
ಕರ್ನಾಟಕದ ಶಿವಮೊಗ್ಗದಲ್ಲಿ ಈದ್-ಮಿಲಾದ್ ಮೆರವಣೆಗೆ ವೇಳೆ ಉಂಟಾದ ಕಲ್ಲುತೂರಾಟ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಈ ಘಟನೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಹಲವು ನಾಯಕರು ಗುರುವಾರ ಶಿವಮೊಗ್ಗಕ್ಕೆ ತೆರಳಿ ಕಲ್ಲುತೂರಾಟವಾದ ಹಿಂದೂ ಮನೆಗಳಿಗೆ ಭೇಟಿ ನೀಡಿದರು. ಇನ್ನು ಕಾವೇರಿ ಜಲಾಯನ ಪ್ರದೇಶದ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ಸರ್ಕಾರಕ್ಕೆ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ವಾಟಾಳ ನಾಗರಾಜ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮುಂದುವರೆಸಿವೆ. ಇಷ್ಟು ದಿನಗಳಕಾಲ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ದಳದ ಕೆಲ ನಾಯಕರು ಮುನಿಸಿಕೊಂಡಿದ್ದಾರೆ. ಇದೀಗ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ..
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪರ್ವ ಮುಂದುವರೆದಿದ್ದು, 58 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ನಾವೇ ನಿಜವಾದ ಹಿಂದೂ, ಬಿಜೆಪಿಯವರಲ್ಲ ಎಂಬ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ವಿಚಾರ ‘ಕಾಂಗ್ರೆಸ್ನವರು ಔರಂಗಜೇಬ್, ಟಿಪ್ಪು ಸುಲ್ತಾನ್ ಮಾಡಿದ್ದು ಸರಿ ಎಂದು ಒಪ್ಪಿಕೊಂಡಿದ್ದಾರೆ. ಅಸಲಿ ಪುರುಷರು ಯಾರು ಅಂದರೆ ಟಿಪ್ಪು, ಔರಂಗಜೇಬ್ ಅಂತಿದ್ದಾರೆ. ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಬೆಂಕಿ ಹಚ್ಚಿದವರು, ಕುಕ್ಕರ್ ಬ್ಲ್ಯಾಸ್ಟ್ ಮಾಡಿದವರು ಕಾಂಗ್ರೆಸ್ನವರಿಗೆ ಹೀರೋಗಳು ಎಂದು ಕಾಂಗ್ರೆಸ್ ವಿರುದ್ದ ಬೆಂಗಳೂರಿನಲ್ಲಿ ಎಂಎಲ್ಸಿ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಪರ ಪುರುಷನೊಂದಿಗಿರುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಚಿಕ್ಕಮಗಳೂರಿನ ಮಹಿಳೆ ಪತಿಯಿಂದ ಜೀವನಾಂಶ ಕೋರಿದ್ದರು. ಇದೀಗ ಹೈಕೋರ್ಟ್ ಜೀವನಾಂಶ ಕೋರಿದ್ದ ಪತ್ನಿಯ ಅರ್ಜಿ ವಜಾಗೊಳಿಸಿದೆ. ಮೊದಲು 1500 ರೂ. ಜೀವನಾಂಶ ನೀಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿತ್ತು. ಆದರೆ, ಪತ್ನಿ ನೆರೆಮೆನೆಯವನೊಂದಿಗೆ ಪರಾರಿಯಾಗಿದ್ದಳೆಂದು ಪತಿ ವಾದ ಮಾಡಿದ್ದರು. ಪೊಲೀಸರಿಗೆ ದೂರು ನೀಡಿದ್ದರೂ ಪತಿಯೊಂದಿಗೆ ಬರಲೊಪ್ಪದ ಪತ್ನಿ, ನೆರೆಮನೆಯವನೊಂದಿಗೆ ಪತ್ನಿ ವಾಸದ ಸಾಕ್ಷ್ಯ ನೀಡಿ, ಪತಿ ವಿಚ್ಚೇದನ ಪಡೆದಿದ್ದನು.
ಬಳಿಕ ಪತ್ನಿ ಜೀವನಾಂಶ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು. ಇದೀಗ ಪತ್ನಿ ಪರಪುರುಷನೊಂದಿಗೆ ಅನೈತಿಕ ಜೀವನ ನಡೆಸುತ್ತಿದ್ದಾಳೆ. ಇದಕ್ಕೆ ಪೂರಕವಾದ ಸಾಕ್ಷ್ಯವನ್ನು ಪತಿ ಕೋರ್ಟ್ಗೆ ನೀಡಿದ್ದಾನೆ. ಹೀಗಾಗಿ ಆಕೆಗೆ ಪತಿ ಜೀವನಾಂಶ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.
ಚಿತ್ರದುರ್ಗ: ಚಿಕಿತ್ಸೆಗೆ ಬಂದು ಪರಾರಿಯಾಗಿದ್ದ ಕೈದಿ ಮೂರು ಗಂಟೆಯಲ್ಲೇ ಬಂಧಿಸಿದ ಘಟನೆ ನಡೆದಿದೆ.
ಕೈದಿ ಅಶೋಕ್ನನ್ನು ಹೊಟ್ಟೆ ನೋವು, ಬಿಪಿ ಚಿಕಿತ್ಸೆಗೆ ಜಿಲ್ಲಾ ಕಾರಾಗೃಹದಿಂದ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಈ ವೇಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಎಸ್ಕೇಪ್ ಆದ ಕೆಲವೇ ಗಂಟೆಯಲ್ಲೇ ಪೊಲೀಸರು ಅಶೋಕ್ನನ್ನು ಬಂಧಿಸಿದ್ದಾರೆ. ಇನ್ನು ಇತ ಚೆಕ್ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ.
ಹಾಸನ: ಸಿಲಿಂಡರ್ ಸ್ಫೋಟಗೊಂಡು ಮೂರು ಮನೆಗಳು ಹೊತ್ತಿ ಉರಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ಚನ್ನಬಸವಯ್ಯ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಕ್ಕಪಕ್ಕದ ಮನೆಗಳಿಗೂ ಬೆಂಕಿ ವ್ಯಾಪಿಸಿದೆ. ಮೂರು ಮನೆಗಳಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು: ದಸರಾ ಹಬ್ಬವಿರುವ ಕಾರಣ ಕೊಡಗಿನ ಶಾಲೆಗಳಿಗೆ 15 ದಿನ ದಸರಾ ರಜೆ ಘೋಷಣೆ ಮಾಡಲಾಗಿದೆ. ಹೌದು, ಅಕ್ಟೋಬರ್. 10 ರಿಂದ 25 ರವರೆಗೆ ದಸರಾ ರಜೆ ಘೋಷಿಸಲಾಗಿದೆ.
ಬೆಂಗಳೂರು: ಆಟೋ ಚಾಲಕನ ಮೇಲೆ ಇಬ್ಬರು ಕ್ಯಾಬ್ ಡ್ರೈವರ್ ಗಳಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಮಾತನಾಡಿ ‘ಅಕ್ಟೋಬರ್ 1 ಕ್ಕೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ಗಲಾಟೆ ನಡೆದಿತ್ತು. ಅವತ್ತೇ ಆಟೋ ಚಾಲಕ ದೂರು ನೀಡಿದ್ದ.
ಇಬ್ಬರು ಕ್ಯಾಬ್ ಚಾಲಕರು ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ರಸ್ತೆಯಲ್ಲಿ ಜಾಗ ಇದ್ರು ಸುಖ ಸುಮ್ಮನೆ ಆಟೋ ಚಾಲಕನ ಜತೆ ಜಗಳ ಮಾಡಿ ಹಲ್ಲೆ ನಡೆಸಿದ್ದಾರೆ. ಅನಿಲ್ ಮತ್ತು ರಾಹುಲ್ ಇಬ್ಬರು ಕ್ಯಾಬ್ ಚಾಲಕರ ವಿರುದ್ದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ವಿರುದ್ಧ ರೌಡಿಶೀಟ್ ಸಹ ಓಪನ್ ಮಾಡಲಾಗಿದೆ ಎಂದರು.
ವಿಜಯಪುರ: ಕೇಂದ್ರ ಬರ ಅಧ್ಯಯನ ತಂಡ ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದು, ಬಬಲೇಶ್ವರ ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಬರ ಅಧ್ಯಯನ ನಡೆಸಿದೆ. ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಐವರು ಅಧಿಕಾರಿಗಳ ತಂಡದಿಂದ ವೀಕ್ಷಣೆ ಮಾಡಿದ್ದು,
ಈ ವೇಳೆ ಎಸ್ಪಿ ಋಷಿಕೇಶ್ ಸೋನೆವಣೆ, ಜಿ.ಪಂ ಸಿಇಒ ರಾಹುಲ್ ಶಿಂಧೆ ಸಾಥ್ ನೀಡಿದ್ದಾರೆ. ಇನ್ನು ತರಾತುರಿಯಲ್ಲಿ ವೀಕ್ಷಣೆ ಮಾಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಡ್ಯ: ಲಂಚ ಸ್ವೀಕರಿಸುವಾಗ ಅಬಕಾರಿ ಪೇದೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಡ್ಯದ ನಾಗಮಂಗಲದ ಅಬಕಾರಿ ಕಚೇರಿಯಲ್ಲಿ ನಡೆದಿದೆ. ಪೇದೆ ದೇವರಾಜು ಎಂಬಾತ ಸುರೇಶ್ ಎಂಬಾತನಿಂದ 10ಸಾವಿರ ಲಂಚ ಸ್ವೀಕರಿಸುವ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ: ಸಚಿವ ಕೆಎಚ್ ಮುನಿಯಪ್ಪ ಅವರ ತೋಟದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ. ನಾಗರಾಜು (45) ಮೃತ ವ್ಯಕ್ತಿ . ಇತ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ನಿವಾಸಿಯಾಗಿದ್ದು, ವಿಷ ಸೇವಿಸಿ ಸಾವನ್ನಪ್ಪಿದ್ದಾನೆಂದು ಮೃತನ ಪತ್ನಿ ಹೇಳಿದ್ದಾರೆ. ನಾಲ್ಕು ತಿಂಗಳಿನಿಂದ ಸಚಿವ ಕೆ ಎಚ್ ಮುನಿಯಪ್ಪ ತೋಟದಲ್ಲಿ ಕೆಲಸ ಮಾಡುತಿದ್ದ. ಇದೀಗ ಮರಣೋತ್ತರ ಪರೀಕ್ಷೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಮೃತ ಶವ ರವಾನೆ ಮಾಡಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗ್ತಿದೆ ಎಂಬ ಹೇಳಿಕೆ ವಿಚಾರ ‘ ಶಾಮನೂರು ಶಿವಶಂಕರಪ್ಪ ಹೇಳಿದ ಮೇಲೆ ಸರ್ಟಿಫಿಕೇಟ್ ಏಕೆ ಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿಯ ಮಾಜಿ ಸಚಿವ ಆರ್.ಅಶೋಕ್ ಹೇಳಿದರು. ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷರು. ಒಂದು ಕೆಟ್ಟ ಸಂಪ್ರದಾಯವನ್ನು ಕಾಂಗ್ರೆಸ್ನವರು ಮಾಡಿದ್ದಾರೆ. ಜಾತಿ ಆಧಾರದ ಮೇಲೆ ಪೋಸ್ಟ್ ಕೊಟ್ಟಿರುವುದು ಕಾನೂನು ಪ್ರಕಾರ ತಪ್ಪು ಎಂದು ಹೇಳಿದರು.
ಚಿತ್ರದುರ್ಗ: ಬಬ್ಬೂರು ಕೃಷಿ ಕೇಂದ್ರ ನೂರು ವರ್ಷ ಪೂರೈಸಿದ್ದು, 2014ಕ್ಕೆ ಶತಮಾನೋತ್ಸವ ಆಚರಣೆ ಆಗಬೇಕಿತ್ತು. ಸುಧಾಕರ್ ಯಾಕೆ ಆಚರಣೆ ಮಾಡಲಿಲ್ಲವೋ ಗೊತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ. ಈಗ ಬಬ್ಬೂರು ಕೃಷಿ ಕೇಂದ್ರಕ್ಕೆ ಈಗ 107 ವರ್ಷ ಆಗಿದೆ. ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರ ಬೆಳೆದಿದ್ದರೆ, ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಅತಿವೃಷ್ಠಿ, ಅನಾವೃಷ್ಠಿಯಿಂದ ರೈತರಿಗೆ ತೊಂದರೆ ಆಗುತ್ತದೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದರು.
ಬೆಂಗಳೂರು: ಜನವರಿ ನಂತರ ಕಾಂಗ್ರೆಸ್ ಸರ್ಕಾರ ಬಿದ್ದೋಗುತ್ತೆ ಎಂದು ಶಾಸಕ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್ನಲ್ಲಿ ಗ್ಯಾಂಗ್ಗಳಾಗಿವೆ ಹಾಗಾಗಿ ನಿಲ್ಲಲ್ಲ. ಇನ್ನು ಎಸ್.ಟಿ ಸೋಮಶೇಖರ್ ಅವರನ್ನ ಕರೆದು ಮಾತನಾಡುವ ಕೆಲಸ ಮಾಡುತ್ತೇವೆ. ಅವರು ಮುಂಚೆ ಅಲ್ಲಿದ್ದವರಲ್ಲ, ಅವರನ್ನ ಬಿಜೆಪಿಗೆ ನಾನೇ ಕರೆದುಕೊಂಡು ಬಂದಿದ್ದು, ಹಾಗಾಗಿ ಮಾತಾಡಿದ್ದಾರೆ ಎಂದರು.
ತುಮಕೂರು: ಬರ ಅಧ್ಯಯನ ತಂಡಕ್ಕೆ ಭೈರೇನಹಳ್ಳಿ ರೈತರು ಎಳನೀರು ನೀಡಿ ಸ್ವಾಗತಿಸಿದ ಘಟನೆ ನಡೆದಿದೆ. ಶೇಂಗಾ ಬೆಳೆ ವೀಕ್ಷಣೆ ಸಂದರ್ಭದಲ್ಲಿ ರೈತರು ಎಳೆ ನೀರು ನೀಡಿದ್ದಾರೆ. ಕ್ಯಾಮರಾ ಮುಂದೆ ಎಳೆ ನೀರು ಪಡೆಯಲು ಬರ ಅಧ್ಯಯನ ತಂಡ ಹಿಂದೇಟು ಹಾಕಿತ್ತು. ಬಳಿಕ ರೈತರ ಒತ್ತಾಯದ ಮೇರೆಗೆ ಅಧಿಕಾರಿಗಳು ಎಳೆ ನೀರು ಸ್ವೀಕರಿಸಿದ್ದಾರೆ. ಎಳೆ ನೀರು ಕುಡಿದು ಕೈ ಮುಗಿದು ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದರು.
ದಾವಣಗೆರೆ: ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಪೂರ್ವಭಾವಿ ಸಭೆ ನಡೆಯಲಿದೆ. ಈ ಕುರಿತು ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ‘ ಬರುವ ಡಿಸೆಂಬರ್ನಲ್ಲಿ ವೀರಶೈವ ಮಹಾಸಭೆಯ ಮಹಾ ಅಧಿವೇಶನ ದಾವಣಗೆರೆ ನಗರದಲ್ಲಿ ನಡೆಯಲಿದ್ದು, ಇಂದು ಮಹಾಅಧಿವೇಶನದ ಪೂರ್ವಸಿದ್ಧತಾ ಸಭೆ ಮಾಡಲಾಗುತ್ತಿದೆ. ಜೊತೆಗೆ ಸಭೆಯಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಆದ ಅನ್ಯಾಯದ ಬಗ್ಗೆ ಚರ್ಚೆ ಸಾಧ್ಯತೆಯಿದೆ ಎಂದರು.
ಮೈಸೂರು: ಅರಮನೆ ನಗರಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ 2023 ಸಂಭ್ರಮ ಮತ್ತಷ್ಟು ಗರಿಗೆದರಿದೆ.
ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಒಟ್ಟು 11 ಫಿರಂಗಿ ಗಾಡಿಗಳನ್ನು ಬಳಸಿಕೊಂಡು ಕುಶಾಲತೋಪು ಸಿಡಿಸುವ ಪೂರ್ವ ತಾಲೀಮು ನಡೆಸಿದ್ದಾರೆ. ಜೊತೆಗೆ ಅರಮನೆಯ ಆನೆ ಬಾಗಿಲಿನ ಮುಂಭಾಗದಲ್ಲಿ 30 ಮಂದಿ ಸಿಎಆರ್ ಸಿಬ್ಬಂದಿ ಸೇರಿ ಡ್ರೈ ರಿಹರ್ಸಲ್ ನಡೆಸಿದ್ದಾರೆ. ಚಿನ್ನದ ಅಂಬಾರಿ ಹೊತ್ತ ಆನೆಗೆ ಗಣ್ಯರು ಪುಷ್ಟಾರ್ಚನೆ ಮಾಡುತ್ತಿದ್ದಂತೆ ರಾಷ್ಟ್ರಗೀತೆ ಆರಂಭವಾಗಿ ಮುಗಿಯುವುದರೊಳಗೆ 21 ಕುಶಾಲತೋಪು ಸಿಡಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ 6 ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರ ಕುಟುಂಬದವರಿಗೆ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಮೃತರ ಕುಟುಂಬದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿದೆ. ಕವಾಡಿಗರಹಟ್ಟಿ ಬಡಾವಣೆ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ನೀಡುತ್ತೇವೆ. ಕವಾಡಿಗರಹಟ್ಟಿ ನಿವಾಸಿಗಳಿಗೆ 3 ಎಕರೆ ಜಮೀನಿನಲ್ಲಿ ವಸತಿ ವ್ಯವಸ್ಥೆ ನಿರ್ಮಿಸಲಾಗುವುದು. ರಾಜ್ಯ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು.
ಬೆಂಗಳೂರು: ವಿಧಾನ ಪರಿಷತ್ ಪದವೀಧರ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಸಂಸದ ಡಿ.ವಿ. ಸದಾನಂದ ಗೌಡ. ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ಮತ್ತು ಪಕ್ಷದ ಮುಖಂಡರು ಭಾಗಿಯಾಗಿದ್ದಾರೆ. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ, ಆಗ್ನೇಯ ಪದವೀಧರ ಕ್ಷೇತ್ರ ವ್ಯಾಪ್ತಿಯ ಆರು ಜಿಲ್ಲೆಗಳ ಬಿಜೆಪಿ ಜಿಲ್ಲಾಧ್ಯಕ್ಷರು ಭಾಗಿಯಾಗಿದ್ದಾರೆ.
ಬೆಂಗಳೂರು: ರಾಗಿಗುಡ್ಡಕ್ಕೆ ಬಿಜೆಪಿ ನಾಯಕರ ಸತ್ಯಶೋಧನಾ ತಂಡ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಸೂಜಿತರಹ ಕೆಲಸ ಮಾಡಿದರೇ ಬಿಜೆಪಿ ಕತ್ತರಿ ತರಹ ಕೆಲಸ ಮಾಡುತ್ತಿದೆ. ಅವರ ಸತ್ಯಶೋಧಕ ಏನಿದೆ? ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಾವು ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಸೂಜಿ ತರಹ ಹೋಲಿಯುವ ಕೆಲಸ ಮಾಡುತ್ತಿದ್ದೇವೆ. ಅವರು ಕತ್ತಿ ತರಹ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದೇ ಬಿಜೆಪಿಗೂ, ಕಾಂಗ್ರೆಸ್ಗೂ ಇರುವ ವ್ಯತ್ಯಾಸ. ನಮ್ಮ ಜಿಲ್ಲಾಧಿಕಾರಿಗಳು ಎಲ್ಲ ಕ್ರಮವನ್ನು ತೆಗೆದುಕೊಂಡಿದ್ದಾರೆ. ಶಾಂತಿಯನ್ನು ಕಾಪಾಡುವ ಕೆಲಸ ಮಾಡುತ್ತೇವೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು
ಬೆಂಗಳೂರು: ವೈಯಕ್ತಿಕವಾಗಿ ಅವರವರು ಹೇಳಿಕೆ ಕೊಡುತ್ತಿರುತ್ತಾರೆ. ಇದು ವರಿಷ್ಠರ ಮಟ್ಟದಲ್ಲಿ ಆಗಿರುವ ನಿರ್ಣಯ. ಹೀಗಿರುವಾಗ ವೈಯಕ್ತಿಕವಾಗಿ ಯಾರೂ ಹೇಳಿಕೆ ಕೊಡಬಾರದು. ಇಂತಹ ಹೇಳಿಕೆಗಳು ಪಕ್ಷ ವಿರೋಧಿಯಾಗುತ್ತದೆ. ವ್ಯತ್ಯಾಸಗಳು ಇದ್ದರೆ ಸಂಬಂಧಿಸಿದ ನಾಯಕರ ಜೊತೆ ಮಾತಾಡಬಾರದು. ಹಾಗಾಗಬಾರದಿತ್ತು ಹೀಗಾಗಬಾರದಿತ್ತು ಎನ್ನಲು ನಾವು ಪಕ್ಷಕ್ಕಿಂತ ದೊಡ್ಡವರಲ್ಲ. ಪಕ್ಷದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳು ನಿರ್ಣಯ ತೆಗೆದುಕೊಂಡಾಗ ಸಹಕರಿಸುವುದು ನಮ್ಮ ಕರ್ತವ್ಯ ಎಂದು ಬಿಜೆಪಿ-ಜೆಡಿಎಸ್ ಮೈತ್ರಿಗೆ ಶಾಸಕ ಎಸ್.ಟಿ. ಸೋಮಶೇಖರ್ ಅಪಸ್ವರ ಎತ್ತರಿವ ವಿಚಾರವಾಗಿ ಬಿಜೆಪಿ ಶಾಸಕ ಅಶ್ವತ್ ನಾರಾಯಣ ಪ್ರತಿಕ್ರಿಯಿಸಿದರು.
ಬೆಳಗಾವಿ: ಬರ ಅಧ್ಯಯನಕ್ಕೆ ತೆರಳಿದ್ದ ಕೇಂದ್ರ ತಂಡದ ಎದರು ರೈತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ್ದಾಗಿದ್ದಾನೆ. ಸವದತ್ತಿ ತಾಲೂಕಿನ ಇಂಚಲ ಗ್ರಾಮದ ರೈತ ಅಪ್ಪಾಸಾಹೇಬ್ ಲಕ್ಕುಂಡಿ ತನ್ನ ನಲವತ್ತು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಬರದಿಂದ ಸಂಪೂರ್ಣ ನಾಶವಾಗಿದೆ. ಇದರಿಂದ ನೊಂದ ಅಪ್ಪಾಸಾಹೇಬ್ ಕೇಂದ್ರ ಎದರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣವೇ ಪೊಲೀಸರು ವಿಷದ ಬಾಟಲಿ ಕಸಿದುಕೊಂಡಿದ್ದಾರೆ.
ಶಿವಮೊಗ್ಗ: ರಾಗಿಗುಡ್ಡ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಗುಡ್ಡದಲ್ಲಿ 6ನೇ ದಿನವೂ ನಿಷೇಧಾಜ್ಞೆ ಮುಂದುವರೆದಿದೆ. ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು, ಶಾಲೆ, ಕಾಲೇಜ್, ಉದ್ಯೋಗಕ್ಕೆ ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ರಾಗಿಗುಡ್ಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಹೊರಡಲಿದ್ದಾರೆ. ಬಳಿಕ ಚಿತ್ರದುರ್ಗದ ಕಾವಾಡಿಗರ ಹಟ್ಟಿಗೆ ಭೇಟಿ ನೀಡಿ ಸಾಂತ್ವಾನ ಹೇಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2.30 ಕ್ಕೆ ಹಿರಿಯೂರಿನ ತಹಶಿಲ್ದಾರ್ ಕಚೇರಿ ಹಿಂಭಾಗ ಕನಕ ಸಮುದಾಯ ಭವನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಬೆಂಗಳೂರು: ಮೈತ್ರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಅಸಮಾಧಾನ ಶಮನಕ್ಕೆ ದಳಪತಿಗಳು ಕಸರತ್ತು ನಡೆಸಿದ್ದಾರೆ. ಸಿಎಂ ಇಬ್ರಾಹಿಂ ಮನವೊಲಿಕೆಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಮುಂದಾಗಿದ್ದಾರೆ. ದೂರವಾಣಿ ಕರೆ ಮೂಲಕ ಹೆಚ್. ಡಿ. ದೇವೇಗೌಡ ಸಿಎಂ ಇಬ್ರಾಹಿಂ ಜೊತೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.
ಚಿಕ್ಕಮಗಳೂರು: ಶಾಸಕ ಎಸ್ಟಿ ಸೋಮಶೇಖರ್ ಅವರ ಅಸಮಾಧಾನಕ್ಕೆ ಹಲವು ಕಾರಣಗಳಿವೆ. ಇದರ ಬಗ್ಗೆ ಚರ್ಚೆ ಇವಾಗ ಮಾಡುವುದಿಲ್ಲ. ನಿಷ್ಠೆ ಎಂಬುವುದು ಸನ್ನಿವೇಶದ ಅವಶ್ಯಕತೆ ಅಲ್ಲ ಜೀವನದ ಜೀವಾಳವಾಗಿರಬೇಕು. ಸನ್ನಿವೇಶಕ್ಕೆ ತಕ್ಕಂತೆ ನಿಷ್ಠೆ ಬದಲಾಗುವಂತದ್ದು ಕೆಲವರಿಗೆ ಇರುತ್ತೆ. ಎಸ್ಟಿ ಸೋಮಶೇಖರ್ ಅವರ ಬಗ್ಗೆ ಈಗೇನು ಹೇಳಲು ಬಯಸುವುದಿಲ್ಲ. ಸಂದರ್ಭ ಬಂದಾಗ ಹೇಳುತ್ತೇನೆ ಎಂದು ಬಿಜೆಪಿ ಮಾಜಿ ಶಾಸಕ ಸಿ.ಟಿ ರವಿ ಹೇಳಿದರು.
ಗದಗ: ಗದಗ ಜಿಲ್ಲೆಗೆ ಇಂದು ಕೇಂದ್ರ ಬರ ಅಧ್ಯಾಯನ ತಂಡ ಭೇಟಿ ನೀಡಲಿದೆ. ಕೇಂದ್ರ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಹೆಚ್ಚುವರಿ ಸಲಹೆಗಾರ ಡಿ ರಾಜಶೇಖರ ನೇತೃತ್ವದಲ್ಲಿ ಬರ ಅಧ್ಯಾಯನ ನಡೆಯಲಿದೆ. ಜಿಲ್ಲಾಧಿಕಾರಿ ವೈಶಾಲಿ ಎಂಎಲ್ ಅವರು ಬರ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ನಂತರ ಜಿಲ್ಲೆಯ ವಿವಿಧೆಡೆ ತೆರಳಿ ಬರ ಪರಿಸ್ಥಿತಿ ಬಗ್ಗೆ ತಂಡ ಮಾಹಿತಿ ಪಡೆಯಲಿದ್ದಾರೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲಗೇರಿ, ಇಟ್ಟಿಗೇರಿ ಕೆರೆ, ದೊಡ್ಡೂರು, ಸೂರಣಗಿ, ಶಿರಹಟ್ಟಿ ತಾಲೂಕಿನ ಚಿಕ್ಕಸವನೂರು, ಬೆಳ್ಳಟ್ಟಿ, ವಡವಿ, ಛಬ್ಬಿ, ದೇವಿಹಾಳ, ಶೆಟ್ಟಿಕೇರಿ ಮತ್ತು ಗದಗ ತಾಲೂಕಿನ ಮುಳಗುಂದದಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಯಲಿದೆ.
ಕೊಪ್ಪಳ: ಇಂದು ಮಧ್ಯಾಹ್ನ ಕೊಪ್ಪಳ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ಭೇಟಿ ನೀಡಲಿದೆ. ಕೇಂದ್ರ ಕುಡಿಯುವ ನೀರು, ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ್ ನೇತೃತ್ವದಲ್ಲಿ ಬರ ಅಧ್ಯಯನ ನಡೆಯಲಿದೆ. ಕೊಪ್ಪಳ, ಯಲಬುರ್ಗಾ, ಕುಷ್ಟಗಿ ತಾಲೂಕಿನ ಗ್ರಾಮಗಳಿಗೆ ತಂಡ ಭೇಟಿ ನೀಡಲಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023 ಆರಂಭವಾಗಿದೆ. ಇಂದಿನಿಂದ ದಸರಾ ಯುವ ಸಂಭ್ರಮ ಕಾರ್ಯಕ್ರಮ ಪ್ರಾರಂವಾಗಲಿದೆ. ಸಂಜೆ 5 ಗಂಟೆಗೆ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 6 ರಿಂದ ಅಕ್ಟೋಬರ್ 16ರವರೆಗೆ ಯುವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸಚಿವ ಡಾ. ಹೆಚ್ಸಿ ಮಹದೇವಪ್ಪ, ನಟರಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಉದ್ಘಾಟನೆ ಮಾಡಲಿದ್ದಾರೆ. ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು: ನಗರದಲ್ಲಿರುವ ಎಲೆಕ್ಟ್ರಿಕ್ ವಸ್ತುಗಳ ಶೋರೂಂ, ಗೃಹೋಪಯೋಗಿ ವಸ್ತುಗಳ ಶಾಪ್ ಸೇರಿದಂತೆ 100 ಕಡೆಗಳಿಗೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
Published On - 8:02 am, Fri, 6 October 23