ನೆಲದ ಮೇಲೆ ಮಲಗುವ ಅಭ್ಯಾಸ ನಿಮಗೂ ಇದ್ಯಾ! ಇದು ಆರೋಗ್ಯಕ್ಕೆ ಒಳ್ಳೆಯದೋ, ಅಲ್ಲವೋ ತಿಳಿದುಕೊಳ್ಳಿ
ನೆಲದ ಮೇಲೆ ಮಲಗುವ ಅಭ್ಯಾಸ ಹಲವರಿಗೆ ಇರುತ್ತದೆ. ಯಾವುದೇ ರೀತಿಯ ಹಾಸಿಗೆ ಇರಲಿ ನೆಲಕ್ಕಿಂತ ಒಳ್ಳೆಯದು ಯಾವುದು ಇಲ್ಲ ಎನ್ನುವವರು ಈಗಲೂ ಇದ್ದಾರೆ. ಆದರೆ ಇದು ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ದೇಹಕ್ಕೆ ಒಳ್ಳೆಯದೋ? ಅಲ್ಲವೋ? ಎಂಬ ಗೊಂದಲ ಎಲ್ಲರನ್ನೂ ಕಾಡಿರುತ್ತದೆ. ಆದರೆ ವೈದ್ಯರು ಈ ಅಭ್ಯಾಸ ದೇಹಕ್ಕೆ ಒಳ್ಳೆಯದು, ಇದರಿಂದ ಅನೇಕ ರೀತಿಯ ಪ್ರಯೋಜನಗಳಿವೆ ಎನ್ನುತ್ತಾರೆ. ಹಾಗಾದರೆ ಇದರಿಂದ ಯಾವ ರೀತಿಯ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಿ.

ಕೆಲವರು ಎಷ್ಟೇ ದಪ್ಪನೆಯ ಹಾಸಿಗೆ (Bed) ಇದ್ದರೂ ನೆಲದ ಮೇಲೆ ಮಲಗುವುದಕ್ಕೆ ಇಷ್ಟಪಡುತ್ತಾರೆ. ಮಧ್ಯಾಹ್ನವಾಗಲಿ, ರಾತ್ರಿಯಾಗಲಿ ಚೊಕ್ಕದಾದ ನೆಲದ ಮೇಲೆ ಹಾಯಾಗಿ ಮಲಗುವವರನ್ನು ನಾವು ನೋಡಿರುತ್ತೇವೆ. ಅದರಲ್ಲಿಯೂ ಈ ಬೇಸಿಗೆಯಲ್ಲಿ ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿರುವವರು ಪ್ರತಿಯೊಬ್ಬರ ಮನೆಯಲ್ಲಿಯೂ ಇರಬಹುದು. ಕೆಲವರಿಗಂತೂ ಹಾಸಿಗೆಯ ಮೇಲೆ ಮಲಗಿದರೆ ಮೈ- ಕೈ ನೋವಿನ (Pain) ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅವರು ನೆಲದ ಮೇಲೆ ಸುಖವಾಗಿ ನಿದ್ರೆ(Sleep) ಮಾಡಲು ಬಯಸುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವೇ? ಅಲ್ಲವೇ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ವೈದ್ಯರು ಈ ಅಭ್ಯಾಸ ಬಹಳ ಒಳ್ಳೆಯದು ಎಂದು ಹೇಳುತ್ತಾರೆ. ಏಕೆ ಗೊತ್ತಾ? ಇಲ್ಲಿದೆ ಮಾಹಿತಿ.
ಮಣ್ಣಿನ ಮೇಲ್ಮೈ ದೇಹಕ್ಕೆ ನೈಸರ್ಗಿಕ ಶಕ್ತಿಯನ್ನು ನೀಡುತ್ತದೆ. ಈ ರೀತಿಯ ಅಭ್ಯಾಸ ಬೆನ್ನುಮೂಳೆಯನ್ನು ಗಟ್ಟಿಗೊಳಿಸಲು ಮತ್ತು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹಕಕ್ಕೆ ವಿಶ್ರಾಂತಿ ನೀಡುವ ಮೂಲಕ ದಣಿವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ನಾವು ನೆಲದ ಮೇಲೆ ಮಲಗಿದಾಗ ನಮ್ಮ ದೇಹ ನೇರವಾಗಿರುತ್ತದೆ ಇದರಿಂದ ದೇಹಕ್ಕೆ ವಿಶ್ರಾಂತಿ ಸಿಗುವುದಲ್ಲದೆ ಸ್ನಾಯುಗಳು ಸಡಿಲಗೊಳ್ಳುತ್ತದೆ. ನೋವುಗಳು ಕ್ರಮೇಣ ಕಡಿಮೆಯಾಗುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು ತಿಳಿದುಕೊಳ್ಳಿ.
ಇದನ್ನೂ ಓದಿ: Tongue Cleaning: ನಿಮ್ಮ ನಾಲಿಗೆ ನೀಡುವ ಈ ರೀತಿಯ ಸಂದೇಶಗಳನ್ನು ಎಂದಿಗೂ ಕಡೆಗಣಿಸಬೇಡಿ
- ನೆಲದ ಮೇಲೆ ಅದರಲ್ಲಿಯೂ ಮಣ್ಣಿನ ನೆಲದ ಮೇಲೆ ಮಲಗುವುದರಿಂದ ಮನಸ್ಸಿನಲ್ಲಿರುವ ಆತಂಕ, ದುಗುಡಗಳು ಕಡಿಮೆಯಾಗುತ್ತವೆ. ಯಾವುದೇ ರೀತಿಯ ಕೆಟ್ಟ ಆಲೋಚನೆಗಳು ಮನಸ್ಸಿಗೆ ಬರುವುದಿಲ್ಲ.
- ಮಣ್ಣಿನ ನೆಲದಲ್ಲಿ ಮಲಗುವುದರಿಂದ ಜೀರ್ಣಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತ ಪರಿಚಲನೆ ಉತ್ತಮವಾಗಿರುತ್ತದೆ.
- ಇನ್ನು ಬೇಸಿಗೆಯಲ್ಲಿ ನೆಲದ ಮೇಲೆ ಮಲಗುವುದರಿಂದ ದೇಹ ತಂಪಾಗುತ್ತದೆ. ಮಣ್ಣಿನ ಗುಣ ತಂಪಾಗಿರುವುದರಿಂದ ಇದು ದೇಹದ ಶಾಖವನ್ನು ನಿಧಾನವಾಗಿ ಕಡಿಮೆ ಮಾಡುವ ಮೂಲಕ ದೇಹವನ್ನು ತಂಪಾಗಿಸುತ್ತದೆ. ಜೊತೆಗೆ ಈ ವಿಧಾನದಿಂದ ಗಾಢ ನಿದ್ರೆಯೂ ಬರುತ್ತದೆ.
- ದೇಹದಲ್ಲಿ ನಾನಾ ಕಡೆಗಳಲ್ಲಿ ನೋವಿದ್ದು ಅದರಿಂದ ಬಳಲುತ್ತಿದ್ದರೆ, ಅಂತವರಿಗೆ ನೆಲದ ಮೇಲೆ ಮಲಗುವುದು ಉತ್ತಮ ಪರಿಹಾರ ನೀಡುತ್ತದೆ.
- ನೆಲದ ಮೇಲೆ ಮಲಗುವುದರಿಂದ ಏಕಾಗ್ರತೆಯೂ ಹೆಚ್ಚಾಗುತ್ತದೆ.
ಮಣ್ಣಿನ ನೆಲ ಆರೋಗ್ಯಕ್ಕೆ ಒಳ್ಳೆಯದು
ಈ ವಿಷಯದ ಬಗ್ಗೆ ಆಯುರ್ವೇದ ತಜ್ಞರಾಗಿರುವ ಮನೋಜ್ ಶಾಸ್ತ್ರಿ ಎನ್ನುವವರು ಕೆಲವು ಮಾಹಿತಿಯನ್ನು ಟಿವಿ9 ಜೊತೆ ಹಂಚಿಕೊಂಡಿದ್ದು, ಅವರು ಹೇಳುವ ಪ್ರಕಾರ “ಮಣ್ಣಿನ ನೆಲದ ಮೇಲೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರು ಗ್ರಾನೈಟ್ ಮೇಲೆ ಮಲಗಲು ಇಷ್ಟ ಪಡುತ್ತಾರೆ. ಅದು ಕೆಲವರ ದೇಹಕ್ಕೆ ಒಳ್ಳೆಯದಲ್ಲ ಇದರಿಂದ ಮಂಡಿ ನೋವು, ಪಾದಗಳಲ್ಲಿ ಊತದ ಜೊತೆಗೆ ಇಂತಹ ಅಭ್ಯಾಸ ದೇಹದ ನೋವನ್ನು ಹೆಚ್ಚು ಮಾಡಬಹುದು. ಆದರೆ ಬೇಸಿಗೆ ದಿನಗಳಲ್ಲಿ ಮಣ್ಣಿನ ನೆಲದ ಮೇಲೆ ಮಲಗುವುದು ದೇಹಕ್ಕೆ ತುಂಬಾ ಒಳ್ಳೆಯದು” ಎಂದಿದ್ದಾರೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ