Karnataka Budget 2021: ಯಡಿಯೂರಪ್ಪ ಮಂಡಿಸಿದ ಕರ್ನಾಟಕ ಬಜೆಟ್ ಗಾತ್ರ ₹ 2.46 ಲಕ್ಷ ಕೋಟಿ, ಬಂಡವಾಳ ವೆಚ್ಚ ಕೇವಲ ₹ 44 ಸಾವಿರ ಕೋಟಿ
Karnataka Budget 2021 Highlights in Kannada: ಬಜೆಟ್ನ ಒಟ್ಟು ಕೊರತೆ ₹ 15,134 ಕೋಟಿ. ವಿತ್ತೀಯ ಕೊರತೆ ₹ 59,240 ಕೋಟಿ ಆಗುವ ಸಾಧ್ಯತೆಯಿದೆ. ರಾಜ್ಯದ ಒಟ್ಟು ಸಾಲ ₹ 4,57,899 ಆಗುವ ಸಾಧ್ಯತೆಯಿದ್ದು, ಇದು ರಾಜ್ಯದ ಸರಾಸರಿ ತಲಾದಾಯದ (ಜಿಎಸ್ಡಿಪಿ) ಶೇ 26.9ಕ್ಕೆ ಮುಟ್ಟುತ್ತದೆ.
ಬೆಂಗಳೂರು: 2021-22ರ ಸಾಲಿನ ಕರ್ನಾಟಕ ಮುಂಗಡಪತ್ರದ ಒಟ್ಟು ಗಾತ್ರ ₹ 2,46,207 ಕೋಟಿ (₹ 2.46 ಲಕ್ಷ ಕೋಟಿ). ರಾಜ್ಯ ಸರ್ಕಾರದ ಒಟ್ಟು ನಿರೀಕ್ಷಿತ ಆದಾಯ ₹ 2,43,734 ಕೋಟಿ (₹ 2.43 ಲಕ್ಷ ಕೋಟಿ). ಒಟ್ಟು ವೆಚ್ಚ ₹ 2,46,207 ಕೋಟಿ (₹ 2.46 ಲಕ್ಷ ಕೋಟಿ). ಬಜೆಟ್ನ ಒಟ್ಟು ಕೊರತೆ ₹ 15,134 ಕೋಟಿ. ವಿತ್ತೀಯ ಕೊರತೆ ₹ 59,240 ಕೋಟಿ ಆಗುವ ಸಾಧ್ಯತೆಯಿದೆ. ರಾಜ್ಯದ ಒಟ್ಟು ಸಾಲ ₹ 4,57,899 ಆಗುವ ಸಾಧ್ಯತೆಯಿದ್ದು, ಇದು ರಾಜ್ಯದ ಸರಾಸರಿ ತಲಾದಾಯದ (ಜಿಎಸ್ಡಿಪಿ) ಶೇ 26.9ಕ್ಕೆ ಮುಟ್ಟುತ್ತದೆ.
ಸರ್ಕಾರ ನಿರೀಕ್ಷಿಸಿರುವ ₹ 2.43 ಲಕ್ಷ ಕೋಟಿ ಆದಾಯದಲ್ಲಿ ₹ 1.72 ಲಕ್ಷ ಕೋಟಿ ರಾಜಸ್ವದಿಂದ, ₹ 71,332 ಕೋಟಿ ಸಾರ್ವಜನಿಕ ಸಾಲಗಳಿಂದ ಮತ್ತು ₹ 71,463 ಕೋಟಿ ಬಂಡವಾಳ ಸ್ವೀಕೃತಿಯಿಂದ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಖರ್ಚಿನ ಬಾಬ್ತಿನಲ್ಲಿ ₹ 2.46 ಲಕ್ಷ ಕೋಟಿ ಲೆಕ್ಕಹಾಕಲಾಗಿದೆ. ಇದರಲ್ಲಿ ರಾಜಸ್ವ ವೆಚ್ಚವೇ ₹ 1,87,405 ಕೋಟಿಯಿದೆ. ಬಂಡವಾಳ ವೆಚ್ಚಕ್ಕಾಗಿ ಕೇವಲ ₹ 44,237 ಕೋಟಿ ಮೀಸಲಿಡಲಾಗಿದೆ. ಸಾಲ ಮರುಪಾವತಿಗಾಗಿ ₹ 14,565 ಕೋಟಿ ಗುರುತಿಸಲಾಗಿದೆ.
ವಿಧಾನಸಭೆಯಲ್ಲಿ ಸೋಮವಾರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಿದರು. ಕಳೆದ ವರ್ಷದಂತೆ ಈ ವರ್ಷವೂ ಅನುದಾನ ಹಂಚಿಕೆಯನ್ನು ವಲಯವಾರು ವಿಂಗಡಿಸಲಾಗಿದೆ.
ವಲಯ 1ರಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಸಂಬಂಧಿಸಿದ ಯೋಜನೆಗಳು, ಘೋಷಣೆಗಳಿವೆ. ಇದಕ್ಕಾಗಿ ₹ 31,028 ಕೋಟಿ ಮೀಸಲಿಡಲಾಗಿದೆ. ವಲಯ 2ರಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಒಗ್ಗೂಡಿಸಲಾಗಿದೆ. ಇದಕ್ಕಾಗಿ ₹ 62,150 ಕೋಟಿ ಮೀಸಲಿಡಲಾಗಿದೆ. ಆರ್ಥಿಕಾಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ವಲಯ 3ರಲ್ಲಿ ಒಗ್ಗೂಡಿಸಲಾಗಿದೆ. ಇದಕ್ಕಾಗಿ ₹ 52,529 ಕೋಟಿ ಘೋಷಿಸಲಾಗಿದೆ. ಬೆಂಗಳೂರು ಅಭಿವೃದ್ಧಿಯನ್ನು ಪ್ರತ್ಯೇಕ ವಲಯವಾಗಿ ಗುರುತಿಸಲಾಗಿದೆ. ವಲಯ 4ರಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ₹ 7795 ಕೋಟಿ ಮೀಸಲಿಡಲಾಗಿದೆ.
ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸಿದ ಕ್ಷೇತ್ರಗಳನ್ನು ವಲಯ 5ರಲ್ಲಿ ಗುರುತಿಸಲಾಗಿದೆ. ಇದಕ್ಕಾಗಿ ₹2,645 ಕೋಟಿ ಮೀಸಲಿಡಲಾಗಿದೆ. ವಲಯ 6ರಲ್ಲಿ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೆ ಸಂಬಂಧಿಸಿದ ಯೋಜನೆ-ಘೋಷಣೆಗಳನ್ನು ಒಗ್ಗೂಡಿಸಲಾಗಿದೆ. ಇದಕ್ಕಾಗಿ ₹ 52,519 ಕೋಟಿ ಅನುದಾನ ಘೋಷಿಸಲಾಗಿದೆ.
ಯಾವುದರಿಂದ ಎಷ್ಟು ಆದಾಯ? ಯಾವುದಕ್ಕೆ ಎಷ್ಟು ಖರ್ಚು 2021- 22ನೇ ಸಾಲಿನ ಕರ್ನಾಟಕ ಬಜೆಟ್ನಲ್ಲಿ ಸರ್ಕಾರಕ್ಕೆ ಬರುವ ಆದಾಯದ ಮೂಲಗಳು ಯಾವುವು ಹಾಗೂ ಆ ಆದಾಯದಲ್ಲಿ ಯಾವುದಕ್ಕೆ, ಎಷ್ಟು ವೆಚ್ಚ ಮಾಡಲಿದೆ ಎಂಬ ವಿವರ ಹೀಗಿದೆ. ಅದನ್ನು ರೂಪಾಯಿ ಲೆಕ್ಕದಲ್ಲಿ ಇಳಿಸಿದ್ದು, ಪೈಸೆಗಳಲ್ಲಿ ಲೆಕ್ಕ ಹಾಕಿ, ಇಲ್ಲಿ ನೀಡಲಾಗಿದೆ.
ರಾಜ್ಯ ಸರ್ಕಾರದ ಆದಾಯ ಮೂಲಗಳು ರಾಜ್ಯ ತೆರಿಗೆ 50 ಪೈಸೆ, ಸಾಲ 29 ಪೈಸೆ, ಕೇಂದ್ರ ತೆರಿಗೆ 10 ಪೈಸೆ, ಕೇಂದ್ರ ಸರ್ಕಾರದ ಸಹಾಯಾನುದಾನ 6 ಪೈಸೆ, ರಾಜ್ಯ ತೆರಿಗೆಯೇತರ ರಾಜಸ್ವ 3 ಪೈಸೆ, ಸಾರ್ವಜನಿಕ ಲೆಕ್ಕ ನಿವ್ವಳ 2 ಪೈಸೆ. ಒಟ್ಟು 100 ಪೈಸೆ ಆಂದರೆ ಒಂದು ರೂಪಾಯಿ.
ರಾಜ್ಯ ಸರ್ಕಾರ ಯಾವುದಕ್ಕೆ ಎಷ್ಟು ಖರ್ಚು ಮಾಡುತ್ತೆ? ವೇತನ ಹಾಗೂ ಭತ್ಯೆಗಳು 21 ಪೈಸೆ, ಋಣ ಮೇಲುಸ್ತುವಾರಿ 18 ಪೈಸೆ, ಬಂಡವಾಳ ವೆಚ್ಚ 17 ಪೈಸೆ, ಇತರೆ ರಾಜಸ್ವ ವೆಚ್ಚ 16 ಪೈಸೆ, ಸಹಾಯಧನ 10 ಪೈಸೆ, ಪಿಂಚಣಿ 10 ಪೈಸೆ, ಸಹಾಯಾನುದಾನ ಮತ್ತು ಇತರೆ 4 ಪೈಸೆ, ಸಾಮಾಜಿಕ ಭದ್ರತಾ ಪಿಂಚಣಿಗಳಿಗೆ 3 ಪೈಸೆ, ಆಡಳಿತಾತ್ಮಕ ವೆಚ್ಚಗಳಿಗೆ 1 ಪೈಸೆ. ಒಟ್ಟು 100 ಪೈಸೆ. ಅಂದರೆ ಒಂದು ರೂಪಾಯಿ.
ಇದನ್ನೂ ಓದಿ: 2021-22ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಮಹಿಳೆಯರಿಗೆ ಸಿಕ್ಕಿದ್ದೇನು? ಹೊಸ ಯೋಜನೆಗಳೇನು?
ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಹಾಕಿಕೊಟ್ಟ ಡಿಜಿಟಲ್ ಬಜೆಟ್ ಮೇಲ್ಪಂಕ್ತಿ ಅನುಸರಿಸದ ಸಿಎಂ ಯಡಿಯೂರಪ್ಪ
Published On - 2:18 pm, Mon, 8 March 21