ದಸರಾ ಹಿನ್ನೆಲೆ ಸಾಲು ಸಾಲು ರಜೆ ಇದ್ದು, ಜನ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ (Dasara). ಮೆಜೆಸ್ಟಿಕ್ ಬಸ್ ನಿಲ್ದಾಣ, ಸಾರಿಗೆ ಬಸ್ಗಳು ಫುಲ್ ರಶ್ ಆಗಿದ್ವು. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿದ್ದು, ಧರ್ಮಸ್ಥಳ, ಶಿವಮೊಗ್ಗ, ತುಮಕೂರು, ಹಾಸನ ಸೇರಿದಂತೆ ಹಲವು ಭಾಗಗಳಿಗೆ ಬಿಎಂಟಿಸಿ ಬಸ್ಗಳನ್ನ ಸ್ಪೆಷಲ್ ಬಸ್ಗಳನ್ನಾಡಿ ರಸ್ತೆಗೆ ಇಳಿಸಲಾಗಿದೆ. ಇನ್ನು ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡೋ ಹಾಸನಾಂಬೆಯ ಜಾತ್ರಾ ಮಹೋತ್ಸವಕ್ಕೆ ಕೌಂಟ್ಡೌನ್ ಶುರುವಾಗಿದೆ (Hasanamba Jatre). ನವೆಂಬರ್ 2ರಿಂದ ದೇವಿಯ ಜಾತ್ರಾ ಮಹೋತ್ಸವ ಶುರುವಾಗಲಿದೆ. ಇದೆಲ್ಲದರ ಜೊತೆಗೆ ರಾಜಕೀಯ ಸುದ್ದಿ, ಅಪರಾಧ ಸುದ್ದಿ ಸೇರಿದಂತೆ ರಾಜ್ಯದಲ್ಲಾಗುವ ಘಟನೆಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ತಮಿಳುನಾಡು ಸರ್ಕಾರದಿಂದ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಆರೋಪ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಡಿ.ವಿ.ಸದಾನಂದಗೌಡ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಸಮಿತಿಯಲ್ಲಿ ಸತ್ಯಪಾಲ್ ಸಿಂಗ್, ಪುರಂದರೇಶ್ವರಿ, ಪಿ.ಸಿ.ಮೋಹನ್‌ಗೆ ಸ್ಥಾನ ನೀಡಲಾಗಿದೆ. ಅದರಂತೆ ಸಮಿತಿಯು ತಮಿಳುನಾಡಿಗೆ ಭೇಟಿ ನೀಡಿ ವರದಿ ತಯಾರಿಸಲಿದೆ.
ಮೈಸೂರು: ಮೈಸೂರಿನ ಶಂಕರಮಠದ ಶಾರದಾಂಬೆ ದೇಗುಲದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನವರಾತ್ರಿ ಪ್ರಸಾದ ವಿತರಣೆ ಮಾಡಿದರು. ಶಾರದಾಂಬೆ ದರ್ಶನಕ್ಕೆ ಬಂದಿದ್ದಾಗ ತಾವೇ ಖುದ್ದು ಕುಳಿತು ಭಕ್ತರಿಗೆ ಪ್ರಸಾದ ಹಂಚಿದರು.
ದಸರಾ ಹಬ್ಬದ ಒಳಗಾಗಿ, ಅಂದರೆ 2 ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವಾಗುವ ನಿರೀಕ್ಷೆಯನ್ನು ರಾಜ್ಯ ಬಿಜೆಪಿ ನಾಯಕರು ನಿರೀಕ್ಷೆಯಲ್ಲಿದ್ದಾರೆ. ಕೆಲ ನಾಯಕರು ಇಂದು ರಾತ್ರಿಯೊಳಗೆ ಘೋಷಣೆ ನಿರೀಕ್ಷೆಯಲ್ಲಿದ್ದು, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಯಲ್ಲಿದೆ. ಬಿಜೆಪಿ ಹೈಕಮಾಂಡ್ ನಾಯಕರು ದೆಹಲಿಯಲ್ಲೇ ಕರ್ನಾಟಕ ಬಿಜೆಪಿ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಈ ಮಧ್ಯೆ ಬುಧವಾರ ಸಂಸದ ಸದಾನಂದಗೌಡ ದೆಹಲಿಗೆ ತೆರಳಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ಹಿನ್ನೆಲೆ ದೆಹಲಿಗೆ ತೆರಳಲಿದ್ದಾರೆ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ನೇಮಕಾತಿ ವಿಳಂಬದ ಬಗ್ಗೆ ಸದಾನಂದಗೌಡರು ಅಸಮಾಧಾನ ಹೊರಹಾಕಿದ್ದರು.
ಚಿತ್ರದುರ್ಗ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಆರೋಪದ ಬಗ್ಗೆ ಮಾತನಾಡಿದ ಸಚಿವ ಬಿ.ನಾಗೇಂದ್ರ, ಈ ಹಿಂದೆ ಸ್ವಾಮೀಜಿ, ಓರ್ವ ಮಹಿಳೆ ಸಿಕ್ಕಿಬಿದ್ದಿದ್ದರು. ಹಗರಿಬೊಮ್ಮನಹಳ್ಳಿಯಲ್ಲೂ ಟಿಕೆಟ್ಗೆ ಹಣ ಪಡೆದ ಆರೋಪವಿದೆ. ಈ ರೀತಿ ಸಂಸ್ಕೃತಿ ಬಿಜೆಪಿಯಲ್ಲಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿಯವರಿಗೆ ದುಡ್ಡು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದರು. ಅಲ್ಪಾವಧಿ ಸರ್ಕಾರ ಎಂದ ಕಾರಜೋಳ, ಈಶ್ವರಪ್ಪ ಭ್ರಮೆಯಲ್ಲಿದ್ದಾರೆ. ಎಲ್ಲಾ ಶಾಸಕರಿಗೂ ಸ್ಪಂದಿಸಲು ಮುಖ್ಯಮಂತ್ರಿ, ಡಿಸಿಎಂ ಹೇಳಿದ್ದಾರೆ. ಅನುದಾನದ ಕೊರತೆ ಇಲ್ಲ, ಹಂತಹಂತವಾಗಿ ಯೋಜನೆಗೆ ಅನುದಾನ ನೀಡಲಾಗುತ್ತಿದೆ ಎಂದರು.
ಬಾಗಲಕೋಟೆಯಲ್ಲಿ ಆರ್ಎಸ್ಎಸ್ ನಗರ ವಾರ್ಷಿಕೋತ್ಸವ ಹಾಗೂ ವಿಜಯದಶಮಿ ಪ್ರಯುಕ್ತ ಬಾಲಕರ ಪಥಸಂಚಲನ ನಡೆಯಿತು. ನಗರದ ವಿದ್ಯಾಗಿರಿಯಲ್ಲಿ ಬಾಲಕರ ಆಕರ್ಷಕ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ನೂರಾರು ಗಣವೇಷಧಾರಿ ಮಕ್ಕಳಿಂದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ಜನರೆಲ್ಲರು ಮನೆ ಮುಂದೆ ರಂಗೋಲಿ ಹಾಕಿ ಹೂ ಮಳೆ ಸುರಿದ ಸ್ವಾಗತಿಸಿದರು. ಶಿವಾಜಿ, ಕಿತ್ತೂರರಾಣಿ ಚನ್ನಮ್ಮ, ಸೇರಿದಂತೆ ಹೋರಾಟಗಾರರ ವೇಷ ಭೂಷಣ ಹಾಕಿದ ಮಕ್ಕಳು ಕೂಡ ಗಮನ ಸೆಳೆದರು.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಎಸಗಿದ ಆರೋಪದ ಕುರಿತು ಮಾತನಾಡಿದ ಸಚಿವ ಡಿ.ಸುಧಾಕರ್, ಭಾರತೀಯ ಜನತಾ ಪಕ್ಷದ ಆಂತರಿಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಲ್ಲ. ಈಗಾಗಲೇ ಕೆಲವರು ಇಂಥದ್ದೇ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ ಎಂದರು. ಸಚಿವರು, ಕಾಂಗ್ರೆಸ್ ಶಾಸಕರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಿಎಂ, ಡಿಸಿಎಂ ಟೀಂ ಇಲ್ಲ, ಇರುವುದು ಒಂದೇ ಅದು ಕಾಂಗ್ರೆಸ್ ಟೀಂ. ಐದು ವರ್ಷ ಪೂರೈಸಿ ಮತ್ತೆ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು. ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಟಾಂಗ್ ನೀಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಾಡಿದ್ದು ನಮ್ಮ ಮೇಲೆ ಹೇಳುತ್ತಿದ್ದಾರೆ. ಕಮಿಷನ್ ಪಡಿಯೋದು, ಕಟ್ ರೂಟ್ ಆಡಳಿತ ಗೊತ್ತಿಲ್ಲ. ರಾಜ್ಯದಲ್ಲಿ ಬರ ಇದೆ, ಡ್ಯಾಂಗಳಲ್ಲಿ ನೀರಿಲ್ಲ, ಕಲ್ಲಿದ್ದಲು ಅಭಾವವಿದೆ. ಕೃತಕವಾಗಿ ವಿದ್ಯುತ್ ಕೊರತೆ ಸೃಷ್ಠಿಸುವ ಪ್ರಶ್ನೆ ಉದ್ಭವಿಸಲ್ಲ ಎಂದರು.
2024 ಲೋಕಸಭಾ ಚುನಾವಣೆ ಹಿನ್ನಲೆ ಆಯೋಜಿಸಲಾಗಿದ್ದ ಹಾಸನ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ವೇದಿಕೆ ಮೇಲೆ ಕಾರ್ಯಕರ್ತರ ವರ್ತನೆಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದ್ದು, ನೀವು ಈ ರೀತಿ ಗಲಾಟೆ ಮಾಡಿದರೆ ನಾನು ಹೊರಟು ಹೋಗುತ್ತೇನೆ. ನನ್ನ 40 ವರ್ಷದಲ್ಲಿ ಈ ರೀತಿ ಸಭೆ ನಾನು ನೋಡಿಲ್ಲ ಎಂದರು. ಮುಖಂಡ ಹೆಚ್ ಕೆ ಮಹೇಶ್ ಅವರಿಹೆ ವೇದಿಕೆ ಮೇಲೆ ಆಸನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಕೆಲವು ಬೆಂಬಲಿಗರು ಗದ್ದಲ ಮಾಡಿದ್ದಾರೆ. ನೀವು ಈ ರೀತಿ ಮಾಡಿದರೆ ಕಷ್ಟ, ಎಲ್ಲವನ್ನ ಸರಿ ಮಾಡೋಣ, ಸಣ್ಣ ಪುಟ್ಟ ವ್ಯತ್ಯಾಸಗಳನ್ನ ಸರಿ ಮಾಡಿಕೊಂಡು ಹೋರಾಡೋಣ ಎಂದು ಹೇಳುವ ಮೂಲಕ ಸಚಿವರು ಕಾರ್ಯಕರ್ತರನ್ನ ಸಮದಾನ ಪಡಿಸಿ ಸಭೆ ಹತೋಟಿಗೆ ತಂದರು. ಹಾಸನ ಹೊರವಲಯದ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಕಾಂಗ್ರೆಸ್ ಸಭೆ ಇದಾಗಿದೆ.
ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆ ಪ್ರಕರಣ ಸಂಬಂಧ ಶಿರೋಳ್ಳಿ ಗ್ರಾಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ಶಿವಕುಮಾರ್ ಸಾವಿಗೂ ಮುನ್ನ ಆಡಿಯೋ ರೆಕಾರ್ಡ್ ಮಾಡಿದ್ದಾರೆ. ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರೇಳಿ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಇದುವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಮಂತ್ರಿಗಳ ಒತ್ತಡಕ್ಕೆ ಒಳಗಾಗಿದ್ದಾರೆ ಎಂದರು. ಶವ ಕೊಡುವಾಗ ತಾಯಿ ಮತ್ತು ಹೆಂಡತಿ ಸಹಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಏನು ಬರೆದಿದ್ದಾರೆ ಅಂತಾ ಅವರ ಕುಟುಂಬಕ್ಕೆ ಗೊತ್ತಿಲ್ಲ. ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ಆಗಲ್ಲ, ಸಿಬಿಐ ತನಿಖೆ ಆಗಲಿ. ರಾಜು, ಜಗದೀಶ್ ಪಾಟೀಲ್ ಬಂಧಿಸಿ ಮಂಪರು ಪರೀಕ್ಷೆ ಮಾಡಿಸಿ. ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಮೊಬೈಲ್ ಸಹ ನಾಪತ್ತೆಯಾಗಿದೆ. ಶರಣಪ್ರಕಾಶ್ ಪಾಟೀಲ್ ಹಿಂಬಾಲಕರು ಸಾಕ್ಷಿನಾಶಕ್ಕೆ ಮುಂದಾಗಿದ್ದಾರೆ ಎಂದರು.
ಇವತ್ತಿನ ದಿನದಲ್ಲಿ ರಾಜಕಾರಣದ ಬಗ್ಗೆ ಮಾತನಾಡದಿರುವುದೇ ಒಳ್ಳೇದು ಎಂದು ಹುಬ್ಬಳ್ಳಿಯಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಇವತ್ತಿನ ದಿನಮಾನದಲ್ಲಿ ರಾಜಕೀಯ ಬಗ್ಗೆ ಕಡಿಮೆ ಮಾತಾಡಿದ್ರೆ ಒಳ್ಳೇದು. ಬರ, ಅತಿವೃಷ್ಟಿ ಇದ್ದಾಗ ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ದಿನೇದಿನೆ ಅವರನ್ನು ಬೈಯ್ಯೋದು, ಇವರನ್ನು ಬೈಯ್ಯೋದೇ ಆಗಿದೆ. ನಾವು ಕಠಿಣ ಸಂದರ್ಭದಲ್ಲಿ ಇದ್ದೇವೆ, ರಾಜಕೀಯ ಕಲುಷಿತವಾಗಿದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಎಲ್ಲರ ಯೋಗಕ್ಷೇಮ ನೋಡಬೇಕು. ಬೆಳಗಾವಿಯಲ್ಲಿ ಅಧಿವೇಶನ ಮಾಡಲು ನಾನು ಪತ್ರ ಬರೆದಿದ್ದೇನೆ ಎಂದರು.
ಹೆಚ್ಡಿ ದೇವೇಗೌಡರಿಗೆ ಇನ್ನೊಮ್ಮೆ ಕೈಮುಗಿದು ಪ್ರಾರ್ಥನೆ ಮಾಡ್ತೀನಿ. ಬಿಜೆಪಿ ಜೊತೆಗಿನ ಮೈತ್ರಿ ವಿಚಾರವನ್ನು ಮರುಪರಿಶೀಲನೆ ಮಾಡಿ ಎಂದು ಬೆಂಗಳೂರಿನಲ್ಲಿ ಮಾಜಿ ಎಂಎಲ್ಸಿ ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ. ಏಕೆಂದರೆ ಜಿಲ್ಲಾಧ್ಯಕ್ಷರು, ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಯಾರನ್ನೂ ನಾನು ಬಹಿರಂಗವಾಗಿ ಕರೆಯುತ್ತಿಲ್ಲ. ಲೋಕಸಭೆ ಚುನಾವಣೆಗೆ ಸಮಯವಿದೆ, ಮಾತಾಡೋಣ ಎಂದಿದ್ದೇನೆ. ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿಶ್ ಶಾಗೆ ಗೌರವ ಕೋಡೋಣ. ಅಕ್ಟೋಬರ್ 26ರಂದು ಮುಂಬೈಗೆ ಹೋಗುತ್ತಿದ್ದೇನೆ. ಬೇರೆ ಪಕ್ಷದ ನಾಯಕರನ್ನ ಭೇಟಿ ಮಾಡ್ತೇನೆ, ಒಂದೇ ಕಡೆ ಕೂರಲ್ಲ. ನಾನು ತ್ರಿಲೋಕ ಸಂಚಾರಿ ಎಂದು ಮಾಜಿ ಎಂಎಲ್ಸಿ ಇಬ್ರಾಹಿಂ ತಿಳಿಸಿದರು.
ಕೋಲಾರ ನಗರದ ಆರ್ಟಿಒ ಕಚೇರಿ ಬಳಿ ಇರುವ ಜಡೆಮುನೇಶ್ವರಸ್ವಾಮಿ ದೇಗುಲದ ಮೂರ್ತಿಗಳನ್ನ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಮೂರ್ತಿಗಳನ್ನ ವಿರೂಪಗೊಳಿಸಿರುವ ಕಿಡಿಗೇಡಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಆರೋಗ್ಯ ವಿಚಾರಿಸಿದ್ದಾರೆ. ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
ದಸರಾದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ವಿಶೇಷ ಗಿಫ್ಟ್ ನೀಡಲು ಮೈಸೂರಿನ ಕಲಾವಿದ ರಾಜೇಶ್ ಅವರು ವಿಶೇಷ ಗಿಫ್ಟ್ ರೆಡಿ ಮಾಡಿದ್ದಾರೆ. ಜಂಬೂಸವಾರಿ ದಿನ ನೀಡಲು ಪಂಚಲೋಹದ 3D ಭಾವಚಿತ್ರ ಸಿದ್ಧಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಪುತ್ರ ರಾಕೇಶ್ ಭಾವಚಿತ್ರ, ಜೊತೆಗೆ ನ್ಯಾಯದೇವತೆಯ ಪಂಚಲೋಹದ ವಿಗ್ರಹ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ತಂದೆ ಕೆಂಪೇಗೌಡರ 3D ಭಾವಚಿತ್ರ ನೀಡಲು ಕಲಾವಿದ ಮುಂದಾಗಿದ್ದಾರೆ.
ನವರಾತ್ರಿ ಹಬ್ಬದ ಪ್ರಯುಕ್ತ ದೆಹಲಿಯಲ್ಲಿ ಟಿವಿ9 ನೆಟ್ವರ್ಕ್ ಫೆಸ್ಟಿವಲ್ ಆಫ್ ಇಂಡಿಯಾ ಆಯೋಜಿಸಲಾಗಿದೆ. ಇಂದು 3ನೇ ದಿನಕ್ಕೆ ಕಾಲಿಟ್ಟಿದ್ದು, ಬೆಳಗ್ಗೆ 10 ಗಂಟೆಗೆ ಆರಂಭವಾಗಿದೆ. ಈಗಾಗಲೇ 2 ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 3ನೇ ದಿನವೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.. ಅಕ್ಟೋಬರ್ 20ರಿಂದ 24ರವರೆಗೆ ಮೇಜರ್ ಧ್ಯಾನ್ ಚಂದ್ ಮೈದಾನದಲ್ಲಿ ಫೆಸ್ಟಿವಲ್ ನಡೆಯಲಿದೆ.. ಒಂದೇ ಸೂರಿನಡಿ ಸ್ವದೇಶಿ, ವಿದೇಶಿ ವಸ್ತುಗಳ ಮಾರಾಟ ಮಾಡಲಾಗ್ತಿದೆ.
ಹೆಚ್ಡಿ ಕುಮಾರಸ್ವಾಮಿ ಅವರು ಟ್ವಿಟ್ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವೆಸ್ಟ್ ಎಂಡ್ ನಲ್ಲಿ ಆಡಳಿತ ನಡೆಸಿಲ್ಲ ಎನ್ನುವ ಗಿಲೀಟು ಗಿರಾಕಿ, ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? 5 ವರ್ಷ ಸರಕಾರ ಕೊಟ್ಟ ಸಿದ್ದಪುರುಷ ಇನ್ನೊಬ್ಬರ ಹೆಸರಿನಲ್ಲಿ ಭಂಗಲೆ ಪಡೆದು ಸಾಸಿವೆ ಕಾಳಷ್ಟೂ ಸಂಕೋಚವಿಲ್ಲದೆ ಅದೇ ಜಾಗದಲ್ಲಿ ಹೆಗ್ಗಣವಾಗಿ ಮೈತ್ರಿ ಸರಕಾರಕ್ಕೆ ಕನ್ನ ಕೊರೆದಿದ್ದನ್ನು ಕನ್ನಡಿಗರು ಮರೆತಿಲ್ಲ.…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 22, 2023
ಚೈತ್ರ ಕುಂದಾಪುರ ಕೋಟಿ ಡೀಲ್ ಕೇಸ್ ಬೆನ್ನಲ್ಲೇ ಮತ್ತೊಂದು ಕೋಟಿ ಡೀಲ್ ಕೇಸ್ ಬಯಲಾಗಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 2.3 ಕೋಟಿ ವಂಚನೆ ಮಾಡಿರುವ ಆರೋಪದಡಿ ಪುತ್ತೂರು ಮೂಲದ ಬಿಜೆಪಿಯಲ್ಲಿದ್ದ ಸ್ಥಳೀಯ ಮುಖಂಡನ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ಟಿಕೆಟ್ ಕೊಡಿಸೋದಾಗಿ ವಂಚನೆ ಮಾಡಿದ್ದಾರೆ. ವಿಜಯಪುರದ ರೇವಣ್ಣ ಸಿದ್ದಪ್ಪ, ಪುತ್ತೂರಿನ ಶೇಖರ್ ಎನ್.ಪಿ ವಿರುದ್ಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಾಳೆ ನಾಡಿನೆಲ್ಲೆಡೆ ಆಯುಧ ಪೂಜೆ. ಹೀಗಾಗಿ ಆಯಧ ಪೂಜೆಯ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಮೈಸೂರಿನ ದೇವರಾಜ ಮಾರುಕಟ್ಟೆ, ಎಂ ಜಿ ರಸ್ತೆಯ ಮಾರುಕಟ್ಟೆ ಸೇರಿದಂತೆ ವಿವಿಧೆಡೆಗಳಲ್ಲಿರುವ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಬೂದು ಕುಂಬಳಕಾಯಿ, ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು ಸೇರಿದಂತೆ ಆಯುಧ ಪೂಜೆಗೆ ಅಗತ್ಯವಾಗಿರುವ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮೇಲೂ ಉಗ್ರರ ಕರಿನೆರಳು? ತುರ್ತಾಗಿ ಭದ್ರತೆ ಹೆಚ್ಚಿಸಿದ ಡಿಜಿ & ಐಜಿಪಿ ಅಲೋಕ್ ಮೋಹನ್. ಈ ಬಾರಿ ಭದ್ರತೆಗೆ 3500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿ ಬಾರಿ ದಸರಾಗೆ 1700-2000 ಪೊಲೀಸರ ನಿಯೋಜಿಸಲಾಗ್ತಿತ್ತು. ತುರ್ತಾಗಿ ಇಂದು ಬೆಳಗ್ಗೆ 9 ಗಂಟೆಗೆ 1568 ಪೊಲೀಸರ ನಿಯೋಜನೆ ಮಾಡಲಾಗಿದೆ. ಜೊತೆಗೆ 40 CAR ತುಕಡಿಗಳು, 30 KSRP ತುಕಡಿಗಳ ನಿಯೋಜನೆ ಮಾಡಲಾಗಿದೆ. ಶ್ರೀರಂಗಪಟ್ಟಣ, KRS ಪೊಲೀಸರಿಗೆ ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಅಧಿಕಾರ ದುರುಪಯೋಗ ಆರೋಪ ಕೇಳಿ ಬಂದಿದ್ದು ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಬೆಂಬಲಿಗರು ಎಸ್ಪಿಗೆ ದೂರು ಸಲ್ಲಿಸಿದ್ದಾರೆ. ವಿಜಯಾನಂದ ಕಾಶಪ್ಪನವರ ವಿರುದ್ಧ ಸೇಡಿನ ರಾಜಕೀಯ ಆರೋಪ ಮಾಡಿದ್ದಾರೆ. ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ಹಾಕಿಸುತ್ತಿದ್ದಾರೆಂದು ಆರೋಪ ಮಾಡಿ ಬಿಜೆಪಿ ಬೆಂಬಲಿಗರು ಎಸ್ಪಿಗೆ ದೂರು ಸಲ್ಲಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದೆ. ಮೃತ ಶಿವಕುಮಾರ್ ಮನೆಗೆ ಇಂದು ಬಿಜೆಪಿ ನಾಯಕರ ನಿಯೋಗ ಆಗಮಿಸಲಿದೆ. ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಲಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ.ಊಮೇಶ್ ಜಾಧವ್, ಕಲಬುರಗಿ, ಬೀದರ್ ಜಿಲ್ಲೆಯ ಬಿಜೆಪಿ ಶಾಸಕರು, ಮಾಜಿ ಶಾಸಕರು ಬೇಟಿ ನೀಡಲಿದ್ದಾರೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2023 ಹಿನ್ನೆಲೆ ಮೈಸೂರು ಜಿಲ್ಲೆಯ ಎಲ್ಲ ಶಾಲೆಗಳಿಗೆ ಒಂದು ದಿನ ರಜೆ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಅಕ್ಟೋಬರ್ 24ರವರೆಗೂ ರಜೆ ಘೋಷಣೆಯಾಗಿತ್ತು. ಆಗ ಅಕ್ಟೋಬರ್ 25ರವರೆಗೆ ರಜೆ ಘೋಷಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜಿಲ್ಲೆಯ ಸರ್ಕಾರಿ ಅನುದಾನಿತ, ಅನುದಾನರಹಿತ ಶಾಲೆಗಳಿಗೆ ವಿಶೇಷ ರಜೆ ಘೋಷಣೆ ಮಾಡಲಾಗಿದೆ.
ಮೈಸೂರು: ರಸ್ತೆಯಲ್ಲಿ ಮಹಿಳೆಯರಿಗೆ, ಯುವತಿಯರಿಗೆ ಚುಡಾಯಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ನ್ಯೂ ಮಹಾರಾಣಿ ಕಾಲೇಜ್ ರಸ್ತೆಯಲ್ಲಿ ಪುಂಡರ ಗ್ಯಾಂಗ್ ಮಹಿಳೆಯರು ಹಾಗೂ ಯುವತಿಯರನ್ನ ಚುಡಾಯಿಸುತ್ತಿತ್ತು. ಈ ಬಗ್ಗೆ ಪೊಲೀಸರು ಪ್ರಶ್ನೆ ಮಾಡಿದ್ದು ಕಿಡಿಗೇಡಿಗಳು ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ಟ್ರಾಫಿಕ್ ನಿಯಂತ್ರಣದಲ್ಲಿ ತೊಡಗಿದ್ದ ಪೊಲೀಸರು ಅವಾಜ್ ಹಾಕಿದ್ದಾರೆ. ಸದ್ಯ ಪುಂಡರನ್ನು ಪೊಲೀಸರು ಜಿಪಿಗೆ ತುಂಬಿ ಠಾಣೆಗೆ ಕರೆದೊಯ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್ ಬಿನ್ನಮಂಗಲದಲ್ಲಿ ನಿನ್ನೆ ರಾತ್ರಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಬೈಕ್ ಸವಾರ ಸುಭಾಷ್ ನಗರದ ಮಧು(32) ಮೃತಪಟ್ಟಿದ್ದು ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಮೂರು ದಿನ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಬೆಂಗಳೂರಿನಿಂದ ರಸ್ತೆ ಮೂಲಕ ಮೈಸೂರಿಗೆ ಆಗಮಿಸಿ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಏರ್ ಶೋ ವೀಕ್ಷಣೆ ಮಾಡಲಿದ್ದಾರೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2023 ಹಿನ್ನೆಲೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನದ ರಿಹರ್ಸಲ್ ನಡೆಯಲಿದೆ. ಸೂರ್ಯಕಿರಣ್ ತಂಡದಿಂದ ವೈಮಾನಿಕ ಪ್ರದರ್ಶನದ ರಿಹರ್ಸಲ್ ನಡೆಯಲಿದ್ದು ಇಂದು ವೀಕ್ಷಣೆಗೆ ಸಾರ್ವಜನಿಕರಿಗೆ ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ಮಧ್ಯಾಹ್ನ 3 ಗಂಟೆಯ ಒಳಗೆ ಬಂದವರಿಗೆ ಮೈದಾನಕ್ಕೆ ಪ್ರವೇಶಕ್ಕೆ ಅವಕಾಶ. ಮೊದಲು ಬಂದವರಿಗೆ ಆದ್ಯತೆ.
Published On - 8:00 am, Sun, 22 October 23