ಕರ್ನಾಟಕದ ಕರಾವಳಿ ಬಿಸಿಲ ಧಗೆಗೆ ನಲುಗಿ ಹೋಗಿದ್ದು, ನೀರಿಗಾಗಿ ಜನರು ತತ್ತರಿಸುತ್ತಿದ್ದಾರೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಕೇಳಿ ಬರುತ್ತಿದೆ. ಈ ನಡುವೆ ನಿನ್ನೆ (ಜೂ.09) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿದೆ. ಅಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆಯಾಗಿದ್ದು, ಬಿರು ಬಿಸಿಲಿನಿಂದ ಬೇಯುತ್ತಿದ್ದ ಜನರಿಗೆ ಮಳೆರಾಯ ತಂಪೆರೆದ್ದಿದ್ದಾನೆ. ಇನ್ನು ರಾಜ್ಯ ರಾಜಕೀಯದಲ್ಲಂತೂ ಗೋಹತ್ಯ ನಿಷೇಧ, ಸರ್ಕಾರದ 5 ಗ್ಯಾರೆಂಟಿ ಯೋಜನಗಳ ಜಾರಿ ಮತ್ತು ಪಠ್ಯ ಪುಸ್ತಕ್ತ ಮರು ಪರೀಷ್ಕರಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿವೆ. ರಾಜ್ಯದಲ್ಲಿ ಭೀಕರ ಅಪಘಾತ, ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳಲ್ಲದೆ ಇನ್ನು ಅನೇಕ ಬೆಳವಣಿಗೆಗಳು ನಡೆಯುತ್ತಿದ್ದು, ಇವಲ್ಲೆದರ ಕುರಿತಾದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ…
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ಮಳೆಯಿಂದ ನೀರಿನ ರಭಸಕ್ಕೆ ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಕಿರು ಸೇತುವೆ ಕೊಚ್ಚಿ ಹೋಗಿದೆ. ದೇಗಲಮಡಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಿರು ಸೇತುವೆ ಇದಾಗಿದೆ. ಇನ್ನೊಂದೆಡೆ, ಸುರಿದ ಮಳೆಗೆ ಜನರು ಸಂತಸಗೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಜನರ ಪ್ರೀತಿ ಗಳಿಸಿದ್ದ ಅಪರೂಪದ ನಟ. ಪುನೀತ್ ಹೆಸರಿನಲ್ಲಿ ಸ್ಕಾಲರ್ಶಿಪ್ ನೀಡುತ್ತಿರುವುದು ಒಳ್ಳೆಯ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಡಾ.ರಾಜ್ಕುಮಾರ್ IAS ಅಕಾಡೆಮಿಯಲ್ಲಿ ಪೃಥ್ವಿ ಸ್ಕಾಲರ್ಶಿಪ್ ಲಾಂಛನದ ಮೇಲೆ ಸಹಿ ಹಾಕಿದ ನಂತರ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರಿ ಕೆಲಸ ದೇವರ ಕೆಲಸವೆಂದು ಭಾವಿಸಿ ಕೆಲಸ ಮಾಡಿ. ನೀವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಿ ಎಂದು ಸಲಹೆ ನೀಡಿದರು.
ಬೆಂಗಳೂರು: ಆರ್.ಟಿ.ನಗರದ ತರಳಬಾಳು ಶಾಖಾ ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಸಿಎಂಗೆ ಸಚಿವರಾದ ಭೈರತಿ ಸುರೇಶ್, ಎಸ್.ಎಸ್.ಮಲ್ಲಿಕಾರ್ಜುನ್ ಸಾಥ್ ನೀಡಿದರು.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಡಾ.ಶರಣಪ್ರಕಾಶ್ ಪಾಟೀಲ್ ಅವರನ್ನು ನೇಮಿಸಿದ್ದಕ್ಕೆ ವಿವಿಧ ಸಂಘಟನೆಗಳು ಆಕ್ರೋಶ ಹೊರಹಾಕುತ್ತಿದ್ದು, ಅಂಬೇಡ್ಕರ್ ಸರ್ಕಲ್‌ನಲ್ಲಿ ಧರಣಿ ನಡೆಸಲಾಯಿತು. ಏಮ್ಸ್ ಹೋರಾಟ ಸಮಿತಿ, ಕರವೇ ಸೇರಿ 5 ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿದೆ. ಇತ್ತೀಚೆಗಷ್ಟೇ ಏಮ್ಸ್ ಕಲಬುರಗಿಗೆ ಬೇಕೆಂದು ಶರಣಪ್ರಕಾಶ್ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲೆಗೆ ಏಮ್ಸ್‌ಗಾಗಿ ಕಳೆದ 393 ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಡಾ.ಶರಣಪ್ರಕಾಶ್ ನಮ್ಮ ಹೋರಾಟದ ವಿರುದ್ಧ ಹೇಳಿಕೆ ನೀಡಿದ್ದಾರೆ. ಇಂತಹ ಸಚಿವರು ನಮ್ಮ ಜಿಲ್ಲೆಗೆ ಬೇಡವೆಂದು ಸಂಘಟನೆಗಳಿಂದ ಧರಣಿ ನಡೆಸಿ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸುವಂತೆ ಆಗ್ರಹಿಸಿದರು. ಇಲ್ಲದಿದ್ದರೆ ಗೋ ಬ್ಯಾಕ್ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ದಾವಣಗೆರೆ: ಸಿಡಿಲು ಬಡಿದು ಇಬ್ಬರು ರೈತರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರಿನಲ್ಲಿ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾಟಲಿಂಗಪ್ಪ (43), ರಾಜು (35) ಮೃತ ದುರ್ದೈವಿಗಳು. ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ, ತಹಶೀಲ್ದಾರ್ ಸಂತೋಷ್ ಭೇಟಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
ಬಿಪರ್ಜಾಯ್ ಚಂಡಮಾರುತ ಪ್ರಭಾವದಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಭಟ್ಕಳ, ಅಂಕೋಲ, ಕುಮಟಾ, ಕಾರವಾರ ತಾಲೂಕಿನ ಹಲವೆಡೆ ಇಂದು ಸಂಜೆ ಮಳೆಯಾಗಿದೆ. ಇನ್ನೂ 3 ದಿನಗಳ ಕಾಲ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಸಂಜೆ ಹೊತ್ತಿಗೆ ಮಳೆ ಆರಂಭವಾಗಿದೆ. ಇನ್ನು ಕೆಲವೆಡೆ ಮೋಡ ಕವಿದ ವಾತಾವರಣ ಇದೆ.
ಜುಲೈ 3ರಂದು ವಿಧಾನಮಂಡಲದ ಅಧಿವೇಶನ ಆರಂಭಗೊಳ್ಳಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಕೊವಿಡ್ ನಿಯಮ ಮೀರಿ ಮೇಕೆದಾಟು ಪಾದಯಾತ್ರೆ ನಡೆಸಿದ್ದ ಪ್ರಕರಣ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ. ಒಂದು ಪ್ರಕರಣ ರದ್ದುಗೊಂಡಿದ್ದು, ಎರಡು ಕೇಸ್‌ಗಳಿಗೆ ತಡೆಯಾಜ್ಞೆ ನೀಡಿ ಆದೇಶಿಸಲಾಗಿದೆ. ಪ್ರಕರಣ ರದ್ದು ಕೋರಿ ಡಿಕೆ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶರಣಬಸಪ್ಪ ದರ್ಶನಾಪುರ ಆಯ್ಕೆ ಹಿನ್ನೆಲೆ ಶಹಾಪುರ ನಗರದಲ್ಲಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಸಚಿವ ದರ್ಶನಾಪುರ ಪರ ಜೈಕಾರಗಳನ್ನು ಹಾಕಲಾಗುತ್ತಿದೆ.
ವಿದ್ಯುತ್ ದರ ಏರಿಕೆ ಖಂಡಿಸಿ ಬೆಳಗಾವಿ ನಗರದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಪ್ರತಿಭಟನಾ ರ್ಯಾಲಿ ನಡೆಯುತ್ತಿದೆ. ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಗುತ್ತಿದೆ. ವಿಧಾನಸಭೆ ಚುನಾವಣೆ ವರೆಗೆ ಕನಿಷ್ಠ ಶುಲ್ಕ 90 ರೂಪಾಯಿ ಇತ್ತು. ಮತದಾನ ಮರುದಿನವೇ KERC ಕನಿಷ್ಠ ಶುಲ್ಕ 140 ರೂ.ಗೆ ಏರಿಕೆ ಮಾಡಲಾಗಿದೆ. ಕೆಇಆರ್‌ಸಿ ನಿರ್ಧಾರಕ್ಕೆ ರಾಜ್ಯ ಸರ್ಕಾರ ತಕ್ಷಣವೇ ತಡೆ ನೀಡಬೇಕು. ಹೆಚ್ಚಳವಾಗಿರುವ ಶುಲ್ಕ ಕೈಬಿಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ಸರ್ಕಾರ ಬಂದರೆ ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಲಾಗಿತ್ತು. ಸದ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ತಾವು ನೀಡಿದ ಭರವಸೆ ಈಡೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಸಾಲಕ್ಕೆ ಬೇಸತ್ತು ರಾಜ್ಯದ 42 ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ನೇಕಾರ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಬೇಕು. 10 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
ವಿದ್ಯುತ್ ದರ ಹೆಚ್ಚಳ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಉದ್ಯಮಗಳ ಸಂಘವು ಧರಣಿ ನಡೆಸುತ್ತಿದೆ. ಕೂಡಲೇ ವಿದ್ಯುತ್ ದರ ಏರಿಕೆ ಆದೇಶ ಹಿಂಪಡೆಯುವಂತೆ ಆಗ್ರಹಿಸಲಾಗುತ್ತಿದೆ. ಅಲ್ಲದೆ ವಿದ್ಯುತ್ ದರ ಏರಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಲಾಗುತ್ತಿದೆ. ಈ ಹಿಂದೆ ಯೂನಿಟ್‌ಗೆ ರೂ. 95 ಇತ್ತು. ಇದೀಗ 140 ರೂ. ಆಗಿದೆ. ಯೂನಿಟ್‌ಗೆ 45 ರೂಪಾಯಿ ಹೆಚ್ಚಳವಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ನಾಳೆ ಮೈಸೂರಿನಲ್ಲಿ ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದ್ದಾರೆ. ವರುಣ ಕ್ಷೇತ್ರದ ಜನತೆಗೆ ನಂಜನಗೂಡು ತಾಲೂಕಿನ ಬಿಳಿಗೆರೆಯಲ್ಲಿ ಸಮಾವೇಶ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 11.30 ಬೆಂಗಳೂರಿನಿಂದ ತೆರಳುವ ಸಿಎಂ ಸಿದ್ದರಾಮಯ್ಯ, ಮಧ್ಯಾಹ್ನ 12.20ಕ್ಕೆ ಸುತ್ತೂರು ಹೆಲಿಪ್ಯಾಡ್ಗೆ ತಲುಪಲಿದ್ದಾರೆ. ಮಧ್ಯಾಹ್ನ 12.35ಕ್ಕೆ ಕೃತಜ್ಞತಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶ ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿ ನಾಳೆ ಸಂಜೆ 4 ಗಂಟೆಗೆ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೋಡಿ ಜೂ.11ರ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಕಾರ್ಲ್ ಮಾರ್ಕ್ಸ್ ಪಠ್ಯ ಓದಬಹುದು, ಆರ್ಎಸ್ಎಸ್ ನಾಯಕರದ್ದು ಯಾಕೆ ಓದಬಾರದು? ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಶ್ನಿಸಿದ್ದಾರೆ. ಇವರ ನೆರವು ಇಲ್ಲದೆ ಸಂಘದ ಶಾಖೆಯ ಮೂಲಕವೇ ವಿಚಾರ ಬೆಳೆಯಲಿದೆ. ಪಠ್ಯದಿಂದ ಹೊರಹಾಕಬಹುದು, ಹೃದಯದಿಂದ ಹೊರಹಾಕಲು ಸಾಧ್ಯವಿಲ್ಲ. ಆರ್ಎಸ್ಎಸ್ ವಿಚಾರದಲ್ಲಿ ನೆಹರು, ಇಂದಿರಾ ಸೋತಿದ್ದಾರೆ. ಸುಳ್ಳು ಮತ್ತು ಕಾಂಗ್ರೆಸ್ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ನಾಯಕರು ಕುರ್ಚಿಗೆ ಅಂಗಲಾಚಿದ್ದರು. ಕಾಂಗ್ರೆಸ್ ನವರನ್ನು ಯಾಕೆ ಅಂಡಮಾನ್ ಜೈಲಿಗೆ ಹಾಕಲಿಲ್ಲ ಎಂದು ಪ್ರಶ್ನಿಸಿದರು.
ದೆಹಲಿ: ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿತು. ಹೊಂದಾಣಿ ರಾಜಕಾರಣದಿಂದ ಬಿಜೆಪಿ ಸೋತಿದೆ. ಈ ನಡೆ ಅನುಸರಿಸದಿದ್ದಿದ್ದರೆ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಮ್ಮ ಪಕ್ಷದ ನಾಯಕರ ವಿರುದ್ಧವೇ ಸಿ.ಟಿ ರವಿ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ.
ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣವನ್ನು ಮರುತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಮನ್ವಯ ಇರುವುದರಿಂದ ತನಿಖೆ ಮಾಡಬೇಕಿದೆ. ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ ಆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ನಮ್ಮ ಹೊಸ ಸರ್ಕಾರ ಬಂದಿರುವುದರಿಂದ ಮರು ತನಿಖೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ತಿಳಿಸಿದ್ದೇನೆ. ಅದಕ್ಕೆ ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಳೆದ 6 ತಿಂಗಳಲ್ಲಿ ಹಂಚಿಕೆ, ಮಂಜೂರಾದ ಭೂಮಿ ಪರಿಶೀಲನೆಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾಗಿ ಬೆಂಗಳೂರಿನಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಯಾರಿಗೆಲ್ಲ ಸರ್ಕಾರಿ ಭೂಮಿ ಹಂಚಿಕೆಯಾಗಿದೆ ಎಂದು ಪರಿಶೀಲನೆ ನಡೆಸಲು ಸೂಚಿಸದ್ದಾರೆ. ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೆಐಎಡಿಬಿಯಿಂದ ಜಮೀನು ನೀಡಿದ್ದಾರೆ. ತರಾತುರಿಯ ತೀರ್ಮಾನಗಳ ಬಗ್ಗೆ ಮರು ಪರಿಶೀಲನೆಗೆ ನಿರ್ಧರಿಸಿದ್ದೇವೆ ಎಂದು ಹೇಳಿದರು.
ಉಡುಪಿ: ಶಾಲಾ ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಉಡುಪಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸರ್ಕಾರ ಯಾವಾಗಲೂ ವ್ಯಕ್ತಿಗಳ ಆಧಾರದಲ್ಲಿ ನಡೆಯುವುದಿಲ್ಲ. ಶಾಸನದ ಆಧಾರದಲ್ಲಿ ಸರ್ಕಾರ ನಡೆಯುವುದು. ಸರ್ಕಾರ ಪರಿಶೀಲನೆ ಮಾಡದೆ ಪಠ್ಯ ಬದಲು ಮಾಡುವುದು ಸರಿಯಲ್ಲ. ಬನ್ನಂಜೆ ಗೋವಿಂದಾಚಾರ್ಯರ ಪಾಠ ಹಿಂಪಡೆದಿದ್ದು ಖಂಡನಾರ್ಹ, 2009ರಲ್ಲಿ ಯುಪಿಎ ಸರ್ಕಾರ ಬನ್ನಂಜೆ ಅವರಿಗೆ ಪದ್ಮಶ್ರೀ ನೀಡಿತ್ತು. ಹೆಡ್ಗೆವಾರ್ ಪಾಠವನ್ನು ಸರ್ಕಾರ ವಾಪಸ್ ಪಡೆಯುವುದಾಗಿ ಹೇಳಿದೆ. ಚಕ್ರವರ್ತಿ ಸೂಲಿಬೆಲೆ ಪಾಠ ವಾಪಸ್ ಪಡೆಯುವುದಾಗಿ ಹೇಳುತ್ತಿದ್ದಾರೆ. ವೈಚಾರಿಕ ವಿಚಾರದ ಮೇಲೆ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಎಲ್ಲ ಬೆಳವಣಿಗೆಗಳನ್ನೂ ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದನದ ಒಳಗೆ ಮತ್ತು ಹೊರಗೆ ಸರ್ಕಾರಕ್ಕೆ ಮನವರಿಕೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಂಗಳೂರು: ಬಿಪರ್ಜಾಯ್ ಚಂಡಮಾರುತದ ಆತಂಕ ಹಿನ್ನೆಲೆ ಮಂಗಳೂರಿನ ಸಮುದ್ರ ತೀರಕ್ಕೆ ಹೋಗದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಉಳ್ಳಾಲ ಕಡಲ ತೀರದಲ್ಲಿ ಭಾರೀ ವೇಗವಾಗಿ ಗಾಳಿ ಬೀಸುತ್ತಿದೆ. ಭಾರೀ ಗಾಳಿಯ ಕಾರಣಕ್ಕೆ ಬೀಚ್ಗಳ ಬಳಿಯ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಬೆಂಗಳೂರು: ಜೂನ್ 9ರಿಂದ 11ರ ವರೆಗೆ 3 ದಿನಗಳ ಕಾಲ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ತಿಳಿಸಿದೆ. ಇನ್ನು ಜೂನ್ 9ರಿಂದ ಜೂ.11ರ ವರೆಗೆ ಯಾವೆಲ್ಲ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎನ್ನುವ ವಿವರ ಈ ಕೆಳಗಿನಂತಿದೆ.
ಬೆಂಗಳೂರು: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲಾ 224 ಶಾಸಕರಿಗೂ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಡೆಡ್ಲೈನ್ ನೀಡಿದ್ದಾರೆ.
ಬೆಂಗಳೂರು: ಭಾರತ್ ಇನ್ಫ್ರಾ ಎಕ್ಸ್ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಸಂಸ್ಥೆಯ ಬೆಂಗಳೂರು ಹಾಗೂ ದಾವಣಗೆರೆ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 113.38 ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡ ಹಾಗೂ ಸಾಲದ ಹಣಕ್ಕಾಗಿ ಸುಳ್ಳು ದಾಖಲೆಗಳನ್ನು ಕೊಟ್ಟ ಆರೋಪ ಭಾರತ್ ಇನ್ಫ್ರಾ ಮೇಲಿದೆ. ಈ ಪ್ರಕರಣದ ಮೇಲೆ ಇಡಿ ಅಧಿಕಾರಿಗಳ ತಂಡಗಳು ಜೂನ್ 5ರಂದು ರೇಡ್ ನಡೆಸಿರುವುದು ತಿಳಿದುಬಂದಿದೆ. ಜೂನ್ 7ರಂದು ಇಡಿ ಈ ರೇಡ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಚಿಕ್ಕಮಗಳೂರು: ಲಕ್ಕವಳ್ಳಿಯ ಭದ್ರಾ ಜಲಾಶಯದ ಬಲದಂಡೆ ನಾಲೆಯ ತಡೆಗೋಡೆ ಕುಸಿಯುವ ಹಂತ ತಲುಪಿದೆ. ತರೀಕೆರೆ ತಾಲೂಕಿನ ಬರಗೇನಹಳ್ಳಿ ಗ್ರಾಮದ ಬಳಿ ಸುಮಾರು 5 ಕಿಮೀವರೆಗೂ ನಾಲೆಯ ತಡೆಗೋಡೆ ಕುಸಿಯುವ ಹಂತಕ್ಕೆ ತಲುಪಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪೈಕಿ ಮೊಟ್ಟಮೊದಲ ಯೋಜನೆಯಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ ‘ಶಕ್ತಿ’ ಈ ರೀತಿ ಉದ್ಘಾಟನೆಗೊಳ್ಳಲಿದೆ. ಇದೇ ಭಾನುವಾರ (ಜೂ.11) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಜೆಸ್ಟಿಕ್‌ನಿಂದ ನಾಡಿನ ಶಕ್ತಿಕೇಂದ್ರವಾದ ವಿಧಾನಸೌಧಕ್ಕೆ ತೆರಳುವ ರೂಟ್ ನಂ.43 ಬಸ್‌ನಲ್ಲಿ ಕಂಡಕ್ಟರ್ ರೀತಿ ಟಿಕೆಟ್ ವಿತರಿಸುವ ಮೂಲಕ ಈ ಮಹಾತ್ವಾಕಾಂಕ್ಷಿ ಯೋಜನೆಗೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಿದ್ದಾರೆ.
ಬೆಂಗಳೂರು: ಬಿಪರ್ಜಾಯ್ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ತೀವ್ರ ಸ್ವರೂಪ ಪಡೆದಿದೆ, ಇದರ ಪರಿಣಾಮ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಾಗಲಿದೆ. ಮುಂದಿನ 3-4 ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಕರಾವಳಿ, ಗೋವಾ, ಕೇರಳ, ಲಕ್ಷದ್ವೀಪ, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ಥಾನ, ಅಸ್ಸಾಂ, ಮಿಜೋರಾಂ, ಮಣಿಪುರ, ಅರಿಣಾಚಲಪ್ರದೇಶ, ಮೇಘಾಲಯದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನಲ್ಲಿ ಭಾರಿ ಮಳೆಯಾಗಲಿದೆ, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Published On - 9:41 am, Fri, 9 June 23