ಬೆಂಗಳೂರು 2ನೇ ಏರ್ಪೋರ್ಟ್: ಬಿಡದಿ ಔಟ್, ಈ ಎರಡು ಸ್ಥಳಗಳ ಬಗ್ಗೆ ಚರ್ಚೆ, ಜಟಾಪಟಿ!
Bengaluru 2nd Airport : ಕರ್ನಾಟಕದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭವಾಗಿವೆ. ಬೆಂಗಳೂರಿನ ಎರಡನೇ ಏರ್‌ಪೋರ್ಟ್‌ಗೆ ಈಗಾಗಲೇ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ ಆರಂಭದಲ್ಲೇ ವಿಘ್ನ ಎಂಬ ಹಾಗೆ ನೂತನ ಏರ್ಪೋರ್ಟ್ ಸ್ಥಳದ ವಿಚಾರದಲ್ಲಿ ಭಾರಿ ಚಟಾಪಟಿ ಶುರುವಾಗಿದೆ. ಹೊಸ ಏರ್ಪೋರ್ಟ್ ನಿರ್ಮಾಣ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಂಬ ಕೂಗು ಎದ್ದಿದೆ.

ಬೆಂಗಳೂರು, (ಏಪ್ರಿಲ್ 10): ಕನಕಪುರ (Kanakapura) ಭಾಗನಾ.. ನೆಲಮಂಗಲದ (Nelamangala) ಕಡೆನಾ? ಕುಣಿಗಲ್ ಕಡೆಯಲ್ಲೋ.. ಬೆಂಗಳೂರಿನ 2ನೇ ವಿಮಾನ ನಿಲ್ದಾಣ (Bengaluru 2nd Airport) ಜಾಗದ ವಿಚಾರವೇ ಗೊಂದಲ ಸೃಷ್ಟಿಸಿದೆ. ಈಗಾಗಲೇ ಕೇಂದ್ರದ ವಿಮಾನಯಾನ ಇಲಾಖೆಯ ಅಧಿಕಾರಿಗಳು ಬೆಂಗಳೂರಿಗೆ (Bengaluru) ಬಂದಿದ್ದು, ಏರ್ಪೋರ್ಟ್ ನಿರ್ಮಾಣದ ಸ್ಥಳಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಕಳೆದ ಮೂರು ದಿನಗಳಿಂದ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಕನಕಪುರ ರಸ್ತೆಯ 2 ಸ್ಥಳಗಳನ್ನು ಪರಿಶೀಲನೆ ಮಾಡಿ ಬಳಿಕ ಸಚಿವ ಎಂ ಬಿ ಪಾಟೀಲ್ ಜೊತೆಗೆ ಸುದೀರ್ಘ ಚರ್ಚೆ ಮಾಡಿದ್ದಾರೆ. ಹಾಗೇ ನೆಲಮಂಗಲ ಮತ್ತು ಕುಣಿಗಲ್ ಭಾಗದ ಸ್ಥಳಗಳನ್ನೂ ಏರ್ಪೋರ್ಟ್ ಅಥಾರಿಟಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬಿಡದಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸೂಕ್ತ ಅಲ್ಲ. ಈ ಜಾಗವನ್ನು ಬಿಟ್ಟು ಈ ಎರಡು ಜಾಗಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಮೂರರಲ್ಲಿ ಒಂದು ಔಟ್ ಆದಂತಾಗಿದ್ದು, ಇನ್ನುಳಿದ ಎರಡು ಸ್ಥಳಗಳಲ್ಲಿ ಯಾವುದನ್ನು ಆಯ್ಕೆ ಮಾಡಲಾಗುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಸಚಿವ ಎಂ ಬಿ ಪಾಟೀಲ್ ಅವರು ಕೂಡ ಉದ್ದೇಶಿತ ವಿಮಾನ ನಿಲ್ದಾಣದ ಅಗತ್ಯ, ಬೆಂಗಳೂರಿನ ನಾಗರಿಕ ಮತ್ತು ಕೈಗಾರಿಕಾ ಅಗತ್ಯ ಇತ್ಯಾದಿಗಳನ್ನು ತಂಡದ ಸದಸ್ಯರಿಗೆ ವಿವರಿಸಿದ್ದಾರೆ. ಯಾರ ಒತ್ತಡಕ್ಕೂ ಮಣೆಯದೇ ಅತ್ಯಂತ ಪಾರದರ್ಶಕವಾಗಿ ಸ್ಥಳ ಗುರುತಿಸುವ ಕೆಲಸ ಆಗಲಿ ಎಂದು ತಂಡಕ್ಕೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ನ ಬಿಗ್ ಅಪ್ಡೇಟ್ಸ್: ಸಮೀಕ್ಷೆಗೆ ಬಂತು ಕೇಂದ್ರ ತಂಡ
ಬಿಡದಿ 2ನೇ ಏರ್‌ಪೋರ್ಟ್‌ಗೆ ಸೂಕ್ತ ಸ್ಥಳವಲ್ಲ
ಬಳಿಕ ಮಾತನಾಡಿದ ಸಚಿವ ಎಂಬಿ ಪಾಟೀಲ್, ಉದ್ದೇಶಿತ ಎರಡನೆಯ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲು ಸರಕಾರ ತೀರ್ಮಾನಿಸಿದೆ. ಸ್ಥಳ ಪರಿಶೀಲನೆಯ ಬಳಿಕ ಪ್ರಾಧಿಕಾರದ ಅಭಿಪ್ರಾಯ ಏನೆಂಬುದನ್ನು ತಿಳಿದುಕೊಂಡು, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಎಂ ಬಿ ಪಾಟೀಲ್ ಅವರು ತಿಳಿಸಿದ್ದಾರೆ. ಇನ್ನೂ, ಬಿಡದಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸೂಕ್ತ ಅಲ್ಲ. ಈ ಜಾಗವನ್ನು ಬಿಟ್ಟು ಇನ್ನುಳಿದ ಎರಡು ಸ್ಥಳಗಳ ಬಗ್ಗೆ ಕೇಂದ್ರ ಅಧ್ಯಯನ ತಂಡ ವರದಿ ನೀಡಲಿದೆ ಎಂದಿದ್ದಾರೆ.
2ನೇ ಏರ್ಪೋರ್ಟ್ಗಾಗಿ ಜಟಾಪಟಿ
ಇನ್ನು 2ನೇ ವಿಮಾನ ನಿಲ್ದಾಣದ ವಿಚಾರವಾಗಿ ನಾಯಕರ ನಡುವೆ ಜಟಾಪಟಿ ಶುರುವಾಗಿದೆ. ಸರ್ಕಾರ ಗುರುತಿಸಿರೋ 3 ಸ್ಥಳಗಳನ್ನ ಬಿಟ್ಟು ಶಿರಾದಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಕೂಗು ಎದ್ದಿದೆ. ಸಿಎಂ ಸಿದ್ದರಾಮಯ್ಯಗೆ ಟಿಬಿ ಜಯಚಂದ್ರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಶಾಸಕರು ಪಕ್ಷಾತೀತವಾಗಿ ಪತ್ರ ಬರೆದಿದ್ದಾರೆ. ಕನಕಪುರದಲ್ಲೂ ವಿಮಾನ ನಿಲ್ದಾಣಕ್ಕೆ ಜಾಗ ಪರಿಶೀಲಿಸಲಾಗಿದೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಒತ್ತಡವೇ ಕಾರಣ ಎಂದು ಕೆಲವರಿಂದ ಬೇಸರ ವ್ಯಕ್ತವಾಗಿದೆ. ಏರ್ಪೋರ್ಟ್ ಸ್ಥಾಪನೆ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ ಎಂದು 30ಕ್ಕೂ ಹೆಚ್ಚು ಶಾಸಕರು ಧ್ವನಿ ಎತ್ತಿದ್ದಾರೆ.
ಕನಕಪುರ ರಸ್ತೆಯ ಭಾಗದಲ್ಲಿ 2ನೇ ಏರ್ಪೋರ್ಟ್ ಬೇಡವೇ ಬೇಡ. ತುಮಕೂರು ಅಥವಾ ಶಿರಾ ಭಾಗದಲ್ಲಿ ಎಲ್ಲೇ ನಿರ್ಮಿಸಿದ್ರೂ ಓಕೆ ಎಂದು ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರ ಮಾತು.ಆದ್ರೆ , ಶಿರಾ ಭಾಗದಲ್ಲಿ ಏರ್ ಪೋರ್ಟ್ ಮಾಡಲು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.
ಶಿರಾದಲ್ಲಿ ಆಗಲಿ ಎಂದು ಜಾರಕಿಹೊಳಿ ಪಟ್ಟು
ಇನ್ನು ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ತುಮಕೂರು ಜಿಲ್ಲೆಯ ಶಿರಾ ಸಮೀಪ ಸರ್ಕಾರಿ ಭೂಮಿ ಇದೆ. ಅಲ್ಲೇ ಅಂತಾರಾಷ್ಟ್ರೀಯ ಏರ್ಪೋರ್ಟ್ ನಿರ್ಮಾಣ ಆಗಲಿ. 6 ತಿಂಗಳ ಹಿಂದೆಯೇ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೆ. ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಸೇರಿ ಎಲ್ಲದಕ್ಕೂ ಹತ್ತಿರ ಆಗುತ್ತೆ. ಅಧಿಕಾರಿಗಳು ಮೂರು ಸ್ಥಳ ವೀಕ್ಷಿಸಿದ್ದಾರೆ, ಅದರಲ್ಲಿ ಶಿರಾ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅಂತಿಮವಾಗಿ ಎಲ್ಲಿ ಮಾಡಬೇಕು ಎನ್ನುವುದನ್ನು ವಿಮಾನ ನಿಲ್ದಾಣ ಪ್ರಾಧಿಕಾರದವರು ತೀರ್ಮಾನ ಮಾಡಲಿದ್ದಾರೆ ಶಿರಾದಲ್ಲಿ ಏರ್ಪೋರ್ಟ್ ಆಗಲಿ ಎಂದು ಜಯಚಂದ್ರ ಬೇಡಿಕೆ ಕೂಡ ಇದೆ. ಶಿರಾ ಅಥವಾ ತುಮಕೂರು ಮಧ್ಯೆ ನಿರ್ಮಾಣವಾದ್ರೂ ಪರವಾಗಿಲ್ಲ. ಈ ಬಗ್ಗೆ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಬಂದಿದ್ದೇನೆ. ಶಿರಾ ಭಾಗದಲ್ಲಿ ಏರ್ಪೋರ್ಟ್ ಮಾಡೋದು ಎಎಐಗೆ ಬಿಟ್ಟಿದ್ದು. ಬೆಂಗಳೂರನ್ನು ಟ್ರಾಫಿಕ್ ಮುಕ್ತ ಮಾಡಬೇಕೆಂಬುದು ನಮ್ಮ ಉದ್ದೇಶ. ಸಿಎಂ ಜೊತೆ ಪರಮೇಶ್ವರ್, ಟಿ.ಬಿ.ಜಯಚಂದ್ರ ಮಾತನಾಡಿದ್ದಾರೆ ಎಂದರು.
ಕುತೂಹಲ ಮೂಡಿಸಿದ ಸ್ಥಳ
ಕನಕಪುರ ರಸ್ತೆಯಲ್ಲಿ ಗುರುತಿಸಲಾಗಿರುವ ಎರಡು ಪ್ರದೇಶಗಳಲ್ಲಿ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ಒಂದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಮೂಲಕ, ಎರಡನೇ ವಿಮಾನ ನಿಲ್ದಾಣದ ರೇಸ್‌ನಲ್ಲಿದ್ದ ಬಿಡದಿ ಸ್ಪರ್ಧೆಯಿಂದ ಹೊರಡೆ ಬಿದ್ದಂತಾಗಿದೆ. ಅಲ್ಲದೆ ಸಚಿವ ಜಿ.ಪರಮೇಶ್ವರ್ ಹಾಗೂ ವಿ.ಸೋಮಣ್ಣ ಅವರ ಮನವಿಗೂ ಕ್ಯಾರೆ ಅನ್ನದೇ, ಈಗಾಗಲೇ ತುಮಕೂರನ್ನು ಸಹ ಕೈಬಿಡಲಾಗಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಕನಕಪುರ ರಸ್ತೆ ಅಥವಾ ನೆಲಮಂಗಲ ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಆಗಬಾರದು. ಶಿರಾದಲ್ಲಿ ಆಗಲಿ ಎಂದು 30ಕ್ಕೂ ಹೆಚ್ಚು ಶಾಸಕರು ಪಟ್ಟು ಹಿಡಿದಿದ್ದಾರೆ. ಆದರೆ, ಅಂತಿಮವಾಗಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಯಾವ ಸ್ಥಳ ಗುರುತು ಮಾಡಲಾಗುತ್ತೆ? ಯಾರ ಕೈ ಮೇಲಾಗುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಜಕೀಯ ಲೆಕ್ಕಾಚಾರ. ಪರ ವಿರೋಧ ಏನೇ ಇದ್ರೂ, ಅಂತಿಮವಾಗಿ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಮತ್ತು ಕೇಂದ್ರ ಸರ್ಕಾರವೇ ಜಾಗ ಫೈನಲ್ ಮಾಡಲಿದೆ. ಸದ್ಯ ಯಾವ ಸ್ಥಳ ಫೈನಲ್ ತೀರ್ಮಾನಿಸುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.
Published On - 3:14 pm, Thu, 10 April 25