ಕರ್ನಾಟಕದ ಹಲವೆಡೆ ಸೋಮವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಮನೆ ಹಾಗೂ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ರಾಜ್ಯದಲ್ಲಿ ಏಕಕಾಲದಲ್ಲಿ 90 ಕಡೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಲಿದೆ. ಮುಂದಿನ ಅವಧಿಗೆ ನೀರು ಹರಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಲಿದೆ. ಸದ್ಯ ಕರ್ನಾಟಕ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿದೆ. ಅಕ್ಟೋಬರ್ ಅಂತ್ಯದವರೆಗೆ ನೀರು ಹರಿಸಲು CWRC ಆದೇಶಿಸಿತ್ತು. ಇನ್ನು ರಾಜ್ಯದಲ್ಲಿ ಈರುಳ್ಳಿ ಬೆಲೆ ಏರಿಕೆ ಆಗಿದೆ. ಆದರೆ ರೈತರು ಮಾತ್ರ ಖುಷಿಯಾಗಿಲ್ಲ. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ಬೆಂಗಳೂರು: ರಮೇಶ್ ಜಾರಕಿಹೊಳಿ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಶ್ಲೀಲ ಪದಗಳನ್ನು ಹೊಂದಿರುವ ಪೋಸ್ಟರ್ ಅಂಟಿಸಿದ್ದಾರೆ.
ಹಾಸನ: ಇಂಡಿಯಾ ಮೈತ್ರಿಕೂಟ ಜತೆ ಸರ್ಕಾರ ಸೇರಿ ರೈತರ ಹಿತ ಬಲಿಕೊಟ್ಟಿದೆ. ತಮಿಳುನಾಡಿನಲ್ಲಿ 40 ಸೀಟ್ ಗೆಲ್ಲಬೇಕೆಂದು ರೈತರ ಹಿತ ಕಡೆಗಣನೆ ಮಾಡಲಾಗಿದೆ. ನಮ್ಮ ಸರ್ಕಾರ ತಮಿಳುನಾಡಿನ ಸರ್ಕಾರದ ಅಧೀನದಲ್ಲಿದೆ. ಕರ್ನಾಟಕದ ಈಗಿನ ಸರ್ಕಾರ ತನ್ನನ್ನು ತಮಿಳುನಾಡಿಗೆ ಅಡ ಇಟ್ಟಿದೆ ಎಂದು ಸರ್ಕಾರದ ವಿರುದ್ಧ ಶಾಸಕ ಹೆಚ್.ಡಿ.ರೇವಣ್ಣ ವಾಗ್ದಾಳಿ ಮಾಡಿದರು.
ಕಾರವಾರ ಅ.30: ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದನ್ನು ಖಂಡಿಸಿ ಮುಸ್ಲಿಂ ಯೂಥ್ ಫೆಡರೇಶನ್ ಭಟ್ಕಳದ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ರದ್ದು ಮಾಡಿದೆ.
ಯಾದಗಿರಿ: ಕೆಇಎ ಪರೀಕ್ಷೆಯಲ್ಲಿ ಅಕ್ರಮ ಸಂಬಂಧ ಮತ್ತೆ 7 ಆರೋಪಿಗಳ ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಪರೀಕ್ಷಾ ಅಕ್ರಮದಲ್ಲಿ ಬಂಧಿತರ ಸಂಖ್ಯೆ 16ಕ್ಕೇರಿದೆ. ಯಾದಗಿರಿಯಲ್ಲಿ ಪೊಲೀಸರು ರವಿವಾರ 9 ಆರೋಪಿಗಳನ್ನು ಬಂಧಿಸಿದ್ದರು.
ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಿ, ಲೈವ್ ಸ್ಟ್ರೀಮ್ ಮಾಡಿ. ಸರ್ಕಾರಿ ವೆಬ್ ಸೈಟ್ ಮೂಲಕ ಸರ್ಕಾರಿ ಕಚೇರಿಗಳ ಕಾರ್ಯ ಕಲಾಪಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಆರ್ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಮನವಿ ಮಾಡಿದ್ದಾರೆ.
ಬಿಜೆಪಿಯವರು ಈ ದೇಶದ ರಾಜಕೀಯ ವ್ಯವಸ್ಥೆ ನಾಶ ಮಾಡ್ತಿದ್ದಾರೆ. ಬಿಜೆಪಿಯವರನ್ನು ಜನರು ಸೋಲಿಸಿ ಮಾಡಿ ಮನೆಗೆ ಕಳುಹಿಸಿದ್ದಾರೆ. ಬಿಜೆಪಿಯವರು ಜವಾಬ್ದಾರಿಯುತ ವಿಪಕ್ಷವಾಗಿ ಕೆಲಸ ಮಾಡಬೇಕು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಆರಂಭವಾಗಿದೆ. ಕರ್ನಾಟಕ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿದೆ. ಅಕ್ಟೋಬರ್ ಅಂತ್ಯದವರೆಗೆ ನೀರು ಹರಿಸಲು CWRC ಆದೇಶಿಸಿತ್ತು. CWRC ಸಭೆಯಲ್ಲಿ ರಾಜ್ಯದಿಂದ ಎಸಿಎಸ್ ರಾಕೇಶ್ ಸಿಂಗ್ ಭಾಗಿ ಆಗಿದ್ದಾರೆ.
ಕಾಂಗ್ರೆಸದ್ ಮನೆಯೊಂದು ನಾಲ್ಕು ಬಾಗಿಲು ಆಗಿದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. ಜನವರಿ, ಫೆಬ್ರುವರಿ ವೇಳೆಗೆ ಏನಾದರೂ ಅಚ್ಚರಿ ಇಲ್ಲ. ಕಾಂಗ್ರೆಸ್ನಲ್ಲಿ ದೊಡ್ಡ ಪ್ರಮಾಣದ ಅಲ್ಲೋಲ ಕಲ್ಲೋಲ ಆಗುತ್ತಿದೆ. 135 ಶಾಸಕರಿದ್ದರೂ ಕಾಂಗ್ರೆಸ್ನ ತಳ ಅಲುಗಾಡುತ್ತಿದೆ ಎಂದು ಹೇಳಿದ್ದಾರೆ.
ವಿದೇಶ ಪ್ರವಾಸಕ್ಕೆ ಹೋದರೆ ತಪ್ಪೇನಿದೆ. ನನಗೆ, ಸತೀಶ್ ಜಾರಕಿಹೊಳಿಗೆ ಸಂಪುಟ ಉಪ ಸಮಿತಿ ಸಭೆ ಇತ್ತು. ಹೀಗಾಗಿ ಪ್ರವಾಸಕ್ಕೆ ಹೋಗಲು ಆಗಿಲ್ಲ ಎಂದು ಬೆಂಗಳೂರಿನಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನವೆಂಬರ್ 9ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಸಭೆ ನಡೆಯಲಿದೆ.
ವಿಧಾನಸೌಧವನ್ನು ವ್ಯಾಪಾರಸೌಧ ಮಾಡಿದ್ದು ಬಿಜೆಪಿಯವರು ಎಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಬಿಜೆಪಿಯವರು ಪ್ರವಚನ ಮಾಡುವುದನ್ನು ನಿಲ್ಲಿಸಲಿ. ಪರೀಕ್ಷಾ ಅಕ್ರಮಗಳನ್ನು ನಾವು ಸಮರ್ಥವಾಗಿ ತಡೆದಿದ್ದೇವೆ. ಬಿಜೆಪಿಯವರ ಬಲಗೈ ಬಂಟರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಿಎಸ್ಐ ಅಕ್ರಮ ನಡೆದಾಗ ಬಿಜೆಪಿಯವರಿಗೆ ಅಧಿಕಾರ ಇತ್ತು. ಆಗ ಯಾಕೆ ಯಾವುದನ್ನೂ ಪತ್ತೆ ಹಚ್ಚಲಿಲ್ಲ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ನಿಗಮ ಮಂಡಳಿ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನಿಗಮ ಮಂಡಳಿ ನೇಮಕದಲ್ಲಿ ಕಾರ್ಯಕರ್ತರನ್ನ ಅವಕಾಶಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸಭೆ ನಡೆಸುತ್ತಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ನೇತೃತ್ವದಲ್ಲಿದಲ್ಲಿ ಸಭೆ ನಡೆಸಲಾಗುತ್ತಿದೆ.
ಚಿಕ್ಕಮಗಳೂರಿನ ಶಂಕರಮಠದಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಶ್ರೀರಾಮಸೇನೆಯ 100ಕ್ಕೂ ಹೆಚ್ಚು ಕಾರ್ಯಕರ್ತರಿಂದ ಮಾಲಾಧಾರಣೆ ಮಾಡಲಾಗಿದೆ. ಇಂದಿನಿಂದ 7 ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದ್ದು, ನವೆಂಬರ್ 5ರಂದು ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.
ಬೆಂಗಳೂರಿನ ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಮನೆ ಮೇಲೆ ಲೋಕಾ ದಾಳಿ ಮಾಡಿದ್ದು, 8 ಲಕ್ಷ ನಗದು, 200 ಗ್ರಾಂ ಚಿನ್ನಾಭರಣ ಪತ್ತೆ ಆಗಿದೆ. ಸತ್ತೇಗಾಲ ಬಳಿ 7 ಎಕರೆ ಫಾರ್ಮ್ಹೌಸ್ ಹೊಂದಿರುವ ಶ್ರೀನಿವಾಸ್, ಟ್ರ್ಯಾಕ್ಟರ್, ಕ್ವಾಲೀಸ್ ಕಾರು ಕೂಡ ಪತ್ತೆ ಆಗಿದೆ.
ಹಾವೇರಿ: RFO ಪರಮೇಶಪ್ಪ ಮೂವರು ಪತ್ನಿಯರ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಹಾವೇರಿಯ ವರದಾನೇಶ್ವರಿ ಪಾರ್ಕ್ ಬಳಿಯ ಎರಡು ಮನೆಗಳು, ಶಿವಾಜಿನಗರದ ಮನೆ, ಕುರುಬಗೊಂಡದ ಮನೆ ಮತ್ತು ಹೆಡಿಗೊಂಡ ಗ್ರಾಮದ ಬಳಿ ಇರುವ ಫಾರ್ಮ್ಹೌಸ್ ಮೇಲೂ ದಾಳಿ ಮಾಡಲಾಗಿದೆ.
ಬೆಳಗಾವಿಯಲ್ಲಿ ಪಂಚಾಯತ್ ರಾಜ್ ಇಲಾಖೆ ಎಇಇ M.S.ಬಿರಾದಾರ ಮನೆ ಮೇಲೆ ಲೋಕಾ ದಾಳಿ ಮಾಡಿದೆ. ವಿಶ್ವೇಶ್ವರಯ್ಯ ನಗರದ ಶ್ರದ್ಧಾ ಅಪಾರ್ಟಮೆಂರ್ಟ್ನಲ್ಲಿ ಇರುವ ನಿವಾಸದ ಮೇಲೆ ದಾಳಿ ಮಾಡಿದ್ದು, ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.
ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದ್ದು, ರಾಜ್ಯದಲ್ಲಿ ಹಲವು ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಏಕಕಾಲದಲ್ಲಿ 90 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Published On - 8:25 am, Mon, 30 October 23