
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ನಡೆಯುತ್ತಿದ್ದು, ಆಪರೇಷನ್ ಕಮಲ ವಿಚಾರವಾಗಿ ಸಾಕಷ್ಟು ಚರ್ಚೆಯಾಯಿತು. ಅಲ್ಲದೇ ವರ್ಗಾವಣೆ ವಿಚಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಜಟಾಪಟಿಗೆ ಕಾರಣವಾಯಿತು. ಇನ್ನು ಮೈಸೂರು ಯುವಾ ಬ್ರಿಗೇಡ್ ಕಾರ್ಯಕರ್ತನ ಕೊಲೆ ಹಾಗೂ ಬೆಳಗಾವಿಯ ಚಿಕ್ಕೋಡಿಯ ಜೈನಮುನಿ ಹತ್ಯೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅಲ್ಲದೇ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗದೆ ರೈತರು ಕಂಗಾಲ ಆಗಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್..
ಆನೆ ಹೋಗುವಾಗ ನಾಯಿ ಬೊಗಳೋದು ಸಹಜ ಎಂದು ಗಣಿ ಸಚಿವ ಮಲ್ಲಿಕಾರ್ಜುನ್ ಅವರನ್ನು ಸಂಸದ ಜಿ.ಎಂ.ಸಿದ್ದೇಶ್ವರ್ ನಾಯಿಗೆ ಹೋಲಿಸಿದ್ದಾರೆ. ತಾನು ಆನೆ, ಸಚಿವ ಮಲ್ಲಿಕಾರ್ಜುನ್ ನಾಯಿ ಎಂದು ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದವರು ಕೊಲ್ಲುವ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ 135 ಸೀಟು ಗೆದ್ದಿದ್ದೀವಿ ಅನ್ನುವ ದರ್ಪದಲ್ಲಿ ನಮ್ಮನ್ನೇನೂ ಮಾಡಕ್ಕಾಗಲ್ಲ ಎಂದು ಆಟ ಆಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ದೇಶದ್ರೋಹಿಗಳು, ಕೊಲೆಗಡುಕರಿಗೆ ಭಯವಿಲ್ಲ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ವರುಣನ ಅಬ್ಬರ ಶುರುವಾಗಿದೆ. ಮೂರು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಇಂದು ಮತ್ತೆ ಆರಂಭವಾಗಿದೆ. ಕಾರವಾರ, ಅಂಕೋಲ, ಹೊನ್ನಾವರ, ಭಟ್ಕಳ, ಕುಮಟಾ ದಲ್ಲಿ ಭಾರೀ ಮಳೆ ಆಗಿದೆ. ಜಿಲ್ಲೆಯಾದ್ಯಂತ ಮುಂದಿನ ಐದು ದಿನಗಳ ಕಾಲ ಮಳೆ ಮುಂದು ವರೆಯಲಿದ್ದು, ಗುಡ್ಡ ಕುಸಿತ ಸಾಧ್ಯತೆ ಇರುವ ಸ್ಥಳದಲ್ಲಿ ಜನರು ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಯಾದಗಿರಿ: ಜಿಲ್ಲೆಯಲ್ಲಿ ವರುಣದೇವ ಕೈಕೊಟ್ಟ ಹಿನ್ನೆಲೆ ಅನ್ನದಾತರು ಕಂಗಾಲಾಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಮಳೆ ನಂಬಿ ರೈತರು ಹತ್ತಿ ಬಿತ್ತನೆ ಮಾಡಿದ್ದಾರೆ. ಮಳೆ ಬಾರದ್ದಕ್ಕೆ ಬೆಳೆ ಉಳಿಸಿಕೊಳ್ಳಲು ರೈತರಿಂದ ಹರಸಾಹಸ ಪಡುತ್ತಿದ್ದಾರೆ. ಹೇಗಾದರೂ ಮಾಡಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ವಿಜಯನಗರ: ಮಳೆಯಿಂದ ಮರದ ಕೊಂಬೆ ಮುರಿದುಬಿದ್ದು ಕಾರು ಜಖಂಗೊಂಡಿದೆ. ಜಿಲ್ಲೆಯ ಹೊಸಪೇಟೆಯ ಮೇನ್ ಬಜಾರ್‌ನಲ್ಲಿ ಘಟನೆ ಕಂಡುಬಂದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಮರದ ಕೊಂಬೆ ಬಿದ್ದು 5 ಕಾರು, 2 ಬೈಕ್ ಜಖಂ ಆಗಿರುವಂತಹ ಘಟನೆ ಹಳೇ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಎದುರು ನಡೆದಿದೆ. ಕೊಂಬೆ ಮುರಿದು ಬಿದ್ದಿದ್ದರಿಂದ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಚಂದ್ರೇಗೌಡ ಜಂಕ್ಷನ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
ಬೀದರ್: ಪ್ಲಾಸ್ಟಿಕ್ ಬಳಕೆ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಸೂಚನೆ ಹಿನ್ನೆಲೆ ಬೀದರ್ ನಗರದ ವಿವಿಧ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ಮಾಡಿ ಒಂದು ಕ್ವಿಂಟಾಲ್‌ಗೂ ಹೆಚ್ಚು ಪ್ಲಾಸ್ಟಿಕ್ ಬ್ಯಾಗ್, ಲೋಟ ವಶಕ್ಕೆ ಪಡೆದಿದ್ದಾರೆ.
ಜೈನಮುನಿ ಹತ್ಯೆ, ಯುವ ಬ್ರಿಗೇಡ್ ಕಾರ್ಯಕರ್ತನ ಬರ್ಬರ ಹತ್ಯೆಯಾಗಿದೆ. ಬೆಂಗಳೂರಿನಲ್ಲಿ ಒಂದರ ನಂತರ ಮತ್ತೊಂದು ಹತ್ಯೆಯಾಗಿದ್ದು ದುಃಖವಾಗಿದೆ. ತಾಯಿ ಚಾಮುಂಡೇಶ್ವರಿ ಇಂತಹ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಈ ದೇಶದ ರಕ್ಷಣೆ, ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸಚಿವೆ ಶೋಭಾ ಹೇಳಿದರು. ವಿಶ್ವದಲ್ಲಿ ಭಾರತದ ಧ್ವಜ ಎತ್ತಿಹಿಡಿಯಲು ಮೋದಿ ಮತ್ತೆ ಪ್ರಧಾನಿ ಆಗಬೇಕು. ಈ ಕೋರಿಕೆಯೊಂದಿಗೆ ಚಾಮುಂಡಿಬೆಟ್ಟ ಹತ್ತಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದೇನೆ. ಚಾಮುಂಡೇಶ್ವರಿ ಭಕ್ತರಿಗೆ ರಕ್ಷಣೆ ಕೊಡಬೇಕೆಂಬುದು ನನ್ನ ಅಪೇಕ್ಷೆಯಾಗಿದೆ ಎಂದರು.
ಯಾದಗಿರಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ ಯಾದಗಿರಿ ಜಿಲ್ಲೆ ಮೇಲೆ ಮಾತ್ರ ವರುಣ ದೇವನ ಕೃಪೆ ಇನ್ನೂ ಆಗಿಲ್ಲ. ಮಳೆ ಕೈಕೊಟ್ಟಿದ್ದಕ್ಕೆ ಕಂಗಲಾದ ಜಿಲ್ಲೆಯ ಅನ್ನದಾತರು ಹತ್ತಿ ಬಿತ್ತನೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ಅಭಾವ ಉಂಟಾಗಿ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಟ್ಯಾಂಕರ್ ನೀರಿನ ಮೂಲಕ ಕೃಷಿಗೆ ನೀರು ಹಾಯಿಸುತ್ತಿದ್ದಾರೆ.
ಮೈಸೂರು: ಟಿ ನರಸೀಪುರದಲ್ಲಿ ಹತ್ಯೆಯಾದ ನಮ್ಮ ಹಡುಗ ವೇಣುಗೋಪಾಲ್ ಹನುಮ ಜಯಂತಿ ಆಚರಣೆ ಮಾಡಿದ್ದ. ಕೇಸರಿ ಧ್ವಜ ಏರಿಸಿ ಹಿಂದುತ್ವದ ಕೆಲಸ ಮಾಡಿದ್ದ ಆ ಯುವಕ ಹತ್ಯೆಯಾದ ಬಳಿಕ ಮೂವರು ಮಹಿಳೆಯರು ಮಾತ್ರ ಆ ಕುಟುಂಬದಲ್ಲಿ ಉಳಿದಿದ್ದಾರೆ. ಆತನ ತಾಯಿ, ಹೆಂಡತಿ, ಮಗಳು ಮಾತ್ರ ಉಳಿದಿದ್ದಾರೆ. ಅವರಿಗೆ ರಕ್ಷಣೆ ನೀಡುವವರು ಯಾರು ? ಕಾಂಗ್ರೆಸ್ ನಾಯಕರ ಜೊತೆಯಲ್ಲಿರುವವರು ಆ ಯುವಕನನ್ನು ಸಂಧಾನಕ್ಕೆ ಕರೆದು ಹತ್ಯೆ ಮಾಡಿದ್ದಾರೆ. ಇದರಿಂದ ಅವರಿಗೆ ಏನು ಲಾಭ ಸಿಕ್ಕಿತು ? ಅವರಿಗೆ ಏನು ಒಳ್ಳೆಯದಾಯಿತು? ಆ ಕುಟುಂಬಕ್ಕೆ ಇನ್ಯಾರು ದಿಕ್ಕು? ಶಾಸಕರು, ಮಂತ್ರಿಗಳು, ನಾಯಕರು ಬರುತ್ತಾರೆ. ಆದರೆ ಆ ತಾಯಿಯ, ಹೆಂಡತಿಯ, ಮಗಳ ದುಃಖ ಕೇಳುವವರು ಯಾರು ? ನಾವೆಲ್ಲರೂ ಒಂದು ವಿಚಾರದ ಪರವಾಗಿ ಕೆಲಸ ಮಾಡುತ್ತೇವೆ. ಆದರೆ ಒಂದು ವಿಚಾರವಾಗಿ ಕೆಲಸ ಮಾಡದಂತೆ ರಾಜ್ಯದಾದ್ಯಂತ ಭಯ ಹುಟ್ಟಿಸಬೇಕೆಂಬ ಒಂದು ಷಡ್ಯಂತ್ರ ನಡೆಯುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಒಂದು ಕೋಮಿನ ಜನರನ್ನು ಓಲೈಕೆ ಮಾಡುತ್ತಾರೆ. ಆದರೂ ನಾವು ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇವೆ. ವೇಣುಗೋಪಾಲ್ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಹಾಲಿನ ದರ ವಿಚಾರವಾಗಿ ನಡೆಯಬೇಕಿದ್ದ ಸಭೆ ಮತ್ತೆ ಮುಂದೂಡಿಕೆಯಾಗಿದೆ. ಸಂಜೆ 5.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ KMF ಒಕ್ಕೂಟ ಮತ್ತು ಪದಾಧಿಕಾರಿಗಳ ಜೊತೆ ನಿಗದಿಯಾಗಿದ್ದ ಸಭೆಯನ್ನು ಸಿಎಂ ಸಿದ್ದರಾಮಯ್ಯ ಅವರ ಅನಾರೋಗ್ಯದ ಹಿನ್ನೆಲೆ ಮುಂದೂಡಿಕೆ ಮಾಡಲಾಗಿದೆ. ಹೀಗಾಗಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರು ಸಿಎಂ ನಿವಾಸದಿಂದ ವಾಪಸ್ಸಾಗಿದ್ದಾರೆ.
ಜುಲೈ 19ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಂಜೆ 6.30ಕ್ಕೆ ನಡೆಯುವ ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳಲಿದ್ದಾರೆ.
ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸಂಬಂಧ ನಂದಿಪರ್ವತ ಆಶ್ರಮಕ್ಕೆ ಭೇಟಿ ಬಳಿಕ ಸಚಿವ ಸತೀಶ್ ಜಾರಕಿಹೊಳಿ, ಆಶ್ರಮದ ಕಮಿಟಿಯವರ ಜೊತೆ ಮಾತುಕತೆ ನಡೆಸಿದ್ದೇನೆ ಎಂದರು. ಹತ್ಯೆಯ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಬಿಐ ತನಿಖೆ ಏನು ಅವಶ್ಯಕತೆ ಇಲ್ಲ. ಆರೋಪಿಗಳು ಸಿಕ್ಕಿಲ್ಲ, ಸ್ಟೋರಿ ಮುಚ್ಚಿಟ್ಟಿದ್ದಾರಂದರೆ ಅದು ಬೇರೆ. ಪ್ರಕರಣ ಬಗ್ಗೆ ಈಗಾಗಲೇ ಪೊಲೀಸರು ಎಲೆ ಎಲೆಯಾಗಿ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಸದನದಲ್ಲಿ ಗೃಹಸಚಿವರು ನಮ್ಮ ಪೊಲೀಸರು ಸಮರ್ಥರಿದ್ದಾರೆ ಎಂದಿದ್ದಾರೆ. ಸಿಬಿಐ ತನಿಖೆಗೆ ವಹಿಸುವ ಅವಶ್ಯಕತೆ ಇಲ್ಲ. ಎಫ್ಐಆರ್‌ನಲ್ಲಿ ಅವರ ಇಬ್ಬರ ಹೆಸರು ಬಂದಿದೆ, ಮುಚ್ಚಿಡುವ ಪ್ರಶ್ನೆ ಇಲ್ಲ. ಬಿಜೆಪಿಯವರ ಆರೋಪ ಬಗ್ಗೆ ನಮಗೇನೂ ತಿಳಿಯುತ್ತಿಲ್ಲ. ಬಿಜೆಪಿಯವರು ಇದೊಂದೇ ಅಂತಲ್ಲ ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ ಎಂದರು. ಬಿಜೆಪಿ ಸತ್ಯಶೋಧನಾ ಸಮಿತಿ ಬಳಿ ಮಾಹಿತಿ ಇದ್ದರೆ ನಮ್ಮ ಜೊತೆ ಹಂಚಿಕೊಳ್ಳಲಿ ಎಂದರು.
ಹಾಸನ ಹೊಸಳ್ಳಿ ಗ್ರಾಮದ ಧರ್ಮ ಎಂಬುವವರ ಮನೆಗೆ ನುಗ್ಗಿದ ಚಿರತೆಯೊಂದು ಪಕ್ಕಕ್ಕೆ ಹೊಂದಿಕೊಂಡಿರುವ ದನದ ಕೊಟ್ಟಿಗೆಯಲ್ಲಿ ಸಿಲುಕಿಕೊಂಡಿದೆ. ಕೊಟ್ಟಿಗೆಯಲ್ಲಿ ಜಾನುವಾರುಗಳು ಇದ್ದ ಕಾರಣ ಅಹಾರ ಅರಸಿ ಬಂದ ಚಿರತೆ ಸಿಕ್ಕಿಹಾಕಿಕೊಂಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ.
ವಿಧಾನ ಪರಿಷತ್: ಐದು ಗ್ಯಾರೆಂಟಿಗಳನ್ನ ಜಾರಿಗೊಳಿಸಲ್ಲ ಅಂತ ಬಿಜೆಪಿ ವ್ಯಂಗ್ಯ ಮಾಡಿತ್ತು. ದುಡ್ಡು ಎಲ್ಲಿಂದ ತರ್ತಾರೆ ಅಂತ ಕೇಳುತ್ತಿದ್ದರು. ನಾವು ವಾಣಿಜ್ಯ ತೆರಿಗೆ, ಮದ್ಯದ ದರವನ್ನ ಹೆಚ್ಚಿಸಿದ್ದೇವೆ. ಇದರಿಂದ 13,500 ಕೋಟಿ ಬರುತ್ತೆ, 8 ಸಾವಿರ ಕೋಟಿ ಸಾಲ ಮಾಡುತ್ತೇವೆ. ನನ್ನ ರಾಜಕೀಯ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ 12520 ಕೋಟಿ ರೆವಿನ್ಯೂ ಡೆಪಿಸಿಟ್ ಬಜೆಟ್ ಮಂಡಿಸಿದ್ದೇನೆ. ಮುಂದೆ ಸರ್‌ಪ್ಲೆಸ್ ಬಜೆಟ್ ಮಂಡಿಸುವ ವಿಶ್ವಾಸ ಇದೆ ಎಂದರು.
ವಿಧಾನಪರಿಷತ್: ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರವಾಗಿ ವಿಧಾನಪರಿಷತ್ನಲ್ಲಿ ಖಂಡಿಸಿದ ಕಾಂಗ್ರೆಸ್ ಸದಸ್ಯರು, ಹೆಚ್ಚುವರಿ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದಿದ್ದು, ರಾಜ್ಯಸರ್ಕಾರದ ವಿರುದ್ದ ದಿಕ್ಕಾರ ಕೂಗಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ವಿಧಾನಸಭಾ ಕಲಾಪ ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆಯಾಗಿದೆ.
ವಿಧಾನಸಭೆ: ವಿಧಾನಮಂಡಲ ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ ಪರ್ಯಾಲೋಚನೆ ವೇಳೆರ ಶಾಸಕ ಟಿ.ಬಿ. ಜಯಚಂದ್ರರನ್ನು ದೆಹಲಿಯಲ್ಲಿ ಸರ್ಕಾರದ ವಿಶೇಷ ಪ್ರತಿನಿಧಿ ಮಾಡಿರುವ ವಿಚಾರವಾಗಿ ಬಿಜೆಪಿ ಸದಸ್ಯರು ಸರ್ಕಾರದ ಕಾಲೆಳೆದರು. ಟಿ.ಬಿ. ಜಯಚಂದ್ರ ಹಿರಿಯರು, ಅವರ ಮೇಲೆ ನಮಗೆ ಗೌರವ ಇದೆ, ಅವರಿಗೆ ದೆಹಲಿಗೆ ಹೋಗಿ ಇರುವ ಶಿಕ್ಷೆ ಯಾಕೆ ಕೊಟ್ರಿ? ದೆಹಲಿಯಲ್ಲಿ ವಿಶೇಷ ಪ್ರತಿನಿಧಿ ಅಂದರೆ ಕರ್ನಾಟಕ ಭವನದಲ್ಲಿ ಒಂದು ಕಚೇರಿ ಮಾಡಿ ಸುಮ್ನೆ ಇರುವುದಷ್ಟೇ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಜಯಚಂದ್ರ ಅವರು ಕಾನೂನು ಸಲಹೆಗಾರರು, ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಇರಬೇಕಾದ ಅರ್ಹ ವ್ಯಕ್ತಿ, ಮಂತ್ರಿ ಸ್ಥಾನ ಕೊಡಕ್ಕಾಗಿಲ್ಲ ಅಂತ ಈ ಹುದ್ದೆ ಕೊಟ್ಟು ಕೂರಿಸಿರುವುದು ಸರಿಯಲ್ಲ ಎಂದು ಶಾಸಕ ಅರಗ ಜ್ಞಾನೇಂದ್ರ ಟಾಂಗ್ ಕೊಟ್ಟರು. ನಿನ್ನೆ ಸಿಎಂ ನಾನೇ ಸೀನಿಯರ್ ಎಂದು ಹೇಳಿದ್ದಾರೆ, ಜಯಚಂದ್ರ ಸೀನೀಯರ್, ಅವರು 1978 ರಲ್ಲಿ ಶಾಸಕರಾದವರು ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಇದೇ ವೇಳೆ ವಿಧಾನಮಂಡಲ ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರವಾಯಿತು.
ವಿಧಾನ ಪರಿಷತ್: ಹಿಟ್ಲರ್ ಒಬ್ಬ ಮತಾಂಧ, ನೀವು ಅವನ ಪರ ಇದ್ದೀರಾ? ಎಂದು ವಿಪಕ್ಷ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅಕ್ಕಿ, ರಾಗಿ, ಹಾಲು, ಮೊಸರು, ಪೆನ್ನು ಪೇಪರ್ ಮೇಲೆ ಜಿಎಸ್ಟಿ ಹಾಕಿದ್ದೀರಿ. ಬಿಜೆಪಿಯವರು GST ಹಾಕಿ ಜನರಿಂದ ಹಣ ಕಿತ್ತುಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರ ಕೈಯಲ್ಲಿ ಹಣ ಇರಲಿಲ್ಲ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತೆ ಅಂತಾ ಮೋದಿ ಹೇಳಿದ್ದಾರೆ. ಐದು ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗುವುದಕ್ಕೆ ಬಿಡುವುದಿಲ್ಲ. ಪ್ರಮಾಣವಚನ ತೆಗೆದುಕೊಂಡು ನೇರ ವಿಧಾನಸೌಧಕ್ಕೆ ಹೋಗಿದ್ದೆ. ಮೊದಲು ಎಲ್ಲಾ ಗ್ಯಾರಂಟಿಗೆ ತಾತ್ವಿಕ ಒಪ್ಪಿಗೆ ಕೊಟ್ಟಿದ್ದೆವು. 2ನೇ ಸಂಪುಟ ಸಭೆಯಲ್ಲಿ ಯೋಜನೆ ಜಾರಿ ಘೋಷಣೆ ಮಾಡಿದ್ದೇವೆ. ಎಲ್ಲಿಂದ ಹಣ ಬರುತ್ತೆ, ಹೇಗೆ ಹೊಂದಿಸುತ್ತಾರೆಂದು ಟೀಕೆ ಮಾಡಿದರು. ಅದೆಲ್ಲವನ್ನೂ ಬಜೆಟ್ ಮೇಲಿನ ಭಾಷಣದಲ್ಲಿ ಹೇಳುತ್ತೇನೆ ಎಂದರು.
ವಿಧಾನಸಭೆಯಲ್ಲಿ ಜಿಎಸ್ಟಿ ತಿದ್ದುಪಡಿ ವಿಧೇಯಕ ಅಂಗೀಕಾರ ಪಡೆಯಿತು.
ವಿಧಾನ ಪರಿಷತ್: ಆಹಾರ ಭದ್ರತೆ ಕಾಯ್ದೆ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ನಡುವೆ ವಾಕ್ಸಮರ ನಡೆಯಿತು. ಕಾಂಗ್ರೆಸ್ ಸದಸ್ಯರ ಆರೋಪಕ್ಕೆ ಬಿಜೆಪಿ ಸದಸ್ಯರಾದ ಕೋಟಾ ಶ್ರೀನಿವಾಸ್ ಪೂಜಾರಿ, ವೈ ನಾರಾಯಣಸ್ವಾಮಿ , ರವಿಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ನಾವು ಬಡವರ ಪರವಾಗಿದ್ದೇವೆ ಎಂದು ಹೇಳಿದ್ದಾರೆ. ಸಭಾಪತಿ ಮನವಿಯು ನಡುವೆಯು ಮಾತು ಮುಂದುವರೆಸಿದ ರವಿಕುಮಾರ್ಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ, ನಿಮ್ಮ ಮಾತು ಆರ್ಎಸ್ಎಸ್ಗೆ ತಲುಪಿದೆ ಕೂತ್ಕೊ ಎಂದರು.
ಬೆಂಗಳೂರು: ಇಷ್ಟು ದಿನವಾದ್ರೂ ಬಿಜೆಪಿ ವಿಪಕ್ಷ ನಾಯಕರ ಆಯ್ಕೆ ಮಾಡಲು ಆಗಿಲ್ಲ. ಬಿಜೆಪಿ ಇಷ್ಟು ರಾಜಕೀಯ ದಿವಾಳಿ ಆಗುತ್ತೆ ಎಂದು ಗೊತ್ತಿರಲಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕ ಇಲ್ಲ ಅಂತ ನಮಗೆ ವ್ಯಥೆ ಇದೆ. ವಿಧಾನಸಭೆಯಲ್ಲಿ ಹೆಚ್ಡಿ ಕುಮಾರಸ್ವಾಮಿಯವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕ ಇರಬೇಕು. ಕೋಮುವಾದ ವಿರೋಧಿಸಿ ಜನ ನಮಗೆ ಅವಕಾಶ ಕೊಟ್ಟಿದ್ದಾರೆ. 7 ಜಿಲ್ಲೆಗಳಲ್ಲಿ ಬಿಜೆಪಿಯ ಒಬ್ಬ ಅಭ್ಯರ್ಥಿಯೂ ಗೆಲ್ಲಲು ಆಗಲಿಲ್ಲ. ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಮಾಡಬಾರದನ್ನು ಮಾಡಿದರು. ಅದಕ್ಕಾಗಿಯೇ ಜನ ನಿಮ್ಮನ್ನು ಅಲ್ಲಿ ಕೂರಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ, ವಿಪಕ್ಷದಲ್ಲೇ ಇರಬೇಕು. ಬಿಜೆಪಿಯವರು ಜನಪರ ಕೆಲಸ, ಬಡವರ ಪರ ಕೆಲಸ ಮಾಡಲ್ಲ ಎಂದು ವಿಧಾನಪರಿಷತ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬೆಂಗಳೂರು: ವಿಧಾನಸಭೆಯಲ್ಲಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ
ಅಂಗೀಕಾರವಾಯ್ತು. ಈ ವಿಧೇಯಕ ಅಡಿ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಟೆಂಡರ್ ವಿನಾಯ್ತಿಗೆ ಅವಕಾಶ ನೀಡಲಾಗಿದೆ. ಈ ವಿಧೇಯಕ ಟೆಂಡರ್ ವಿನಾಯಿತಿಗೆ ಅವಕಾಶ ಮಾಡಿಕೊಡಲಿದೆ. 50 ಲಕ್ಷದಿಂದ 1 ಕೋಟಿ ರೂ.ಗೆ ಟೆಂಡರ್ ವಿನಾಯಿತಿ ಮಿತಿ ಹೆಚ್ಚಳ ಮಾಡಲಾಗಿದೆ.
ಬೆಂಗಳೂರು: ಬಿಜೆಪಿ ಅವನತಿ ಕರ್ನಾಟಕದಿಂದ ಶುರುವಾಗಿದೆ. ಪ್ರಧಾನಿ ಮೋದಿ ಜನಪ್ರಿಯತೆ ದಿನೇ ದಿನೆ ಕುಸಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಸೇಡಂನಲ್ಲಿ ಪ್ರಚಾರ ಮಾಡಿದರು. ಸೇಡಂನಲ್ಲಿ ಕಾಂಗ್ರೆಸ್ 45 ಸಾವಿರ ಮತಗಳ ಅಂತರದಲ್ಲಿ ಗೆದ್ದಿತು. ನಾವು ಜನರಿಗೆ ಹಣ ನೀಡುತ್ತೇವೆ. ಆದರೆ ಬಿಜೆಪಿ ಜನರ ಜೇಬಿನಿಂದ ಹಣ ಕಿತ್ತುಕೊಂಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ಮಾಡಿದರು.
ಈ ಬಾರಿ ನಮ್ಮ ಪಕ್ಷ ಶೇ.42.9ರಷ್ಟು ಮತ ಪಡೆದುಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನು ಪಕ್ಷ ಗೆದ್ದಿದೆ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಯಾವತ್ತೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ 2 ಬಾರಿಯೂ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆ ಎಂದು ವಿಧಾನಪರಿಷತ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ಮಾಡಿದರು.
ಬೆಂಗಳೂರು: ಹಾಲಿನ ದರ 5 ರೂ.ಯಿಂದ 6ರೂ.ಗೆ ಹೆಚ್ಚಿಸುವ ನಿರ್ಧಾರ ಇದೆ. ಒಂದು ಕೈಯ್ಯಲ್ಲಿ ಕೊಟ್ಟು, ಎರಡು ಕೈಯಲ್ಲಿ ಬಾಚಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಬಿಟ್ಟಿ ಸಲಹೆ ಕಾಂಗ್ರೆಸ್ ಶಾಸಕರೊಬ್ಬರು ಸದನದಲ್ಲಿ ಕೊಟ್ಟರು. ಕರ್ನಾಟಕದಲ್ಲಿ ಬೆಲೆ ಏರಿಕೆಯಿಂದ ಜನ ಪರಿತಪಿಸಬೇಕಾಗಿದೆ. ಎಲ್ಲ ದರ ಹೆಚ್ಚಾದರೇ ಜನ ಹೇಗೆ ಬದುಕಬೇಕು ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು: ವಿಧಾನಸಭೆ ಅಧಿವೇಶನ ಆರಂಭವಾಗಿದ್ದು,ಸದನಕ್ಕೆ ಸ್ಪೀಕರ್ ಯುಟಿ ಖಾದರ್ ಆಗಮಿಸುತ್ತಿದ್ದಂತೆ ಆ ಕಡೆಯೇ ಗಮನ ಹರಿಸುತ್ತಿದ್ದೀರಾ ಎಂದ ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸಿದರು. ಈ ವೇಳೆ ಸ್ಪೀಕರ್ ಯುಟಿ ಖಾದರ್ ನಾನು ವಿಪಕ್ಷಗಳ ಮಿತ್ರ ಎಂದಿದ್ದಾರೆ.
ಬೆಂಗಳೂರು: ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿರುವ ಅಂಗನವಾಡಿಗಳ ಕೇಂದ್ರಗಳ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆ ಎಷ್ಟಿದೆ ವೈ ಎ ನಾರಾಯಣಸ್ವಾಮಿ ಪ್ರಶ್ನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 67570 ಅಂಗನವಾಡಿ ಕೇಂದ್ರಗಳು 2329 ಮಿನಿ ಅಂಗನವಾಡಿ ಕೇಂದ್ರಗಳು 6 ತಿಂಗಳಿಂದ 3 ವರ್ಷದ 22,12,653 ಮತ್ತು 3 ರಿಂದ 6 ವರ್ಷದ 17,37,526 ಮಕ್ಕಳು
ಒಟ್ಟು ಜಿಲ್ಲಾವಾರು 39,50,179 ಮಕ್ಕಳು ದಾಖಲಾಗಿವೆ ಎಂದು ತಿಳಿಸಿದರು.
ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಆಡಿಯೋ, ವಿಡಿಯೋ ಫೈಟ್ ನಿಲ್ಲುತ್ತಿಲ್ಲ. ಜೆಡಿಎಸ್ ಪರ ಕೆಲಸ ಮಾಡಿದ್ದಕ್ಕೆ ಲೈನ್ಮ್ಯಾನ್ ಓರ್ವನನ್ನು ವರ್ಗಾವಣೆ ಮಾಡಿರುವ ಆರೋಪ ಕೇಳಿಬಂದಿದೆ. ಸಚಿವ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಆಡಿಯೋ ಹರಿಬಿಟ್ಟಿದೆ. ವ್ಯಕ್ತಿಯೊಬ್ಬ ಕೆಇಬಿ ಸಿಬ್ಬಂದಿ ಜತೆ ಮಾತಾಡಿರುವ ಆಡಿಯೋ ಬಿಡುಗಡೆ ಮಾಡಲಾಗಿದೆ. ಪದೇ ಪದೆ ಕರೆಂಟ್ ತೆಗೆಯುತ್ತಿರುವ ಬಗ್ಗೆ ಕೆಇಬಿ ಸಿಬ್ಬಂದಿಗೆ ನಾಗಮಂಗಲ ತಾಲೂಕಿನ ಕೃಷ್ಣೇಗೌಡ ಎಂಬುವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೆಇಬಿ ಸಿಬ್ಬಂದಿ ಒಬ್ಬ ಲೈನ್ಮ್ಯಾನ್ ರಜೆ ಇದ್ದಾನೆ, ಇನ್ನೊಬ್ಬರ ವರ್ಗಾವಣೆ ಆಗಿದೆ. ಭೀಮನಹಳ್ಳಿಯ ಲೈನ್ಮ್ಯಾನ್ ವರ್ಗಾವಣೆ ಮಾಡಲಾಗಿದೆ. ಜೆಡಿಎಸ್ ಪರ ಕೆಲಸ ಮಾಡಿದ್ದಕ್ಕೆ ವರ್ಗಾವಣೆ ಆಗಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಬೆಂಗಳೂರು: ಜು.7 ರಂದು ರಾಜ್ಯ ಬಜೆಟ್ ಮಂಡನೆ ವೇಳೆ ತಿಪ್ಪೇರುದ್ರಪ್ಪ ಎಂಬ ವ್ಯಕ್ತಿ ಸದನದ ಒಳಗೆ ಪ್ರವೇಶಿಸಿ, ಶಾಸಕರ ಸ್ಥಾನದಲ್ಲಿ ಕೂತಿದ್ದು ಭದ್ರತಾ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಇದಾದ ನಂತರ ಎಚ್ಚೆತ್ತುಕೊಂಡ ಪೊಲೀಸರು ವಿಧಾನಸೌಧದಲ್ಲಿ ನಕಲಿ ಪಾಸ್ಗಳ ಹಾವಳಿ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಈ ನಕಲಿ ಪಾಸ್ಗಳನ್ನು ಬಳಸಿ ವಿಧಾನಸೌಧದ ಒಳಗೆ ಆಗಮಿಸುತ್ತಿರುವವರನ್ನು ತಡೆದಿದ್ದಾರೆ.
ಹಾಸನ: ಜಿಲ್ಲೆಯಲ್ಲಿ ಟೊಮೆಟೊ ಚಿನ್ನದ ಬೆಳೆಯಾಗಿದೆ. ಒಂದು ಎಕರೆಯಲ್ಲಿ ಟೊಮೆಟೊ ಬೆಳೆದು ರೈತ 20 ಲಕ್ಷಕ್ಕೂ ಅಧಿಕ ಲಾಭ ಪಡೆದಿದ್ದಾನೆ. ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ಬಸ್ತಿಹಳ್ಳಿಯ ಯುವ ರೈತ ಭೈರೇಶ್ ಪೊಲೀಸ್ ಕರ್ತವ್ಯದ ಜೊತೆ ಕೃಷಿಯಲ್ಲಿ ತೊಡಗಿ ಸಾಕಷ್ಟು ಲಾಭ ಗಳಿಸಿದ್ದಾರೆ. ಇದುವರೆಗೆ ಒಟ್ಟು ಏಳು ಬೀಡು ಕಟಾವು ಮಾಡಿ 1000 ಬಾಕ್ಸ್ ಟೊಮೆಟೊ ಕೊಯ್ದಿರುವ ರೈತ ಇದುವರೆಗೆ 16 ಲಕ್ಣಕ್ಕೂ ಅಧಿಕ ಪ್ರಮಾಣದ ಲಾಭಗಳಿಸಿದ್ದಾರೆ.
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಕೆಆರ್ಎಸ್ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. 2,459 ಕ್ಯೂಸೆಕ್ ಒಳ ಹರಿವು ಇದ್ದು, 3,44 ಕ್ಯೂಸೆಕ್ ಹೊರ ಹರಿವು ಇದೆ. ಇಂದಿನ ನೀರಿನ ಮಟ್ಟ 88.78 ಅಡಿ ಇದೆ. ಗರಿಷ್ಠ ಮಟ್ಟ 124.80 ಅಡಿ.
ಬೆಂಗಳೂರು: ಬೆಂಗಳೂರು ನಗರದಲ್ಲಿ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಕಳೆದ 11 ದಿನಗಳಲ್ಲಿ 178 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಈ ವರ್ಷ BBMP ವ್ಯಾಪ್ತಿಯಲ್ಲಿ 3565 ಡೆಂಘೀ ಶಂಕಿತರ ಗುರುತು ಪತ್ತೆಯಾಗಿದ್ದು, ಈ ಪೈಕಿ 1009 ಜನರ ರಕ್ತದ ಮಾದರಿ ಪರೀಕ್ಷೆಗೆ ರವಾನೆ ಮಾಡಲಾಗಿದೆ. 1009 ಜನರ ಪೈಕಿ 905 ಜನರಿಗೆ ಡೆಂಘೀ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಈವರೆಗೆ 919 ಡೆಂಘೀ ಸೋಂಕು ಪ್ರಕರಣ ಪತ್ತೆಯಾಗಿದ್ದು, ಡೆಂಘೀ ಜ್ವರದಿಂದ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. 2022ರಲ್ಲಿ BBMP ವ್ಯಾಪ್ತಿಯಲ್ಲಿ 585 ಡೆಂಘೀ ಕೇಸ್ ಪತ್ತೆಯಾಗಿದ್ದವು.
ಬೆಂಗಳೂರು: ಹಾಲಿನ ದರ ಏರಿಕೆಗೆ ಹಾಲು ಒಕ್ಕೂಟಗಳಿಂದ ಒತ್ತಾಯ ಹಿನ್ನೆಲೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಎಲ್ಲ ಹಾಲು ಒಕ್ಕೂಟದ ನಿರ್ದೇಶಕರ ಜೊತೆ ಸಭೆ ನಡೆಸಲಿದೆ. ನಂದಿನಿ ಹಾಲು, ಮೊಸರು ದರ ಏರಿಕೆ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ. ಹಾಲು ಒಕ್ಕೂಟ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 5 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ.
Published On - 8:04 am, Fri, 14 July 23