಟರ್ ಬೆಂಗಳೂರು ಮಾಡುವ ವಿಚಾರ ‘ ರಾಮನಗರವನ್ನು ಬೆಂಗಳೂರು ಬದಲು ಡೆಲ್ಲಿ ಎಂದು ಹೆಸರಿಡಿ, ಯಾರು ಬೇಡ ಅಂದವರು. ಆಗ ಇನ್ನೂ ವಿಶ್ವಮಟ್ಟದಲ್ಲಿ ಹೆಸರಾಗುತ್ತಲ್ಲ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿ ಎಂ ಎಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ‘ಸ್ವಲ್ಪ ಮಳೆ ಆದಾಗ ನೋಡಿದ್ರಲ್ಲ ಎಂತಹ ಗ್ರೇಟರ್ ಬೆಂಗಳೂರು ಮಾಡಿದ್ದಾರೆಂದು ಕಿಡಿಕಾರಿದ್ದಾರೆ.
ಕಲಬುರಗಿ: ಕೆಇಎ ಪರೀಕ್ಷಾ ಹಗರಣದ ಆರೋಪಿ ರುದ್ರಗೌಡ ಪಾಟೀಲ್ನನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಂಧಿಸಿದ್ದಾರೆ. ಕಲಬುರಗಿ ಜಿಲ್ಲಾ ವಿಶೇಷ ಪೊಲೀಸ್ ತಂಡದಿಂದ ಇದೀಗ ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದವನನ್ನು ಅರೆಸ್ಟ್ ಮಾಡಲಾಗಿದೆ.
ತುಮಕೂರು: ಜಿಲ್ಲೆಯ ಕುಣಿಗಲ್ ರಸ್ತೆಯಲ್ಲಿರುವ ಮೇಳೆಕೋಟೆ ಮುಖ್ಯ ರಸ್ತೆಯನ್ನು ಸರಿಪಡಿಸುವಂತೆ ಮುಸ್ಲಿಂ ಸಮುದಾಯದವರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹಿನ್ನೆಲೆ ಕುಣಿಗಲ್ ರಸ್ತೆಯಲ್ಲಿ ಅರ್ಧ ಕಿ.ಮೀ ಟ್ರಾಪಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಿಂದ-ಧರ್ಮಸ್ಥಳಕ್ಕೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಸೈಕಲ್ ಯಾತ್ರೆ ಕೈಗೊಂಡಿದ್ದರು. ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಹೊರಟು ಇಂದು ಧರ್ಮಸ್ಥಳಕ್ಕೆ ತಲುಪಿದ್ದಾರೆ. ದಿ ರಾಜಾಜಿನಗರ ಪೆಡಲ್ ಪವರ್ ತಂಡದ ಮೂಲಕ ಮೂರು ದಿನಗಳ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದರು. ಎಂಟು ಜನ ಸಹ ಸವಾರರ ಜೊತೆ ತೆರಳಲಾಗಿತ್ತು.
ಹಾಸನ: ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ತಗುಲಿ 17 ಜನರು ಅಸ್ವಸ್ಥರಾಗಿದ್ದ ಹಿನ್ನಲೆ ಹಾಸನ ಜಿಲ್ಲಾಸ್ಪತ್ರೆ ಬಳಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೆರೆಳಿದ್ದಾರೆ. ಈ ವೇಳೆ ಮಾತನಾಡಿದ ಅವರು ‘ಹಾಸನಾಂಬೆ ದರ್ಶನದ ವೇಳೆ ಕರೆಂಟ್ ಶಾಕ್ ಹೊಡೆದಿದ್ದು ಸ್ಪಷ್ಟವಾಗಿದೆ. ಇದೇ ವೇಳೆ ನೂಕಾಟ ತಳ್ಳಾಟದ ವೇಳೆ ಹಲವರಿಗೆ ಗಾಯಗಳಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ, ಸದ್ಯ ಆರೋಗ್ಯವಾಗಿದ್ದು, ಕರೆಂಟ್ ಶಾಕ್ನಿಂದ ಓರ್ವ ಯುವತಿ ಅಸ್ವಸ್ಥಗೊಂಡಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.
ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮದ ಆರೋಪಿ ಆರ್.ಡಿ.ಪಾಟೀಲ್ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದ್ದು, ನ.16ರಂದು ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ. ಕಳೆದ 12 ದಿನಗಳಿಂದ ಆರ್.ಡಿ.ಪಾಟೀಲ್ ತಲೆಮರೆಸಿಕೊಂಡಿದ್ದಾನೆ. ಇನ್ನು ಕಲಬುರಗಿ ಜಿಲ್ಲಾ ಕೋರ್ಟ್ನಲ್ಲಿ ಆರೋಪಿ ಜಾಮೀನು ಅರ್ಜಿ ತಿರಸ್ಕಾರ ಹಿನ್ನೆಲೆ ಹೈಕೋರ್ಟ್ ಪೀಠದ ಮುಂದೆ ಪಾಟೀಲ್, ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಮಂಡ್ಯ: ಕಾವೇರಿ ನೀರಿಗಾಗಿ ಪ್ರತಿಭಟನೆ ಮುಂದುವರೆದಿದ್ದು, ಮಂಡ್ಯದ ಸಂಜಯ್ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಧರಣಿ ನಡೆಸಿದ್ದಾರೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರಂತರ ಹೋರಾಟ ನಡೆಸುತ್ತಿದ್ದು, ಕಾವೇರಿ ಹೋರಾಟಕ್ಕೆ ಜಾನಪದ ಪೂಜಾಕುಣಿತ ಕಲಾವಿದರು ಕೂಡ ಬೆಂಬಲ ಸೂಚಿಸಿದ್ದಾರೆ.
ಬೆಂಗಳೂರು, ನ.10: ಬಿಜೆಪಿ ವಿರುದ್ಧ ಎಸ್.ಟಿ.ಸೋಮಶೇಖರ್ ಅಸಮಾಧಾನ ವಿಚಾರ ‘ಅವರಿಗೆ ನಾನು ಜಾಮೂನು ಕೊಟ್ಟಿಲ್ಲ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘S.T.ಸೋಮಶೇಖರ್ರನ್ನು ನಾನೇ ಪಕ್ಷಕ್ಕೆ ಕರೆದುಕೊಂಡು ಬಂದಿದ್ದು, ಅಂದು ಅಯ್ಯಪ್ಪ ದೇಗುಲಕ್ಕೆ ಕರೆದೊಯ್ದು ಪ್ರಸಾದ ಕೊಟ್ಟಿದ್ದೆ ಅಷ್ಟೇ, ನಾನು ಅಂತೂ ಜಾಮೂನು ಕೊಟ್ಟಿಲ್ಲ ಎಂದರು.
ಬೆಂಗಳೂರು: ರೈತರಿಗೆ ಪರಿಹಾರ ಪಾವತಿ ಮಾಡುವ ವೇಳೆ ಫ್ರೂಟ್ ಐಡಿಯಲ್ಲಿ ದಾಖಲಾಗಿರುವ ಜಮೀನಿನ ಮಾಹಿತಿ ಆಧಾರದ ಮೇಲೆ ಮಾಡಲಾಗತ್ತದೆ ಎಂದು ವಿಕಾಸಸೌಧದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದರು. ಹೀಗಾಗಿ ರೈತರು ತಮ್ಮ ಜಮೀನಿನ ನಿಖರ ಮಾಹಿತಿಯನ್ನು ಮುಂದಿನ 15 ದಿನಗಳ ಒಳಗೆ ಫ್ರೂಟ್ಸ್ ದತ್ತಾಂಶದಲ್ಲಿ ಭರ್ತಿ ಮಾಡಿಸಿ, ಅಧಿಕಾರಿಗಳ ಲಾಭದ ಹಿತಾಸಕ್ತಿ ಹಾಗೂ ಅಕ್ರಮದ ಹಿನ್ನೆಲೆ ನೈಜ್ಯ ಫಲಾನುಭವಿಗಳಿಗೆ ಪರಿಹಾರದ ಹಣ ತಲುಪುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಜಮೀನಿನ ಮಾಹಿತಿ ಹಂಚಿಕೊಳ್ಳಿ. ಒಂದು ತಿಂಗಳೊಳಗೆ ಇವನ್ನ ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.
ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಸ್ತಿತ್ವಕ್ಕಾಗಿ ಬರ ಅಧ್ಯಯನಕ್ಕೆ ಹೊರಟಿದ್ದಾರೆ. ಯಾವ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದಾರೆ, ಮಾಹಿತಿ ಪಡೆದಿದ್ದಾರೆ. ಕೆಲವು ಕಡೆ ಕಾರಿನಿಂದ ಕೆಳಗಡೆ ಇಳಿದಿಲ್ಲ. ಬಿಜೆಪಿ ಸಂಸದರು ಪಿಎಂ ಮನೆಯಲ್ಲಿರಲಿ, ಮನೆ ರೋಡ್ಗೆ ಹೋಗಲು ಆಗಲ್ಲ. ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ಜೋಡು ಜಮೀನ್ದಾರು ಇದ್ದಾರೆ. ಕೇಂದ್ರ ಸರ್ಕಾರ , ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ಇಲ್ಲ.
ಜ್ಯದ ಬಿಜೆಪಿ ಸಂಸದರು ಕಾಣೆಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದರು.
ಚಾಮರಾಜನಗರ: ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಇದರಿಂದ ಸಂಚಾರ ದಟ್ಟಣೆಯಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಹೀಗಾಗಿ ದ್ವಿಚಕ್ರ ವಾಹನ, ಆಟೋಗಳನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ದ್ವಿ ಚಕ್ರ ವಾಹನ ಹಾಗೂ ಆಟೋಗಳನ್ನು ತಾಳುಬೆಟ್ಟದಲ್ಲಿ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು: ಸಂಸದೀಯ ಮಂಡಳಿಯಲ್ಲಿ ನಿರ್ಧಾರ ಆಗಿದೆಯಾ ಅಂತಾ ಕೇಳಿದ್ದೆ. ನಾನು ಈ ರೀತಿ ಹೇಳಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ಈ ಬಗ್ಗೆ ನಾನೇ ಸ್ಪಷ್ಟೀಕರಣ ಕೊಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದರು. ಬಿ.ಎಸ್.ಯಡಿಯೂರಪ್ಪ ನನಗೆ ಕರೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನಿವೃತ್ತಿ ಪಡೆಯಿರಿ ಅಂತಾ ಯಾರೂ ಹೇಳಿಲ್ಲ, ಆದೇಶ ಸಹ ಮಾಡಿಲ್ಲ. ನನ್ನ ನಿವೃತ್ತಿ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಮೊದಲೇ ಹೇಳಿದ್ದೆ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.
ಬೆಂಗಳೂರು: ಚುನಾವಣಾ ರಾಜಕಾರಣಕ್ಕೆ ನಿವೃತ್ತಿಗೆ ಯಾರ ಒತ್ತಡವೂ ಇಲ್ಲ. ನಾನು ಮತ್ತು ಬಿಎಸ್ ಯಡಿಯೂರಪ್ಪ ಅವರು ಹೆಚ್ಚು ಅವಕಾಶ ಪಡೆದಿದ್ದೇವೆ. ಪಕ್ಷಕ್ಕೆ ನಮ್ಮ ಅನುಭವ ಧಾರೆ ಎರೆಯಲು ನಿಶ್ಚಯ ಮಾಡಿದ್ದೇವೆ. ಇಚ್ಛಾಶಕ್ತಿ ಇದ್ದರೆ ಯಾರು ಏನೂ ತೊಂದರೆ ಮಾಡಲು ಆಗಲ್ಲ. 2019ರಲ್ಲೇ ರಾಜಕೀಯ ನಿವೃತ್ತಿ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆ. ಸಾಯುವವರೆಗೆ ನಾನೇ ಇರಬೇಕು ಎನ್ನುವಂತಾಗಬಾರದು. ಬಿಜೆಪಿಗೆ ಹಿರಿತನದ ಕೊರತೆ ಕಾಡುತ್ತದೆ ಎಂದು ಅನ್ನಿಸುವುದಿಲ್ಲ. ಚುನಾವಣಾ ರಾಜಕೀಯ ನಿವೃತ್ತಿ ನನ್ನ ಸ್ವಂತ ನಿರ್ಧಾರ ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.
ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ನವರಿಗೆ ಜನರ ಮೇಲೆ ಬಹಳ ಅನುಕಂಪ ಬಂದು ಬರ ಅಧ್ಯಯಕ್ಕೆ ಹೊರಟಿದ್ದಾರೆ. ಈಗಾಗಲೇ ಕರ್ನಾಟಕ ಸರ್ಕಾರ ಅಧ್ಯಯನ ಮುಗಿಸಿ ವರದಿ ಕೊಟ್ಟಿದೆ. ಕೇಂದ್ರ ವರದಿಯನ್ನು ಸ್ವೀಕರಿಸಿ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದೆ. ಬಿಜೆಪಿ, ಜೆಡಿಎಸ್ ಶಾಸಕರು ಅನುದಾನ ಕೊಡಿಸುವ ಕೆಲಸ ಮಾಡಲಿ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಪರಿಹಾರ ಕೊಡಿಸುವ ಕೆಲಸ ಮಾಡಲಿ. ಅದು ಬಿಟ್ಟು ಪ್ರಚಾರಕ್ಕಾಗಿ ಎರಡು ಗಿಡಗಳನ್ನು ನೋಡುವುದಲ್ಲ. ಕೇಂದ್ರ ಸರ್ಕಾರದ ಬಳಿ ನಾವೇನು ಭಿಕ್ಷೆ ಕೇಳುತ್ತಿಲ್ಲ. ಕರ್ನಾಟಕಕ್ಕೆ ಕೇಂದ್ರ ಕೊಡಬೇಕಾದ ಅನುದಾನ ಕೊಡಲಿ ಅಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು: ಅಗ್ನಿಶಾಮಕ ದಳದ ಮೂಲಕ ಮಾಹಿತಿ ಪಡೆದು ಪಟಾಕಿ ಮಾರಾಟಕ್ಕೆ ಲೈಸೆನ್ಸ್ ನೀಡಲಾಗಿದೆ. ಎಲ್ಲೆಲ್ಲಿ ಮಳಿಗೆ ಹಾಕಬೇಕೆಂದು ಬಿಬಿಎಂಪಿ ಅನುಮತಿ ನೀಡಲಿದೆ. ಬೆಂಗಳೂರಲ್ಲಿ ಒಟ್ಟು 62 ಮೈದಾನದಲ್ಲಿ 320 ಪಟಾಕಿ ಅಂಗಡಿಗಳನ್ನು ಹಾಕಲು ಪರವಾನಿಗೆ ನೀಡಲಾಗಿದೆ. 964 ಜನರು ಪಟಾಕಿ ಮಾರಾಟದ ಲೈಸೆನ್ಸ್ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 263 ಜನರಿಗೆ ಲಾಟರಿ ಮೂಲಕ ಲೈಸೆನ್ಸ್ ನೀಡಲಾಗಿದೆ. ಅನಧಿಕೃತ ಪಟಾಕಿ ಮಾರಾಟ ಪತ್ತೆ ಹಚ್ಚಲು ಟಾಸ್ಕ್ಫೋರ್ಸ್ ರಚಿಸಲಾಗಿದೆ. ಪೊಲೀಸ್, ಅಗ್ನಿಶಾಮಕ, ಬಿಬಿಎಂಪಿ ಸಹಯೋಗದಲ್ಲಿ ಟಾಸ್ಕ್ಫೋರ್ಸ್ ರಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಹೇಳಿದರು.
ಮಂಡ್ಯ: ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಬೇಡ. ಸರ್ಕಾರದ ಮುಂದೆ ನಾವು ಟಿಪ್ಪು ಜಯಂತಿ ಪ್ರಸ್ತಾಪ ಮಾಡಿಲ್ಲ. ಸರ್ಕಾರದ ಟಿಪ್ಪು ಜಯಂತಿ ಆಚರಣೆಯ ವಿರುದ್ಧ ನಾನು ಇದ್ದೇನೆ. ನಮ್ಮ ಆಚರಣೆ ನಾವು ಮಾಡಿಕೊಳ್ಳುತ್ತೇವೆ. ನಮ್ಮ ಕಾರ್ಯಕ್ಕೆ ರಾಜ್ಯ ಸರ್ಕಾರ ಬೆಂಬಲ ಕೊಡುವುದು ಬೇಡ. ಟಿಪ್ಪು ಜಯಂತಿ ಮಾಡಲ್ಲ ಎಂದಾಗಲೂ ಸ್ವಾಗತ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡಬಾರದು. ಜನರ ನಡುವೆ ವೈಮನಸ್ಸು ಉಂಟು ಮಾಡಲು ನಮಗೆ ಇಷ್ಟ ಇಲ್ಲ. ಟಿಪ್ಪುವಿನ ಅನುಯಾಯಿಗಳಿಗೆ ಈ ಜಯಂತಿ ಮಾಡುವ ಶಕ್ತಿ ಇದೆ. ಟಿಪ್ಪುವಿನ ವಿಚಾರದಲ್ಲಿ ರಾಜಕೀಯ ಬೇಡ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಮಂಡ್ಯ: ಟಿಪ್ಪು ಸುಲ್ತಾನ್ 273ನೇ ಜನ್ಮದಿನದ ಆಚರಣೆ ಮಾಡುತ್ತಿದ್ದೇವೆ. ವಿಶ್ವ ಶಾಂತಿಗಾಗಿ ಟಿಪ್ಪು ಆಚರಣೆ ಮಾಡುತ್ತಿದ್ದೇವೆ. ಟಿಪ್ಪು ಜಯಂತಿ ಹೆಸರಿನಲ್ಲಿ ಜನರ ಮನಸು ಕೆಡಿಸುವ ಯತ್ನ ನಡೆದಿದೆ. ಟಿಪ್ಪು ಜಯಂತಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎಂದು ಶ್ರೀರಂಗಪಟ್ಟಣದ ಗುಂಬಜ್ ಬಳಿ ಶಾಸಕ ತನ್ವೀರ್ ಸೇಠ್ ಹೇಳಿದರು.
ಮಂಗಳೂರು: ಪಟಾಕಿ ಮಳಿಗೆ ಹಾಕಲು ಸರ್ಕಾರ ಹೊಸ ನಿಯಮಾವಳಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಕಿಡಿಕಾರಿದೆ. ಸಿದ್ದರಾಮಯ್ಯ ಸರ್ಕಾರವೇ ಹಿಂದೂ ವಿರೋಧಿಯಾಗಿದೆ. ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಬೇಡದ ನಿಯಮ ಜಾರಿ ತರಲಾಗುತ್ತಿದೆ. ಹಬ್ಬದ ಆಚರಣೆಗಳಿಗೆ ಅಡ್ಡಿ ಪಡಿಸಲಾಗುತ್ತಿದೆ. ಗಣೇಶ ಹಬ್ಬದ ಸಂದರ್ಭದಲ್ಲಿಯೂ ಬಾಂಡ್ ಸೇರಿದಂತೆ ಹಲವು ನಿಯಮ ತರಲಾಯಿತು. ಅಲ್ಲೂ ಸಹ ಅಡ್ಡಿಪಡಿಸುವ ಕೆಲಸವಾಗಿದೆ. ಈಗ ವಿಶ್ವಾದ್ಯಂತ ಹಿಂದೂಗಳು ಆಚರಿಸುವ ದೀಪಾವಳಿ ಹಬ್ಬಕ್ಕೆ ಅಡ್ಡಿಪಡಿಸಲಾಗುತ್ತಿದೆ. ಮಂಗಳೂರಿನ ಮೂರು ಮೈದಾನದಲ್ಲಿ ಮಾತ್ರ ಪಟಾಕಿ ಮಾರಬೇಕೆಂದು ಹೇಳಲಾಗಿದೆ. ಹಿಂದೂಗಳನ್ನು ಧಮನ ಮಾಡಬೇಕೆಂದು ಈ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇಷ್ಟು ಬಲವಾಗಿ ನಿಯಮ ಜಾರಿ ಮಾಡುವುದಾದರೆ ಮೈಕ್ ನಿಯಮ ಜಾರಿಯಾಗಲಿ. ಮಸೀದಿಗಳಲ್ಲಿ ಮೈಕ್ ಗಳನ್ನು ಜೋರಾಗಿ ಕೂಗಲಾಗುತ್ತಿದೆ. ಅದನ್ನು ನಿಲ್ಲಿಸುವ ಕೆಲಸ ಆಗಿದೆಯಾ..? ಸುಪ್ರೀಂ ಕೋರ್ಟ್ ನಿಯಮ ಪಾಲನೆ ಆಗಿದೆಯಾ.. ಹಿಂದೂಗಳ ಹಬ್ಬ ಆಚರಣೆ ಅಡ್ಡಿ ಮಾಡಬೇಕೆಂಬ ಧೋರಣೆ ಸರ್ಕಾರದ್ದಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಮರು ಪರಿಶೀಲನೆ ಮಾಡಬೇಕು ಎಂದು ವಿ.ಎಚ್.ಪಿ ಮುಖಂಡ ಪ್ರದೀಪ್ ಸರಿಪಳ್ಳ ಆಗ್ರಹಿಸಿದರು.
ಮೈಸೂರು: ಜಿಲ್ಲೆಯ ಪಟಾಕಿ ವ್ಯಾಪಾರದ ಮಳಿಗೆ ಗೋದಾಮಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಾರಾಟ ಮಳಿಗೆ ದಾಸ್ತಾನು ಕೇಂದ್ರದಲ್ಲಿ ಮುಂಜಾಗ್ರತಾ ಕ್ರಮವಾಗಿ 20ಕ್ಕೂ ಹೆಚ್ಚು ಅಗ್ನಿ ನಂದಿಸುವ ಸಾಧನ ಇರಿಸಲಾಗಿದೆ. ಇದರ ಜೊತೆಗೆ ಬಕೆಟ್‌ನಲ್ಲಿ ಮರಳು ನೀರು ಸಂಗ್ರಹಣೆ ಮಾಡಲಾಗಿದೆ. 10 ಆಟೋಮ್ಯಾಟಿಕ್ ಅಗ್ನಿ ನಂದಿಸುವ ಸಾಧನ, 10 ಮ್ಯಾನ್ಯುಯಲ್ ಅಗ್ನಿ ನಂದಿಸುವ ಸಾಧನ, 40 ಡಿಗ್ರಿ ಉಷ್ಣಾಂಶ ತಾಗಿದರೆ ಆಟೋಮ್ಯಾಟಿಕ್ ಆಗಿ ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಲಾಗಿದೆ. ಬೆಂಕಿ ಅವಘಡ ಸಂಭವಿಸಿದರೆ ಯಾವ ರೀತಿ ನಂದಿಸಬೇಕೆಂಬುವುದರ ಬಗ್ಗೆ ಪ್ರತಿ ಸಿಬ್ಬಂದಿಗೂ ಅಗ್ನಿಶಾಮಕ ಸಿಬ್ಬಂದಿಯಿಂದ ತರಬೇತಿ ನೀಡಲಾಗಿದೆ.
ಮಂಗಳೂರು: ಪಟಾಕಿ ಮಳಿಗೆ ಹಾಕಲು ಹೊಸ ನಿಯಮಾವಳಿ ಹಾಕಿದ್ದು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ಹುನ್ನಾರ ಎಂದು ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಗಂಭೀರ ಆರೋಪ ಮಾಡಿದ್ದಾರೆ. ಹತ್ತು ಹಲವು ನೆಪವೊಡ್ಡಿ ಹಬ್ಬದ ಸಂಭ್ರಮದ ವಾತಾವರಣಕ್ಕೆ ಅಡ್ಡಿ ಮಾಡಲಾಗುತ್ತಿದೆ. ಹಿಂದುಗಳ ಹಬ್ಬ ದೀಪಾವಳಿಯ ಸಂದರ್ಭದಲ್ಲಿಯೇ ಅಡ್ಡಿ ಮಾಡುತ್ತಿದ್ದಾರೆ. ಈ ಮೂಲಕ ತನ್ನ ಎಂದಿನ ಚಾಳಿಯನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಶುರು ಮಾಡಿದೆ ಎಂದು ವಾಗ್ದಾಳಿ ಮಾಡಿದರು.
ಧಾರವಾಡ: ಜಿಲ್ಲೆಯಲ್ಲಿ ನಿಷೇಧಿತ ಪಟಾಕಿ ಮಾರಾಟ, ಬಳಕೆಗೆ ನಿರ್ಬಂಧಿ ವಿಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಿಯಮ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ.
ಮೈಸೂರು: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ನಿಯತ್ರಿಸುವ ಕುರಿತು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ. ಪಟಾಕಿಗಳ ಸಿಡಿತದಿಂದ ಉಂಟಾಗುವ ಶಬ್ಧ ಹಾಗು ಸಾರ್ವಜನಿಕ ಆಸ್ತಿ ಹಾಗೂ ಆರೋಗ್ಯ ಸಂರಕ್ಷಣೆ ಹಿನ್ನೆಲೆಯಲ್ಲಿ ಹಲವು ನಿಯಮ ಜಾರಿ ಮಾಡಿದೆ. ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳ ಮಾರಾಟ ಹಾಗೂ ಬಳಕೆಗೆ ನಿಷೇಧ ಹೇರಿದೆ. ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಜೊತೆಗೆ ಕ್ಯೂ ಅರ್ ಕೋಡ್, ಸದರಿ ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿಯಲ್ಲ ಎಂದು ಹೇಳಿದೆ. ಒಂದು ವೇಳೆ ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮತ್ತು ಬಳಕೆ ಮಾಡಿದರೇ ಕ್ರಮ ಕೈಗೊಳ್ಳಲಾಗುವುದು ಎಂದಿದೆ.
ಬೆಂಗಳೂರು: ರಾಜ್ಯಾದ್ಯಂತ ಇನ್ನೂ 2 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿ ಇಂದು (ನ.10,11) ರಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ ಸೇರಿದಂತೆ ಹಲವೆಡೆ ಮಳೆಯಾಗುವ ಸಂಭವವಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಮೈಸೂರು, ತುಮಕೂರು, ಶಿವಮೊಗ್ಗ, ವಿಜಯನಗರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ.
Published On - 8:04 am, Fri, 10 November 23