ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೋಲಾರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಗಾಂಧಿ ವೃತ್ತದವರೆಗೂ ಧರಣಿ ನಡೆಯಲಿದೆ. ಜನತಾ ದರ್ಶನದಲ್ಲಿ ಸಂಸದ ಮುನಿಸ್ವಾಮಿಗೆ ಅಪಮಾನ ಪ್ರಕರಣ, ಕ್ಲಾಕ್ ಟವರ್‌ನಲ್ಲಿ ತಲ್ವಾರ್ ದ್ವಾರ ನಿರ್ಮಿಸಲು ಅನುಮತಿ ಹಾಗೂ ಜಿಲ್ಲೆಯಲ್ಲಿ ಅಶಾಂತಿ, ರೈತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ. ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಮುನಿಸ್ವಾಮಿ, ಮಾಜಿ ಸಿಎಂ ಡಿವಿಎಸ್, ಡಾ.ಅಶ್ವತ್ಥ್ ನಾರಾಯಣ, K.S.ಈಶ್ವರಪ್ಪ, ಸಿ.ಟಿ.ರವಿ ಸೇರಿ ಹಲವರು ಬಿಜೆಪಿ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ತ್ರಿ ಪಕ್ಷಗಳು ಫುಲ್ ಆಕ್ಟಿವ್ ಆಗುತ್ತಿವೆ. ಇದರ ನಡುವೆ ರಾಜ್ಯದಲ್ಲಿ ಮಳೆ ಮಾಯವಾಗಿದ್ದು ಬರ ಸಿಡಿಲು ಬಡಿದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆಗಳು ಮುಂದುವರೆದಿವೆ. ಇದರೊಂದಿಗೆ ರಾಜ್ಯದಲ್ಲಾಗುತ್ತಿರುವ ಅಕ್ರಮ, ಮಳೆ, ರಾಜಕೀಯ, ಅಪರಾಧ ಹಾಗೂ ಇನ್ನಿತರ ಲೇಟೆಸ್ಟ್ ಅಪ್ಡೇಟ್ಸ್ ಟಿವಿ9 ಡಿಜಿಟಲ್ನಲ್ಲಿ.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆ ಘಟನೆ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಸನಾತನ ಧರ್ಮ ನಶಿಸಿ ಹಾಕೋದೇ ಉದ್ದೇಶವೆಂದು ಸ್ಟಾಲಿನ್ ಹೇಳ್ತಾರೆ. ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ಮಾಡಿರೋದೇ ಸನಾತನ ಧರ್ಮವನ್ನ ಮೂಲೋತ್ಪಾದನೆ ಮಾಡೋಕೆ ಎಂದು ಹೇಳುತ್ತಾರೆ. ಇದರ ಬೆನ್ನಲ್ಲೇ ಕೋಲಾರ, ಶಿವಮೊಗ್ಗ, ವಿಜಯಪುರದಲ್ಲಿ ಮೆರವಣಿಗೆ ಮಾಡಿ 30-40 ಅಡಿ ತಲ್ವಾರ್‌ಗಳನ್ನ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನ ಏನು ಮಾಡೋಕೆ ಹೊರಟಿದೆ ಎಂದು ಕಿಡಕಾರಿದ್ದಾರೆ.
ಬಾಗಲಕೋಟೆ: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗ್ತಿದೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ ‘ ಅವರು ಹೇಳುವ ಆರೋಪ ಸುಳ್ಳಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು ‘ಸರ್ಕಾರದ ಮಟ್ಟದಲ್ಲಿ ಹೇಳುವುದಾದರೆ ಅಂತಹದ್ದು ಯಾವುದೂ ಆಗಿಲ್ಲ. ಶಾಮನೂರು ಅತ್ಯಂತ ಹಿರಿಯರಿದ್ದಾರೆ, ಏಕೆ ಹೀಗೆ ಹೇಳಿದ್ರೋ ಗೊತ್ತಿಲ್ಲ. ಬುದ್ಧ ಬಸವ ಅಂಬೇಡ್ಕರ್ ಸಿದ್ಧಾಂತದಲ್ಲಿ ಪಕ್ಷ, ಸರ್ಕಾರ ನಂಬಿಕೆ ಇಟ್ಟಿದೆ. ಕಾಂಗ್ರೆಸ್ ಹುಟ್ಟಿನಿಂದ ಎಲ್ಲರಿಗೂ ಸಮಪಾಲು ಸಮಬಾಳು ತತ್ವ ಇದೆ ಎಂದರು.
ಬೆಂಗಳೂರು: 35 ಜನ ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಜಗದೀಶ ನೆಲಮಂಗಲ ಉಪ ವಿಭಾಗ, ಗೌತಮ್ ಕೆ.ಸಿ.ರಾಜ್ಯ ಗುಪ್ತವಾರ್ತೆ ಸೇರಿದಂತೆ 35 ಡಿವೈಎಸ್‌ಪಿಗಳನ್ನು ವರ್ಗಾವಣೆಗೊಳಿಸಲಾಗಿದೆ.
ಬೆಂಗಳೂರು: ಮೇಕೆದಾಟು ಪಾದಯಾತ್ರೆ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಹಿನ್ನಲೆ ಕಾಂಗ್ರೆಸ್ ನಾಯಕರ ವಿರುದ್ಧದ ಕೇಸ್ ದಾಖಲಾಗಿತ್ತು. ಬಳಿಕ ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್, ಈಶ್ವರ್ ಖಂಡ್ರೆ ವಿರುದ್ಧದ ಕೇಸ್ ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಪ್ರಕರಣ ರದ್ದು ಪಡಿಸಿದೆ.
ಯಾದಗಿರಿ : ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ. ಸಿ.ಪಿ.ಯೋಗೇಶ್ವರ್ ಈಗ ಹೇಳಿದ್ದಾರೆ, ನಾನು ಮೊದಲೇ ಹೇಳಿದ್ದೇನೆ. ಇದೇ ವೇಳೆ ‘ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಡಿಕೆ ಶಿವಕುಮಾರ್ ಷಡ್ಯಂತ್ರ ಮಾಡ್ತಿದ್ದಾರೆ. ಶಾಮನೂರು, ಹರಿಪ್ರಸಾದ್ ಮಾತನಾಡಲು ಡಿಕೆಶಿರದ್ದೇ ಡೈರೆಕ್ಷನ್ ಎಂದು ಹೇಳಿದ್ದಾರೆ.
ಬೆಂಗಳೂರು: ತಮಿಳುನಾಡಿನವರು ಮಾರುವೇಶದಲ್ಲಿ ಬಂದು ಕೆಆರ್ಎಸ್ ರೌಂಡ್ಸ್ ಹಾಕಲಿ, ಸಿಎಂ ಸ್ಟಾಲಿನ್ ಏನ್ ಬರೋದು ಬೇಡ, ನಮ್ಮನ್ನ ಏನು ಮಾಡಬೇಕು ಅನ್ಕೊಂಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನವರು ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇದು ಬಹಳ ನೋವಾಗುತ್ತದೆ, ಕೆಆರ್ಎಸ್ನಲ್ಲಿ ಪ್ರಾಮಾಣಿಕವಾಗಿ ನೀರಿಲ್ಲ. ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಹಾಕಿದೆ. ಅರ್ಜಿ ಏನಾಯ್ತು? ಅಲ್ಲಿಯವರೆಗೆ ನೀರು ಏನಾಗುತ್ತೆ, ಸತ್ಯ ಬೇಕು ನಮಗೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಕಲಬುರಗಿ : ಬರಪೀಡಿತ ಪ್ರದೇಶಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿದ್ದಾರೆ. ಹೌದು, ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಬಳಿ ಅತಿವೃಷ್ಟಿ, ಅನಾವೃಷ್ಟಿಯಿಂದ ಹಾಳಾದ ಬೆಳೆ ಪರಿಶೀಲಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕಾರ್ ಪೂಲಿಂಗ್‌ಗೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ‘ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 10 ದಿನ ಕಾಲಾವಕಾಶ ಕೋರಿದ್ದಾರೆ. ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲು 10 ದಿನ ಸಮಯಬೇಕು ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ಪೂಲಿಂಗ್ ಮಾಡಲು ಸರ್ಕಾರ ವಿರೋಧವಿಲ್ಲ. ಕೇಂದ್ರ ಸರ್ಕಾರವೂ ಕಾರ್ ಪೂಲಿಂಗ್‌ಗೆ ಸಹಕಾರ ಕೊಡ್ತಿದೆ. ಕಾರ್ ಪೂಲಿಂಗ್ ಬಗ್ಗೆ ನಾನು ಸ್ಟಡಿ ಮಾಡಬೇಕು ಎಂದಿದ್ದಾರೆ.
ಶಿವಮೊಗ್ಗ: ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ‘ಗಲಾಟೆಗೆ ಕಾರಣರಾದವರು ಯಾವುದೇ ಕೋಮಿಗೆ, ಯಾವುದೇ ಪಕ್ಷಕ್ಕೆ ಸೇರಿರಲಿ ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಬೆಳಗಾವಿ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗ: ಕಳೆದ ಮೂರ್ನಾಲ್ಕು ವರ್ಷದಲ್ಲಿ ಶಿವಮೊಗ್ಗದಲ್ಲಿ ಇಂತಹ ಕೋಮುಗಲಭೆಗಳು ಸೈಲೆಂಟ್ ಇದ್ದವು. ಈ ರೀತಿ ಮುಕ್ತವಾಗಿ ಬೀದಿಗೆ ಬಂದು ಗಲಭೆ ಮಾಡುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಅವರು ಬಲತು ಬಿಟ್ಟಿದ್ದಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲಿ ಹೇಳಿದರು. ‘ಶಿವಮೊಗ್ಗದ ಮುಸ್ಲಿಂರೇ ತಮ್ಮ ನೆಟ್ವರ್ಕ್ ಮೂಲಕ ಹೊರಗಿನವರನ್ನ ಕರೆಸಿ, ಇಂತಹ ಗಲಭೆ ಎಬ್ಬಿಸಿದ್ದಾರೆ. ಹೊರಗಿನವರು ಬಂದು ಇಂತಹ ಕೃತ್ಯ ಮಾಡಿದ್ದಾರೆ ಅಂತಾ ಶಿವಮೊಗ್ಗದವರನ್ನ ಬಿಡುವ ಹಾಗಿಲ್ಲ. ಇದೀಗ ಶಿವಮೊಗ್ಗ ತುಂಬಾ ಅಪಾಯಕಾರಿಯಾಗಿದೆ ಎಂದರು.
ಬೀದರ್: ಹುಬ್ಬಳ್ಳಿ ಗಲಭೆ ಪ್ರಕರಣ ಕೈ ಬಿಡುವಂತೆ ಡಿಕೆ ಶಿವಕುಮಾರ್ ಪತ್ರ ವಿಚಾರ ‘ ಬೀದರ್ ನಲ್ಲಿ ಕೇಂದ್ರ ಸಚಿವ ಭಗವಂತ ಖೊಬಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಕೋಮು ವಾದಿಗಳ ಪ್ರಚೋದನೆ ಮಾಡುವುದು ಕಾಂಗ್ರೆಸ್‌ನ ಸಂಸ್ಕೃತಿ. ಉತ್ತಮ ಉದಾಹರಣೆ ಮೊನ್ನೆ ನಡೆದ ಶಿವಮೊಗ್ಗ ಗಲಭೆ ಎಂದಿದ್ದಾರೆ.
ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣ ಹಿನ್ನಲೆ ನಾಳೆ(ಅ.04) ಶಿವಮೊಗ್ಗ ನಗರಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಲಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ನೇತೃತ್ವದಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡುವ ನಿಯೋಗ, ಗಲಾಟೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲಿದೆ. ಬಳಿಕ 11.15ಕ್ಕೆ ರಾಗಿಗುಡ್ಡಕ್ಕೆ ಬಿಜೆಪಿ ನಾಯಕರ ತಂಡ ಭೇಟಿ ನೀಡಿ, ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಬೆಳಗಾವಿ: ಕುಲವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಗ್ರಾಮದ ರೈತರು ಇದೀಗ ಭೂಮಿ ಉಳಿವಿಗಾಗಿ ಹೋರಾಟ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು-ಮುಂಬೈ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು, ಪೊಲೀಸರ ಮನವೊಲಿಕೆ ಹಿನ್ನೆಲೆ ಹೋರಾಟವನ್ನ ತಾತ್ಕಾಲಿಕವಾಗಿ ರೈತರು ಕೈ ಬಿಟ್ಟಿದ್ದಾರೆ.
ನಂಬಿಕೆ ದ್ರೋಹಿಗಳ ಋಣ ತೀರಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಕೋಲಾರದಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜರ ಅರಮನೆ ಹಾಳು ಮಾಡಿದವರ ಋಣ ತೀರಿಸಬೇಕು ಅಂತೀರಲ್ಲಾ? ಸಿಎಂ ಸಿದ್ದರಾಮಯ್ಯನವರೇ ನಿಮಗೆ ಮಾನ, ಮರ್ಯಾದೆ ಇದೆಯಾ? ಯಾವತ್ತೋ ಎಗರಿಹೋದ ಟಿಪ್ಪುವಿನ ಖಡ್ಗ ಇಟ್ಟುಕೊಂಡು ಓಡಾಡುವ ನಿಮಗೆ ಇಷ್ಟು ಇರಬೇಕಾದ್ರೆ? ನಮಗೆ ಇನ್ನೆಷ್ಟು ಇರಬೇಡಾ? ಟಿಪ್ಪು ಹತ್ಯೆ ಮಾಡಿದ ಉರಿಗೌಡ, ನಂಜೇಗೌಡನ ವಂಶಸ್ಥರು ನಾವು. ನಮಗೆ ಇನ್ನೆಷ್ಟು ಇರಬೇಡಾ? ಎಂದ ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ರಾಜ್ಯದೆಲ್ಲೆಡೆ ಮಳೆ ಕೊರತೆಯಾಗಿದೆ. 195 ತಾಲೂಕುಗಳನ್ನು ಬರಪೀಡಿತ ಅಂತಾ ಘೋಷಣೆ ಮಾಡಿದ್ದೇವೆ ಎಂದು ಕಲಬುರಗಿಯಲ್ಲಿ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಅ.10ರಂದು ಕೇಂದ್ರ ಅಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ನೀಡುತ್ತೆ. ಅಧಿಕಾರಿಗಳ 3 ತಂಡ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ. ಬೆಳೆ ಸರ್ವೆ ನಡೆಸಲು ನಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅ.10ರೊಳಗೆ ಸರ್ವೆ ಕಾರ್ಯ ಮುಗಿಸಲು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ರೈತರ ಆತ್ಮಹತ್ಯೆ ಪ್ರಕರಣ ತಡೆಗಟ್ಟಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸ್ಗಳು ಹಿಂಪಡೆಯುವ ವಿಚಾರ ಸಂಬಂಧ ಬೆಳಗಾವಿ ಏರ್ಪೋರ್ಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣಗಳು ಹಿಂಪಡೆಯುವ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಗೃಹ ಇಲಾಖೆಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ವಕೀಲರು ಹಾಗೂ ಹೋರಾಟಗಾರರು ಒಂದು ಪತ್ರ ಬರೆದಿದ್ದಾರೆ. ಅದರ ಮೇಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ. ಆ ಪತ್ರವನ್ನ ನಾನು ಇವತ್ತೇ ನೋಡಿದ್ದು. ಯಾವುದೇ ಕೇಸ್ ಹಿಂಪಡೆಯುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಿಎಂ ತಿಳಿಸಿದರು.
ಮಾಜಿ ಸಚಿವ ತನ್ವಿರ್ ಸೇಠ್ ನಂತರ ಡಿಸಿಎಂ ಡಿಕೆ ಶಿವಕುಮಾರ್ ಅವರು ಹಳೇ ಹುಬ್ಬಳ್ಳಿ ಕೋಮುಗಲಭೆ ಪ್ರಕರಣ ಕೈಬಿಡುವಂತೆ ಗೃಹ ಇಲಾಖೆಗೆ ಶಿಫಾರಸು ಪತ್ರ ಬರೆದಿದ್ದಾರೆ. ಡಿಸಿಎಂ ಡಿಕೆಶಿ ಶಿಫಾರಸು ಆಧಾರಿಸಿ ಹಳೇ ಹುಬ್ಬಳ್ಳಿ ಪ್ರಕರಣ ಸೇರಿ ವಿವಿಧ ಪ್ರಕರಣ ಹಿಂಪಡೆಯುವ ಬಗ್ಗೆ ದಾಖಲೆ ಸಹಿತ ಎಡಿಜಿಪಿ ಅಭಿಪ್ರಾಯ ಕೇಳಿದ್ದಾರೆ.
ಸುಮಾರು 17 ಟನ್ ಇರುವ ರೀ ರೈಲನ್ನು ಕ್ರೇನ್ ಮೂಲಕ ಲಿಫ್ಟಿಂಗ್ ಮಾಡಲು ಬಿಎಂಆರ್ಸಿಎಲ್ ಮುಂದಾಗಿದೆ. ಕ್ರೇನ್ ಮೂಲಕ ರೀ ರೈಲನ್ನು ಕೆಳಗಿಳಿಸಲು ಕ್ರೇನ್ ಆಪರೇಟರ್ಗೆ ಮೆಟ್ರೋ ಇಂಜಿನಿಯರ್ ಸೂಚನೆ ನೀಡಿದ್ದಾರೆ. 200 ಟನ್ ಲಿಫ್ಟ್ ಮಾಡುವ ಸಾಮರ್ಥ್ಯ ಹೊಂದಿರುವ ಕ್ರೇನಿನ ಮೂಲಕ ಬೆಲ್ಟ್ ಸಿಲಿಂಗ್ ಅಳವಡಿಸಿ ರೀ ರೈಲು ಲಿಫ್ಟ್ ಮಾಡಲಾಗುತ್ತೆ.
ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗದ ಬಗ್ಗೆ ಹೇಳಿಕೆ ವಿಚಾರ ಸಂಬಂಧ ವಿಜಯಪುರದಲ್ಲಿ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿಗಳಿಗಿಂತಲೂ ಹಿರಿಯರಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಸಿಎಂಗೆ ಸಲಹೆ ಕೊಡಬಹುದಾಗಿತ್ತು. ಏನೇ ಸಲಹೆ ಕೊಟ್ರೂ ಸಿಎಂ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದರು. ಯಾವುದೇ ಸರ್ಕಾರ ಜಾತಿಯತೆ ಮೇಲೆ ಪೋಸ್ಟಿಂಗ್ ಮಾಡಲು ಆಗಲ್ಲ. ನಾನು ಲಿಂಗಾಯತರನ್ನೇ ಹಾಕಿ ಎಂದು ಹೇಳಿಲ್ಲ. ರಾಜ್ಯ ಸರ್ಕಾರವೇ ಲಿಂಗಾಯತರನ್ನು ಹಾಕಿದ್ದಾರೆ, ನಾನೇನು ಮಾಡಲಿ ಎಂದರು.
ಆಹಾರ ಸಚಿವ K.H.ಮುನಿಯಪ್ಪ ನಿವಾಸಕ್ಕೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಭೇಟಿ ನೀಡಿದ್ದು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಭೇಟಿ ಕುತೂಹಲ ಮೂಡಿಸಿದೆ.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ರಾಗಿಗುಡ್ಡದಲ್ಲಿ ಮುಸ್ಲಿಂ ಮಹಿಳೆಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಸಮಸ್ಯೆ ಆಲಿಸುತ್ತಿಲ್ಲ, ಅನಗತ್ಯವಾಗಿ ನಮ್ಮ ಮಕ್ಕಳ ಬಂಧನವಾಗಿದೆ. ಮೆರವಣಿಗೆ ವೇಳೆ ಕಲ್ಲು ತೂರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ನಮಗೆ ನ್ಯಾಯ ಬೇಕು, ನಾವೂ ಹಿಂದೂ ಮುಸ್ಲೀಂ ಎಲ್ಲರೂ ಒಂದೇ. ಗಣೇಶ ಹಬ್ಬಕ್ಕೆ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಹಬ್ಬ ಆಚರಣೆ ಮಾಡ್ತೀವಿ. ವಿಚಾರ ದೊಡ್ಡದಾಗುತ್ತಿದ್ದಂತೆ ನಮ್ಮನ್ನ ಟಾರ್ಗೇಟ್ ಮಾಡಲಾಗುತ್ತಿದೆ. ಈ ವೇಳೆ ಸಚಿವರು ಮಧ್ಯ ಪ್ರವೇಶಿಸಿ ನಮ್ಮ ಸಮಸ್ಯೆ ಆಲಿಸಬೇಕಿದೆ ಎಂದು ಮಹಿಳೆಯರು ಆಕ್ರೋಶ ಹೊರ ಹಾಕಿದರು.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಗಲಾಟೆ ಸಂಬಂಧ ಪೊಲೀಸರು ಈವರೆಗೆ 24 FIR ದಾಖಲಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಗಲಾಟೆ ಸಂದರ್ಭದಲ್ಲಿ ಗಂಭೀರ ಆಗಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇವೆ. ಗಲಾಟೆಯಲ್ಲಿ ಭಾಗಿಯಾದ ಯಾರನ್ನೂ ಬಿಡಲ್ಲ. ಕಾನೂನು ಎಲ್ಲರಿಗೂ ಒಂದೇ, ಎಲ್ಲರಿಗೂ ಒಂದೇ ರೀತಿ ಶಿಕ್ಷೆ ಆಗುತ್ತದೆ ಎಂದರು.
ಕೆಆರ್ಎಸ್ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಕೊಂಚ ಏರಿಕೆಯಾಗಿದೆ. ಜಲಾಶಯಕ್ಕೆ 11,800 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣರಾಜಸಾಗರ ಜಲಾಶಯದ ಇಂದಿನ ನೀರಿನ ಮಟ್ಟ 99.54 ಅಡಿ ಇದೆ. ಕೆಆರ್ಎಸ್ ಜಲಾಶಯದ ಗರಿಷ್ಠಮಟ್ಟ 124.80 ಅಡಿ. ಒಳಹರಿವು 11,800 ಕ್ಯೂಸೆಕ್, ಹೊರಹರಿವು 1,592 ಕ್ಯೂಸೆಕ್ ಇದೆ.
ರೀ ರೈಲ್ ವಾಹನ ಹಳಿತಪ್ಪಿದ ಹಿನ್ನೆಲೆ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಮೆಟ್ರೋಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಸರಿಪಡಿಸಲು ರೀ ರೈಲ್ ಬಳಸುತ್ತಾರೆ. ರಾಜಾಜಿನಗರ ನಿಲ್ದಾಣದ ಬಳಿ ರೀ ರೈಲ್ ಟ್ರ್ಯಾಕ್ ತಪ್ಪಿ ಭಾರಿ ತೊಂದರೆಯಾಗಿದೆ. ಹೀಗಾಗಿ ಇಂದು ಮಧ್ಯಾಹ್ನದವರೆಗೂ ಮೆಟ್ರೋ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ನಾಗಸಂದ್ರ-ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ನಿಲ್ದಾಣದ ನಡುವೆ ಮಾತ್ರ ಹಸಿರು ಮಾರ್ಗದಲ್ಲಿ ಸೇವೆ ಲಭ್ಯವಿರಲಿದೆ. ಮೆಟ್ರೋ ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್ಸಿಎಲ್ ಮನವಿ ಮಾಡಿದೆ.
ಬೆಂಗಳೂರಿನ ಸೋಂಪುರ ಬಳಿಯ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಪಕ್ಕದ ಗೋಡೆಗೆ ಕಾರು ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಸಿಂಧೂ, ಎರಡು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮಹೇಂದ್ರನ್, ಮತ್ತೊಂದು ಮಗು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಸೋಂಪುರ ಬಳಿಯ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ
#bengaluru #accident #Car #niceroad https://t.co/5EsGtH8UP3— TV9 Kannada (@tv9kannada) October 3, 2023
ಮೈಸೂರು ಜಿಲ್ಲೆ H.D.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಮತ್ತೆ ಇಳಿಕೆ ಕಂಡುಬಂದಿದೆ. ಕಬಿನಿ ಜಲಾಶಯಕ್ಕೆ 5,481 ಕ್ಯೂಸೆಕ್ ನೀರು ಒಳಹರಿವು. ನಿನ್ನೆ ಕಬಿನಿ ಜಲಾಶಯಕ್ಕೆ 8,245 ಕ್ಯೂಸೆಕ್ ಒಳಹರಿವು ಇತ್ತು. ಸದ್ಯ 75.70 ಅಡಿ ಇರುವ ಕಬಿನಿ ಜಲಾಶಯದ ನೀರಿನ ಮಟ್ಟ.
ಮಂಗಳೂರಿನಲ್ಲೂ ಈದ್ ಮಿಲಾದ್ ಮೆರವಣಿಗೆ ಹೆಸರಲ್ಲಿ ಪುಂಡಾಟ ಹಿನ್ನೆಲೆ ಪುಂಡಾಟ ಮೆರೆದಿದ್ದ ಯುವಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳಿಸಲಾಗಿದೆ. ವೀರರಾಣಿ ಅಬ್ಬಕ್ಕ ಸರ್ಕಲ್ ಮೇಲೇರಿ ಹಸಿರು ಬಾವುಟ ಪ್ರದರ್ಶಿಸಿ ಪುಂಡಾಟ ಮೆರೆದಿದ್ದಾರೆ.
ಮಂಗಳೂರು: ಈದ್ ಮಿಲಾದ್ ಮೆರವಣಿಗೆ ಹೆಸರಲ್ಲಿ ಪುಂಡಾಟ ಮೆರೆದ ಯುವಕರಿಗೆ ನೋಟಿಸ್ ಜಾರಿ ಮಾಡಿದ ಪೊಲೀಸರು#crime #CrimeNews #Mangaluru #EidMilad #Karnataka https://t.co/VZ1dTDU18y
— TV9 Kannada (@tv9kannada) October 3, 2023
ಶಿವಮೊಗ್ಗದ ರಾಗಿಗುಡ್ಡದಲ್ಲಿ ಗಲಾಟೆ ಹಿನ್ನೆಲೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತಳ್ಳಿ ನುಗ್ಗಿ ಬಂದು ಬೈಕ್ನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ 4-5 ಜನರು ಒಮ್ಮೆಲೆ ಹಲ್ಲೆ ನಡೆಸಿದ್ದಾರೆ. ನೂರಾರು ಜನರೂ ರಸ್ತೆಯೊಳಗೆ ನುಗ್ಗಿ ವ್ಯಕ್ತಿಗೆ 4-5 ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೊಟ್ಟೆ, ಬೆನ್ನಿಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಅಕ್ಟೋಬರ್ 1ರಂದು ವ್ಯಕ್ತಿಗೆ ಹಲ್ಲೆ ಮಾಡುತ್ತಿರುವ ದೃಶ್ಯ ಟಿವಿ9 ಗೆ ಲಭ್ಯವಾಗಿದೆ.
ಮೈಸೂರಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಮುಸ್ಲಿಂ ಮುಖಂಡ ಅಬ್ದುಲ್ ಖಾದಿರ್ ಶಾಹಿದ್ ಪ್ರತಿಕ್ರಿಯೆ ನೀಡಿದರು. ಅ.16ಕ್ಕೆ ಮುಂದಿನ ನಡೆ ತಿಳಿಸುತ್ತೇವೆ. ಭಾರತೀಯ ಜನತಾ ಪಕ್ಷದೊಂದಿಗಿನ ಜೆಡಿಎಸ್ ಮೈತ್ರಿ ನಮಗೆ ಇಷ್ಟವಿಲ್ಲ. ಈಗಾಗಲೇ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ. ಮೊನ್ನೆ ಬಿಡದಿಯಲ್ಲಿ ಹೆಚ್ಡಿಕೆ ಕರೆದಿದ್ದ ಸಭೆಗೆ ಪ್ರಮುಖರು ಹೋಗಿಲ್ಲ. ಕೋಮುವಾದಿ ಬಿಜೆಪಿ ಜೊತೆ ಸೇರಿ ಅಧಿಕಾರ ಮಾಡುವ ಆಸೆ ನಮಗಿಲ್ಲ. ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರಕ್ಕೆ ಸಿ.ಎಂ.ಇಬ್ರಾಹಿಂ ವಿರೋಧವಿದೆ. ಯಾವುದೇ ಕಾರಣಕ್ಕೂ ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸಲ್ಲ. ಅ.16ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಭೆ ಕರೆದಿದ್ದಾರೆ. ಅ.16ರ ಸಭೆಯ ಬಳಿಕ ನಮ್ಮ ಮುಂದಿನ ನಡೆ ಬಗ್ಗೆ ತಿಳಿಸುತ್ತೇವೆ ಎಂದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಹೊಸ ವ್ಯವಸ್ಥೆ. ಬೆಂಗಳೂರಿನ ಆಗ್ನೇಯ ವಿಭಾಗ ಪೊಲೀಸರಿಂದ ಡಿಜಿಟಲೀಕರಣ ವ್ಯವಸ್ಥೆ ಮಾಡಲಾಗಿದೆ. 14 ಸ್ಟೇಷನ್, ಮೂರು ಎಸಿಪಿ ಕಚೇರಿ, ಡಿಸಿಪಿ ಕಚೇರಿಯಲ್ಲಿ ಡಿಸಿಪಿ ಸಿ.ಕೆ.ಬಾಬ ಅವರು ಆಡಳಿತ ವ್ಯವಸ್ಥೆ ಸಂಪೂರ್ಣ ಡಿಜಿಟಲೀಕರಣ ಮಾಡಿದ್ದಾರೆ. ರಾಜ್ಯ ಸರ್ಕಾರದ ಇ-ಆಫೀಸ್ ವೆಬ್ಸೈಟ್ ಬಳಸಿ ಪ್ರಾಯೋಗಿಕ ಯಶಸ್ವಿ. ಇ-ಮೇಲ್ ಮಾಡಿದ 1 ಗಂಟೆಯಲ್ಲೇ ಪೊಲೀಸ್ ಸಿಬ್ಬಂದಿ ಕೆಲಸ ಪೂರ್ಣ ಆಗಲಿದೆ.
ರಾಜ್ಯ ಸರ್ಕಾರದ ವಿರುದ್ಧ ಇಂದು ಕೋಲಾರದಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜನತಾ ದರ್ಶನದಲ್ಲಿ ಸಂಸದ ಮುನಿಸ್ವಾಮಿಗೆ ಅಪಮಾನ ಪ್ರಕರಣ, ಕ್ಲಾಕ್ ಟವರ್‌ನಲ್ಲಿ ತಲ್ವಾರ್ ದ್ವಾರ ನಿರ್ಮಿಸಲು ಅನುಮತಿ ಹಾಗೂ ಜಿಲ್ಲೆಯಲ್ಲಿ ಅಶಾಂತಿ, ರೈತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಯಲಿದೆ. ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಮುನಿಸ್ವಾಮಿ, ಮಾಜಿ ಸಿಎಂ ಡಿವಿಎಸ್, ಡಾ.ಅಶ್ವತ್ಥ್ ನಾರಾಯಣ, K.S.ಈಶ್ವರಪ್ಪ, ಸಿ.ಟಿ.ರವಿ ಸೇರಿ ಹಲವರು ಬಿಜೆಪಿ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
Published On - 7:59 am, Tue, 3 October 23