ಬೆಂಗಳೂರು: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ನಿರೀಕ್ಷೆಯಂತೆ ಕೃಷಿ ಕ್ಷೇತ್ರಕ್ಕೆ ಕೆಲ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಕನಸಿಗೆ ಪೂರಕವಾಗಿ ಯಡಿಯೂರಪ್ಪ ಸಹ ಹಲವು ಕ್ರಮಗಳನ್ನು ಬಜೆಟ್ ಮೂಲಕ ಪರಿಚಯಿಸಿದ್ದಾರೆ. ಕೊರೊನಾ ಕಾರಣದಿಂದಾಗಿ ರಾಜ್ಯದ ಬೊಕ್ಕಸದ ವೆಚ್ಚವನ್ನು ಮಿತಿಯಲ್ಲಿಡುವ ಅನಿವಾರ್ಯತೆಯ ನಡುವೆಯೂ ನೀರಾವರಿ ಯೋಜನೆಗಳನ್ನು ಕೈಬಿಟ್ಟಿಲ್ಲ ಎನ್ನುವುದು ವಿಶೇಷ. ಜಿಲ್ಲೆಗೊಂದು ಗೋಶಾಲೆ, ತಳಿ ಸಂವರ್ಧನೆಗೆ ಕ್ರಮ, ಮೀನುಗಾರಿಕೆಗೆ ರಿಯಾಯ್ತಿ ಡೀಸೆಲ್ ಸೇರಿದಂತೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳ ಉತ್ಸಾಹ ಹೆಚ್ಚಿಸುವ ಹಲವು ಕ್ರಮಗಳನ್ನು ಯಡಿಯೂರಪ್ಪ ಇಂದು ಮಂಡಿಸಿದ ಬಜೆಟ್ ಹೊಂದಿದೆ. ಬಜೆಟ್ನಲ್ಲಿ ಕೃಷಿ ಮತ್ತು ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯದ ಘೋಷಣೆಗಳ ಸಮಗ್ರ ಮಾಹಿತಿ ಇಲ್ಲಿದೆ.
ಸಾವಯವ ಕೃಷಿ ಉತ್ತೇಜನಕ್ಕೆ ₹ 500 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ ಮಾಡಲಾಗುವುದು. ವಿಜಯಪುರ ಜಿಲ್ಲೆ ಇಟ್ಟಂಗಿಹಾಳ ಗ್ರಾಮದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿ ಆಹಾರ ಪಾರ್ಕ್ ಸ್ಥಾಪನೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಇರುವ ಮೀಸಲಾತಿ ಶೇ 50ಕ್ಕೆ ಹೆಚ್ಚಳ.
ಕೃಷಿ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್ಗಳಿಗೆ ನೀಡುತ್ತಿದ್ದ ಸಹಾಯಧನ ಇನ್ನು ಮುಂದೆ ದೊಡ್ಡ ಟ್ರ್ಯಾಕ್ಟರ್ಗಳಿಗೂ ಅಂದರೆ 25-45 PTO HP ಟ್ಯಾಕ್ಟರ್ಗಳಿಗೂ ಸಿಗಲಿದೆ. ರಾಷ್ಟ್ರೀಯ ಇ-ಮಾರುಕಟ್ಟೆ ಪ್ರೈವೇಟ್ ಲಿಮಿಟೆಡ್ ಮೂಲಕ ಸಾವಯವ ಮತ್ತು ಸಿರಿಧಾನ್ಯಗಳ ವೈಜ್ಞಾನಿಕ ಮಾರಾಟಕ್ಕೆ ಅವಕಾಶ. ಮುಂದಿನ 5 ವರ್ಷಗಳಲ್ಲಿ ₹ 75 ಕೋಟಿ ವೆಚ್ಚದಲ್ಲಿ ರಾಜ್ಯದ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ. ಇದಕ್ಕಾಗಿ 2021-12ನೇ ಸಾಲಿನಲ್ಲಿ ₹ 10 ಕೋಟಿ ಅನುದಾನ. ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಆಹಾರ ಸಂಸ್ಕರಣೆ ಹಾಗೂ ಕೊಯ್ಲೋತ್ತರ ನಿರ್ವಹಣಾ ಘಟಕಗಳಿಗೆ ನೀಡುವ ಶೇ 35ರಷ್ಟು ಸಹಾಯಧನವನ್ನು ಶೇ 50ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ಶೇ 15ರಷ್ಟು ಹೆಚ್ಚುವರಿ ಸಹಾಯಧನ. ₹ 50 ಕೋಟಿ ಅನುದಾನವನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.
ಇದನ್ನೂ ಓದಿ: ಜಿಲ್ಲೆಗೊಂದು ಗೋಶಾಲೆ, ಮೇಕೆ-ಕುರಿ-ಕೋಳಿ ತಳಿ ಸಂವರ್ಧನೆಗೆ ಹೊಸ ಯೋಜನೆ
ತೋಟಗಾರಿಕೆ ತಂತ್ರಜ್ಞಾನ ಪಾರ್ಕ್
ಕೊಪ್ಪಳ ಜಿಲ್ಲೆಯ ಸಿರಿವಾರ ಗ್ರಾಮದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ. ಹೊಸ ತಂತ್ರಜ್ಞಾನ. ಹೊಸ ಬೆಳೆ ತಳಿ, ಉತ್ತಮ ನಿರ್ವಹಣಾ ಪದ್ಧತಿಗಳನ್ನು ರೈತರಿಗೆ ಪರಿಚಯಿಸಲು ಪ್ರಾತ್ಯಕ್ಷಿಕಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು. ಉತ್ಪಾದಕರ ಸಂಸ್ಥೆಗಳು ಮಾರಾಟ ಮಾಡುವ ತೋಟಗಾರಿಕೆ ಉತ್ಪನ್ನಗಳಿಗೆ ‘ಬ್ರಾಂಡ್ ವ್ಯಾಲ್ಯೂ’ ಕಲ್ಪಿಸಲು ಹಾಗೂ ಉತ್ತಮ ಮಾರುಕಟ್ಟೆ ಸಂಪರ್ಕ ಒದಗಿಸಲು ಕ್ರಮ.
ರೈತನು ವರ್ಷವಿಡೀ ವರಮಾನ ಪಡೆಯಲು ಸಮಗ್ರ ಕೃಷಿ ಪದ್ಧತಿ ಕಾರ್ಯಕ್ರಮ ಅನುಷ್ಠಾನ. ಅಡಿಕೆ ಬೆಳೆಗಾರರನ್ನು ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತ ಸಂಶೋಧನೆ ಹಾಗೂ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು ₹ 25 ಕೋಟಿ ಅನುದಾನ. ಹೊಸ ಹೈಬ್ರಿಡ್ ಬೀಜ ನೀತಿ ಜಾರಿಗೆ ಕ್ರಮ. ಸುವಾಸನೆಯುಕ್ತ ಮತ್ತು ವೈದ್ಯಕೀಯ ಗಿಡಗಳು, ಹಣ್ಣು ಹಂಪಲು, ತರಕಾರಿಗಳು ಮತ್ತು ಸಂಬಾರ ಪದಾರ್ಥಗಳಿಗಾಗಿ ಹೊಸ ಕೃಷಿ ವಲಯ ಸ್ಥಾಪನೆ. ತೋಟಗಾರಿಕಾ ಬೆಳೆಗಳ ರಫ್ತಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪೂರಕ ಸೌಲಭ್ಯ.
ಹಣ್ಣು ಮತ್ತು ತರಕಾರಿ ಬೆಳೆಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಬೆಳೆಗಾರರಿಗೆ ತರಬೇತಿ ಮತ್ತು ತಾಂತ್ರಿಕ ಬೆಂಬಲ. ದ್ರಾಕ್ಷಿ ಕೃಷಿಯ ಉತ್ತೇಜನಕ್ಕೆ ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ರಚಿಸಲು ಕ್ರಮ. ಬೆಂಗಳೂರಿನ ಓಕಳೀಪುರಂನಲ್ಲಿ ರೇಷ್ಮೆ ಇಲಾಖೆಯ ಎಲ್ಲ ಕಛೇರಿಗಳನ್ನು ಒಂದೇ ಸೂರಿನಡಿ ತರಲು ₹ 150 ಕೋಟಿ ವೆಚ್ಚದಲ್ಲಿ ರೇಷ್ಮೆ ಭವನ ನಿರ್ಮಾಣ. ರಾಮನಗರದಲ್ಲಿ ₹ 75 ಕೋಟಿ ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ.
ಇದನ್ನೂ ಓದಿ: ಯಡಿಯೂರಪ್ಪ ಮಂಡಿಸಿದ ಕರ್ನಾಟಕ ಬಜೆಟ್ ಗಾತ್ರ ₹ 2.46 ಲಕ್ಷ ಕೋಟಿ, ಬಂಡವಾಳ ವೆಚ್ಚ ಕೇವಲ ₹ 44 ಸಾವಿರ ಕೋಟಿ
ಜಿಲ್ಲೆಗೊಂದು ಗೋಶಾಲೆ, ಥೀಮ್ ಪಾರ್ಕ್
ಗೋ ಸಂಪತ್ತಿನ ರಕ್ಷಣೆಗಾಗಿ ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪಿಸುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ. ದೇಶೀಯ ಪಶುಸಂಪತ್ತಿನ ಶಾಶ್ವತ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಲು ಹೆಸರಘಟ್ಟದಲ್ಲಿ ಥೀಮ್ ಪಾರ್ಕ್ ಸ್ಥಾಪಿಸಲಾಗುವುದು. ನಂದಿದುರ್ಗ ಮೇಕೆ ತಳಿಗಳನ್ನು ಅಭಿವೃದ್ಧಿಪಡಿಸಿ, ಉತ್ಕೃಷ್ಟ ದರ್ಜೆಯ ಹೋತ ವಿತರಿಸಲು ₹ 1 ಕೋಟಿ ಅನುದಾನ ನೀಡಲಾಗಿದೆ. ‘ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ’ಯಡಿ ₹ 1 ಕೋಟಿ ವೆಚ್ಚದಲ್ಲಿ ರಾಜ್ಯದ ರೈತರಿಗೆ ಹೊರರಾಜ್ಯದ ದೇಶಿ ತಳಿಗಳನ್ನು ಪರಿಚಯಿಸಲು ಕ್ರಮ ಕೈಗೊಳ್ಳಲಾಗುವುದು.
ಕುರಿ ಮತ್ತು ಮೇಕೆಗಳು ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಅವುಗಳ ಮಾಲೀಕರಿಗೆ ಪರಿಹಾರಧನ ನೀಡುವ ‘ಅನುಗ್ರಹ ಕೊಡುಗೆ’ ಯೋಜನೆಯನ್ನು ಮುಂದುವರಿಲಾಗಿದೆ. ಪಶುವೈದ್ಯಕೀಯ ವಿಜ್ಞಾನದಲ್ಲಿ ಆಯುರ್ವೇದ ಔಷಧಿಗಳ ಅಳವಡಿಕೆ ಉತ್ತೇಜನಕ್ಕೆ ಶಿವಮೊಗ್ಗದ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ಕಾಲೇಜಿನಲ್ಲಿ $ 2 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು.
ಮೀನುಗಾರರಿಗೆ ತೆರಿಗೆ ರಹಿತ ಡೀಸೆಲ್
ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋಲೀಟರ್ ಡೀಸೆಲ್ ಮೇಲಿನ ಮಾರಾಟ ಮರುಮಾವತಿಯ ಬದಲು ಡೀಸೆಲ್ ಡೆಲಿವರಿ ಪಾಯಿಂಟ್ನಲ್ಲಿಯೇ ಕರರಹಿತ ದರದಲ್ಲಿ ಡೀಸೆಲ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ’ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ₹ 62 ಕೋಟಿ ಅನುದಾನ. ರಾಜ್ಯದಲ್ಲಿ 16 ಮೀನುಮರಿ ಉತ್ಪಾದನಾ ಕೇಂದ್ರಗಳ ತಾಂತ್ರಿಕ ಉನ್ನತೀಕರಣಕ್ಕೆ ₹ 2 ಕೋಟಿ ಅನುದಾನ. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ₹ 6 ಆರು ಕೋಟಿ ವೆಚ್ಚದಲ್ಲಿ ಮೀನು ಉತ್ಪನ್ನಗಳ ಸಂಸ್ಕರಣೆಗೆ ಆಧುನಿಕ ಸಂಸ್ಕರಣಾ ಮತ್ತು ಮೌಲ್ಯವರ್ಧನಾ ಕೇಂದ್ರ ಸ್ಥಾಪನೆ. ರಾಜ್ಯಾದ್ಯಂತ ₹ 30 ಕೋಟಿ ವೆಚ್ಚದಲ್ಲಿ ಮೀನು ಮಾರಾಟ ಘಟಕ ಹಾಗೂ ಮತ್ಸ್ಯ ದರ್ಶಿನಿಗಳ ಸ್ಥಾಪಿಸಲಾಗುವುದು.
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಬೆಂಗಳೂರಿಗೆ ಯಡಿಯೂರಪ್ಪ ಬಜೆಟ್ನಲ್ಲಿ ಸಿಕ್ಕಿದ್ದೇನು?
ಅಡಮಾನ ಸಾಲಕ್ಕೆ ಶೇ 4ರ ಬಡ್ಡಿ ಸಹಾಯಧನ
ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (PACS), ಟಿಎಪಿಸಿಎಂಎಸ್ ಹಾಗೂ ಇತರೆ ಸಹಕಾರ ಸಂಸ್ಥೆಗಳು ಹೊಂದಿರುವ ಗೋದಾಮುಗಳಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣಾ ಶುಲ್ಕದ ಶೇ 25ರಷ್ಟು ಸಹಾಯಧನ ವಿತರಣೆ. ಇದಕ್ಕಾಗಿ ₹ 25 ಕೋಟಿ ಅನುದಾನ ಮೀಸಲಿಡಲಾಗಿದೆ.
ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (PACS) ಟಿಎಪಿಸಿಎಂಎಸ್ಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಮೇಲೆ ಶೇ 11ರ ದರದಲ್ಲಿ ವಿತರಿಸಿದ ಅಡಮಾನ ಸಾಲ ಸೌಲಭ್ಯಕ್ಕೆ 6 ತಿಂಗಳ ಅವಧಿಗೆ ಸರ್ಕಾರದಿಂದ ಶೇ 4ರ ಬಡ್ಡಿ ಸಹಾಯಧನ. ಇದಕ್ಕಾಗಿ ₹ 5 ಕೋಟಿ ಅನುದಾನ. ₹ 198 ಕೋಟಿ ವೆಚ್ಚದಲ್ಲಿ 5500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ ಗರಿಷ್ಠ ₹ 10 ಲಕ್ಷದವರೆಗೆ ಶೇ 25ರಷ್ಟು ಷೇರು ಬಂಡವಾಳ ಒದಗಿಸಲು ಕ್ರಮ .
ಒಣ ಮೆಣಸಿನಕಾಯಿಗೆ ಮಾರುಕಟ್ಟೆ
ಬೈಯಪ್ಪನಹಳ್ಳಿಯಲ್ಲಿ ₹ 50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣ. ಸಿಂಗೇನ ಅಗ್ರಹಾರ ಸಮೀಪದ ಗುಳಿಮಂಗಳ ಗ್ರಾಮದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ನಿರ್ಮಾಣ. ಬಳ್ಳಾರಿಯ ಆಲದಹಳ್ಳಿ ಗ್ರಾಮದಲ್ಲಿ ಅತ್ಯಾಧುನಿಕ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ. ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿ. ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ₹ 4 ಕೋಟಿ ವೆಚ್ಚದಲ್ಲಿ ‘ಆಧುನಿಕ ಗುಣವಿಶ್ಲೇಷಣಾ ಘಟಕ’ ಸ್ಥಾಪನೆ.
ಇದನ್ನೂ ಓದಿ: ಮಹಿಳಾ ಸರ್ಕಾರಿ ನೌಕರರಿಗೆ 6 ತಿಂಗಳು ಮಕ್ಕಳ ಆರೈಕೆ ರಜೆ; ಬಜೆಟ್ನಲ್ಲಿ ಮಹಿಳೆಯರಿಗಿದೆ ಹಲವು ಕೊಡುಗೆಗಳು
ನೀರಾವರಿ ಯೋಜನೆಗಳಿಗೆ ಬದ್ಧತೆ
ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು ಕ್ರಮ. ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಹಂತ 3, ಎತ್ತಿನಹೊಳೆ, ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ. ಕೊಪ್ಪಳ ಜಿಲ್ಲೆ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಕ್ರಮ.
ಬೇಡ್ತಿ-ವರದಾ ನದಿ ಜೋಡಣೆಯಡಿ ಒಟ್ಟು 22 ಟಿಎಂಸಿ ನೀರನ್ನು ಬಳಸಿಕೊಳ್ಳಲು ವಿವರವಾದ ಯೋಜನಾ ವರದಿಯನ್ನು National Perspective Plan ಅಡಿಯಲ್ಲಿ ಸಿದ್ಧಪಡಿಸಲು NWDAಗೆ ಮನವಿ. ತಾಂತ್ರಿಕ ಸಾಧ್ಯಾಸಾಧ್ಯತೆಗನುಗುಣವಾಗಿ ಯೋಜನೆಗಳನ್ನು ರೂಪಿಸಲು ಕ್ರಮ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲ.
ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ (DRIP) ಯೋಜನೆಯಡಿ ₹ 1500 ಕೋಟಿ ಮೊತ್ತದಲ್ಲಿ ರಾಜ್ಯದ ಆಣೆಕಟ್ಟುಗಳ ಪುನಶ್ವೇತನ ಮತ್ತು ಅಭಿವೃದ್ಧಿಗೆ ಪ್ರಸ್ತಾವನೆ. ಪ್ರಸಕ್ತ ಸಾಲಿನಲ್ಲಿ ಯೋಜನೆಯ ಅನುಷ್ಠಾನಕ್ಕೆ ಆದ್ಯತೆ. ಏತ ನೀರಾವರಿ ಯೋಜನೆಗಳ ವ್ಯವಸ್ಥಿತ ಕಾರ್ಯಾಚರಣೆ ನಿರ್ವಹಣೆಗಾಗಿ ಕಾರ್ಯನೀತಿ ಜಾರಿ.
ಚಿಕ್ಕಬಳ್ಳಾಪುರ ಜಿಲ್ಲೆಗೆ ವೃಷಭಾವತಿ ಕಣಿವೆ ನೀರು
ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308 ಎಂಎಲ್ಡಿ ನೀರು ತುಂಬಿಸುವ ₹ 500 ಕೋಟಿ ವೆಚ್ಚದ ಯೋಜನೆ ಅನುಷ್ಠಾನ. ಪಶ್ಚಿಮವಾಹಿನಿ ಯೋಜನೆ ಕುರಿತ ಮಾಸ್ಟರ್ ಪ್ಲಾನ್ ಅಡಿ, ಮುಂದಿನ 5 ವರ್ಷಗಳಲ್ಲಿ ₹ 3986 ಕೋಟಿ ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು ನಿರ್ಮಾಣ, 2021-22ನೇ ಸಾಲಿನಲ್ಲಿ ₹ 500 ಕೋಟಿ ಅನುದಾನ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ₹ 300 ಕೋಟಿ ವೆಚ್ಚದಲ್ಲಿ ನದಿಗಳಲ್ಲಿ ಪ್ರವಾಹ ಮತ್ತು ಭಾರಿ ಅಲೆಗಳಿಂದಾಗಿ ಉಪ್ಪುನೀರು ಹಿಮ್ಮುಖವಾಗಿ ನುಗ್ಗುವುದನ್ನು Flap gate ಮುಖಾಂತರ ತಡೆಗಟ್ಟುವ ಖಾರ್ಲ್ಯಾಂಡ್ ಯೋಜನೆ ಜಾರಿ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್ ಬೆಲೆ
Published On - 6:13 pm, Mon, 8 March 21