ಕರ್ನಾಟಕದಲ್ಲಿ (Karnataka) ಲಿಂಗಾಯತ (Lingayat) ಅಧಿಕಾರಿಗಳಿಗೆ ಕಡೆಗಣಿಸಲಾಗಿದೆ ಎಂಬ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದೆ. ಶಾಮನೂರು ಶಿವಂಕರಪ್ಪ ಅವರ ಹೇಳಿಕೆಯಿಂದ ಕೈ ನಾಯಕರಲ್ಲಿ ಇರಿಸುಮುರಿಸು ಉಂಟಾಗಿದೆ. ಇನ್ನು ರಾಜ್ಯ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ವಿ ಸೋಮಣ್ಣ (V Somanna) ಸ್ವಪಕ್ಷದವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಟಿಕೆಟ್ಗೆ ಪ್ರಮುಖ ಮೂರು ಪಕ್ಷದ ನಾಯಕರು ಕಸರತ್ತು ಆರಂಭಿಸಿದ್ದಾರೆ. ಬೆಂಗಳೂರು ಜಿಲ್ಲೆಯ ಆನೆಕಲ್ ತಾಲೂಕಿನ ಅತ್ತಿಬೆಲೆಯಲ್ಲಿನ ಪಟಾಕಿ ಗೋಡೌನ್ ಅಗ್ನಿ ದುರಂತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಿಐಡಿಗೆ ನೀಡಿದ್ದಾರೆ. ಮಹಿಷ ದಸರಾ ಆಚರಣೆಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಶಿವಮೊಗ್ಗ ಗಲಾಟೆ, ಅಪರಾಧ ಕ್ಷಣ, ಕ್ಷಣದ ಮಾಹಿತಿ ಟಿವಿ9 ಡಿಜಿಟಲ್ನಲ್ಲಿ
ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಜನರು ತತ್ತರಿಸಿದ್ದಾರೆ. ಹೊಸೂರು ರಸ್ತೆಯ ರೂಪೇನಾ ಅಗ್ರಹಾರ, ಹರಳೂರು ಜಂಕ್ಷನ್, ನಾಯಂಡಹಳ್ಳಿ, ಶೇಷಾದ್ರಿಪುರಂ, ರೈಲ್ವೆ ಅಂಡರ್ಪಾಸ್, ವಿಜಯನಗರದ ಧನಂಜಯ ಪ್ಯಾಲೇಸ್ ಬಳಿ, ಬನ್ನೇರುಘಟ್ಟ ರಸ್ತೆ, ನಾಗಾರ್ಜುನ ಜಂಕ್ಷನ್, ಅನಿಲ್ ಕುಂಬ್ಳೆ ವೃತ್ತ, ಕಲ್ಯಾಣನಗರ ಬ್ರಿಡ್ಜ್, ಹೆಸರಘಟ್ಟದಲ್ಲಿ ರಸ್ತೆಗಳು ಜಲಾವೃತವಾಗಿದೆ.
ಬಾಗಲಕೋಟೆ: ನಾಳೆ ಜಮಖಂಡಿ ನಗರದಲ್ಲಿ ಜಮಖಂಡಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಜಮಖಂಡಿ ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಅವರ ನಿವಾಸದ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ಮಾಜಿ ಸಿಎಮ್ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಗೋವಿಂದ ಎಂ ಕಾರಜೋಳ, ಮಾಜಿ ಸಚಿವ ಸುರೇಶ್ ಕುಮಾರ, ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ , ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಇತಿಹಾಸ ಮತ್ತು ವಿಕಾಸ ಎಂಬ ವಿಷಯದ ಮೇಲೆ ಮಾಜಿ ಸಚಿವ ಸುರೇಶ್‌ಕುಮಾರ ಉಪನ್ಯಾಸ ಮಾಡಲಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಬಗ್ಗೆ ಕಾರ್ಯಕರ್ತರನ್ನು ಉದ್ದೇಶಿಸಿ ಬೊಮ್ಮಾಯಿ, ಕಾರಜೋಳ ಭಾಷಣ ಮಾಡಲಿದ್ದಾರೆ. ಈ ಸಮಾವೇಶವು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ವಿವಿಧ ಉದ್ದೇಶಕ್ಕಾಗಿ ಇಸ್ರೇಲ್ಗೆ ತೆರಳಿದ ದಾವಣಗೆರೆ ಜಿಲ್ಲೆಯ ನಿವಾಸಿಗಳಿಗಾಗಿ ಜಿಲ್ಲಾಧಿಕಾರಿಗಳಿಂದ ಸಹಾಯವಾಣಿ ಆರಂಭಿಸಲಾಗಿದೆ. ಸಂಕಷ್ಟದಲ್ಲಿ ಇರುವರು ದಾವಣಗೆರೆ ಜಿಲ್ಲಾಡಳಿತದ ಸಹಾಯವಾಣಿ 63611382915 ಅಥವಾ ರಾಜ್ಯ ಸರ್ಕಾರದ 080-22340676, 22253707 ನಂಬರ್ಗಳಿಗೆ ಸಂಪರ್ಕಿಸಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮನವಿ ಮಾಡಿದ್ದಾರೆ.
ಕೋಲಾರ: ನಗರ ಸೇರಿದಂತೆ ಹಲವೆಡೆ ಮಳೆಯ ಅಬ್ಬರ ಆರಂಭವಾಗಿದೆ. ಕಳೆದ ಅರ್ಧಗಂಟೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಬರಕ್ಕೆ ತುತ್ತಾಗಿರುವ ಕೋಲಾರದಲ್ಲಿ ಮಳೆಯ ಸಿಂಚನವಾದಂತಾಗಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಕೊರೆತೆಯಿಂದ ಬರಕ್ಕೆ ತುತ್ತಾಗಿರುವ ಕೋಲಾರದಲ್ಲಿ ಬೆಳೆಗಳು ಒಣಗುವ ಸ್ಥಿತಿಯಲ್ಲಿದ್ದವು. ಈಗಾಗಲೇ ಜಿಲ್ಲೆಯ ಆರೂ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕಾಗಿ ಸರ್ಕಾರ ಘೋಷಣೆ ಮಾಡಿದೆ.
ಚಿಕ್ಕೋಡಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗದಿರುವುದನ್ನು ಪ್ರಶ್ನಿಸಿದಾಗ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ. ಸಂಪೂರ್ಣ ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ಪೂರೈಸುತ್ತಿದ್ದ ವಿದ್ಯುತ್ ನಿಲ್ಲಿಸಿದೆ. ಎರಡ್ಮೂರು ದಿನಗಳಿಂದ ವಿದ್ಯುತ್ ಪೂರೈಕೆ ನಿಲ್ಲಿಸಿದ್ದು ಎಲ್ಲಿಯವರೆಗೆ ಅಂತೂ ಹೇಳಿಲ್ಲ. ನಾವು ರಾಜ್ಯದಲ್ಲಿ ಏನು ಉತ್ಪಾದನೆ ಮಾಡುತ್ತಿದ್ದೇವೆ ಅದನ್ನ ಮಾತ್ರ ಕೊಡುತ್ತಿದ್ದೇವೆ; ಕೇಂದ್ರ ಸರ್ಕಾರದವರು ವಿದ್ಯುತ್ ಕೊಟ್ಟರೆ ಸರಿ ಆಗುತ್ತದೆ. ಹಲವೆಡೆ ಜಲವಿದ್ಯುತ್ ಘಟಕ ಬಂದ್ ಇದೆ, ಕುಡತಿನಿ, ವಿಜಯಪುರ, ರಾಯಚೂರಲ್ಲಿ ವಿದ್ಯುತ್ ಘಟಕಗಳು ದುರಸ್ತಿಯಲ್ಲಿವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ರಿಪೇರಿ ಇರುತ್ತೆ, ಹೀಗಾಗಿ ಎಲ್ಲೆಡೆ ಸಮಸ್ಯೆ ಇದೆ ಎಂದರು. ಕೇಂದ್ರ ಸರ್ಕಾರದವರು ಏಕಾಏಕಿ ವಿದ್ಯುತ್ ಪೂರೈಕೆ ಏಕೆ ಸ್ಥಗಿತಗೊಳಿಸಿದ್ದಾರೆ ಗೊತ್ತಿಲ್ಲ. ಇದರ ಬಗ್ಗೆ ಏಕೆ ಏನು ಅಂತಾ ಚರ್ಚೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ರಾಜಕಾರಣ ಮಾಡ್ತಿದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಗೊತ್ತಿಲ್ಲ, ಅದರ ಬಗ್ಗೆ ಚರ್ಚೆ ಮಾಡುತ್ತೇವೆ, ರಾಜಕೀಯ ಅನಿಸಿದರೆ ಅದರ ಬಗ್ಗೆ ರಿಯ್ಯಾಕ್ಟ್ ಮಾಡುತ್ತೇವೆ. ಗ್ಯಾರಂಟಿ ಯೋಜನೆಗೂ ವಿದ್ಯುತ್ ಪೂರೈಕೆಗೂ ಸಂಬಂಧ ಇಲ್ಲ ಎಂದರು.
ಸುರಿದ ಭಾರೀ ಮಳೆಗೆ ಬೊಮ್ಮನಹಳ್ಳಿ ಹಾಗೂ ಮಡಿವಾಳ ಮುಖ್ಯ ರಸ್ತೆ ಜಲಾವೃತಗೊಂಡಿದೆ. ವಾಹನ ಸವಾರರು ನೀರು ತುಂಬಿದ ರಸ್ತೆಯಲ್ಲಿ ಸಂಚಾರ ಮಾಡಲು ಪರದಾಟ ನಡೆಸುತ್ತಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಹೆದ್ದಾರಿಯಲ್ಲಿ ನೀರು ತುಂಬಿದ್ದು, ಪ್ರತೀ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಉಂಟಾಗುತ್ತದೆ. ಮಳೆನೀರು ಹರಿದು ಹೋಗಲು ಜಾಗವಿಲ್ಲದೆ ಈ ಅವಾಂತರ ಸೃಷ್ಟಿಯಾಗುತ್ತದೆ.
ಅತ್ತಿಬೆಲೆ ಪಟಾಕಿ ದುರಂತದಲ್ಲಿ 14 ಜನರು ಸಜೀವದಹನ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಲು ಮುಂದಾಗಿದೆ. ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ನಾಳೆ ಮಧ್ಯಾಹ್ನ 1 ಗಂಟೆಗೆ ಸಭೆ ಕರೆದಿದ್ದಾರೆ. ಅಗತ್ಯ ಮಾಹಿತಿಗಳೊಂದಿಗೆ ಸಭೆಗೆ ಹಾಜರಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಮಳೆಯಾಗುತ್ತಿದ್ದು, ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ ಮಲ್ಲಸಂದ್ರ ಸೇರಿದಂತೆ ಹಲವು ಕಡೆ ಭಾರೀ ಮಳೆಯಾಗುತ್ತಿದೆ. ಒಂದು ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
ವಿಪಕ್ಷ ನಾಯಕರ ಆಯ್ಕೆಗೆ ತಾಂತ್ರಿಕ ತೊಂದರೆ ಇರಬಹುದು ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಇಷ್ಟೊಂದು ವಿಳಂಬದ ಹಿಂದೆ ತಾಂತ್ರಿಕ ಕಾರಣಗಳಿರಬಹುದು. ಕಾನೂನು ಪ್ರಕಾರ ಜೆಡಿಎಸ್ನ ಕುಮಾರಸ್ವಾಮಿ ಅವರನ್ನು ನೇಮಕ ಮಾಡಲು ಆಗುವುದಿಲ್ಲ. ಬಿಜೆಪಿಯಲ್ಲಿ ಮಾಜಿ ಸಿಎಂಗಳು, ಹಿರಿಯ ನಾಯಕರು ಇದ್ದಾರೆ ಎಂದರು.
ಬೆಂಗಳೂರಿನಲ್ಲಿ ಸಂಜೆಯಾಗುತ್ತಲೇ ಮಳೆ ಶುರುವಾಗಿದೆ. ಮೆಜೆಸ್ಟಿಕ್, ಮಾರ್ಕೆಟ್, ಮಲ್ಲೇಶ್ವರಂ, ರಿಚ್ ಮಂಡ್ ಸರ್ಕಲ್, ಸದಾಶಿವನಗರ, ಶಾಂತಿನಗರ, ಬಿಟಿಎಂ ಲೇಔಟ್ ಸೇರಿದಂತೆ ನಗರದ ಹಲವೆಡೆ ಮಳೆಯಾಗುತ್ತಿದೆ. ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಶಿವಮೊಗ್ಗ: ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸುತ್ತಿರುವ ಬಗ್ಗೆ ಆಕ್ರೋಶದ ಮಾತುಗಳನ್ನಾಡಿದ ಎಂಪಿ ರೇಣುಕಾಚಾರ್ಯ, ಕೋರ್ ಕಮಿಟಿ ಯಾಕೇ ಬೇಕು? ರಾಜ್ಯ ಬಿಜೆಪಿ ವಿಸರ್ಜನೆ ಮಾಡಿಬಿಡಿ. ಯಡಯೂರಪ್ಪ ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಆಗುತ್ತಾ? ನಿಮ್ಮ ನಿಯಂತ್ರಣದಲ್ಲಿ ಬಿಜೆಪಿ ಬೇಕಾ? ಯಡಿಯೂರಪ್ಪ ಅವರನ್ನು ಮುಗಿಸಿದರಲ್ವ, ಈಗ ನಾಯಕತ್ವ ಎಲ್ಲಿದೆ? ಆತ್ಮಾವಲೋಕನ ಮಾಡಿಕೊಳ್ಳಿ. ರಾಜಕಾರಣದಲ್ಲಿ ಸರ್ವಾಧಿಕಾರಿ ಧೋರಣೆ ಮಾಡಬೇಡಿ. ರಾಜ್ಯಸಭೆ, ವಿಧಾನಪರಿಷತ್ ನೇಮಕ ಆದವರು ಯಾರಿಗೋ ಮಂಡಿಯೂರಿದ್ದಾರೆ. ಹೋರಾಟ ಹಿನ್ನೆಲೆಯಿಂದ ಯಡಿಯೂರಪ್ಪ ಬಂದವರು. ನಾನು ಕೂಡ ಪಾದಯಾತ್ರೆ ಮಾಡಿ ಬಂದವನು. ರಾಜ್ಯದಲ್ಲಿ ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲೆಕಚ್ಚುತ್ತೆ. ಯಡಿಯೂರಪ್ಪ ಒಬ್ಬ ಶಿಲ್ಪಿಯಿದ್ದಂತೆ. ನಾನೊಬ್ಬ ಕಾಡುಗಲ್ಲು ರೀತಿ ಆಗಿದ್ದೆ. ನನ್ನನ್ನು ಪರಿವರ್ತನೆ ಮಾಡಿದವರು ಯಡಿಯೂರಪ್ಪ. ಇಲ್ಲವೆಂದರೆ ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರುತ್ತಿದ್ದೆ ಎಂದರು.
ಸ್ವಪಕ್ಷೀಯ ನಾಯಕರ ವಿರುದ್ಧವೇ ಸೋಮಣ್ಣ ಅಸಮಾಧಾನ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಎನ್ ಮುನಿರತ್ನ, ವಿ.ಸೋಮಣ್ಣಗೆ ಅನ್ಯಾಯ ಆಗಿದೆ ನಿಜ, ಒಳ್ಳೆಯ ಹೆಸರು ಇರುವ ವ್ಯಕ್ತಿ. ಸೋಮಣ್ಣಗೆ ಎರಡು ಕ್ಷೇತ್ರದ ಬದಲು ಒಂದು ಕ್ಷೇತ್ರ ಕೊಡಬಹುದಿತ್ತು. ಸೋಮಣ್ಣಗೆ ಪಕ್ಷ ಸೂಕ್ತ ಸ್ಥಾನಮಾನ ಕೊಡುತ್ತದೆ ಎನ್ನುವ ವಿಶ್ವಾಸ ಇದೆ ಎಂದರು. ಬಿಜೆಪಿ, ಜೆಡಿಎಸ್ ಮೈತ್ರಿಗೆ ಎಸ್ಟಿ ಸೋಮಶೇಖರ್ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಯಾರೂ ಮಾತಾಡಿಲ್ಲ.ಯಡಿಯೂರಪ್ಪ ಬದಲಾವಣೆ ಬಗ್ಗೆ ಕೇಳದವರು ಇಂದು ಮೈತ್ರಿ ಬಗ್ಗೆ ಏಕೆ ಕೇಳುತ್ತಾರೆ? ಹೈಕಮಾಂಡ್ ನಮ್ಮ ಮಾತು ಕೇಳಬೇಕಿತ್ತು ಎಂದು ಹೇಳಬಹುದಿತ್ತಲ್ಲಾ? ಈಗ ಮೈತ್ರಿ ಬಗ್ಗೆ ಹೈಕಮಾಂಡ್ ಕೇಳಬೇಕಿತ್ತು ಎಂದು ಯಾಕೆ ಹೇಳುತ್ತೀರಿ ಎಂದು ಪ್ರಶ್ನಿಸಿದರು. ಅಲ್ಲದೆ, ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನು ಹೈಕಮಾಂಡ್ ಮಾಡಿದೆ ಎಂದರು. ಕಾಂಗ್ರೆಸ್ನಲ್ಲಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನಲ್ಲಿ ನೆಂಟರು ಜಾಸ್ತಿ, ಅಕ್ಕಿ ಕಡಿಮೆ ಆಗಿದೆ. ಐದು ಕೆಜಿ ಅಕ್ಕಿಯಾದರೂ ಸಿಗುತ್ತಾ ಅಂತ ಲೆಟರ್ ಹೆಡ್ ಹಿಡಿದು ನಿಂತಿದ್ದಾರೆ. ಸಿಕ್ಕಿಲ್ಲ ಅಂದರೆ ಪಕ್ಕದ ಮನೆಯಲ್ಲಿ ಸಿಗುತ್ತಾ ಅಂತ ಕಾಯುತ್ತಿದ್ದಾರೆ. ಅಲ್ಲಿ ಅಕ್ಕಿ ಇಲ್ಲದ್ದು ಗೊತ್ತಾಗಿದೆ ಎಂದರು.
1960ರಿಂದ 2013ರವರೆಗೂ ಪಠ್ಯ ಪರಿಷ್ಕರಣೆ ಸಮಿತಿಯಲ್ಲಿ ಒಬ್ಬರೂ ರಾಜಕಾರಣಿ ಇರಲಿಲ್ಲ. ಸಿದ್ದರಾಮಯ್ಯ ಸಿಎಂ ಆದಮೇಲೆ ರಾಜಕಾರಣಿಗಳು ಪ್ರವೇಶಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಬಿ.ಸಿ.ನಾಗೇಶ್ ಆಕ್ರೋಶ ಹೊರಹಾಕಿದ್ದಾರೆ. ಬರಗೂರು ರಾಮಚಂದ್ರಪ್ಪ ಕಾಂಗ್ರೆಸ್ನಲ್ಲಿ ಎಂಎಲ್‌ಸಿ ಆಗಿದ್ದವರು. ಪಠ್ಯ ಪುಸ್ತಕ ರಚನಾ ಸಮಿತಿಗೆ ಬರಗೂರು ರಾಮಚಂದ್ರ ಅಧ್ಯಕ್ಷರಾದರು. ಆಗಿನಿಂದ ಪಠ್ಯದಲ್ಲಿ ರಾಜಕಾರಣ ನುಸುಳಿತು ಎಂದರು.
ಕಿರುತೆರೆ ರಿಯಾಲಿಟಿ ಶೋ ಬಿಗ್ಬಾಸ್ಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭಾಗಿಯಾಗಿರುವ ಹಿನ್ನೆಲೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರಿಗೆ ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ಲಿಖಿತ ದೂರು ನೀಡಿದೆ. ಶಾಸಕ ಸ್ಥಾನದಿಂದ ಪ್ರದೀಪ್ ಈಶ್ವರ್ ವಜಾಗೊಳಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಶಾಲೆಗಳ ಅವಧಿ ಬದಲಾವಣೆ ಕುರಿತು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಸಭೆ ಕರೆದಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಪೋಷಕರ ಒಕ್ಕೂಟ, ಪೊಲೀಸ್ ಅಧಿಕಾರಿಗಳು, ಸಾರಿಗೆ ಅಧಿಕಾರಿಗಳು, ಖಾಸಗಿ ಶಾಲಾ ವಾಹನಗಳ ಮಾಲೀಕರ ಸಂಘಟನೆ, ತಜ್ಞರ ನೇತೃತ್ವದಲ್ಲಿ ಇಂದು ಮಧ್ಯಾಹ್ನ 3.30ಕ್ಕೆ ಸಭೆ ನಡೆಯಲಿದೆ.
ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ವಿಚಾರವಾಗಿ ಮಾತನಾಡಿದ JDS ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ದೇವೇಗೌಡರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧ ಎಂದರು. ಟಿವಿ9 ಜೊತೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ರಾಜಕಾರಣ ನಿಂತ ನೀರಲ್ಲ, ಹೀಗಾಗಿ ವರಿಷ್ಠರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು. ಜಾತ್ಯತೀತ ಸಿದ್ದಾಂತಗಳನ್ನ ಇಟ್ಟುಕೊಂಡಿ ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಇದರಿಂದ ಯಾವುದೇ ಮುಸ್ಲಿಂ ಕಾರ್ಯಕರ್ತರು ಮುಖಂಡರು ಜೆಡಿಎಸ್ ನಿಂದ ದೂರ ಹೋಗಲ್ಲ. ಮುಸ್ಲಿಂ ಸಮುದಾಯದ ಕೆಲ ಜೆಡಿಎಸ್ ನಾಯಕರಿಗೆ ಅಸಮಾಧಾನವಾಗಿರಹುದು. ಅದು ಸರಿಯಾಗುತ್ತದೆ. ಮೈತ್ರಿಯ ಬಗ್ಗೆ ಕಾಂಗ್ರೆಸ್ ಗೆ ಮಾತನಾಡಲು ಯಾವ ನೈತಿಕತೆ ಇದೆ. ಕಾಂಗ್ರೆಸ್ ನವರಿಗೆ ಜಾತ್ಯತೀತ ಅಂದರೆ ಗೊತ್ತಿದೆಯೇ? ಶಿವಸೇನೆ ಜೊತೆ ಕಾಂಗ್ರೆಸ್ ಕೈಜೋಡಿಸಿಲ್ಲವೇ ಅದು ಜಾತ್ಯತೀತನಾ? ಮುಸ್ಲಿಂ ಜೆಡಿಎಸ್ ನಾಯಕರಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆ ಜೈಲಿಗೆ ಹೋಗುತ್ತಾರೆ ಎಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಂಸದ ಡಿಕೆ ಸುರೇಶ್, ಡಿಕೆಶಿನಾ ಜೈಲಿಗೆ ಕಳುಹಿಸಿ ಅಂತಾ ಇವರೇ ಮನವಿ ಮಾಡಿರಬೇಕು. ಬಹುಶಃ ಅಮಿತ್ ಶಾಗೆ ಹೆಚ್ಡಿಕೆ ಮನವಿ ಮಾಡಿ ಬಂದಿರಬೇಕು. ಕುಮಾರಸ್ವಾಮಿ ಗೊಡ್ಡು ಬೆದರಿಕೆಗೆ ಹೆದರುವ ಜಾಯಮಾನ ನಮ್ಮದಲ್ಲ. ಇವರು ದಾಖಲೆಗಳನ್ನು ಬಿಚ್ಚಿಡುವ ಸಮಯ ಬಂದರೆ ನಾವೂ ಸಿದ್ಧ. ಇವರ ಕನಸು ನನಸಾಗುವುದಿಲ್ಲ, ಕನಸು ಕನಸಾಗಿಯೇ ಉಳಿಯುತ್ತೆ. JDS ನಾಯಕರು ಎಲ್ಲೋ ಒಂದು ಕಡೆ ಮಾನಸಿಕವಾಗಿ ಕುಗ್ಗಿದ್ದಾರೆ. ಅವರ ಆಲೋಚನೆಗಳೆಲ್ಲ ಒಂದು ಕಡೆ ಕೇಂದ್ರಿಕೃತ ಆದಂತೆ ಕಾಣುತ್ತಿದೆ. ಕಾರ್ಯಕರ್ತರು ಇವರ ನಡೆನುಡಿ ನೋಡಿ ತಮ್ಮ ದಾರಿ ನೋಡಿಕೊಳ್ಳುತ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಹೇಳುವುದು ಸುಳ್ಳಿನ ಮಹಾ ಭಾಗ ಎಂದರು.
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸದ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರಕ್ಕೆ ಮೂಲಭೂತ ಸೌಕರ್ಯ ಕೊರತೆ ಇರುವುದು ತಿಳಿದಿಲ್ಲವೇ ? ಮೂಲಭೂತ ಸೌಕರ್ಯ ಒದಗಿಸಲೂ 5 ವರ್ಷಗಳ ಯೋಜನೆ ಬೇಕೆ ? 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ. 32 ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಡ ಮಕ್ಕಳಿಗೆ ಶಿಕ್ಷಣ ಪಡೆಯುವ ಅಧಿಕಾರವಿಲ್ಲವೇ ? ಶ್ರೀಮಂತರ ಮಕ್ಕಳು ಮಾತ್ರ ಶಿಕ್ಷಣ ಪಡೆಯಬೇಕೇ ? ಮೂಲಭೂತ ಸೌಕರ್ಯ ಕೊರತೆಯಿಂದ ಸರ್ಕಾರಿ ಶಾಲೆ ಮುಚ್ಚುತ್ತಿವೆ. ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಾಗಿದೆ. ಸರ್ಕಾರಿ ಶಾಲೆಗಳ ಬದಲು ಖಾಸಗಿ ಶಾಲೆ ಪ್ರೋತ್ಸಾಹಿಸುತ್ತಿದ್ದೀರಾ? ಹಣವಿಲ್ಲದ ಬಡ ಜನರು ಮಕ್ಕಳಿಗೆ ಶಿಕ್ಷಣ ನೀಡುವುದು ಹೇಗೆ? ಎಂದು ತರಾಟೆಗೆ ತೆಗೆದುಕೊಂಡಿದೆ.
ಲೋಕೋಪಯೋಗಿ ಇಲಾಖೆಯಲ್ಲಿ 500 ಕೋಟಿ ರೂ. ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹಗರಣದ ತನಿಖೆ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ. ಲೋಕೋಪಯೋಗಿ ಇಲಾಖೆ ಗುಣ ಭರವಸೆ ವಲಯ ಬೆಂಗಳೂರ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ತನಿಖೆಗೆ ನಡೆಯಲಿದೆ.
ಬೆಂಗಳೂರು: ಬಿಜೆಪಿಗೆ ಬಂದು ಸೋತೆ ಎಂಬ ಮಾಜಿ ಸಚಿವ ವಿ. ಸೋಮಣ್ಣ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಕಾಲ ಇರುತ್ತದೆ. ವಾಜಪೇಯಿ, ಇಂದಿರಾಗಾಂಧಿ, ಯಡಿಯೂರಪ್ಪನವರೂ ಕೂಡಾ ಸೋತಿದ್ದರು. ಪ್ರತಿಯೊಬ್ಬರಿಗೂ ಒಂದು ಬಾರಿ ಸೋಲು, ಒಂದು ಬಾರಿ ಗೆಲುವಾಗಬಹುದು. ಬಿಜೆಪಿಗೆ ಬಂದಿದ್ದರಿಂದ ಸೋತೆ ಅಂತ ಸೋಮಣ್ಣ ಹೇಳಿರುವುದು ಅವರ ವೈಯಕ್ತಿಕ. ಇದನ್ನು ಪ್ರಮುಖರ ಜೊತೆ ಕುಳಿತು ಹಿರಿಯರು ಬಗೆಹರಿಸುತ್ತಾರೆ. ದಯನೀಯ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಬಗ್ಗೆ ಸೋಮಣ್ಣ ಹೇಳಿದ್ದಾರೆ. ಸೋಮಣ್ಣ ಸೋತಿರುವ ಬೇಸರದಲ್ಲಿ ಹೇಳಿರಬಹುದು. ಸೋಮಣ್ಣ ಅವರಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದರು.
ಮಂಡ್ಯ: ಕಾವೇರಿ ನೀರಿನ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯೆಪ್ರವೇಶ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿರುವ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ ಕಾವೇರಿ ವಿಚಾರವಾಗಿ ಪ್ರತ್ಯೇಕವಾದ ಎರಡು ಬೋರ್ಡ್ ಇದೆ. ಇದರಲ್ಲಿ ಸುಪ್ರಿಂ ಕೋರ್ಟ್ ಸಹ ಮಧ್ಯಪ್ರವೇಶ ಮಾಡಲು ಆಗುವುದಿಲ್ಲ. ಅಧಿಕಾರಿಗಳು ಏನು ನಿರ್ಣಯ ಮಾಡುತ್ತಾರೆ ಅದೇ ಅಂತಿಮ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಂತಹದರಲ್ಲಿ ಯಾರು ಮಧ್ಯ ಪ್ರವೇಶಿಸಬೇಕು. ತಮಿಳುನಾಡು, ಕರ್ನಾಟಕ ನಿರ್ಧಾರ ಮಾಡುವುದು ಅಲ್ಲ ಎಂದು ಹೇಳಿದರು.
ಬೆಂಗಳೂರು: ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರದ್ದು ಉತ್ತರನ ಪೌರುಷ. ಸೋನಿಯಾ ನಮ್ಮ ತಾಯಿ, ಪ್ರಿಯಾಂಕಾ ನನ್ನ ಸಹೋದರಿ ಎಂದರು. ಒಂದು ಬಾರಿ ಅಧಿಕಾರ ಕೊಡಿ ಎಂದಿದ್ದರು. ಆದರೆ ನೀವು ಸಿಎಂ ಆದ್ರಾ?ಎರಡೂವರೆ ವರ್ಷದ ಬಳಿಕ ಸಿಎಂ ಅಂತಾ ಹೇಳುವ ತಾಕತ್ತು ಇಲ್ವಾ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇರುವ ಎದೆಗಾರಿಕೆ ನಿಮಗೆ ಇಲ್ವಲ್ಲಾ. ಉತ್ತರನ ಪೌರುಷ ನಿಮ್ಮದು ಅಂತ ಜನ ಮಾತನಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಯಾರು ತೆಗೆದರು ಅಂತ ಕುಮಾರಸ್ವಾಮಿಗೆ ಗೊತ್ತಿದೆ. ಈಗ ರಾಜ್ಯದ ಜನರಿಗೆ ಸತ್ಯ ಹೇಳಬೇಕು ಎಂದು ಡಿಕೆ ಶಿವಕುಮಾರ್ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ಮಾಡಿದರು.
ಚಿಕ್ಕಬಳ್ಳಾಫುರ: ಸಿದ್ದರಾಮಯ್ಯ ಸರ್ಕಾರ ಜನ ವಿರೋಧಿಯಾಗಿದೆ. ಕೇವಲ 5 ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ಜನ ವಿರೋಧಿಯಾಗಿದೆ. ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅಧಿಕಾರದ ದರ್ಪದಲ್ಲಿ ಮೆರೆಯುತ್ತಿದ್ದಾರೆ ಎಂದು ಸಿಎಂ ವಿರುದ್ಧ ಮಾಜಿ ಸಚಿವ ಸುಧಾಕರ್ ವಾಗ್ದಾಳಿ ಮಾಡಿದರು.
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ರಾಜ್ಯದಲ್ಲಿ ರೈತರ ಬದುಕಿಗೆ ಗ್ಯಾರಂಟಿ ಇಲ್ಲ. ಕೆಲವು ಗ್ಯಾರಂಟಿಗಳ ಮೂಲಕ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಈಗಾಗಲೇ ಪಂಜಾಬ್ ರಾಜ್ಯ ದಿವಾಳಿ ಆಗಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರದ ಮದದಲ್ಲಿ ನಿದ್ದೆಗೆ ಹೋಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಡುತ್ತಾರೆ. ರಾಜ್ಯ ಸರ್ಕಾರ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಶ್ರಮದ ಹಣವನ್ನು ಸೋಮಾರಿಗಳಿಗೆ ನೀಡುತ್ತಿದೆ. ಉಚಿತ ಗ್ಯಾರಂಟಿಗಳ ಮೂಲಕ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ಮಾಡಿದರು.
ಬೆಂಗಳೂರು: ಅತ್ತಿಬೆಲೆ ಪಟಾಕಿ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ನಡೆದ ಗೋದಾಮನ್ನು
ಅಗ್ನಿಶಾಮಕ ದಳ ಸಿಬ್ಬಂದಿ ಐದಾರು ಜೆಸಿಬಿಗಳ ಮೂಲಕ ಸಂಪೂರ್ಣ ನೆಲಸಮ ಮಾಡಿದ್ದಾರೆ.
ರಾಮನಗರ: ಡಿ.ಕೆ.ಶಿವಕುಮಾರ್ ಅವರಿಂದಲೇ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿದ್ದು ಎಂದು ರಾಮನಗರ ಜಿಲ್ಲಾ ಮುಖಂಡರ ಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಪತನವಾಗು ಗ್ಯಾರಂಟಿ, ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗೋದು ಖಚಿತ. ನಮ್ಮ ಹಾಸನಕ್ಕೆ ಕಳಿಸಬಹುದು, ಅವರು ತಿಹಾರ್ಗೆ ಓಡುವ ಕಾಲ ಹತ್ತಿರವಿದೆ. ಡಿ.ಕೆ.ಶಿವಕುಮಾರ್ ಒಮ್ಮೆ ತಿಹಾರ್ ಜೈಲು ನೋಡಿಕೊಂಡು ಬಂದಿದ್ದಾರೆ. ಅವರು ಶಾಶ್ವತವಾಗಿ ತಿಹಾರ್ಗೆ ಹೋದರೂ ಅಚ್ಚರಿ ಅಲ್ಲ. ನನ್ನ ಕೈಯನ್ನು ಮೇಲೆ ಎತ್ತಿ ಜೋಡೆತ್ತು ಎಂದಿದ್ದನ್ನು ಕೇಳಿ ಮೋಸ ಹೋದೆ. ನನ್ನನ್ನು ನಡುರಸ್ತೆಯಲ್ಲಿ ಕೈಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು ಎಂದು ಹೇಳಿದರು.
ಗದಗ: ನಗರದಲ್ಲಿ ಇಂದು ಎರಡು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ನಡೆಯಲಿದೆ. ಕಾನ್ ತೋಟದಲ್ಲಿ ಶ್ರೀರಾಮಸೇನೆ ಪ್ರತಿಷ್ಠಾಪಿಸಿರುವ, ವೀರೇಶ್ವರ ಗ್ರಂಥಾಲಯದ ಬಳಿ ವಿಹೆಚ್ಪಿ ಸಂಘಟನೆ ಪ್ರತಿಷ್ಠಾಪನೆ ಮಾಡಿರುವ ಎರಡು ಗಣಪತಿಗಳ ವಿಸರ್ಜನೆ ಇಂದು ನಡೆಯುತ್ತದೆ. ಮೆರವಣಿಗೆ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಈ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. 3 ಜನ ಡಿಎಸ್ಪಿ, 10 ಜನ ಸಿಪಿಐ, ಪಿಎಸ್ಐ, ಎಎಸ್ಐ ಹಾಗೂ 4 ಜನ ಕೆಎಸ್ಆರ್ಪಿ, 8 ಜನ ಡಿಆರ್ ತುಕಡಿ ಸೇರಿದಂತೆ 500 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ದೆಹಲಿಯಲ್ಲಿ ಇಂದು ಎಐಸಿಸಿ ಕಾರ್ಯಕಾರಿ ಸಭೆ ನಡೆಯಲಿದ್ದು, ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಸಿಎಂ ದೆಹಲಿಗೆ ತೆರಳಿರುವ ಹಿನ್ನೆಲೆ ಇಂದು ನಿಗದಿಯಾಗಿದ್ದ ಜನತಾ ದರ್ಶನ ಮುಂದೂಡಲಾಗಿದೆ.
ಮೈಸೂರು: ಪರ ವಿರೋಧದ ನಡುವೆಯೂ ಅ.13ಕ್ಕೆ ಮಹಿಷ ದಸರಾ ಆಚರಣೆಗೆ ತಯಾರಿ ನಡೆಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜೋರಾಗಿ ಪ್ರಚಾರ ಮಾಡಲಾಗುತ್ತಿದೆ. ಸಮಾಜಿ ಜಾಲತಾಣಗಳ ಮೂಲಕ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಮಹಿಷನ ಹೊಸ ಲುಕ್ ಜೊತೆ ಆಹ್ವಾನ ನೀಡಿರುವ ಪೋಸ್ಟರ್ ವೈರಲ್ ಆಗಿದೆ. ಅ.13 ರ ಮಹಿಷ ದಸರಾ ಕಾರ್ಯಕ್ರಮಕ್ಕೆ ಭೀಮ ಸ್ವಾಗತ ಅಂತ ಇರುವ ಪೋಸ್ಟರ್ ವೈರಲ್ ಮಾಡಲಾಗಿದೆ.
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2023 ಕ್ಕೆ ಭರ್ಜರಿ ತಯಾರಿ ನಡೆದಿದೆ. ದಸರಾ ಉದ್ಘಾಟನೆಗೆ ಇನ್ನು ಐದು ದಿನ ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಇಂದು ಅರಮನೆ ಒಳಾವರಣದಲ್ಲಿ ಸಿಂಹಾಸನ ಜೋಡಣಾ ಕಾರ್ಯ ನಡೆಯುತ್ತದೆ. ಬೆಳಗ್ಗೆ 7.15 ರಿಂದ ನವಗ್ರಹ ಹೋಮ ಮತ್ತು ಇತರೆ ಶಾಂತಿ ಪೂಜೆ ಕಾರ್ಯ ಆರಂಭವಾಗಿದೆ. ಬೆಳಗ್ಗೆ 10.05ರಿಂದ 10.35ರವರೆಗೆ ಸಿಂಹಾಸನ ಜೋಡಣಾ ಕಾರ್ಯ ಪ್ರಾರಂಭವಾಗುತ್ತದೆ. ಬೆಳಗ್ಗೆ 11ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಅಶ್ವಕ್ಕೆ ಪೂಜೆ ನೆರವೇರುತ್ತದೆ. ಮೈಸೂರು ಅರಮನೆ ಖಜಾನೆಯಲ್ಲಿರುವ ರತ್ನಖಚಿತ ಸಿಂಹಾಸನ, ಮುತ್ತು, ರತ್ನ, ಪಚ್ಚೆ ಸೇರಿ ಅಮೂಲ್ಯ ಆಭರಣಗಳನ್ನು ಒಳಗೊಂಡಿರುವ ಸಿಂಹಾಸನದ ಬಿಡಿ ಭಾಗಗಳು ಇಂದು ದರ್ಬಾರ್ ಹಾಲ್‌ಗೆ ರವಾನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
Published On - 7:42 am, Mon, 9 October 23