Breaking News Highlights: ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ (BJP-JDS Alliance) ಮಾಡಿಕೊಂಡಿದ್ದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ (C.M. Ibrahim) ಪಕ್ಷದ ವರಿಷ್ಠರ ವಿರುದ್ಧ ತಿರುಗಿಬಿದ್ದಿದ್ದಾರೆ. ಇತ್ತ, ಲೋಕಸಭೆ ಚುನಾವಣೆ (Lok Sabha Elections) ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತಂತ್ರಗಾರಿಕೆ ಹಣೆಯಲು ಆರಂಭಿಸಿದೆ. ಐಟಿ ದಾಳಿ ವೇಳೆ ಕಾಂಗ್ರೆಸ್ ನಾಯಕರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿರುವುದನ್ನೇ ಅಸ್ತ್ರವನ್ನಾಗಿಸಿದ ಬಿಜೆಪಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ದುರ್ಬಳಕೆ ಆರೋಪ ಸಂಬಂಧ ಎಸ್ಸಿ ಎಸ್ಟಿ ಮೋರ್ಛಾಗಳ ಮೂಲಕ ಹೋರಾಟಕ್ಕೆ ಪ್ಲ್ಯಾನ್ ಮಾಡಿಕೊಂಡಿದೆ. ತಮೀಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯೂ ಮುಂದುವರೆದಿದೆ. ಮೈಸೂರು ಅರಮನೆಯಲ್ಲಿ ದಸರಾ (Mysuru Dasara) ಹಬ್ಬ ಕೂಡ ಜೋರಾಗಿಯೇ ನಡೆಯುತ್ತಿದೆ. ಇನ್ನೊಂದೆಡೆ, ರಾಜ್ಯ ಹಲವೆಡೆ ಮಳೆಯಾಗುತ್ತಿದೆ (Karnataka Rain). ಇಂತಹ ಕ್ಷಣಕ್ಷಣದ ಸುದ್ದಿಗಳನ್ನು ಟಿವಿ9 ಡಿಜಿಟಲ್ ಲೈವ್ನಲ್ಲಿ ಪಡೆಯಿರಿ.
ಮೈಸೂರು: ಎರಡನೇ ದಿನದ ಯುವದಸರಾ ಸಂಭ್ರಮದಲ್ಲಿ ಇಂದು ಕೂಡ ಸಂಗೀತ, ನೃತ್ಯ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮವಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಖ್ಯಾತ ಹಿನ್ನಲೆ ಗಾಯಕ ಸಂಚಿತ್ ಹೆಗ್ಡೆ ರಸಸಂಜೆ ಏರ್ಪಡಿಸಲಾಗಿತ್ತು. ಜೊತೆಗೆ ಖ್ಯಾತ ಗಾಯಕ ರಘು ದೀಕ್ಷಿತ್ ಹಾಡಿಗೆ ಯುವ ಸಮೂಹ ಫಿದಾ ಆಗಿದೆ.
ವಿಜಯಪುರ: ಸರಿಯಾದ ಸಮಯಕ್ಕೆ ವಿದ್ಯುತ್ ನೀಡದ್ದಕ್ಕೆ ರೈತರ ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯುತ್ ವಿತರಣಾ ಘಟಕದ ಆವರಣಕ್ಕೆ ಮೊಸಳೆ ತಂದು ಬಿಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ್ ಗ್ರಾಮದಲ್ಲಿ ನಡೆದಿದೆ.
ಕೋಲಾರ: ಜಿಲ್ಲೆಯ ಮುಳಬಾಗಿಲು, ಕೆಜಿಎಫ್ ಹಾಗೂ ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಆರೋಪ ಕೇಳಿಬಂದಿದ್ದು, ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಕೋಲಾರ ಸಂಸದ ಮುನಿಸ್ವಾಮಿ, ರಾಜ್ಯಸಭಾ ಸದಸ್ಯ ಕಡಾಡಿ ಅವರಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಂಸದರು ಮೌನ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸಂಸದರ ಜೊತೆ ಪ್ರತಿಭಟನೆ ಕುಳಿತಿದ್ದ ಬೆಂಬಲಿಗರನ್ನು ಪೊಲೀಸರು ಎಬ್ಬಿಸಿದ್ದಾರೆ.
ಬೆಂಗಳೂರು: 100 ಗ್ರಾಮ ನ್ಯಾಯಾಲಯ ಸ್ಥಾಪನೆಗೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಚಿವ ಸಂಪುಟ ಸಭೆಯ ನಂತರ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು. 2008-09ರಲ್ಲಿ ಗ್ರಾಮ ನ್ಯಾಯಾಲಯ ಸ್ಥಾಪನೆ ಬಗ್ಗೆ ಕಾನೂನು ತರಲಾಗಿತ್ತು.
100 ಗ್ರಾಮ ಕೋರ್ಟ್ ಸ್ಥಾಪನೆಗೆ ಅಂದಾಜು 25 ರಿಂದ 30 ಕೋಟಿ ಆಗಬಹುದು ಎಂದರು.
ಬೆಂಗಳೂರು: ವೈದ್ಯಕೀಯ ಶಿಕ್ಷಣ ಪಡೆದ ಅಭ್ಯರ್ಥಿಗಳ ಕಡ್ಡಾಯ ಗ್ರಾಮೀಣ ಸೇವೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದ್ದು, ಕಡ್ಡಾಯ ಗ್ರಾಮೀಣ ಸೇವೆಯನ್ನು ಬದಲಾವಣೆ ಮಾಡಿ, ಖಾಲಿ ಹುದ್ದೆಗಳಿಗೆ ಅಗತ್ಯವಿರುವಷ್ಟು ಮಾತ್ರ ಕಡ್ಡಾಯ ಸೇವೆಗೆ ಅನುಮತಿ ಎಂದು ಸಚಿವ ಸಂಪುಟ ಸಭೆಯ ನಂತರ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಬೆಂಗಳೂರು: ವಾಹನಗಳ ಸಿಎನ್ಜಿ ಹಾಗೂ ಗೃಹ ಬಳಕೆಯ ಪಿಎನ್ಜಿ ಬಳಕೆಗೆ ರಾಜ್ಯ ಅನಿಲ ನೀತಿ ರೂಪಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ ಪಾಲಿಸಿಗೆ ಅನುಮೋದನೆ ನೀಡಲಾಗಿದೆ ಎಂದು ಸಂಪುಟ ಸಭೆ ನಂತರ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಬೆಂಗಳೂರು: ಒಟ್ಟೂ 33,770 ಕೋಟಿ ಕೃಷಿ ತೋಟಾಗಾರಿಕೆ ನಷ್ಟ ಆಗಿದ್ದು, ನಾವು ಕೃಷಿ ತೋಟಗಾರಿಕೆ ನಷ್ಟ ಪರಿಹಾರಕ್ಕೆ 5326 ಕೋಟಿ ಒಟ್ಟೂ ಬೇಡಿಕೆ ಇಟ್ಟಿದ್ದೇವೆ ಎಂದು ಹೆಚ್ಕೆ ಪಾಟೀಲ್ ಹೇಳಿದರು. ಆದರೆ, ರಾಜ್ಯ ಮಂತ್ರಿಗಳು ಕೇಂದ್ರ ಮಂತ್ರಿಗಳನ್ನು ಒತ್ತಾಯ ಮಾಡುವುದಕ್ಕೆ ಪದೇ ಪದೇ ಸಮಯ ಕೇಳುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು: ನೈಋತ್ಯ ಮುಂಗಾರಿನಲ್ಲಿ ಮಳೆ ಕೊರತೆಯಿಂದ ರಾಜ್ಯದ 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದ್ದೆವು, ಇದೀಗ ಹೊಸದಾಗಿ 21 ತಾಲೂಕು ಬರಪೀಡಿತ ಎಂದು ಘೋಷಿಸಲು ಒಪ್ಪಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಸಂಪುಟ ಸಭೆ ನಂತರ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಬೆಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್ಐಆರ್ ವಿಚಾರ ‘ರಾಜ್ಯ ಕಾಂಗ್ರೆಸ್ ಸರ್ಕಾರ ಸ್ವೇಚ್ಛಾಚಾರಿಯಾಗಿ ನಡೆದುಕೊಳ್ಳುತ್ತಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
‘ಬಡವನ ಮನೆ ತೆರವುಗೊಳಿಸಬೇಡಿ ಎಂದು ಹರೀಶ್ ಪೂಂಜಾ ಹೇಳಿದ್ದರು. ಸರ್ವೆ ಮಾಡಿ ಅರಣ್ಯ ಪ್ರದೇಶ ಎಂದು ಕಂಡು ಬಂದರೆ ತೆರವುಗೊಳಿಸಿ, ನಾನು ಕೂಡ ಸಹಕಾರ ನೀಡುವೆ, ಬಡಕುಟುಂಬವನ್ನು ಹೊರಹಾಕಬೇಡಿ ಎಂದು ಹರೀಶ್ ಹೇಳಿದ್ದರು.
ಇದೇ ಕಾರಣಕ್ಕೆ ಶಾಸಕ ಹರೀಶ್ ಪೂಂಜಾ ವಿರುದ್ಧ FIR ಹಾಕಿದ್ದಾರೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಕೆಂಗೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ವಿಧಾನಸೌಧದಿಂದ ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣಕ್ಕೆ ‘ನಮ್ಮ ಮೆಟ್ರೋ’ ರೈಲಿನಲ್ಲಿ ಸಂಚರಿಸಿದರು.
Karnataka heavy and medium industries minister @MBPatil hopped on the ‘Namma Metro’ today, taking a ride from Vidhana Soudha to Kengeri bus terminal station to attend an event at Kengeri.@cpronammametro pic.twitter.com/KvPXD39UAb
— ChristinMathewPhilip (@ChristinMP_) October 18, 2023
ಡಿಸೆಂಬರ್ ತಿಂಗಳಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಸೆಂಬರ್ 4ರಿಂದ 14ರವರೆಗೆ ಅಧಿವೇಶನ ನಿಗದಿ ಸಾಧ್ಯತೆ ಇದ್ದು, 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಸುವ ನಿರೀಕ್ಷೆ ಇದೆ.
ಬೆಂಗಳೂರು: ಇಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಏರ್ಪಡಿಸಲಾಗಿದ್ದು, ಈ ವೇಳೆ ಮೆಟ್ರೋದಲ್ಲಿ ಪ್ರಯಾಣಿಸಿ ಸಚಿವ ಪ್ರಿಯಾಂಕ್ ಖರ್ಗೆ ಸಭೆಗೆ ಹಾಜರಾಗಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್ ಬಳಿಯ ನೆಲ್ಲೂರು ಹಳ್ಳಿ ನಿಲ್ದಾಣದಿಂದ ವಿಧಾನಸೌಧದ ಅಂಬೇಡ್ಕರ್ ನಿಲ್ದಾಣದವರೆಗೆ ಮೆಟ್ರೋ ಪ್ರಯಾಣ ನಡೆಸಿದ್ದಾರೆ. ವೈಟ್ ಫೀಲ್ಡ್ ನಲ್ಲಿ ನಡೆದ ಅನ್‌ಫೋಲ್ಡ್ ವೆಬ್ 23 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೂಡ ಮೆಟ್ರೋದಲ್ಲೇ ತೆರಳಿದ್ದರು.
Today, I opted for the Purple Line for my work commute and it was a great ride.
– A 30-40 minute ride from Vidhana Soudha to Whitefield.
– An hour spent at the event.
– Back to the office for a Cabinet meeting.Additionally, a couple of wonderful conversations onboard helped.… pic.twitter.com/vkMkm0Ak9p
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 19, 2023
ಬೆಂಗಳೂರು: ಕಾಂತರಾಜ್ ಸಮಿತಿ ವರದಿ ವಿರೋಧಿಸಿ ರಾಜ್ಯ ಒಕ್ಕಲಿಗ ಸಂಘ ಹಾಗೂ ಮೀಸಲಾತಿ ಹೋರಾಟ ಸಮಿತಿಯಿಂದ ನವೆಂಬರ್ 2ರಂದು ಒಕ್ಕಲಿಗರ ಸಂಘದ ಕಚೇರಿ ಆವರಣದಲ್ಲಿ ಸಭೆ ಕರೆಯಲಾಗಿದೆ. ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಸಭೆ ಆಯೋಜನೆ ಮಾಡಲಾಗಿದೆ. ಇನ್ನು ಸಭೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ, ಒಕ್ಕಲಿಗ ಸಮುದಾಯದ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಭಾಗಿಯಾಗುವ ಸಾಧ್ಯತೆಯಿದೆ.
ಚಿಕ್ಕಬಳ್ಳಾಪುರ: ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ವಿಚಾರಕ್ಕೆ ಸಂಬಂಧಪಟ್ಟಂತೆ ‘ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ರಾಜಕೀಯ ಪ್ರೇರಿತವಾಗಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಇರುತ್ತೆ. ಬಿಜೆಪಿ ವಿರೋಧಿಸುವವರ ಮೇಲೆ ಸಿಬಿಐ, ಇಡಿ ದಾಳಿ ಸಾಮಾನ್ಯವಾಗಿದೆ. ಸಿಬಿಐ ತನಿಖೆಯನ್ನು ಡಿಕೆ ಸಮರ್ಥವಾಗಿ ಎದುರಿಸುತ್ತಾರೆ ಎಂದರು.
ಬೆಂಗಳೂರು: ಸಚಿವ ಸಂಪುಟ ಸಭೆ ಹಿನ್ನಲೆ ವಿಧಾನಸೌಧಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದು, ಸಿಎಂ ನೇತೃತ್ವದಲ್ಲಿ ಕ್ಯಾಬಿನೆಟ್ ಮೀಟಿಂಗ್ ಪ್ರಾರಂಭ ಆಗಿದೆ.
ಬೆಂಗಳೂರು: ಸಚಿವ ಡಾ.ಶರಣಪ್ರಕಾಶ್ ಹೆಸರು ಹೇಳಿ ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಆ ವ್ಯಕ್ತಿ ಯಾರಂತ ಗೊತ್ತಿಲ್ಲ, ಇದೇ ಮೊದಲ ಬಾರಿಗೆ ನೋಡಿರುವುದು ಎಂದು ವಿಧಾನಸೌಧದಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆತ ಯಾಕೆ ನನ್ನ ಹೆಸರು ಹೇಳಿದ್ದಾನೆ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.
ಬೆಂಗಳೂರು: ಜೆಡಿಎಸ್ ರಾಜ್ಯ ಘಟಕ ವಿಸರ್ಜನೆ ವಿಚಾರ ‘ ಅಲ್ಲಿ ಬೇರೆಯವರು ಅಧ್ಯಕ್ಷರಾದರೂ, ಕುಮಾರಸ್ವಾಮಿಯವರೇ ಅಧ್ಯಕ್ಷರು ಎಂದು ವಿಧಾನಸೌಧದಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದರು. ‘ಅದರಲ್ಲಿ ವಿಶೇಷವೇನಿಲ್ಲ. ಅನುಭವ ಇದ್ದೂ ಇಬ್ರಾಹಿಂ ಅಲ್ಲಿಗೆ ಹೋಗಿದ್ದರು.
ಅವರು ಇಲ್ಲೇ ಇದ್ದಿದ್ರೆ ಗೌರವ ಇರುತ್ತಿತ್ತು ಎಂದರು.
ಮೈಸೂರು: ಒಕ್ಕಲಿಗರ ವಿರುದ್ದ ಅವಹೇಳನಕಾರಿ ಹೇಳಿಕೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೊ. ಭಗವಾನ್ ಅವರನ್ನು ಗಡಿಪಾರು ಮಾಡುವಂತೆ ಬಿಜೆಪಿ ಒತ್ತಾಯಿ ಪತ್ರಿಕಾ ಪ್ರಕಟಣೆ ನೀಡಿದೆ. ಈ ಕೂಡಲೇ ಅವರನ್ನು ಗಡಿಪಾರು ಮಾಡಬೇಕು. ಜೊತೆಗೆ ಅವರಿಗೆ ನೀಡಿರುವ ಪೊಲೀಸ್ ಭದ್ರತೆ ವಾಪಸ್ಸು ಪಡೆಯಬೇಕು. ಇದರಿಂದ 1.5 ಲಕ್ಷ ತೆರಿಗೆ ಹಣ ಉಳಿಯುತ್ತದೆ ಎಂದು ಒತ್ತಾಯಿಸಿದ್ದಾರೆ. ಭಗವಾನ್ ತಮ್ಮ ಹೇಳಿಕೆಯಿಂದ ಜಾತಿ-ಧರ್ಮಗಳ ಮಧ್ಯೆ ವೈಷಮ್ಯ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳ ವಿಸರ್ಜನೆ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿದ ಸಿಎಂ ಇಬ್ರಾಹಿಂ, ಹಂಗಾಮಿ ಅಧ್ಯಕ್ಷರು ಅಂತಾ ಯಾವ ಆಧಾರದಲ್ಲಿ ಮಾಡಿದ್ದೀರಿ? ದೇವರು ಮತ್ತು ಜನ ನನ್ನ ಕೈಹಿಡಿಯುತ್ತಾರೆ. ಎಲ್ಲವನ್ನೂ ಹೊರಗೆ ತಂದರೆ ಒಳ್ಳೆಯದಲ್ಲ, ವಿಸರ್ಜನೆ ತಪ್ಪು. ಆದೇಶ ವಾಪಸ್ ಪಡೆದು ಪಕ್ಷದ ಸಭೆ ಕರೆಯಿರಿ. ನಾನು ಹೋಗದೇ ಇದ್ದರೆ ಚನ್ನಪಟ್ಟಣದಲ್ಲಿ ಹೆಚ್ಡಿ ಕುಮಾರಸ್ವಾಮಿ ಗೆಲ್ಲುತ್ತಿದ್ದರಾ? ಯಾವ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ ನೀವು? ಇಷ್ಟು ದೊಡ್ಡ ವಯಸ್ಸಿನಲ್ಲಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಾನು ಹಾಸನ, ಮಂಡ್ಯ, ಹೊಳೆನರಸೀಪುರಕ್ಕೆ ಹೋಗಿ ಸಭೆ ಮಾಡುತ್ತೇನೆ ಎಂದರು.
ಹೆಚ್.ಡಿ.ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ವಿಚಾರವಾಗಿ ಮಾತನಾಡಿದ ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪುರ್, ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿರೋದು ಸಂಘಟನೆಗೆ ಸಹಾಯ ಆಗುತ್ತದೆ. ಇವತ್ತು ನಮಗೆ ಅನಿವಾರ್ಯತೆ ಇದೆ. ಅದೃಷ್ಟ ಯಾವಾಗ ಯಾರ ಬಾಗಿಲಿಗೆ ಹೋಗಿ ನಿಲ್ಲುತ್ತೋ ರಾಜಕಾರಣದಲ್ಲಿ ಗೊತ್ತಿಲ್ಲ. ಕಾದು ನೋಡೋಣ. ಕುಟುಂಬ ರಾಜಕಾರಣದ ಬಗ್ಗೆ ಮಾತಾಡೋಕೆ ಕಾಂಗ್ರೆಸ್ಗೆ ಯಾವುದೇ ನೈತಿಕತೆ ಇಲ್ಲ, ನಮ್ಮ ಪಕ್ಷ ಬಹಳ ಸದೃಢವಾಗಿದೆ. ಸರ್ಕಾರದಲ್ಲಿ ಬಿಜೆಪಿ ಕಾಂಗ್ರೆಸ್ನಲ್ಲಿರೋ ಅರ್ಧಕ್ಕಿಂತ ಹೆಚ್ಚಿನವರು ನಮ್ಮವರೇ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ವಿಚಾರವಾಗಿ ಮಾತನಾಡಿದ ಸಚಿವ ಬಿ.ನಾಗೇಂದ್ರ, ಶಿವಕುಮಾರ್ ವಿರುದ್ಧ ಬಿಜೆಪಿ ಜೆಡಿಎಸ್ ಕುತಂತ್ರದ ರಾಜಕೀಯ ಮಾಡುತ್ತಿದೆ. ದಕ್ಷಿಣ ಭಾರತದ ಅಗ್ರಗಣ್ಯ ನಾಯಕ ಡಿಕೆ ಶಿವಕುಮಾರ್ ಅವರನ್ನು ತುಳಿಯಲು ಪ್ಲ್ಯಾನ್ ಮಾಡಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಜಯದ ಓಟದ ಕುದುರೆ ನಿಲ್ಲಿಸಲು ಹುನ್ನಾರ ನಡೆಯುತ್ತಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ಡಿಕೆ ಶಿವಕುಮಾರ್ ಮೇಲೆ ಒತ್ತಡ ತರಲು ಯತ್ನಿಸಲಾಗುತ್ತಿದೆ. ಎಲ್ಲಾ ತನಿಖೆಯಿಂದ ಮುಕ್ತವಾಗಿ ಅವರು ಹೊರಗೆ ಬರುತ್ತಾರೆ ಎಂದರು.
ಸರ್ವಸದಸ್ಯರ ಸಲಹೆ ಆಧರಿಸಿ ರಾಜ್ಯಾಧ್ಯಕ್ಷ ಸ್ಥಾನ ನಿರ್ವಹಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಸೋಲಿನಿಂದ ಆಘಾತಕ್ಕೊಳಗಿದ್ದೆವು. ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ನಿರ್ಧರಿಸಿದ್ದೇವೆ. ರಾಜ್ಯ ಸರ್ಕಾರದ ಲೋಪಗಳ ವಿರುದ್ಧ ಸದನದ ಒಳಗೆ, ಹೊರಗೆ ಜೆಡಿಎಸ್ ಸಮರ್ಥವಾಗಿ ಹೋರಾಡಲಿದ್ದೇವೆ ಎಂದರು.
ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ ಎಂದು ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿರಿಯ ಶಾಸಕರು ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಿದ್ದಾರೆ. ಇವರು ರೈತ ವಿರೋಧಿಗಳಾಗಿದ್ದಾರೆ, ಪರಸ್ಪರ ವಿರೋಧಿಗಳಾಗಿದ್ದಾರೆ ಎಂದರು. ಬೆಳಗಾವಿ ಜಿಲ್ಲಾ ಕಾಂಗ್ರೆಸ್ನಲ್ಲಿ ರಾಜಕೀಯ ಬೆಳವಣಿಗೆ ವಿಚಾರವಾಗಿ ಮಾತನಾಡಿದ ಅವರು, ಈ ಮುಂಚೆಯೂ ಬೆಳಗಾವಿಯಿಂದಲೇ ಇತಿಹಾಸ ಆರಂಭವಾಗಿದೆ. ಈಗ ಅದೇ ಇತಿಹಾಸ ಶುರುವಾಗಿದೆ ಎಂದರು. ಅಲ್ಲದೆ, ಜನ ಕೊಟ್ಟಿರುವ ಅಧಿಕಾರ ಸರಿಯಾಗಿ ನಿರ್ವಹಿಸಬೇಕು ಎಂದರು.
ಸಚಿವ ಶರಣ ಪ್ರಕಾಶ್ ಪಾಟೀಲ್ ಕಿರುಕುಳ ಬಗ್ಗೆ ರೆಕಾರ್ಡ್ ಮಾಡಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಚಿವರ ಹೆಸರು ಬಂದಿದೆ ಅಂದರೆ ಸೂಕ್ತ ತನಿಖೆ ಮಾಡಬೇಕು. ತಪ್ಪಿತಸ್ಥ ಸಚಿವರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದರು.
ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ, ಕಾನೂನು ಚೌಕಟ್ಟಿನಲ್ಲಿ ಯಾರು ಕೂಡ ದೊಡ್ಡವರಲ್ಲ. ಸ್ಥಾನಮಾನಕ್ಕಿಂತ ಕಾನೂನು ದೊಡ್ಡದು. ಕಾನೂನು ಚೌಕಟ್ಟಿನಲ್ಲಿ ಯಾರು ಏನು ಎದುರಿಸಬೇಕು ಅದನ್ನ ಎದುರಿಸಬೇಕು. ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ತೆರವುಗೊಳಿಸುವ ಕೆಲಸ ಆಗಿದೆ. ಕಾನೂನು ಪ್ರಕ್ರಿಯೆ ಏನು ಇದೆ ಅದು ಆಗುತ್ತದೆ ಎಂದರು.
ಕಲಬುರಗಿ: ಬಿಜೆಪಿ ಕಾರ್ಯಕರ್ತ ಶಿವಕುಮಾರ್(35) ಆತ್ಮಹತ್ಯೆ ಪ್ರಕರಣ ಸಂಬಂಧ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಅನೇಕ ದೌರ್ಜನ್ಯಗಳು ನಡೆಯುತ್ತಿವೆ. ಧರ್ಮಕ್ಕಾಗಿ ಹೋರಾಟ ಮಾಡುವವರ ಹತ್ತಿಕ್ಕುವ ಕೆಲಸ ಆಗುತ್ತಿದೆ. ಬಿಜೆಪಿ ಮುಖಂಡ ಶಿವಕುಮಾರ್ಗೆ ‘ಕೈ’ ಕಾರ್ಯಕರ್ತರು ಥಳಸಿದ್ದಾರೆ. ಶಿವಕುಮಾರ್ ಆತ್ಮಹತ್ಯೆಗೂ ಮುನ್ನ ಆಡಿಯೋ ರೇಕಾರ್ಡ್ ಮಾಡಿದ್ದಾನೆ. ಸಚಿವ ಶರಣಪ್ರಕಾಶ್ ಪಾಟೀಲ್ ವಿರುದ್ದ ಆಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಮಾತನಾಡುತ್ತಿಲ್ಲ. ಶರಣಪ್ರಕಾಶ್ ಪಾಟೀಲ್ ನೈತಿಕಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಡಾ. ಅಶ್ವಥ್ ನಾರಾಯಣ, ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದರೆ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕು. ನಮ್ಮ ಮೇಲೆ ಪೇ ಸಿಎಂ ಆರೋಪ ಮಾಡಿದ್ದರು. ಈಗ ಉಪಮುಖ್ಯಮಂತ್ರಿ ಆಗಿರುವ ಡಿ.ಕೆ. ಶಿವಕುಮಾರ್ ಮೇಲೆ ಬಂದಿರುವ ಆರೋಪದ ಬಗ್ಗೆ ಮುಕ್ತ ತನಿಖೆ ಆಗಬೇಕಿದೆ. ಹೀಗಾಗಿ ಡಿಕೆಶಿ ರಾಜೀನಾಮೆ ನೀಡಬೇಕು ಅನ್ನೋದು ನಮ್ಮ ಪಕ್ಷದ ಆಗ್ರಹ ಎಂದರು.
ಕಾಂಪ್ರಮೈಸ್ ಅಂದರೆ ಅದು ಕೇವಲ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅಂತ ಬಿಂಬಿಸೋದಕ್ಕೆ ಹೋಗಬೇಡಿ. ನನಗೆ ಬಹಳ ಒಳ್ಳೆ ಖಾತೆ ಕೊಟ್ಟಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ನನ್ನ ಹೆಗಲ ಮೇಲಿದೆ. ಸತೀಶಣ್ಣ ಆರು ಬಾರಿ ಶಾಸಕರು, ನಾನು ಎರಡು ಬಾರಿ ಶಾಸಕಿಯಾಗಿ ಸಚಿವೆ ಆಗಿದ್ದೇನೆ. ಸತೀಶಣ್ಣ ಬಹಳ ಅನುಭವ ಇರುವವರು, ಅವರು ಯಾವ ಅರ್ಥದಲ್ಲಿ ಕಾಂಪ್ರಮೈಸ್ ಅಂತ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಒಳ್ಳೆ ಭಾವನೆಯಲ್ಲಿ ಹೇಳಿದ್ದಾರೆ ಅಂತ ಭಾವಿಸಿದ್ದೇನೆ. ಜಿಲ್ಲೆಯಲ್ಲಿ ಯಾವುದೋ ಅಧಿಕಾರಿ ಅವರು ಹಾಕಿದಾಗ ನಾನು ಎಸ್ ಅಂತೇನೆ. ನಾನು ಯಾವುದೋ ಅಧಿಕಾರಿ ಹಾಕಿದಾಗ ಅವರು ಎಸ್ ಅಂತಾರೆ. ಅದೇ ಕಾಂಪ್ರಮೈಸ್ ಅಷ್ಟೇ. ಇನ್ನೊಮ್ಮೆ ಹೋಗಿ ಕಾಂಪ್ರಮೈಸ್ ಅಂದರೆ ಯಾವ ತರಹ ಅಂತ ಸತೀಶಣ್ಣನ ಬಳಿ ಬಿಡಿಸಿ ಕೇಳಿ. ನಾನು ಯಾವುದಾದರೂ ಹಸ್ತಕ್ಷೇಪ ಮಾಡಿದ್ದೀನಾ? ಜಿಲ್ಲಾಡಳಿತದಲ್ಲೇನಾದರೂ ನನ್ನಿಂದ ತೊಂದರೆ ಆಗುತ್ತಿದೆಯಾ ಅಂತ ಮತ್ತೊಮ್ಮೆ ಕೇಳಿ. ಡಿಕೆಶಿವಕುಮಾರ್ ಅವರನ್ನು ಯಾಕೆ ಎಳೆದು ತರುತ್ತೀರಾ? ಅಧ್ಯಕ್ಷರು ಇಡೀ ರಾಜ್ಯ ಸುತ್ತಾಡಿ 136 ಅಭ್ಯರ್ಥಿಗಳು ಗೆಲ್ಲುವಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ಬೆಳಗಾವಿ ಡಿಸಿಎಂ ವ್ಯಾಪ್ತಿಗೆ ಇಲ್ವಾ? ಏನು ಹಸ್ತಕ್ಷೇಪ ಮಾಡಿದ್ದಾರೆ ತೋರಿಸಿಕೊಡಿ ನೋಡೋಣ ಎಂದರು.
18 ಶಾಸಕರು, ಪಕ್ಷದ ಪದಾಧಿಕಾರಿಗಳ ಅಭಿಪ್ರಾಯ ಪಡೆದಿದ್ದೇವೆ. ಪಕ್ಷ ಸಂಘಟನೆ ದೃಷ್ಟಿಯಿಂದ ದಸರಾ ನಂತರ ಹಲವಾರು ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇಂದು ನಡೆದ ಸಭೆಯಲ್ಲಿ JDSನ 19 ಶಾಸಕರ ಪೈಕಿ 18 ಶಾಸಕರು, ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಸಭೆಗೆ ಆಗಮಿಸಿ ಸಲಹೆ ನೀಡಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ, ನಾವು ಇವತ್ತು ಸಭೆಯೊಂದನ್ನ ಕರೆದಿದ್ದೆವು. ಸುದ್ದಿಗೋಷ್ಟಿಯನ್ನೂ ಕರೆದಿದ್ದೆವು. ಕೆಲವು ಪಕ್ಷದ ನಿಯಮಾವಳಿಗಳು ಕೂಡ ಇದ್ದಾವೆ. ಪಕ್ಷದ ಕೆಲವು ಘಟಕಗಳ ಜೊತೆ ಸಮಾಲೋಚನೆ ಮಾಡಿ ಒಂದು ನಿರ್ಣಯ ಮಾಡಿದ್ದೇವೆ. ಜವಬ್ದಾರಿ ಸ್ಥಾನವನ್ನು ಮಾರ್ಪಾಡು ಮಾಡಬೇಕಿದೆ. ಚುನಾವಣೆ ಮುಗಿದು ನಾಲ್ಕು ತಿಂಗಳಾಯ್ತು. ಇಬ್ರಾಹಿಂ ಅವರ ಹೇಳಿಕೆಗಳನ್ನು ನಾನು ಪ್ರಸ್ತಾಪ ಮಾಡಲು ಹೋಗಲ್ಲ, ಅವಶ್ಯಕತೆ ಇಲ್ಲ. ಎಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿದ್ದೇವೆ ಎಂದರು.
ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಪಕ್ಷದ ವರಿಷ್ಠ ಹೆಚ್ಡಿ ದೇವೇಗೌಡ, ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ನಾನು ಪ್ರಸ್ತಾಪ ಮಾಡುವುದಿಲ್ಲ. ಜೆಡಿಎಸ್ ಕೋರ್ ಕಮಿಟಿ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿದ್ದೇವೆ. ಎಲ್ಲರ ಅಭಿಪ್ರಾಯ ಪಡೆದು ಸಿ.ಎಂ.ಇಬ್ರಾಹಿಂ ಉಚ್ಚಾಟಿಸಿದ್ದೇವೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ನೇಮಕ ಮಾಡಿದ್ದೇವೆ ಎಂದರು.
ಬೆಂಗಳೂರಿನಲ್ಲಿ JDS ವರಿಷ್ಠ ಹೆಚ್ಡಿ ದೇವೇಗೌಡ ನೇತೃತ್ವದಲ್ಲಿ ನಡೆಯುತ್ತಿದ್ದ ಜೆಡಿಎಸ್ ಕೋರ್ ಕಮಿಟಿ ಸಭೆ ಮುಕ್ತಾಯಗೊಂಡಿದೆ. ಕೋರ್ ಕಮಿಟಿ ಸಭೆ ನಂತರ ದೇವೇಗೌಡ ಅವರು ಸುದ್ದಿಗೋಷ್ಠಿ ಆರಂಬಿಸಿದ್ದು, ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪುರ ಉಪಸ್ಥಿತರಿದ್ದಾರೆ.
ರಾಜ್ಯ ಸರ್ಕಾರದ ಪ್ರಮುಖ ಅನ್ನಭಾಗ್ಯ ಯೋಜನೆ ಹಳ್ಳಹಿಡಿಯುತ್ತಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ರೇಷನ್ ವಿತರಕ ಸಂಘದ ಅಧ್ಯಕ್ಷ ಕುಮಾರ್ ಹೇಳಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ 10ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳಿದ್ದರು. ಯೋಜನೆ ಫಲಾನುಭವಿಗಳಿಗೆ ಸರ್ಕಾರದಿಂದ ಡಿಬಿಟಿ ಹಣ ತಲುಪುತ್ತಿಲ್ಲ. ಅಕ್ಕಿ ಕೊಡುವುದರಿಂದ ಒಂದು ಕ್ವಿಂಟಾಲ್ಗೆ 6.50 ಪೈಸೆ ನಮಗೆ ಸಿಗಲಿದೆ. ಅನ್ನಭಾಗ್ಯ ಯೋಜನೆಯನ್ನ ಮುಂದುವರಿಸಬೇಕು. ರಾಜಕೀಯ ಕಾರಣ ಹೇಳಿಕೊಂಡು ಡಿಬಿಟಿ ಮುಂದುವರಿಸುವುದು ಬೇಡ. ಹೀಗಾಗಿ ಇಂದು ಎಲ್ಲಾ ರೇಷನ್ ನ್ಯಾಯಬಲೆ ಅಂಗಡಿಗಳನ್ನ ಮುಚ್ಚಿ ಇಂದು ಶಾಂತಿಯುತವಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಶಿವಮೊಗ್ಗ: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ಎಂದ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಈ ಕೇಸ್ನಲ್ಲಿ ಡಿಕೆಶಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಇದ್ದಾರೆ. ಅಕ್ರಮ ಸಂಪಾದನೆ ಪ್ರಕರಣ ಬಗ್ಗೆ ಸಿಬಿಐ ತನಿಖೆ ಮಾಡುತ್ತಿದೆ. ಬರೆದಿಟ್ಟುಕೊಳ್ಳಿ ಮತ್ತೆ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದರು. ಡಿ.ಕೆ.ಶಿವಕುಮಾರ್ ಭಂಡತನದ ರಾಜಕಾರಣ ಮಾಡುತ್ತಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ 100 ಕೋಟಿ ಅಕ್ರಮ ಹಣ ಪತ್ತೆಯಾಗಿದೆ. ಡಿಕೆಶಿ ಉತ್ತರದಲ್ಲೂ ಗೂಂಡಾಗಿರಿ ಕಂಡು ಬರುತ್ತದೆ. ತನಿಖೆ ಮಾಡಿ ಅಂತಾ ಬಿಜೆಪಿ ಕೇಳುವುದು ತಪ್ಪಾ? ನೀವು ಕಳ್ಳರು ಅಂತಾ ನಾವು ಇನ್ನೂ ನೇರವಾಗಿ ಹೇಳಿಲ್ಲ ಎಂದರು.
ಬೆಳಗಾವಿ: ಈ ವರ್ಷ ರಾಜ್ಯದಲ್ಲಿ ಮಳೆ ಅಭಾವ ಆಗಿದೆ ಎಂದು ಹೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್, ಒಂದು ದಿನ ಮಳೆ ಆಗದಿದ್ದರೆ ಸರ್ಕಾರಕ್ಕೆ 1 ಸಾವಿರ ಕೋಟಿ ರೂ. ನಷ್ಟವಾಗುತ್ತದೆ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಮುತುವರ್ಜಿ ವಹಿಸಿದೆ. ಸಚಿವ ಕೆ.ಜೆ.ಜಾರ್ಜ್ ಜೊತೆಗೆ ಪಾವಗಡಕ್ಕೆ ಹೋಗಿ ವಿವರಣೆ ನೀಡಿದ್ದೇವೆ. ಮೊದಲು ರೈತರಿಗೆ 6 ಗಂಟೆ ವಿದ್ಯುತ್ ವಿತರಣೆ ಮಾಡಲಾಗುತ್ತಿತ್ತು. ಸಿಎಂ ಜೊತೆ ಚರ್ಚಿಸಿ ನಮ್ಮ ಸರ್ಕಾರ 7 ಗಂಟೆ ವಿದ್ಯುತ್ ನೀಡುತ್ತಿತ್ತು. ಈಗ ರೈತರಿಗೆ ಸ್ವಲ್ಪ ಕಷ್ಟವಾಗುತ್ತಿದೆ. ನೀರು ಕಳ್ಳತನ ಆಗುತ್ತಿರುವುದಕ್ಕೆ ಸರ್ಕಾರಕ್ಕೆ ದೊಡ್ಡ ಭಾರ ಆಗುತ್ತಿದೆ. ಮೈಸೂರು ಭಾಗದ ಜನರನ್ನು ದೇವರೇ ಕಾಪಾಡಬೇಕು ಎಂದರು.
ಬೆಳಗಾವಿ: ಜಿಲ್ಲಾ ಪ್ರವಾಸಕ್ಕೆಂದು ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್ ಶಾಸಕನೂ ಆಗಮಿಸಿಲ್ಲ. ಈ ಬಗ್ಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಶಿವಕುಮಾರ್ ಅವರದ್ದು ಖಾಸಗಿ ಕಾರ್ಯಕ್ರಮವಾಗಿತ್ತು. ನಾನು ಜಿಲ್ಲೆಯಲ್ಲಿ ಇರುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಬಹಳ ಮಂದಿ ಪ್ರವಾಸಕ್ಕೆ ಹೋಗಿದ್ದರು. ಜಿಲ್ಲಾಧ್ಯಕ್ಷರು ಕೂಡ ಪ್ರವಾಸ ಹೋಗಿದ್ದರು. ಹೀಗಾಗಿ ಅದಕ್ಕೆ ವಿಶೇಷ ಕಲ್ಪನೆ ಅರ್ಥ ಕೊಡುವ ಅಗತ್ಯವಿಲ್ಲ ಎಂದರು.
ಇತ್ತೀಚೆಗಷ್ಟೇ, ಅನುದಾನಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲಿಗೆ ಬಿದ್ದು ಮನವಿ ಮಾಡಿಕೊಂಡಿದ್ದ ಆರ್ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಇದೀಗ ಸುದ್ದಿಗೋಷ್ಠಿ ನಮ್ಮ ಕ್ಷೇತ್ರದ ಹಣ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಡಿಸಿಎಂ ಹೇಳಿರುವ ಪ್ರಕಾರ ಅನುದಾನದ ಪಟ್ಟಿ ಕಳುಹಿಸಿ ಕೊಟ್ಟಿದ್ದೇನೆ. ಅವರು ಏನು ಮಾಡುತ್ತರೋ ಗೊತ್ತಿಲ್ಲ. ನಮ್ಮ ಕ್ಷೇತ್ರದ ಹಣ ಬಿಡುವ ಪ್ರಶ್ನೆಯೇ ಇಲ್ಲ. ಇದು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಆಗಿರುವ ಹಣ. ಹಣ ಬರುವ ವಿಶ್ವಾಸ ಇದೆ, ಕಾಯುತ್ತೇನೆ ಎಂದರು. ಆಪರೇಷನ್ ಕಮಲದ ಬಗ್ಗೆ ಡಿಸಿಎಂ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರೇ.. ನೆಮ್ಮದಿಯಾಗಿ ಆಡಳಿತ ಮಾಡಿ, ಜನರಿಗೆ ಸಹಾಯ ಮಾಡಿ. ಒಳ್ಳೆಯ ರೀತಿಯಲ್ಲಿ ಸರ್ಕಾರ ನಡೆಸಿಕೊಂಡು ಹೋಗಿ. ನಮಗೆ ಸರ್ಕಾರ ಬೀಳಿಸುವ ಆಲೋಚನೆ ಇಲ್ಲ. ಆದರೆ ಈಗ ಅವರೇ ಆ ರೀತಿ ದಾರಿ ಮಾಡಿಕೊಂಡಿದ್ದಾರೆ. ಕೈ ಹಾಕಬೇಕು ಅಂತಾ ಹೊರಟರೆ ಮುಂದಿನ ದಿನಗಳಲ್ಲಿ ಆ ಮಾತು ಸತ್ಯ ಆಗುತ್ತದೆ. 17+3 ಮಾಡೋದು ಕಷ್ಟ ಏನಿಲ್ಲ ನಮಗೆ. ದೇವಾನು ದೇವತೆಗಳು ತಥಾಸ್ತು ಅಂದರೆ ನಾವಂತೂ ಸುಮ್ಮನೆ ಇರುವುದಿಲ್ಲ ಎಂದರು.
ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಬಿಜೆಪಿ ಹಾಲಿ ಶಾಸಕರಾದ ಶಿವರಾಮ್ ಹೆಬ್ಬಾರ್, ಎಸ್. ಟಿ. ಸೋಮಶೇಖರ್ ಭೇಟಿಯಾಗಿದ್ದಾರೆ. ಸದ್ಯ ಇವರ ಭೇಟಿ ಕುತೂಹಲ ಮೂಡಿಸಿದೆ. ಅದಾಗ್ಯೂ, ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಭೇಟಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಬೆಳಗಾವಿ: ಸತೀಶ್ ಜಾರಕಿಹೊಳಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಆಂತರಿಕ ಭಿನ್ನಾಭಿಪ್ರಾಯ ಇರುವ ವಿಚಾರವಾಗಿ ಮಾತನಾಡಿದ ಸ್ವತಃ ಡಿಕೆ ಶಿವಕುಮಾರ್, ನನಗೆ ಯಾರೊಂದಿಗೂ ಭಿನ್ನಾಭಿಪ್ರಾಯ ಇಲ್ಲ. ಆಂತರಿಕವಾಗಿಯೂ ಇಲ್ಲ, ಬಹಿರಂಗವಾಗಿಯೂ ಇಲ್ಲ. ನನಗೆ ಯಾಕೆ ಭಿನ್ನಾಭಿಪ್ರಾಯ ಬೇಕು ಎಂದು ಕೇಳಿದರು.
ಮೈಸೂರು: ದಸರಾ ಜಂಬೂ ಸವಾರಿ ಹಿನ್ನೆಲೆ ಇಂದು ಗಜಪಡೆಗಳಿಂದ ಜಂಬೂ ಸವಾರಿ ರಿಹರ್ಸಲ್ ನಡೆಯಿತು. ರಿಹರ್ಸಲ್ನಲ್ಲಿ ಗಜಪಡೆ, ಅಶ್ವಾರೋಹಿದಳ, ಪೊಲೀಸ್ ಬ್ಯಾಂಡ್, ಪೊಲೀಸ್ ತುಕ್ಕಡಿಗಳು ಭಾಗಿಯಾಗಿವೆ. ಗಜಪಡೆ ಪುಷ್ಪಾರ್ಚನೆ ಸೇರಿದಂತೆ ಎಲ್ಲಾ ಬಗೆಯ ತಾಲೀಮು ನಡೆಯಿತು. ಅಭಿಮನ್ಯಗೆ ಡಿಸಿಎಫ್ ಸೌರಭ್ ಕುಮಾರ್, ಮೌಂಟೆಡ್ ಎಸ್ಪಿ ಶೈಲೇಂದ್ರ, ಎಸಿಪಿ ಗಳಾದ ಚಂದ್ರಶೇಖರ್, ಸತೀಶ್, ಆರ್.ಎಫ್.ಓ ಸಂತೋಷ್ ಅವರು ಪುಷ್ಪಾರ್ಚನೆ ಮಾಡಿದರು. ಈಗಾಗಲೇ ಬನ್ನಿಮಂಟಪದವರೆಗೆ ಮರದ ಅಂಬಾರಿ ತಾಲೀಮು ಮಾಡಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ದಿಢೀರ್ ಭೇಟಿಯಾಗಿದ್ದಾರೆ. ಬೆಳಗಾವಿಯ ಸರ್ಕ್ಯೂಟ್ ಹೌಸ್ನಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದಾರೆ. ಕಿತ್ತೂರು ಉತ್ಸವ ನಿಮಿತ್ತ ಹೆಚ್ಚಿನ ಅನುದಾನಕ್ಕಾಗಿ ಬೆಂಗಳೂರಿಗೆ ಹೋಗಿದ್ದೆ. ಡಿಸಿಎಂ ಪೂರ್ವ ನಿಯೋಜಿತ ಕಾರ್ಯಕ್ರಮ ಇಲ್ಲದ ಹಿನ್ನೆಲೆ ಬೆಂಗಳೂರಿಗೆ ಹೋಗಿದ್ದೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಬಂದಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ನಿನ್ನೆ ಡಿಸಿಎಂ ಬಂದಿದ್ದರೂ ಯಾವೊಬ್ಬ ಶಾಸಕರು ಸ್ವಾಗತಿಸಲು ಬಂದಿರಲಿಲ್ಲ. ನಿನ್ನೆ ಇಡೀ ದಿನ ಶಿವಕುಮಾರ್ ಅವರು ಏಕಾಂಗಿಯಾಗಿ ಜಿಲ್ಲೆಯಲ್ಲಿ ಸಂಚಾರ ಮಾಡಿದ್ದರು.
ಪದೇಪದೇ ಕಾಂಗ್ರೆಸ್ ಪಕ್ಷದ ಇಮೇಜ್ ಡ್ಯಾಮೇಜ್ ಆಗುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ಗೆ ಡ್ಯಾಮೇಜ್ ಮಾಡುತ್ತಿವೆ. ಸರ್ಕಾರದ ಇಮೇಜ್ಗೆ ತಕ್ಕಂತೆ ಕೆಲಸಗಳು ಆಗುತ್ತಿಲ್ಲ. ಶಾಸಕರ ಬೇಸರ, ಕಮಿಷನ್ ಆರೋಪ, ಗುತ್ತಿಗೆದಾರರ ಆರೋಪಗಳಿಂದ ಡ್ಯಾಮೇಜ್ ಆಗುತ್ತಿದೆ. ಡ್ಯಾಮೇಜ್ ಸರಿಪಡಿಸುವ ಕೆಲಸ ತಕ್ಷಣ ಮಾಡಬೇಕಿದೆ. ಬಿಜೆಪಿ ಸರಿಯಾದ ವಿಪಕ್ಷ ನಾಯಕನ ನೇಮಕ ಮಾಡಿದರೆ ನಮಗೆ ಇನ್ನಷ್ಟು ಹಿನ್ನಡೆ ಆಗಬಹುದು. ಈಗಲೇ ಎಚ್ಚೆತ್ತುಕೊಂಡು ಇಮೇಜ್ ಹೆಚ್ಚಿಸಿಕೊಳ್ಳುವುದು ಸೂಕ್ತ ಎಂದು ಚರ್ಚೆ ನಡೆಸಿದ್ದಾರೆ. ಈ ವೇಳೆ ಬಿಜೆಪಿಗೆ ಕೌಂಟರ್ ಕೊಡುವಂತೆ ಸಿದ್ದರಾಮಯ್ಯ ಅವರು ಸಚಿವರಿಗೆ ಸೂಚನೆ ನೀಡಿದ್ದಾರೆ.
Published On - 8:30 am, Thu, 19 October 23