ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ಆಗುತ್ತಿವೆ. ಬಿಜೆಪಿಯ ಬಣ ರಾಜಕೀಯದ ಪರಿಣಾಮ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಮತ್ತು ಪ್ರತಿಪಕ್ಷದ ನಾಯಕ ನೇಮಕ ವಿಳಂಬವಾಗುತ್ತಿದೆ. ಈ ನಡುವೆ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರು ಚರ್ಚೆಯ ಮುಂಚೂಣಿಗೆ ಬಂದಿದೆ. ಪಕ್ಷದ ಹೈಕಮಾಂಡ್ ನಡೆಯ ಬಗ್ಗೆ ಬಹಿ ರಂಗವಾಗಿ ಬೇಸರ, ಅತೃಪ್ತಿ ಹೊರಹಾಕಿದ್ದ ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದಗೌಡ, ಬುಧವಾರ ವರಿಷ್ಠರ ಭೇಟಿಗಾಗಿ ದೆಹಲಿಗೆ ತೆರಳಲಿದ್ದಾರೆ. ಇನ್ನು ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಸಾಕಷ್ಟು ಚರ್ಚೆಯಾಗುತ್ತಿದೆ. ಡಿಕೆ ಶಿವಕುಮಾರ್ ಅವರ ಈ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಮತ್ತೆ ಇವರಿಬ್ಬರ ನಡುವೆ ವಾಗ್ಯುದ್ಧ ಶುರುವಾಗಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
ಲೋಡ್ ಶೆಡ್ಡಿಂಗ್ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಚಿಕ್ಕಮಗಳೂರಿನ ರಾಮನಹಳ್ಳಿ ಬಳಿಯಿರುವ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ಜಗ್ಗೇಶ್ ಮನೆಯಲ್ಲಿ ನಾವು ಯಾವುದೇ ತಪಾಸಣೆ ನಡೆಸಲಿಲ್ಲ. ಪತ್ನಿ ಲಾಕೆಟ್ ಕೊಟ್ಟಿದ್ದಾರೆ ಎಂದು ಬೆಂಗಳೂರಿನಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಹೇಳಿದ್ದಾರೆ. ಜಗ್ಗೇಶ್ ಹೋಗುವಾಗ ಕೊಟ್ಟು ಹೋಗಿದ್ದಾರೆ, ಅವರು ಮನೆಯಲ್ಲಿಲ್ಲ. ತಾಯಿ ಕೊಟ್ಟಿದ್ದು ಪೂಜೆ ಮಾಡಿ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ. ಜಗ್ಗೇಶ್ ಬಳಿ ಇರುವುದು 40 ವರ್ಷದ ಹಳೆಯದಾದ ಪೆಂಡೆಂಟ್. ಹೀಗಾಗಿ ಡಿಎನ್ಎ ನಡೆಸಲು ಡೆಹ್ರಾಡೂನ್ ಲ್ಯಾಬ್ಗೆ ಕಳುಹಿಸಲಾಗುತ್ತೆ. ಹುಲಿಯ ಉಗುರಾಗಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ದೆಹಲಿಯಿಂದ ಹೆಚ್ಎಎಲ್ ಏರ್ಪೋರ್ಟ್ಗೆ ನಾಳೆ ಮಧ್ಯಾಹ್ನ 3.20ಕ್ಕೆ ಬೆಂಗಳೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಐಐಎಂ ಸಂಸ್ಥಾಪನಾ ಉದ್ಘಾಟಿಸಲಿದ್ದು, 6.05ಕ್ಕೆ ಬೆಂಗಳೂರಿನಿಂದ ಚೆನ್ನೈಗೆ ತೆರಳಲಿದ್ದಾರೆ.
ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕುರುಬರಹಳ್ಳಿ ವೆಂಕಟರಾಮರೆಡ್ಡಿ ಅರವಿಂದ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ರಿಂದ ಪ್ರಮಾಣ ವಚನ ಬೋಧನೆ ಮಾಡಿದ್ದಾರೆ. ರಾಜಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ಪದಗ್ರಹಣ ಸಮಾರಂಭ ನಡೆಯಿತು.
ದೆಹಲಿಯಲ್ಲಿ ಕೃಷಿ ಇಲಾಖೆ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದು, ಡಿ.ಕೆ.ಶಿವಕುಮಾರ್ ಯಾವ ಆಯಾಮದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಹಂತದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಬೆಂಗಳೂರು ಜಿಲ್ಲೆಗೆ ಸೇರಿಸುವ ಬಗ್ಗೆ ಪ್ರಸ್ತಾಪ ಬಂದಾಗ ನೋಡೋಣ ಎಂದು ಹೇಳಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಣ ಬರಬೇಕಿದೆ. ಈ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಹಣ ಕೊಡುವುದಕ್ಕೆ ಆಗುತ್ತಿಲ್ಲ. ಅಂದಾಜು 600 ಕೋಟಿ ರೂ ಹಣ ಬರಬೇಕಿದೆ. ಇದು ಮೊನ್ನೆ ದಸರಾ ಹಬ್ಬಕ್ಕೂ ಮುಂಚೆ ಅಂದಾಜು ಮಾಡಲಾಗಿತ್ತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಮ್ಮುಖದಲ್ಲಿ ಚರ್ಚೆ ಆಗಬೇಕು. ಸಂಪುಟದಲ್ಲಿ ಪ್ರಸ್ತಾಪ ಬಂದಾಗ ಈ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ದೆಹಲಿಯಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಬಿಜೆಪಿಯವರುಗೆ ಕೆಲಸವಿಲ್ಲ. ಬಾಯಿ ಚಪಲಕ್ಕೆ ಎನಾದ್ರೂ ಮಾತಾಡುತ್ತಾರೆ. ಸರ್ಕಾರ ಚನ್ನಾಗಿದೆ ಎಂದು ಬೆಳಗಾವಿ ರಾಜಕಾರಣದ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಬರವಿರಲಿ, ಎನೇ ಇರಲಿ ಲಿಂಗಾಯತ ಅಧಿವೇಶನ ನಡೆಯಿತ್ತದೆ. ಬರುವ ಡಿಸೆಂಬರ್ 23 ಮತ್ತು 24 ರಂದು ದಾವಣಗೆರೆಯಲ್ಲಿ ಲಿಂಗಾಯತ ಅಧಿವೇಶ ನಡೆಯಲಿದೆ ಎಂದರು.
ಡಿಕೆ ಶಿವಕುಮಾರ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಡುವೆ ಫೈಟ್ ಇರಬಹುದು ಎಂದು ಬೆಳಗಾವಿಯಲ್ಲಿ ಟಿವಿ9ಗೆ PWD ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅಂತಿಮವಾಗಿ ಎಲ್ಲಿಗೆ ಸೇರಬೇಕು ಅಂತಾ ಜನ ತೀರ್ಮಾನ ಮಾಡಬೇಕು. ನಮ್ಮ ನಿರ್ಧಾರದಿಂದ ಜನರಿಗೆ ತೊಂದರೆ ಆಗಬಾರದು. ಇದಕ್ಕೆ ಸರ್ಕಾರ ಕೂಡ ಒಪ್ಪಬೇಕು ಎಂದು ಹೇಳಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ಕುರಿತು ವರದಿಗೆ ತಮಿಳುನಾಡಿಗೆ ಭೇಟಿ ನೀಡಿ ವರದಿ ನೀಡಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಆದಷ್ಟು ಬೇಗ ವರದಿ ನೀಡುವಂತೆ ರಾಜ್ಯ ಸಂಪುಟ ಸಮಿತಿಗೆ ಸೂಚಿಸಲಾಗಿದೆ.
ಆಡಳಿತದ ದೃಷ್ಟಿಯಿಂದ ರಾಮನಗರ ಜಿಲ್ಲೆ ಇರುವುದೇ ಸೂಕ್ತ. ಸರ್ಕಾರಿ ಕೆಲಸಕ್ಕೆ ಬೆಂಗಳೂರಿಗೆ ಬಂದು ಹೋಗೋದು ದೊಡ್ಡ ಸವಾಲು. ಬೆಂಗಳೂರು ನಗರದಲ್ಲಿ ಒಕ್ಕಲಿಗ ಸಮುದಾಯದವರು ಜಾಸ್ತಿ ಇದ್ದಾರೆ. ಆಡಳಿತದ ಹತೋಟಿ ಕೈತಪ್ಪಿ ಹೋಗುತ್ತೆ ಅಂತಾ ಮನಸ್ಸಿನಲ್ಲಿ ಇರಬಹುದು. ಅದು ರಾಜಕೀಯ ಮಹಾತ್ವಾಕಾಂಕ್ಷೆ ಇರುವ ವ್ಯಕ್ತಿ ಆಡುವ ಮಾತು. ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಏನು ತೊಂದರೆ ಇದೆ ಅಂತಾ ಗೊತ್ತಿಲ್ಲ. ಮುಂದೆ ರಾಮನಗರ ಜಿಲ್ಲೆಯ ಜನರು ಪ್ರತಿಭಟನೆ ಮಾಡಬಹುದು ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಬೆಂಗಳೂರು: ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆ ಕುರಿತ ಡಿಸಿಎಂ ಹೇಳಿಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಏನೇ ಮಾಡಿದರೂ ಮೊದಲು ಬ್ಯುಸಿನೆಸ್ ಇರುತ್ತದೆ, ನಂತರ ಹವ್ಯಾಸ ಇರುತ್ತದೆ. ಫ್ರೀ ಘೋಷಣೆ ಮಾಡಿದ್ದು ಕೊಡಲು ಇವರ ಹತ್ತಿರ ಕಾಸಿಲ್ಲ. ಇನ್ನು ಬ್ರ್ಯಾಂಡ್ ಬೆಂಗಳೂರು ಹೇಗೆ ಮಾಡುತ್ತೀರಾ? ಫೋಟೋ ತೆಗೆದುಕೊಳ್ಳೋದು ಅಷ್ಟೇ ಬ್ಯ್ರಾಂಡ್ ಬೆಂಗಳೂರು ಆಗಿದೆ. ಬೆಂಗಳೂರಿನ ಜನ ನೆಮ್ಮದಿಯಾಗಿ ಇರಲು ಬಿಡಿ. ನಿಮಗೆ ಬಹಳ ಪ್ರೀತಿ ಇದ್ದರೆ ಕನಕಪುರವನ್ನೇ ಒಂದು ಜಿಲ್ಲೆ ಮಾಡಿಬಿಡಿ. ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ಜಗಳದಲ್ಲಿ ಬೆಂಗಳೂರು ಬಡವಾಗಿದೆ. ರಾಮನಗರ ಜಿಲ್ಲೆ ಮಾಡಿದಾಗ ಡಿಕೆ ಶಿವಕುಮಾರ್ ಶಾಸಕರಾಗಿದ್ದರು. ಆಗ ಯಾಕೆ ಪ್ರತಿಭಟನೆ ಮಾಡಲಿಲ್ಲ? ಹೇಗೂ ರಾಮನಗರದಿಂದ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋಗಿದ್ದೀರಾ, ಕನಕಪುರವನ್ನೇ ಜಿಲ್ಲೆ ಮಾಡಿಬಿಡಿ ಎಂದು ಶಾಸಕ ಆರ್ ಅಶೋಕ ಹೇಳಿದರು.
ಮೈಸೂರು: ಇದು ಎಟಿಎಂ ಸರಕಾರ ಎಂಬ ಬಿಜೆಪಿ ಟ್ವೀಟ್ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ? ಕೋಟ್ಯಾಂತರ ರೂಪಾಯಿ ಹಣದಲ್ಲಿ ಆಪರೇಷನ್ ಕಮಲ ಮಾಡಿದವರು ನಮ್ಮ ಬಗ್ಗೆ ಮಾತಾಡುತ್ತಾರೆ ? ರಾಜ್ಯ ಆರ್ಥಿಕವಾಗಿ ದಿವಾಳಿ ಆಗಲು ಬಿಜೆಪಿ ಕಾರಣ. ವಿದ್ಯುತ್ ತೊಂದರೆ ಆಗಿದ್ದರೆ ಅದಕ್ಕೆ ಬಿಜೆಪಿ ಕಾರಣ. ಬಿಜೆಪಿ ಆಡಳಿತ ಅವಧಿಯಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿಲ್ಲ. ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತಾಡಲು ನೈತಿಕತೆ ಇಲ್ಲ. ಬಿಜೆಪಿಯವರು ಸಾಲ ಮಾಡಿ ಅರ್ಥಿಕವಾಗಿ ರಾಜ್ಯ ದಿವಾಳಿ ಮಾಡಿ ಹೋಗಿದ್ದಾರೆ. ಹಣ ಇರದಿದ್ದರು ಕಾಮಗಾರಿ ಟೆಂಡರ್ ಕರೆದು 30 ಸಾವಿರ ಕೋಟಿ ರೂ. ಪೆಂಡೀಗ್ ಬಿಲ್ ಇದೆ. ಇದಕ್ಕೆ ಯಾರು ಹೊಣೆ? ನಮ್ಮ ಐದು ವರ್ಷದ ಆಡಳಿತ ಅರ್ಥಿಕ ಪರಿಸ್ಥಿತಿ, ಬಿಜೆಪಿ ಅವಧಿತ ಅರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸುತ್ತೇನೆ. ಹೈಕಮಾಂಡ್ ಗೆ ದುಡ್ಡು ಕಳಿಸುತ್ತೇವೆ ಎಂಬುದು ಸುಳ್ಳು. ನಾವು ಯಾರಿಗೂ ಒಂದು ಪೈಸೆ ಕೊಟ್ಟಿಲ್ಲ ಎಂದು ಹೇಳಿದರು.
ಮೈಸೂರು: ದಸರಾ ಮಹೋತ್ಸವಕ್ಕೆ ರಿ ಲೂಕ್ ನೀಡಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ದಸರಾ ಉತ್ಸವದ ಥೀಮ್ ಚೇಂಚ್ ಆಗಬೇಕು. ಸ್ತಬ್ಧ ಚಿತ್ರಗಳ ಪ್ರದರ್ಶನದ ಬಗ್ಗೆ ಪ್ರತಿ ಜಿಲ್ಲೆಯಲ್ಲೂ ಸ್ಪರ್ಧೆ ನಡೆಯಬೇಕು. 400 ವರ್ಷಗಳ ಇತಿಹಾಸದ ದಸರಾ ಉತ್ಸವಕ್ಕೆ ನ್ಯೂ ಲೂಕ್ ಕೊಡಬೇಕಿದೆ. ಹೊಸ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಕೊಡಬೇಕಿದೆ. ಮೈಸೂರಿಗೆ ಬರುವ ಅತಿಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ದಸರಾವನ್ನು ಮೈಸೂರಿಗೆ ಮಾತ್ರ ಸೀಮಿತಗೊಳಿಸಬಾರದು. ರಾಜ್ಯಮಟ್ಟದ ಅಧಿಕಾರಿಗಳನ್ನು ದಸರಾ ಉತ್ಸವಕ್ಕೆ ಬಳಸಿಕೊಳ್ಳಬೇಕು. ಮೈಸೂರು ದಸರಾ ಉತ್ಸವ ಯಶಸ್ವಿಗೆ ಎಲ್ಲರೂ ಶ್ರಮಿಸಿದ್ದಾರೆ. ಅಧಿಕಾರ ವರ್ಗ, ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು: ಹೆಬ್ಬಾಳ ಕ್ಷೇತ್ರದಲ್ಲಿ ನಕಲಿ ವೋಟರ್ ಐಡಿ ಪತ್ತೆ ಪ್ರಕರಣವನ್ನು ಸಿಸಿಬಿ ಬದಲಾಗಿ ಸಿಬಿಐ ಅಥವಾ ಎನ್ಐಎ ತನಿಖೆಗೆ ಒಪ್ಪಿಸಬೇಕು. ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿರುವ ಕೆಲಸ ಮಾಡಲಾಗಿದೆ. ಸಚಿವ ಬೈರತಿ ಸುರೇಶ್ ತನ್ನ ಚುನಾವಣಾ ಗೆಲುವಿಗೋಸ್ಕರ ಇದನ್ನು ಮಾಡಿಸಿದ್ದಾರೆ. ಚುನಾವಣಾ ಆಯೋಗಕ್ಕೆ ನಾವು ದೂರು ತೆಗೆದುಕೊಂಡು ಹೋಗುತ್ತೇವೆ. ಸಿಎಂ ಸಿದ್ದರಾಮಯ್ಯ ಈ ವಿಚಾರದಲ್ಲಿ ಗಾಂಭೀರ್ಯತೆಯನ್ನು ತೋರಿಸಬೇಕು. ಪ್ರಕರಣದಲ್ಲಿ ಬೈರತಿ ಸುರೇಶ್ ಕೂಡ ವಿಚಾರಣೆಗೆ ಒಳಪಡಬೇಕು. ಆರೋಪ ಕೇಳಿ ಬಂದಿರುವ ಎಂಎಸ್ಎಲ್ ಟೆಕ್ನೋ ಸಂಸ್ಥೆ ಮುದ್ರಿಸಿರುವ ಆಧಾರ್ ಕಾರ್ಡ್ಗಳನ್ನು ಅಮಾನತು ಮಾಡಬೇಕು ಎಂದು ಶಾಸಕ ಎಸ್. ಸುರೇಶ್ ಕುಮಾರ್ ಆಗ್ರಹಿಸಿದರು.
ಮೈಸೂರು: ಈ ದೇಶಕ್ಕೆ ವಿದ್ಯಾವಂತ, ಬುದ್ಧಿವಂತರು ಇಲ್ಲದಿದ್ದರೂ ಪ್ರಜ್ಞಾವಂತರಿರಬೇಕು. ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದವರು ಪ್ರಜ್ಞಾವಂತರು ಅಂದುಕೊಂಡಿದ್ದೆ. ಕುಮಾರಸ್ವಾಮಿ ಸಾಮಾನ್ಯ ಜ್ಞಾನ ಇಲ್ಲದೆ ಮಾತನಾಡಿದ್ದಾರೆ. ಕುಮಾರಸ್ವಾಮಿ ಅವರ ತಂದೆಯವರನ್ನಾದರೂ ಕೇಳಿ ತಿಳಿದುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು.
ಬಾಗಲಕೋಟೆ: ಮೀಸಲಾತಿ ಬಗ್ಗೆ ಶಾಸಕರೊಬ್ಬರ ವಿವಾದಾತ್ಮಕ ಹೇಳಿಕೆ ವಿಡಿಯೋ ವೈರಲ್ ಆಗಿದೆ. ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಜಮಖಂಡಿ ಬಿಜೆಪಿ ಶಾಸಕ ಜಗದೀಶ್ “ಕುಲಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ. ‘ಕುಲಕುಲವೆಂದು ಬಡಿದಾಡದಿರಿ, ಕುಲದ ನೆಲೆಯನ್ನೇನಾದ್ರೂ ಬಲ್ಲಿರಾ? ಹಾಗೇ ನೋಡಿದರೆ ಕುಲ ಎನ್ನುವುದು ಇಲ್ಲವೇ ಇಲ್ಲ. ಏನಾದರು ಸಿಗುತ್ತೆ ಅಂತ ಮೀಸಲಾತಿ ಸಂಬಂಧ ಬಡಿದಾಟ ನಡೀತಿದೆ. ಮೀಸಲಾತಿ ತೆಗೆಯಿರಿ, ಎಲ್ಲರೂ ಟಾಪ್ ಕ್ಲಾಸ್ನಲ್ಲಿ ಬಂದುಬಿಡುತ್ತೀರಾ” ಎಂದು ಹೇಳಿದ್ದಾರೆ. ಶಾಸಕ ಜಗದೀಶ್ ಹೇಳಿಕೆಯನ್ನು ದಲಿತಪರ ಸಂಘಟನೆ ಖಂಡಿಸಿದೆ. ಸಂಘಟನೆ ಕಾರ್ಯಕರ್ತರು ರಾತ್ರೋರಾತ್ರಿ ಬಿಜೆಪಿ ಶಾಸಕ ಜಗದೀಶ್ ಮನೆಗೆ ಮುತ್ತಿಗೆಗೆ ಯತ್ನಿಸಿದರು. ಜಮಖಂಡಿಯಲ್ಲಿ ಪ್ರತಿಭಟನೆ ನಡೆಸಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ನವದೆಹಲಿ/ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾಗಲಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ, ಡಿವಿ ಸದಾನಂದಗೌಡ ಅವರು ವಿಪಕ್ಷ ನಾಯಕ ಸ್ಥಾನದ ವಿಚಾರವಾಗಿ ಕೆಲ ದಿನಗಳ ಹಿಂದೆ ಬಹಿರಂಗವಾಗಿ ಮಾತನಾಡಿದ್ದರು. ಈ ವಿಚಾರವಾಗಿ ಇಂದು ಜೆ.ಪಿ.ನಡ್ಡಾ ಮಾತುಕತೆ ನಡೆಸುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಡಿಎಂಕೆ ಗಲಾಟೆ ಸಂಬಂಧ ಸದಾನಂದಗೌಡ ನೇತೃತ್ವದಲ್ಲಿ ನಾಲ್ವರ ಸಮಿತಿ ರಚಿಸಲಾಗಿದೆ. ಹೀಗಾಗಿ ಡಿವಿ ಸದಾನಂದಗೌಡ ಶುಕ್ರವಾರದ ಬಳಿಕ ತಮಿಳುನಾಡಿಗೆ ತೆರಳಲಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 2ನೇ ಎಸಿಜೆಎಂ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ವರ್ತೂರ್ ಸಂತೋಷ್ ಹುಲಿ ಉಗುರು ಧರಿಸಿದಕ್ಕೆ ಬಂಧಿಸಲಾಗಿದೆ. ಸದ್ಯ ವರ್ತೂರ್ ಸಂತೋಷ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ದಾವಣಗೆರೆ: ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಬಾಂಬೆ ಬಿಗ್ ಬಜಾರ್ ಬಟ್ಟೆ ಅಂಗಡಿಗೆ ಬೆಂಕಿ ತಗುಲಿದೆ. ಪಕ್ಕದ ವಿದ್ಯುತ್ ಕಂಬದ ಕಿಡಿಯಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬಟ್ಟೆ ಅಂಗಡಿ ಪಕ್ಕದಲ್ಲಿರುವ ಹೋಟೆಲ್ಗೂ ಬೆಂಕಿ ಆವರಿಸಿದೆ. ಸಕಾಲಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸಂತೆಬೆನ್ನೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆ ಪ್ರವಾಸದಲ್ಲಿದ್ದು ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12.30ಕ್ಕೆ ರಾಮಕೃಷ್ಣ ನಗರದ ಲಿಂಗಾಬುದಿ ಕೆರೆಯ ಸಸ್ಯಶಾಸ್ತ್ರೀಯ ತೋಟವನ್ನು ಉದ್ಘಾಟನೆ ಮಾಡಲಿದ್ದಾರೆ. ನಂತರ ತೋಟಗಾರಿಕೆ ಪಿತಾಮಹ ಡಾ.ಎಮ್ .ಹೆಚ್. ಮರೀಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಬಳಿಕ ಕರ್ಜನ್ ಪಾರ್ಕ್‌ನಲ್ಲಿರುವ ಮರೀಗೌಡ ಪ್ರತಿಮೆ
ನಂತರ ವರಸಿದ್ಧಿ ವಿನಾಯಕ ಹೆಲ್ತ್‌ಕೇರ್‌ನ ಆರ್ಯ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಚಾಮರಾಜಪುರಂದಲ್ಲಿರುವ ಆರ್ಯ ಆಸ್ಪತ್ರೆ ಉದ್ಘಟಿಸಲಿದ್ದಾರೆ. ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸಲಿದ್ದಾರೆ.
Published On - 8:21 am, Wed, 25 October 23