ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಬೆಂಗಳೂರಿಗೆ ಭೇಟಿ ಕೊಟ್ಟಾಗ ಮೋದಿಯವರನ್ನು ನೋಡಲು ಬಿಜೆಪಿ ನಾಯಕರು ಬ್ಯಾರಿಗೇಟ್ ಹಿಂದೆ ನಿಂತ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ರಾಜ್ಯ ರಾಜಕೀಯದಲ್ಲಿ ವ್ಯಂಗ್ಯ-ಪ್ರತಿಕ್ರಿಯೆಗಳು ಮುಂದುವರೆದಿವೆ. ಇನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಸೂಚನೆ ಮೇರೆಗೆ ದೆಹಲಿಯ ಕಾವೇರಿ ಜಲ ನಿಯಂತ್ರಣ ಮಂಡಳಿಯಲ್ಲಿಂದು ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಸಭೆ ಇದೆ(Cauvery dispute). ಸಭೆಯಲ್ಲಿ ರಾಜ್ಯದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಭಾಗಿಯಾಗಲಿದ್ದು ತಮಿಳುನಾಡಿಗೆ ನೀರು ಹರಿಸಿರುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮತ್ತೊಂದೆಡೆ ಧಾರವಾಡ ಜಿಲ್ಲೆ ನವಲಗುಂದ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಇಂದು ಸುದ್ದಿಗೋಷ್ಠಿ ಕರೆದಿದ್ದು ತೀವ್ರ ಕುತೂಹಲ ಕೆರಳಿಸಿದೆ. ಜೊತೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕೂಡ ಸುದ್ದಿಗೋಷ್ಠಿ ಕರೆದಿದ್ದಾರೆ. ಇದೆಲ್ಲದರ ಜೊತೆ ಆಗಸ್ಟ್ 30ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದ್ದು ಭರ್ಜರಿ ಸಿದ್ಧತೆ ನಡೆದಿದೆ. ಸಿಎಂ, ಡಿಸಿಎಂ ಮೈಸೂರಿನಲ್ಲಿದ್ದಾರೆ. ಇನ್ನು ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನಲ್ಲಿ ಸತತ 8 ಗಂಟೆಗಳ ಕಾಲ ಕೆಡಿಪಿ ಸಭೆ ನಡೆಸಿದರು. ಸಭೆಯ ಕೊನೆಯಲ್ಲಿ ಅಧಿಕಾರಿಗಳ ವಿರುದ್ಧ ಫುಲ್ ಗರಂ ಆದ ಸಿದ್ದರಾಮಯ್ಯ, ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಖಾತೆ, ಪೋಡಿ ಮಾಡಿಸಿ ಅಂತಾ ಜನ ನನ್ನ ಬಳಿ ಬರುತ್ತಿದ್ದಾರೆ. ಅಧಿಕಾರಿಗಳು ಜನಪರ ಕೆಲಸ ಮಾಡಿದರೆ ಸಿಎಂ ಬಳಿ ಏಕೆ ಬರುತ್ತಾರೆ? ಅಧಿಕಾರಿಗಳು ಜನರ ಕೆಲಸ ಮಾಡಲು ನೆಪ ಹೇಳುತ್ತಿದ್ದಾರೆ. ಜಾತಿ ಪ್ರಮಾಣಪತ್ರ ಪಡೆಯಲು ನೂರೆಂಟು ಸಲ ಅಲೆಯಬೇಕಾ? ಎಲ್ಲಾ ಸೌಲಭ್ಯ ಪಡೆದರೂ ಜನರ ಕೆಲಸ ಏಕೆ ಮಾಡುತ್ತಿಲ್ಲ? ಜನರು ನಮ್ಮ ಮಾಸ್ಟರ್‌ಗಳು, ಅಧಿಕಾರಿಗಳು, ಜನಪ್ರತಿನಿಧಿಗಳಲ್ಲ. ಬರಿಗಾಲಿನಲ್ಲಿ ಬರುವ ಜನ ನನ್ನ ಮಾಲೀಕರು, ಕಾರಿನಲ್ಲಿ ಬರುವ ಅಧಿಕಾರಿಗಳಲ್ಲ. ಜನ ಇರುವುದಕ್ಕೆ ನಾವೆಲ್ಲಾ ಇಲ್ಲಿ ಇರುವುದು ಎಂದರು.
ತಮಿಳುನಾಡಿಗೆ 15 ದಿನ 5,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಹೊರಡಿಸಿದ ಹಿನ್ನೆಲೆ ಆಕ್ರೋಶಗೊಂಡಿರುವ ಮಂಡ್ಯ ರೈತರು, ರಕ್ತ ಕೊಟ್ಟೇವು ನೀರು ಕೊಡೆವು ಎಂದು ಹೇಳಿದ್ದಾರೆ. ನಾಳಿನ ಸಭೆ ನೋಡಿ ಹೋರಾಟದ ರೂಪರೇಷೆಗೆ ರೈತರ ತೀರ್ಮಾನ ಮಾಡಿದ್ದಾರೆ. ಕೇಸ್ ಹಾಕಿದರೆ ಜೈಲಿಗೆ ಹೋಗಲು ಸಿದ್ಧ ಎಂದು ಅನ್ನದಾತರು ಹೇಳಿದ್ದಾರೆ.
ಮೈಸೂರು: ಗೃಹಲಕ್ಷ್ಮೀ ಯೋಜನೆ ಜಾರಿ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಮಾಡಿರುವ ವ್ಯವಸ್ಥೆ ಬಗ್ಗೆ ಇಂದು ಡ್ರೈ ರನ್ ಮಾಡಿದ್ದೇವೆ. ಎಲ್ಲಾ ಕಡೆ ಮಾಡಿಕೊಂಡಿರುವ ಸಿದ್ದತೆ ಪರಿಶೀಲಿಸಿದ್ದೇವೆ. ನಾಳೆಯೂ ಪರಿಶೀಲನೆ ಮಾಡುತ್ತೇವೆ. ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಮಾತ್ರ ಮುಖ್ಯವಲ್ಲ. ಈಗಾಗಲೇ 50 ಲಕ್ಷ ಫಲಾನುಭವಿಗಳಿಗೆ ಪಟ್ಟಿ ರೆಡಿಯಾಗಿದೆ. ಹಂತ ಹಂತವಾಗಿ ಎಲ್ಲಾ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಯೋಜನೆ ಹಣ ತಲುಪಲಿದೆ. ಈ ಕಾರ್ಯಕ್ರಮ ಪಕ್ಷಾತೀತವಾಗಿದೆ. ಆಯಾಯ ಕ್ಷೇತ್ರದ ಶಾಸಕರು ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.
ಮೈಸೂರು: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಇದೇ ಅಂತಿಮವಲ್ಲ, ನಾಳೆ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸುತ್ತೇವೆ. ಸುಪ್ರೀಂಕೋರ್ಟ್ ನೀಡುವ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ. ನಮ್ಮ ರೈತರ ಹಿತ ಮುಖ್ಯ, ವಿವಾದ ಬಗೆಹರಿಯುವುದು ಅಷ್ಟೇ ಮುಖ್ಯ. ನಾವು ಬಿಟ್ಟ ನೀರು ಬಿಳಿಗುಂಡ್ಲು ಮಾಪನ ಕೇಂದ್ರ ತಲುಪಲು 5 ದಿನ ಬೇಕು. ಬೀಗ ಅವರ ಕೈಯಲ್ಲಿದೆ, ಎಷ್ಟು ನೀರು ಬಿಡುತ್ತೇವೆ ಎಂಬುದರಲ್ಲಿ ಗೊಂದಲವಿಲ್ಲ ಎಂದರು.
ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ ವಿಚಾರವಾಗಿ ಬೆಂಗಳೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಮಾಜಿ ಡಿಸಿಎಂ ಗೋವಿಂದ ಎಂ ಕಾರಜೋಳ, ನೀರು ಕಡಿಮೆಯಾಗಿದ್ದರಿಂಂದ ನಮ್ಮ ರೈತರಿಗೆ ನೀರು ಕೊಡುವ ಪರಿಸ್ಥಿತಿ ಇಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬಾರದು. CWRC ಸೂಚನೆಯನ್ನು ಕರ್ನಾಟಕ ಸರ್ಕಾರ ಒಪ್ಪಬಾರದು. ನಾಳಿನ ಸಭೆಯಲ್ಲಿ ನೀರು ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಈ ವರ್ಷ ನೀರು ಬಿಡಲು ಆಗಲ್ಲ ಎಂದು ‘ಸುಪ್ರೀಂ‘ಗೆ ಮನವರಿಕೆ ಮಾಡಲಿ ಎಂದರು.
ಪಿಎಸ್ ಅಧಿಕಾರಿ ಅಜಯ್ ಹಿಲೋರಿಗೆ ಡಿಐಜಿಪಿ ಆಗಿ ಭಡ್ತಿ ನೀಡಲಾಗಿದೆ. ಈಶಾನ್ಯ ವಲಯ, ಕಲ್ಬುರ್ಗಿ DIGPಯಾಗಿ ಅಜಯ್ ಹಿಲೋರಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಯಚೂರು: ಕೇಂದ್ರದ ಇ-ಬಸ್ ಯೋಜನೆಯಿಂದ ರಾಜ್ಯಕ್ಕೆ ಹೆಚ್ಚುವರಿ ಬಸ್ ಬೇಡಿಕೆ ವಿಚಾರವಾಗಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಮೊನ್ನೆ ಪತ್ರ ಬಂದಿದೆ. ಪ್ರಧಾನಿ ಮಂತ್ರಿಗಳು ದೇಶ್ಯಾದ್ಯಂತ 15000 ಬಸ್ ಕೊಡ್ತಿನಿ ಅಂತ ಹೇಳಿದ್ದಾರೆ. ಈ ಬಸ್ ಗಳು ಬಹಳ ದುಬಾರಿಯಾಗಿವೆ. ಹೀಗಾಗಿ ಸಬ್ಸಿಡಿ ಕೊಡಬೇಕು. ಈ ಹಿಂದೆ ಸಬ್ಸಿಡಿ ಕೊಡುತ್ತಿದ್ದರು. ಈಗ ನಿಲ್ಲಿಸಿದ್ದಾರೆ. ಈಗ ಮತ್ತೆ ಸಬ್ಸಿಡಿ ಕೊಟ್ಟರೆ ನಗರ ಅಷ್ಟೇ ಅಲ್ಲ ಗ್ರಾಮೀಣ ಭಾಗದಲ್ಲೂ ಈ ಬಸ್ಗಳನ್ನ ಹಾಕಬಹುದು. ಈಗ 24000 ಬಸ್ ಗಳಿವೆ. 10 ವರ್ಷಗಳ ಹಿಂದೆಯೂ ಇಷ್ಟೆ ಬಸ್ಗಳಿದ್ದವು. ಈಗ ಜನಸಂಖ್ಯೆ ಹೆಚ್ಚಿರುವುದರಿಂದ ಇನ್ನೂ 10-12 ಸಾವಿರ ಬಸ್ಗಳ ಅವಶ್ಯಕತೆಯಿದೆ ಎಂದರು.
ರಾಮನಗರದಿಂದ ಕನಕಪುರಕ್ಕೆ ರಾಜೀವ್ ಗಾಂಧಿ ವಿವಿ ಶಿಫ್ಟ್ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಅವಧಿಯಲ್ಲೇ ಇದಕ್ಕೆ ಹಣ ಬಿಡುಗಡೆ ಆಗಿತ್ತು. ಟೆಂಡರ್ ಸಹ ಆಗಿ ನಿಂತಿತ್ತು, ಈಗ ರಾಜಕೀಯವಾಗಿ ಎತ್ತಿಕಟ್ಟುತ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಹೋರಾಟವನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.
ರಾಯಚೂರು: ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ಕಾನೂನು ಚೆನ್ನಾಗಿದೆ, ಎಲ್ಲಾ ವ್ಯವಸ್ಥೆಯೂ ಉತ್ತಮವಾಗಿದೆ. ಬೊಮ್ಮಾಯಿ ವಿಪಕ್ಷದಲ್ಲಿದ್ದಾರೆ, ಅದಕ್ಕೆ ಏನೋ ಒಂದು ಮಾತಾಡಬೇಕು. ಬಸವರಾಜ ಬೊಮ್ಮಾಯಿ ಅವರಿಗೂ ಎರಡು ವರ್ಷ ಅವಕಾಶ ಸಿಕ್ಕಿತ್ತು. ಸರಿಯಾಗಿ ಆಡಳಿತ ನಡೆಸಿದ್ದರೆ ಜನರು ಯಾಕೆ ಮನೆಗೆ ಕಳಿಸುತ್ತಿದ್ದರು ಎಂದರು.
ಕೊವಿಡ್ ಅಕ್ರಮದ ತನಿಖೆಗೆ ಆಯೋಗ ರಚನೆ ಮಾಡಿದ ವಿಚಾರವಾಗಿ ಮಾತನಾಡಿದ ಮಾಜಿ ಆರೋಗ್ಯ ಸಚಿವ ಕೆ ಸುಧಾಕರ್, ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕೊವಿಡ್ ನಿಯಂತ್ರಿಸಲು ಸಫಲ ಆಗಿತ್ತು. ಈಗ ಅಕ್ರಮ ಆಗಿದೆ ಅಂತಾ ಆರೋಪ ಮಾಡಿ ತನಿಖೆಗೆ ಮುಂದಾಗಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದರು. ಕೊವಿಡ್ ವಿಚಾರದಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ಸಿಗರು ಸಹಕಾರ ಕೊಡಲಿಲ್ಲ. ಕೊವಿಡ್ ಇದ್ದಾಗ ಕಾಂಗ್ರೆಸ್ನವರಿಗೆ ಸಾಮಾಜಿಕ ಜವಾಬ್ದಾರಿ ಇರಲಿಲ್ಲ. ಆಗ ಪಾದಯಾತ್ರೆ ಮಾಡಿದವರ ವಿರುದ್ಧ ಪ್ರಕರಣ ಹಾಕಲಾಗಿತ್ತು. ಇವರ ಸರ್ಕಾರ ಬಂದ ನಂತರ ಆ ಕೇಸ್ಗಳನ್ನೆಲ್ಲಾ ಹಿಂಪಡೆದಿದ್ದಾರೆ. ತನಿಖೆ ನಡೆಸುವ ಉದ್ದೇಶ ಇದ್ದಿದ್ದರೆ ಲೋಕಾಯುಕ್ತಕ್ಕೆ ಕೊಡಬಹುದಿತ್ತು ಎಂದರು.
ಹಾಸನದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸದ ಹಿನ್ನೆಲೆ ಡಿಸಿ ವಿರುದ್ಧ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಗರಂ ಆದರು. ಪ್ರತಿಭಟನೆ ಆರಂಭವಾಗಿ ಅರ್ಧ ಗಂಟೆಯಾದರೂ ಸ್ಥಳಕ್ಕೆ ಬಾರಲಿಲ್ಲ. ಒಬ್ಬ ಸಂಸದ ಪ್ರತಿಭಟನೆ ಮಾಡುತ್ತಿದ್ದರು, ಬಂದು ಸಮಸ್ಯೆ ಕೇಳಿಲ್ಲ. ಡಿಸಿ ಎಲ್ಲಿ ಹೋಗಿದ್ದಾರೆ? ಪ್ರತಿಭಟನೆ ಗೊತ್ತಿದ್ದರೂ ಸ್ಥಳಕ್ಕೆ ಯಾಕೆ ಬಂದಿಲ್ಲ? ಸ್ಥಳಕ್ಕೆ ಡಿಸಿ ಬರದಿದ್ದರೆ ನಾವು ಪ್ರತಿಭಟನೆ ಮತ್ತೆ ಹೆಚ್ಚು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಒಬ್ಬ ಎಂಪಿ, ಒಬ್ಬ ಎಂಎಲ್ಎ, ಮಾಜಿ ಶಾಸಕರಿಗೆ ಇಲ್ಲಿ ಬೆಲೆ ಇಲ್ವಾ? ಎಂದು ಪ್ರಶ್ನಿಸಿದಾಗ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ತಬ್ಬಿಬ್ಬಾದರು.
ಮುಂದಿನ ಬಾರಿಯೂ ಕೇಂದ್ರದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಮೋದಿ ನೇತೃತ್ವದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು. ಜನವರಿ-ಫೆಬ್ರವರಿಯಲ್ಲಿ ಎಂಪಿ ಚುನಾವಣೆ ಘೋಷಣೆ ಆಗಲಿದೆ. ಕಲ್ಲಿದ್ದಲಿಗೆ ಸಂಬಂಧಿಸಿದ ಯೋಜನೆಗೆ ಪ್ರಸ್ತಾವನೆ ಕೊಡಿ. ಒಂದು ತಿಂಗಳಲ್ಲಿ ಇಲಾಖೆಯಿಂದ ಅನುದಾನ ನೀಡುತ್ತೇವೆ ಎಂದು ಐಐಟಿ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಭಾಲ್ಕಿಯ ಬಿಜೆಪಿ ಮುಖಂಡ ಡಿಕೆ ಸಿದ್ರಾಮ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. 2018 ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಫರ್ಧೆ ಮಾಡಿದ್ದ ಡಿ.ಕೆ. ಸಿದ್ರಾಮ್ ಅವರನ್ನು ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ. 2023ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಗೆ ಮಾಡಿದ್ದರು. ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡು ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಮುಂದಿನ 5 ವರ್ಷ ನಿಖಿಲ್ರನ್ನು ಚುನಾವಣೆಗೆ ಕರೆತರುವ ಪ್ರಶ್ನೆ ಇಲ್ಲ ಎಂದು ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಕಲಾವಿದನಾಗಿ ಜೀವನ ರೂಪಿಸಿಕೊಳ್ಳುವಂತೆ ನಿಖಿಲ್ಗೆ ಹೇಳಿದ್ದೇನೆ. ರಾಜಕೀಯದ ಸಹವಾಸಕ್ಕೆ ಹೋಗದೆ, ಭಗವಂತ ಕೊಟ್ಟ ಕಲೆ ಇದೆ. ನಿಖಿಲ್ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ 3 ಚಿತ್ರ ನಿರ್ಮಾಣ ಮಾಡಲು ಹಲವು ಸಂಸ್ಥೆಗಳು ಬಂದಿವೆ. ಈಗಾಗಲೇ ನಿಖಿಲ್ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದಾನೆ. ಮಂಡ್ಯ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಲು ತಯಾರಿರಲಿಲ್ಲ. ಕಾರ್ಯಕರ್ತರು ಹಾಗೂ ಶಾಸಕರ ಒತ್ತಡಕ್ಕೆ ನಿಖಿಲ್ ತಲೆ ಕೊಟ್ಟ. ಸೋಲು, ಗೆಲವು ಸಾಮಾನ್ಯ, ಆ ಬಗ್ಗೆ ಚಿಂತಿಸುವುದಿಲ್ಲ. ಹೆಚ್.ಡಿ.ದೇವೇಗೌಡರು, ನಾನು ಚುನಾವಣೆಯಲ್ಲಿ ಸೋತಿಲ್ವಾ? ಎಂದರು.
ನಾವು ಯಾರನ್ನೂ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ. ನಮ್ಮ ಪಕ್ಷ ದುರ್ಬಲವಿರುವ ಕಡೆ ಸಂಘಟನೆ ಮಾಡಬೇಕಿದೆ. ಪಕ್ಷ ಸಂಘಟನೆ ಮಾಡಿ ಅಂತಾ ಅಧ್ಯಕ್ಷರು, ವರಿಷ್ಠರು ಹೇಳಿದ್ದಾರೆ. ಆಡಳಿತ, ಪಕ್ಷ ಸಂಘಟನೆಯನ್ನು ಜೊತೆಯಲ್ಲೇ ಮಾಡಬೇಕಿದೆ ಎಂದರು.
ಜೆಡಿಎಸ್ನ ಯಾವುದೇ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. JDS ಶಾಸಕರು ಪಕ್ಷ ಬಿಡುತ್ತಾರೆನ್ನುವುದು ಊಹಾಪೋಹ ಅಷ್ಟೇ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ. ಮುಂದಿನ ತಿಂಗಳು 10ನೇ ತಾರೀಖು ಒಂದು ಸಭೆ ಮಾಡುತ್ತೇನೆ. ಸಭೆಗೆ ಎಲ್ಲಾ ಜಿಲ್ಲೆಗಳಿಂದ ಜೆಡಿಎಸ್ ಕಾರ್ಯಕರ್ತರು ಬರುತ್ತಾರೆ. 91ನೇ ವಯಸ್ಸಿನ ನನ್ನನ್ನು ಯಾರೂ ಕೈಬಿಡಬೇಡಿ ಎಂದು ಹೆಚ್.ಡಿ.ದೇವೇಗೌಡ ಮನವಿ ಮಾಡಿದರು.
‘ಗೃಹಲಕ್ಷ್ಮೀ’ಗೆ ಈವರೆಗೆ 1.11 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಲು ಕೊನೆ ದಿನಾಂಕ ಇಲ್ಲ. ಜನರು ಮತ್ತೆ ಆಶೀರ್ವಾದ ನೀಡಿದರೆ ಯೋಜನೆ ನಿರಂತರವಾಗಿ ಜಾರಿಯಾಗುತ್ತೆ. ಯಾವ ಸರ್ಕಾರ ಬಂದರೂ ಇಂತಹ ಜನಪ್ರಿಯ ಯೋಜನೆ ನಿಲ್ಲಲ್ಲ. 5 ಗ್ಯಾರಂಟಿಗಳಲ್ಲೇ ಗೃಹಲಕ್ಷ್ಮೀ ಯೋಜನೆ ಬಹಳಷ್ಟು ಸದ್ದು ಮಾಡ್ತಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ನನಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟನೆ ನೀಡಿದರು. ನಾನು ಲೋಕಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿ ಕೂಡ ಅಲ್ಲ. ಎಐಸಿಸಿ ಅಧ್ಯಕ್ಷ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಯವರು ನನ್ನನ್ನು ಕರೆದಿಲ್ಲ. ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ರಿಂದಲೂ ಆಹ್ವಾನ ಬಂದಿಲ್ಲ. ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರಿಂದಲೂ ಆಹ್ವಾನ ಬಂದಿಲ್ಲ ಎಂದರು.
ಮಾಜಿ ಪ್ರಧಾನಿ, JDS ವರಿಷ್ಠ ಹೆಚ್.ಡಿ.ದೇವೇಗೌಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ನಮಗೆ ಯಾವ ಪಕ್ಷದ ಮೇಲೂ ದ್ವೇಷ ಇಲ್ಲ. ನಮ್ಮ ಪಕ್ಷ ಸಂಘಟನೆಗೊಳಿಸಿ ಉಳಿಸಬೇಕೆಂದು ಕೆಲಸ ಮಾಡುತ್ತಿದ್ದೇವೆ. ನಾನು ಕೂಡ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ಈ 2 ಪಕ್ಷಗಳ ನಡುವೆ ನಮ್ಮ ಪಕ್ಷ ಉಳಿಸುವ ಸಂಕಲ್ಪ ಮಾಡಿದ್ದೇನೆ. ಈ ದೇಶದ ರಾಜಕಾರಣ ಹೇಗೆ ನಡೆಯುತ್ತಿದೆ ಎಂದು ನನಗೆ ಗೊತ್ತಿದೆ. ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ JDS ಕೋರ್ ಕಮಿಟಿ ಸದಸ್ಯರು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ ಎಂದರು.
ಮೈಸೂರು ಜಿ.ಪಂ. ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯುತ್ತಿದ್ದು ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಮೈಸೂರು ಜಿಲ್ಲಾ ಕೆಡಿಪಿ ಸದಸ್ಯರಾಗಿ ನೇಮಕವಾಗಿರುವ ಯತೀಂದ್ರ ವೇದಿಕೆಯ ಮೊದಲ ಸಾಲಿನಲ್ಲಿ ಕುಳಿತಿದ್ದಾರೆ. ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಶ್ರೀವತ್ಸ, ಬಿಜೆಪಿ ಸಂಸದ ಪ್ರತಾಪ್ ಸಿಂಹ, ಎಂಎಲ್ಸಿ ಹೆಚ್.ವಿಶ್ವನಾಥ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ.
ವಲಸಿಗ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಮರು ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದು
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ಪಕ್ಷ ಬಿಟ್ಟು ಹೋದವರಷ್ಟೇ ಅಲ್ಲ, ಯಾರೇ ಬಂದರೂ ಸ್ವಾಗತ. ರಾಜ್ಯದಲ್ಲಿ ಬಿಜೆಪಿ ಎಲ್ಲಿದೆ?, ಬಿಜೆಪಿ ದಿವಾಳಿಯಾಗಿದೆ. ಈವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಪ್ರಧಾನಿ ಮೋದಿಯೇ ಭೇಟಿಗೆ ಬರಬೇಡಿ ಎಂದಿದ್ದರಂತೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಚಾಕುವಿನಿಂದ ಇರಿದು ಅಪ್ರಾಪ್ತೆ ಅಪಹರಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಮನಗರದ ಜ್ಯೂನಿಯರ್ ಕಾಲೇಜು ಬಳಿ ಅಪ್ರಾಪ್ತೆ ಸಂಜನಾಗೆ ಚಾಕುವಿನಿಂದ ಇರಿದು ಅಪಹರಿಸಿ ಕರೆದುಕೊಂಡು ಹೋಗುತ್ತಿದ್ದ ಇನ್ನೋವಾ ಚೇಸ್ ಮಾಡಿ ಯುವಕನನ್ನು ಬಂಧಿಸಲಾಗಿದೆ. ಸಂಜನಾಳನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದಿನಿಂದ 3 ದಿನ ಮೈಸೂರಿನಲ್ಲಿ ಪ್ರವಾಸ ಮಾಡಲಿದ್ದೇನೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವೆ. ಆ.30ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುತ್ತೆ. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಜನರು ಆಗಮಿಸುವ ನಿರೀಕ್ಷೆ ಇದೆ. ಆ.30ರಂದು ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ ಎಂದರು.
ಬಿಜೆಪಿಯ ಯಾವ ಶಾಸಕರೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ ನೀಡಿದರು. ಅಪಪ್ರಚಾರ ಮೂಲಕ ವಿಪಕ್ಷವನ್ನು ವೀಕ್ ಮಾಡುವ ಕೆಲಸ ಮಾಡಲಾಗುತ್ತಿದೆ. ಅವರ ದೌರ್ಬಲ್ಯ ಮುಚ್ಚಿಕೊಳ್ಳಲು ಅಪಪ್ರಚಾರ ಮಾಡ್ತಿದ್ದಾರೆ. ಕುಮಾರ್ ಬಂಗಾರಪ್ಪ ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ರಾಮನಗರದ ಐಬಿ ರಸ್ತೆಯ ಜ್ಯೂನಿಯರ್ ಕಾಲೇಜು ಬಳಿ ಚಾಕುವಿನಿಂದ ಇರಿದು ಸಂಜನಾ ಎಂಬ ಅಪ್ರಾಪ್ತೆಯನ್ನು ಯುವಕ ಅಪಹರಿಸಿದ್ದಾರೆ. ಅಪ್ರಾಪ್ತೆ ಸಂಜನಾಗೆ ಚಾಕುವಿನಿಂದ ಇರಿದು ಬಳಿಕ ಕಾರಿನಲ್ಲಿ ಹೊತ್ತೊಯ್ದಿದ್ದಾರೆ. ಅಪ್ರಾಪ್ತೆಯನ್ನು ರಕ್ಷಿಸಿಲು ಸ್ಥಳೀಯ ನಿವಾಸಿಗಳು ಯತ್ನಿಸಿದ್ದು ಕಿಡ್ನ್ಯಾಪ್ ಮಾಡುತ್ತಿದ್ದ ಕಾರಿನ ಮೇಲೆ ಕಲ್ಲೆಸೆದಿದ್ದಾರೆ. ಕಲ್ಲೇಟಿಗೂ ಹೆದರದೇ ಅಪ್ರಾಪ್ತೆ ಅಪಹರಿಸಿ ಯುವಕ ಪರಾರಿಯಾಗಿದ್ದಾನೆ.
ಮಂಡ್ಯ ಜಿಲ್ಲೆಯ ರೈತರಲ್ಲಿ ಆತಂಕ ಮುಂದುವರೆದಿದೆ. ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 101 ಅಡಿ ಆಳಕ್ಕೆ ಕುಸಿದಿದೆ. ಕೆಆರ್ಎಸ್ ಜಲಾಶಯದ ಒಳ ಹರಿವು 1378 ಕ್ಯೂಸೆಕ್. ಕೆಆರ್ಎಸ್ ಜಲಾಶಯದ ಹೊರ ಹರಿವು 2345 ಕ್ಯೂಸೆಕ್ ನೀರು.
ಬಂಗಾರಪೇಟೆ ನಿವಾಸಿ ವಿನೋದ್ ಕುಮಾರ್ಗೆ ಪೋಕ್ಸೋ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಿ ಕೋಲಾರ ಜಿಲ್ಲಾ ಹೆಚ್ಚುವರಿ, ವಿಶೇಷ ಶೀಘ್ರಗತಿ ನ್ಯಾಯಾಲಯ ಆದೇಶ ಹೊರಡಿಸಿದೆ. ಹಾಗೂ ಅಪರಾಧಿಗೆ 60 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪುಡಿರೌಡಿಗಳ ಪುಂಡಾಟ ಹೆಚ್ಚಾಗಿದೆ. ಪಾನಿಪೂರಿ ತಿಂದ ಹಣ ಕೇಳಿದ್ದಕ್ಕೆ ಪುಡಿರೌಡಿ ರಂಜಿತ್ ಆವಾಜ್ ಹಾಕಿದ್ದಾನೆ. ಇದನ್ನು ಪ್ರಶ್ನಿಸಿದ ಸಾರ್ವಜನಿಕರಿಗೂ ಶರ್ಟ್ ಬಿಚ್ಚಿ ಆವಾಜ್ ಹಾಕಿದ್ದಾನೆ. ಪುನೀತ್ ಎಂಬಾತನ ಪಾನಿಪೂರಿ ಅಂಗಡಿಯನ್ನು ಧ್ವಂಸಗೊಳಿಸಿ ಆರೋಪಿ ರಂಜಿತ್ ಎಸ್ಕೇಪ್ ಆಗಿದ್ದಾನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಎಎಲ್ ಏರ್ಪೋರ್ಟ್ನಿಂದ ಮೈಸೂರಿಗೆ ತೆರಳಿದ್ದಾರೆ.
ಚಂದ್ರಯಾನ-3 ಯಶಸ್ವಿ ಬೆನ್ನಲ್ಲೇ ಆದಿತ್ಯ-L1 ಮಿಷನ್ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ಸೆಪ್ಟೆಂಬರ್ 2ರಂದು ಆದಿತ್ಯ-L1 ಉಡಾವಣೆ ಸಾಧ್ಯತೆ ಇದೆ. ಇಂದು ಅಥವಾ ನಾಳೆ ಅಧಿಕೃತ ಉಡಾವಣಾ ದಿನಾಂಕ ನಿಗದಿ ಸಾಧ್ಯತೆ. ಆದಿತ್ಯ-L1 ಮಿಷನ್ ಸೂರ್ಯನ ಕುರಿತು ಅಧ್ಯಯನ ಮಾಡಲಿದೆ. ಅಗತ್ಯವಸ್ತು & ತಂತ್ರಜ್ಞಾನ ಸಿದ್ಧಪಡಿಸಿಕೊಳ್ಳಲು ಇಸ್ರೋ ಮುಂದಾಗಿದೆ.
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷೆ ಸೌಗಂಧಿಕಾಗೆ ವೈಯಕ್ತಿಕ ತೇಜೋವಧೆ ಮಾಡಿದ್ದು ಫೇಸ್ಬುಕ್ನಲ್ಲಿ ಅವಹೇಳನ ಆರೋಪ ಹಿನ್ನೆಲೆ ಐಪಿಸಿ ಸೆಕ್ಷನ್ 504, 509ರ ಅಡಿ ಎಫ್ಐಆರ್ ದಾಖಲಾಗಿದೆ.
ಮೈಸೂರಿನ ಹುಣಸೂರು ತಾಲೂಕು ಮೂಕನಹಳ್ಳಿ ಗ್ರಾಮದ ಮನೆಯಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ರುದ್ರೇಗೌಡ (59) ಆತ್ಮಹತ್ಯೆ ಮಾಡಿಕೊಂಡ ರೈತ. 3 ಎಕರೆ ಜಮೀನು ಹೊಂದಿದ್ದ ರುದ್ರೇಗೌಡರು 3 ಎಕರೆ ಜಮೀನಿನಲ್ಲಿ ತಂಬಾಕು ರಾಗಿ ಬೆಳೆ ಬೆಳೆದಿದ್ದರು. ಕೃಷಿ ಚಟುವಟಿಕೆಗಾಗಿ ಹುಣಸೂರಿನ ಬ್ಯಾಂಕ್ ಆಫ್ ಬರೋಡಾದಲ್ಲಿ 3 ಲಕ್ಷರೂ ಸಾಲ ಮಾಡಿದ್ದರು. ಗ್ರಾಮದಲ್ಲೂ ಸಹ ಕೈಸಾಲ ಮಾಡಿಕೊಂಡಿದ್ದರು.
ಇಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಸುದ್ದಿಗೋಷ್ಠಿ ಕರೆದಿದ್ದಾರೆ. ಬೆಳಗ್ಗೆ11:30 ಕ್ಕೆ ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ನೈಸ್ ಹಗರಣ ಮತ್ತು ಕಾವೇರಿ ನೀರು ವಿವಾದ ಸೇರಿ ಕೆಲ ಪ್ರಮುಖ ವಿಚಾರ ಪ್ರಸ್ತಾಪ ಮಾಡಲಿದ್ದಾರೆ.
ಆಂಧ್ರಪ್ರದೇಶd ತಿರುಮಲ ಅಲಿಪಿರಿ ವಾಕ್‌ವೇನಲ್ಲಿ ಅರಣ್ಯ ಇಲಾಖೆಯಿಂದ ಮತ್ತೊಂದು ಚಿರತೆ ಸೆರೆ ಸಿಕ್ಕಿದೆ. ಎರಡು ತಿಂಗಳ ಹಿಂದೆ ಕೌಶಿಕ್ ಎಂಬ ಬಾಲಕನ ಮೇಲೆ ದಾಳಿ ಮಾಡಿದ ಅದೇ ಪ್ರದೇಶದಲ್ಲಿ ಚಿರತೆ ಸಿಕ್ಕಿಬಿದ್ದಿದೆ. ಅಂತಿಮವಾಗಿ ಅರಣ್ಯ ಇಲಾಖೆಯಿಂದ ಆಪರೇಷನ್ ಚೀತಾ ಯಶಸ್ವಿಯಾಗಿದೆ. ನಾಲ್ಕನೇ ಚಿರತೆಯನ್ನು ಸೆರೆ ಹಿಡಿದು ನಿಟ್ಟುಸಿರು ಬಿಟ್ಟ ಅರಣ್ಯ ಸಿಬ್ಬಂದಿ.
ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಾಟಿಪಳ್ಳ ನಿವಾಸಿ ಶಾಕೀಬ್ ಅಲಿಯಾಸ್ ಶಬ್ಬು(33), ಚೊಕ್ಕಬೆಟ್ಟು ನಿವಾಸಿ ನಿಸಾರ್ ಹುಸೈನ್ ಅಲಿಯಾಸ್ ನಿಚ್ಚು ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 2.6 ಲಕ್ಷ ಮೌಲ್ಯದ MDMA ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಮೇಲೆ ಈ ಹಿಂದೆ ಕೊಲೆಯತ್ನ, ಹಲ್ಲೆ, ಸರಗಳ್ಳತನ, ಮನೆಗಳ್ಳತನ, ವಾಹನ ಕಳ್ಳತನದಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿವೆ.
ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಹಿನ್ನೆಲೆ ಇಂದು ಮೈಸೂರಿಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರಯಾಣ ಬೆಳೆಸಲಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ಕೈಗೊಂಡಿದ್ದು ಗೃಹಲಕ್ಷ್ಮಿ ಯೋಜನೆ ಪೂರ್ವಭಾವಿ ಸಭೆ ಇಂದು ನಡೆಯಲಿದೆ.
Published On - 8:03 am, Mon, 28 August 23