ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಪಿಂಕ್ ಐ ಪ್ರಕರಣ: ಏನಿದು? ಏನೇನು ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ
Pink Eye: ಡೆಂಘೀ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರು ಮಂದಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದ ಮದ್ರಾಸ್ ಐ ಜನರಲ್ಲಿ ಆತಂಕ ಹೆಚ್ಚಿಸಿತ್ತು. ಈಗ ಪಿಂಕ್ ಐ ರೂಪದಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು, ಏಪ್ರಿಲ್ 11: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ (Karnataka) ಕೆಲವು ದಿನಗಳ ಹಿಂದೆ ಮದ್ರಾಸ್ ಐ (Madras Eye) ಸೋಂಕು ಪಸರಿಸಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಹರಡಿ ಕಾಟ ನೀಡಿತ್ತು. ಈಗ ಮತ್ತೆ ಪಿಂಕ್ ಐ (Pink Eye) ರೂಪದಲ್ಲಿ ಹರಡಲು ಶುರುವಾಗಿದೆ. ಡೆಂಘೀ ಬೆನ್ನಲ್ಲೇ ಸಿಲಿಕಾನ್ ಸಿಟಿ ಮಂದಿಗೆ ಈಗ ಪಿಂಕ್ ಐ ಸಮಸ್ಯೆ ಶುರುವಾಗಿದೆ. ಇದಕ್ಕೆ ಮಕ್ಕಳೇ ಹೆಚ್ಚು ಗುರಿಯಾಗುತ್ತಿರುವ ಕಾರಣ ಪೋಷಕರಲ್ಲಿ ಆತಂಕ ಶುರುವಾಗಿದೆ. ಬದಲಾಗುತ್ತಿರುವ ಹವಾಮಾನವೇ ಪಿಂಕ್ ಐ ಕಾಯಿಲೆ ಹೆಚ್ಚಾಗಲು ಕಾರಣ ಎಂದು ತಜ್ಞ ವೈದ್ಯರು ಹೇಳಿದ್ದಾರೆ.
ಏನಿದು ಪಿಂಕ್ ಐ ಸೋಂಕು?
ಕಣ್ರೆಪ್ಪೆ ಹಾಗೂ ಕಣ್ಣುಗುಡ್ಡೆಯನ್ನು ಸುತ್ತುವರೆದಿರುವ ಪಾರದರ್ಶಕ ಪೊರೆಯಾದ ಕಾಂಜಂಕ್ಟಿವಾ ಊದಿಕೊಂಡು ಸೋಂಕಿನಿಂದ ಕಣ್ಣುಗಳು ಕೆಂಪಾಗುತ್ತಿವೆ. ಸೋಂಕಿತ ರಕ್ತನಾಳಗಳು ಊದಿಕೊಳ್ಳುತ್ತವೆ. ಇದರಿಂದಾಗಿ ಕಣ್ಣಿನ ಒಳಭಾಗದ ಬಿಳಿಭಾಗವು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ಕೂಡಾ ವೈರಲ್ ಸೋಂಕಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುತ್ತದೆ. ಇದೀಗ ಸೋಂಕು ಹರಡುವಿಕೆ ಹೆಚ್ಚಾಗಿದ್ದು, ಶಾಲಾ ಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದೆ. ಮಕ್ಕಳಲ್ಲಿ ಹೆಚ್ಚಾಗಿ ಈ ಸೋಂಕು ಕಂಡುಬರುತ್ತಿರುವುದರಿಂದ, ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪೋಷಕರು ಹಿಂದುಮುಂದು ನೋಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 15 ರಷ್ಟು ಹೆಚ್ಚಾಗಿದೆ ಎಂದು ಮಿಂಟೊ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ, ತಜ್ಞ ವೈದ್ಯ ಡಾ ಸುರೇಶ್ ಬಾಬು ತಿಳಿಸಿದ್ದಾರೆ.
ಪಿಂಕ್ ಐ ಲಕ್ಷಣಗಳೇನು?
- ಕಣ್ಣು ಕೆಂಪಾಗುವುದು, ತುರಿಕೆ
- ಕಣ್ಣಿನಲ್ಲಿ ಅತಿಯಾಗಿ ನೀರು ಸೋರುವುದು
- ಕಣ್ಣುಗಳಲ್ಲಿ ಚುಚ್ಚಿದಂತಹ ಅನುಭವ
ಪಿಂಕ್ ಐ ಬಗ್ಗೆ ಆತಂಕ ಯಾಕೆ?
- ಮೊದಲು ಮದ್ರಾಸ್ ಐ ರೋಗ ಅಥವಾ ಪಿಂಕ್ ಐ ಮಳೆಗಾಲದಲ್ಲಿ ಮಾತ್ರ ಹರಡುತ್ತಿತ್ತು.
- ಆದರೆ ಇದೀಗ ವರ್ಷವಿಡಿ ರೋಗ ಹರಡುತ್ತಿದ್ದು, ಸಹಜವಾಗಿ ಆತಂಕ ಮೂಡಿಸಿದೆ.
- ಹವಾಮಾನ ವೈಪರಿತ್ಯದಿಂದ ಹೆಚ್ಚಾಗಿದೆ.
- ಡಿಸೆಂಬರ್ ನಲ್ಲಿ 4-5 ಪ್ರಕರಣಗಳು ದಾಖಲಾಗಿದ್ದು, ಈಗ ಹೆಚ್ಚಾಗಿದೆ.
- ಜನವರಿಯಲ್ಲಿ 7 ರಿಂದ 10 ಪ್ರಕರಣಗಳು ವರದಿಯಾಗಿವೆ.
ವೈದ್ಯರ ಪ್ರಕಾರ ಪಿಂಕ್ ಐ ಬಗ್ಗೆ ಏನೇನು ಮುನ್ನೆಚ್ಚರಿಕೆ ವಹಿಸಬೇಕು?
- ಐಬುಪ್ರೊಫೇನ್ ಅಥವಾ ಕಣ್ಣಿನ ನೋವು ನಿವಾರಕಗಳನ್ನು ಬಳಸುವುದು.
- ಲೂಬ್ರಿಕೇಟಿಂಗ್ ಕಣ್ಣಿನ ಹನಿಗಳನ್ನು ಬಳಸಿ.
- ಕೆಲವು ನಿಮಿಷಗಳ ಕಾಲ ಕಣ್ಣುಗಳ ಮೇಲೆ ಬೆಚ್ಚಗಿನ, ಒದ್ದೆಯಾದ ಬಟ್ಟೆಯನ್ನು ಹಾಕುವುದು.
- ಶುದ್ಧವಾದ ಬಟ್ಟೆಯನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ನಂತರ ಅದರಲ್ಲಿರುವ ಸಂಪೂರ್ಣ ನೀರನ್ನು ಹಿಂಡಿ ತೆಗೆದು ಬಟ್ಟೆಯನ್ನು ಕಣ್ಣುಗಳ ಮೇಲಿರಿಸಿ.
- ಇದನ್ನು ಆಗಾಗ್ಗೆ ಪುನರಾವರ್ತಿಸುವುದರಿಂದ ಉರಿ ಕಡಿಮೆಯಾಗಿ ಕಣ್ಣುಗಳಿಗೆ ಆರಾಮವಾಗುತ್ತದೆ.
- ಸೋಂಕು ಹರಡದಂತೆ ಪ್ರತೀ ಬಾರಿ ಸ್ವಚ್ಛವಾದ ಬಟ್ಟೆಯನ್ನೇ ಬಳಸಬೇಕು.
- ಎರಡೂ ಕಣ್ಣುಗಳಿಗೂ ಪಿಂಕ್ ಐ ತಗುಲಿದ್ದರೆ ಕಣ್ಣಿಗೆ ಬೇರೆ ಬೇರೆ ಬಟ್ಟೆಯನ್ನು ಬಳಸಿ.
- ನಿಮ್ಮ ಕಣ್ಣುರೆಪ್ಪೆಗಳು ಒಟ್ಟಿಗೆ ಅಂಟಿಕೊಂಡಿದ್ದರೆ, ಬೆಚ್ಚಗಿನ ನೀರಿನಲ್ಲಿ ಒದ್ದೆಮಾಡಿದ ಬಟ್ಟೆಯು ಲೋಳೆಯನ್ನು ಸಡಿಲಗೊಳಿಸುತ್ತದೆ ಹಾಗೂ ಇದರಿಂದ ಕಣ್ರೆಪ್ಪೆಯನ್ನು ಬಿಡಿಸಬಹುದು
- ಇದು ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತರು ಕೈಗಳನ್ನು ಆಗಾಗ್ಗೆ ತೊಳೆಯಬೇಕು, ಇತರರಿಗೆ ಹರಡದಂತೆ ಜಾಗರೂಕತೆ ವಹಿಸಬೇಕು.
- ವಿಶೇಷವಾಗಿ ಕಣ್ಣುಗಳನ್ನು ಸ್ಪರ್ಶಿಸಿದ ನಂತರ ಕೈಗಳ ಸ್ವಚ್ಛತೆಯ ಕಡೆಗೆ ಆದ್ಯತೆ ನೀಡಬೇಕು.
- ಕಣ್ಣುಗಳು ಸಹಜ ಸ್ಥಿತಿಗೆ ಬರುವವರೆಗೆ ನಿಮ್ಮ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಬಾರದು
- ಕಣ್ಣುಗಳಲ್ಲಿ ತುರಿಕೆ ಕಾಣಿಸಿಕೊಂಡರೂ ಉಜ್ಜಬಾರದು, ಒಂದು ವೇಳೆ ಉಜ್ಜಿದರೆ ಕಣ್ಣಿನ ಆರೋಗ್ಯ ಇನ್ನಷ್ಟು ಹದಗೆಡುವುದಲ್ಲದೆ ಸೋಂಕು ಹರಡುವ ಪ್ರಮಾಣ ಹೆಚ್ಚಬಹುದು.
- ಸೋಂಕಿತರು ಈಜಾಡಲು ಹೋಗದೇ ಇರುವುದು ಉತ್ತಮ, ಈಜುಕೊಳದಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಭಾರತದಲ್ಲಿ ಪ್ರತಿ 5 ಜನರಲ್ಲಿ ಒಬ್ಬರಿಗೆ ವಿಟಮಿನ್ ಡಿ ಕೊರತೆಯಿದೆ; ಅಧ್ಯಯನ
ಈ ಮೇಲಿನವು ಪಿಂಕ್ ಐ ಸೋಂಕಿತರು ಅನುಸರಿಸಬೇಕಾದ ಸಾಮಾನ್ಯ ಕ್ರಮಗಳಾಗಿದ್ದರೂ ತಜ್ಞ ವೈದ್ಯರನ್ನು ಸಂಪರ್ಕಿಸಿಯೇ ಚಿಕಿತ್ಸೆ ಪಡೆಯಬೇಕು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 am, Fri, 11 April 25