Anekal Karaga 2025: ಗಲಾಟೆ ಬಗೆಹರಿಸಿದ ಹೈಕೋರ್ಟ್, ಮರುಕಳಿಸಲಿರುವ ಗತವೈಭವ
ಸುಮಾರು ಇನ್ನೂರು ವರ್ಷಗಳ ಇತಿಹಾಸವಿರುವ ಆನೇಕಲ್ ದ್ರೌಪದಮ್ಮ ಮತ್ತು ಧರ್ಮರಾಯಸ್ವಾಮಿ ಕರಗ ಬೆಂಗಳೂರು ಕರಗದಷ್ಟೇ ಖ್ಯಾತಿ ಹೊಂದಿದೆ. ಆದ್ರೆ ಕಳೆದೊಂದು ದಶಕದಿಂದ ಆನೇಕಲ್ ಕರಗ ವಿವಾದಕ್ಕೀಡಾಗಿತ್ತು. ಇದೀಗ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು ಆನೇಕಲ್ ಕರಗ ವಿವಾದಕ್ಕೆ ತೆರೆ ಎಳೆದಿದೆ. ಅಷ್ಟಕ್ಕೂ ಆನೇಕಲ್ ಕರಗದ ವಿವಾದ ಏನಿತ್ತು ಎನ್ನುವ ವಿವರ ಇಲ್ಲಿದೆ.

ಆನೇಕಲ್(ಬೆಂಗಳೂರು), (ಏಪ್ರಿಲ್ 10): ಸುಮಾರು ಇನ್ನೂರು ವರ್ಷಗಳ ಇತಿಹಾಸವಿರುವ ಆನೇಕಲ್ ದ್ರೌಪದಮ್ಮ ಮತ್ತು ಧರ್ಮರಾಯಸ್ವಾಮಿ ಕರಗ ಬೆಂಗಳೂರು ಕರಗದಷ್ಟೇ ಖ್ಯಾತಿ ಹೊಂದಿದೆ. ಆದ್ರೆ ಕಳೆದೊಂದು ದಶಕದಿಂದ ಆನೇಕಲ್ ಕರಗ ವಿವಾದಕ್ಕೀಡಾಗಿತ್ತು. ಇದೀಗ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು ಆನೇಕಲ್ ಕರಗ ವಿವಾದಕ್ಕೆ ತೆರೆ ಎಳೆದಿದೆ. ಹೌದು ಗೊಂದಲದ ಗೂಡಾಗಿದ್ದ ಇತಿಹಾಸ ಪ್ರಸಿದ್ಧ ಆನೇಕಲ್ ಕರಗ ವಿವಾದಕ್ಕೆ ಕರ್ನಾಟಕ ಹೈಕೋರ್ಟ್ ಬಗೆಹರಿಸಿದ್ದು, ಅರ್ಚಕರ ಪರವಾಗಿ ಹೈಕೋರ್ಟ್ ಆದೇಶ ನೀಡಿದೆ. ಹೀಗಾಗಿ ಕರಗಕ್ಕೆ ಸಕಲ ಸಿದ್ಧತೆಗಳು ಆರಂಭವಾಗಿದ್ದು, ಇದೇ ಏಪ್ರಿಲ್ 12ರಂದು ಹಸಿ ಕರಗ ನಡೆದರೆ, ಏ.15ರಂದು ಒಣ ಕರಗ ಜರುಗಲಿದೆ.
ಆನೇಕಲ್ ಕರಗಕ್ಕೆ ಸಕಲ ಸಿದ್ಧತೆ
ಬೆಂಗಳೂರು ಸೇರಿದಂತೆ ರಾಜ್ಯದ 175 ಕಡೆ ನಡೆಯುವ ಕರಗಗಳಲ್ಲಿ ಬೆಂಗಳೂರು ಮತ್ತು ಆನೇಕಲ್ ಕರಗ ಮಹೋತ್ಸವ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿವೆ. ಅಲ್ಲದೆ ರಾಜ್ಯದಲ್ಲಿ ಆನೇಕಲ್ ನಲ್ಲಿ ಮಾತ್ರ ಹಸಿ ಕರಗ ಮತ್ತು ಒಣಕರಗ ಹಾಗೂ ಕೋಟೆಜಗಳ ಎಂಬ ವಿಶಿಷ್ಟ ಆಚರಣೆ ನಡೆಯುತ್ತದೆ. ಚೈತ್ರಾ ಹುಣ್ಣಿಮೆಯಂದು ಬೆಂಗಳೂರು ಕರಗ ನಡೆಯುವ ದಿನವೇ ಆನೇಕಲ್ ನಲ್ಲಿ ಹಸಿ ಕರಗ ಜರುಗಲಿದೆ. ಅಂದ್ರೆ ಏಪ್ರಿಲ್ 12ರಂದು ಹಸಿ ಕರಗ ಜರುಗಲಿದೆ. ಇನ್ನು ಏ.15ರಂದು ಒಣ ಕರಗ ನಡೆಯಲಿದೆ.
ಇದನ್ನೂ ಓದಿ: Bengaluru Karaga: ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿ
ಅಂದಹಾಗೆ ಈ ವರ್ಷ ಕರಗ ಹೊರಲು ಕುಲಸ್ಥರಿಗೆ ಆನೇಕಲ್ ತಹಶಿಲ್ದಾರ್ ಶಶಿಧರ್ ಮಾಡ್ಯಾಳ್ ಆದೇಶ ನೀಡಿದ್ದು, ಚಂದ್ರಪ್ಪ ಕರಗ ಹೊರಲು ಎಲ್ಲಾ ಸಿದ್ದತೆ ನಡೆದಿತ್ತು. ಆದ್ರೆ ನಿನ್ನೆ (ಏಪ್ರಿಲ್ 09) ಹೈಕೋರ್ಟ್ ಅರ್ಚಕರ ಪರವಾಗಿ ಅಂತಿಮ ಆದೇಶ ನೀಡಿದೆ. ಈ ಹಿನ್ನೆಲೆ ಇಂದು ಕೊನೆ ಕ್ಷಣದ ಸಿದ್ದತೆ ನಡೆದಿದೆ. ಈ ಬಾರಿ ಹಿಂದಿನಂತೆ ಕರಗ ಆನೇಕಲ್ ಪಟ್ಟಣದ ಎಲ್ಲಾ ಕಡೆ ಸಂಚಾರ ಮಾಡುವುದಿಲ್ಲ. ರಾಜಬೀದಿಗಳಲ್ಲಿ ಮಾತ್ರ ಕರಗ ಸಾಗಲಿದ್ದು, ಭಕ್ತರು ಸಹಕರಿಸಬೇಕಾಗಿ ಎಂದು ಮೂಲ ವಹ್ನಿಕುಲ ಸೇವಾ ಸಂಘದ ಅಧ್ಯಕ್ಷರು ಮನವಿ ಮಾಡಿದ್ದಾರೆ.
ವಿವಾದ ಏನಿತ್ತು?
ಇನ್ನೂರು ವರ್ಷಗಳ ಇತಿಹಾಸವಿರುವ ಆನೇಕಲ್ ದ್ರೌಪದಮ್ಮ ಮತ್ತು ಧರ್ಮರಾಯಸ್ವಾಮಿ ಕರಗ ವಿಚಾರ ಮೂಲ ವಹ್ನಿಕುಲ ಸೇವಾ ಸಂಘ ಮತ್ತು ಅರ್ಚಕರು ಹಾಗೂ ಕುಲಸ್ಥರ ನಡವೆ ದಶಕಗಳಿಂದ ವಿವಾದ ನಡೆಯುತ್ತಿದೆ. ಅನಾದಿ ಕಾಲದಿಂದಲೂ ದೇವಾಲಯ ಅರ್ಚಕರ ಕುಟುಂಬ ಕರಗ ನಡೆಸಿಕೊಂಡು ಬರಲಾಗುತ್ತಿತ್ತು. ಆದ್ರಲ್ಲು ಅರ್ಚಕ ಅರ್ಜುನಪ್ಪ ಕರಗ ನಡೆಸುತ್ತಿದ್ದಾಗ ಹೆಚ್ಚು ವೈಭವಯುತವಾಗಿ ನಡೆಯುತ್ತಿತ್ತು. ಆದ್ರೆ ಅರ್ಜುನಪ್ಪ ಬಳಿಕ ಕುಲಸ್ಥರು ತಾವು ಕೂಡ ಕರಗ ಹೊರುವುದಾಗಿ ತಕರಾರು ತೆಗೆದ ಬಳಿಕ ವಿವಾದ ಹುಟ್ಟಿಕೊಂಡಿತ್ತು. ಅಂದಿನಿಂದ ಪ್ರತಿವರ್ಷ ಆನೇಕಲ್ ಕರಗ ಮಹೋತ್ಸ ಗೊಂದಲದ ಗೂಡಾಗಿತ್ತು. 2022 ರಲ್ಲಿ ಅಂದಿನ ತಹಶಿಲ್ದಾರ್ ಅರ್ಚಕರ ಬದಲಾಗಿ ಕುಲಸ್ಥರಿಗೆ ಕರಗ ಹೊರಲು ಅವಕಾಶ ನೀಡಿದ್ದರು. ಅಂದಿನಿಂದ ಆನೇಕಲ್ ಕರಗ ವಿವಾದ ವಿಚಾರ ಹೈಕೋರ್ಟ್ ಅಂಗಳದಲ್ಲಿದ್ದು, ನಿನ್ನೆ ಅರ್ಚಕರ ಪರವಾಗಿ ಹೈಕೋರ್ಟ್ ಆದೇಶ ನೀಡಿದೆ.
ಒಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಆನೇಕಲ್ ದ್ರೌಪದಮ್ಮ ಮತ್ತು ಧರ್ಮರಾಯಸ್ವಾಮಿ ಕರಗ ಬೆಂಗಳೂರು ಕರಗದಷ್ಟೆ ಖ್ಯಾತಿ ಗಳಿಸಿದ್ದು, ಅಪಾರ ಭಕ್ತ ಸಮೂಹ ಕರಗ ನೋಡಲು ಆಗಮಿಸುತ್ತಾರೆ. ಆದ್ರೆ ಭಕ್ತರ ನಿರೀಕ್ಷೆಯಂತೆ ಆನೇಕಲ್ ಕರಗದ ಗತವೈಭವ ಮರುಕಳಿಸಿತ್ತಾ ಎಂಬುದನ್ನು ಕಾದುನೋಡಬೇಕಿದೆ.