International Women’s Day 2021 | ಸಮಾಜ ಸೇವೆಯೇ ಸುಶೀಲಮ್ಮನವರ ಜೀವನ..; ಒಳಿತಿಗಾಗಿ ನಿರಂತರ ಹೋರಾಟ

16ನೇ ವಯಸ್ಸಿನಲ್ಲೇ ಮದುವೆಯಾದ ಸುಶೀಲಮ್ಮ ಧೈರ್ಯವಂತ ಮಹಿಳೆ, ಕಳೆದ 25 ವರ್ಷಗಳಿಂದ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಸಂಘಟಿಸಿ, ಅವರ ಹಕ್ಕುಗಳಿಗಾಗಿ ಹೋರಾಟ-ಸಮಾವೇಶಗಳನ್ನು ಮಾಡುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಭೇಟಿ ಮಾಡಿ ಶೋಷಿತರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಆಯೇಷಾ
  • Published On - 17:11 PM, 8 Mar 2021
International Women's Day 2021 | ಸಮಾಜ ಸೇವೆಯೇ ಸುಶೀಲಮ್ಮನವರ ಜೀವನ..; ಒಳಿತಿಗಾಗಿ ನಿರಂತರ ಹೋರಾಟ
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸುಶೀಲಮ್ಮ

‘ಸ್ತ್ರೀ’ ಇದು ಬರೀ ಪದವಲ್ಲ. ಶಕ್ತಿ, ಮನಸ್ಥಿತಿ, ಸಾಧ್ಯತೆ, ಮಮತೆ, ಸ್ಫೂರ್ತಿ, ಸಂಭ್ರಮ. ಸಮತೆಯೂ. ಪೂಜ್ಯನೀಯ ಪಟ್ಟದಿಂದಾಚೆಯೂ ಆಕೆ ತನ್ನನ್ನು ತಾನಿವತ್ತೂ  ನಿಭಾಯಿಸಿಕೊಳ್ಳುವಷ್ಟು ಸ್ವತಂತ್ರ ಮನೋಭಾವವನ್ನು ಹೊಂದಿದ್ದಾಳೆ. ಹಾಗಂತ ಪೂರ್ತಿಯಾಗಿ ಶೋಷಣೆಯಿಂದ ಹೊರಗಾಗಿದ್ದಾಳೆ ಎನ್ನುವುದನ್ನೂ ಒಪ್ಪಲಾಗದು. ಕೂಲಿಯಿಂದ ಸೇನೆಯವರೆಗೂ ಆಕೆ ಶಕ್ತಿಯಾಗಿ ಚಿಮ್ಮಿದ್ದಾಳೆಂದರೆ ಆಕೆಯ ದಿಟ್ಟತೆಗೆ ದೊಡ್ಡ ಇತಿಹಾಸವೇ ಇದೆ. ಅವಳು ಕಾಲಿಟ್ಟಲ್ಲೆಲ್ಲ ಹೊಳಹಿನ ಛಾಯೆ ಆವರಿಸುತ್ತದೆಯೆಂದರೆ ಒಡಲೊಳಗೆ ಕಟ್ಟಿಟ್ಟುಕೊಂಡ ತಾಳ್ಮೆ ಇದೆ, ವಿವೇಚನೆ ಇದೆ, ಸ್ವಾವಲಂಬೀ ಮನೋಭಾವವಿದೆ. ಹೀಗೆ ಅವಳ ಆತ್ಮಗೌರವವನ್ನು ದ್ವಿಗುಣಗೊಳಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅವಳನ್ನಪ್ಪಿದೆ (International Women’s Day 2021). ನಮ್ಮನಿಮ್ಮ ನಡುವೆಯೇ ಇರುವ ಸಾಧಕ ಮನಸ್ಥಿತಿಗಳನ್ನು ಈ ಸಂದರ್ಭದಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ. ಈ ಸರಣಿಯಲ್ಲಿ ನಾವೀಗ ನಿಮ್ಮೆದುರು ಇಡುತ್ತಿರುವುದು ಸಮಾಜ ಸೇವಕಿ ಸುಶೀಲಮ್ಮನವರ ಬಗೆಗಿನ ಒಂದಷ್ಟು ಆಸಕ್ತಿಕರ ವಿಚಾರಗಳನ್ನು..

ಕಲೆ-ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ, ನೃತ್ಯ-ನಾಟಕ, ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದಾರೆ. ಮಹಿಳೆಯರ ಈ ಸಾಧನೆಗಳನ್ನು ಸ್ಮರಿಸುವ ಮೂಲಕ ಇಂದು (ಮಾರ್ಚ್-8) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶ್ವವ್ಯಾಪ್ತಿ ಆಚರಿಸಲಾಗುತ್ತಿದೆ. ಇಂತಹ ಸುದಿನದಂದು ನಾವು ನಿಮಗೆ ಓರ್ವ ಮಹಿಳೆಯ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ. ತಮ್ಮ ಇಡೀ ಜೀವನವನ್ನೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಮಾನವತಾ ಪ್ರಶಸ್ತಿ ವಿಜೇತೆ ಸುಶೀಲಮ್ಮ.

ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಜನ ಎದುರಿಸುತ್ತಿರುವ ತೊಂದರೆಗಳನ್ನು ದೂರ ಮಾಡಬೇಕು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ದಿಟ್ಟ ಹೆಜ್ಜೆ ಇಟ್ಟು ಮುಂದೆ ಬಂದ ಸುಶೀಲಮ್ಮ ಇಂದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ತಮ್ಮ 67ನೇ ವಯಸ್ಸಿನಲ್ಲೂ ಈ ಜೀವ ಸಮಾಜಕ್ಕಾಗಿಯೇ ಮಿಡಿಯುತ್ತಿದೆ. ಯಾವುದೇ ಸಮಸ್ಯೆಯಾದರೂ ಅದಕ್ಕೆ ನ್ಯಾಯ ಒದಗಿಸಲು ಯಾವ ಹೆಜ್ಜೆಯನ್ನಾದರೂ ಇಡಲು ನಾನು ಸಿದ್ಧ ಎಂದು  ಮುಂದೆ ಬರ್ತಾರೆ ಈ ಸುಶೀಲಮ್ಮ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದೀಕೆರೆಯಲ್ಲಿ ಬಡ ದಲಿತ ಕುಟುಂಬದಲ್ಲಿ ಹುಟ್ಟಿ, ನಾಲ್ಕನೇ ತರಗತಿವರೆಗೆ ಓದಿ 1998ರ ಸಮಯದಲ್ಲಿ ಸಮಾಜ ಸೇವೆಗೆ ಇಳಿದ ಸುಶೀಲಮ್ಮನವರಿಗೆ ಸಮಾಜ, ಸಮಾಜ ಸೇವೆ, ಸಹಾಯ ಯಾವುದೂ ಗೊತ್ತಿರಲಿಲ್ಲ. ಜನರಿಗೆ ಸಹಾಯ ಮಾಡುವ ದಾರಿಯೂ ತಿಳಿದಿರಲಿಲ್ಲ. ಕೂಲಿ ಕೆಲಸ ಮಾಡುತ್ತಿದ್ದ ಸುಶೀಲಮ್ಮ ವಿಮುಕ್ತಿ ವಿದ್ಯಾ ಸಂಸ್ಥೆ ಎಂಬ ಸಂಸ್ಥೆಯೊಂದು ಹೇಳಿ ಕೊಟ್ಟ ದಾರಿಯಲ್ಲಿ ಸಾಗಿ ಬಂದು ಇಂದು ಸಮಾಜ ಸೇವೆ ಮಾಡುತ್ತಿದ್ದಾರೆ. ವಿಮುಕ್ತಿ ವಿದ್ಯಾ ಸಂಸ್ಥೆ ಮಹಿಳೆಯರಿಗೆ ಜ್ಞಾನ, ಅವರ ಶಕ್ತಿಯನ್ನು ತಿಳಿಸಿಕೊಡುವ ಕಾರ್ಯ ಮಾಡುತ್ತಿತ್ತು. ಈ ಸಂಸ್ಥೆಯಿಂದ ಸುಶೀಲಮ್ಮನವರು ಸಮಾಜಕ್ಕೆ ನನ್ನ ಕೊಡುಗೆಯೂ ಇದೆ ಎಂದು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಮುಕ್ತಿ ವಿದ್ಯಾ ಸಂಸ್ಥೆಯ ಪರಿಚಯವಾದ ನಂತರ ತಮ್ಮದೇ ಸಾಹಸಿ ಸ್ವ-ಸ್ವಹಾಯ ಮಹಿಳಾ ಸಂಘವನ್ನು ಕಟ್ಟಿ ಬಡವರಿಗಾಗಿ ದುಡಿದಿದ್ದಾರೆ.

Inspiring Women sushilamma 1

ವಿಮುಕ್ತಿ ವಿದ್ಯಾ ಸಂಸ್ಥೆಯಡಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಶೀಲಮ್ಮ

ಒಂದೊಂದು ಹೆಜ್ಜೆ ಇಟ್ಟು ಸಾವಿರಾರು, ಲಕ್ಷಾಂತರ ಜನರಿಗೆ ಸಹಾಯ ಮಾಡಿದ್ದಾರೆ. ಸಂಸ್ಥೆ ಮೂಲಕ ಜ್ಞಾನೋದಯವಾಗಿ ಸಂಘ ಕಟ್ಟಿ ಅಭಿವೃದ್ದಿಯಾಗಿ ಕರ್ನಾಟಕಾದ್ಯಂತ ಸೇವೆ ಸಲ್ಲಿಸಿ ಸುಮಾರು 150-200 ಸಂಘಗಳನ್ನು ಒಟ್ಟುಗೂಡಿ ಭೂವಿ ತಾಯಿ ಮಹಿಳಾ ಸಂಘಗಳ ಒಕ್ಕೂಟವನ್ನು ಮಾಡಿ ಇದರ ಮೂಲಕ ಸಮಸ್ಯೆ ಬಗೆಹರಿಸುವುದು, ಸರ್ಕಾರದಿಂದ ಲೋನ್ ಮಾಡಿಸುವುದು, ಬಾಲಕಾರ್ಮಿಕರನ್ನು ರಕ್ಷಿಸುವ ಮೂಲಕ ಬಾಲಕಾರ್ಮಿಕ ಪದ್ಧತಿ ವಿರುದ್ಧ ಹೋರಾಟ, ದೇವದಾಸಿ ಪದ್ಧತಿ ವಿರುದ್ಧ ಹೋರಾಟ, ವೃದ್ಧರಿಗೆ ವೃದ್ಧಾಪ್ಯ ವೇತನ ನೀಡುವಂತೆ ಸರ್ಕಾರದ ವಿರುದ್ಧ ಹೋರಾಟ, ಚಿತ್ರದುರ್ಗ ಜಿಲ್ಲೆಗೆ ನಿರಾವರಿ ಕೊಡಿ ಎಂದು ಸತತ ಹೋರಾಟ, ಅಂಗವಿಕಲ ಮಕ್ಕಳ ಬಗ್ಗೆ ಗಮನ ಹರಿಸುವಂತೆ ಸರ್ಕಾರದ ಗಮನಕ್ಕೆ ತರುವ ಎಲ್ಲಾ ರೀತಿಯ ಸಮಾಜ ಮುಕಿ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ್ದಾರೆ. ಶಿಕ್ಷಣ ಮುಗಿಸಿ ಕೆಲಸ ವಿಲ್ಲದೆ ಮನೆಯಲ್ಲಿ ಕೂತ ಮಕ್ಕಳಿಗೆ ತರಬೇತಿ ನೀಡಿ ಅವರಿಗೆ ಕೆಲಸ ಕೊಡಿಸುವ ಕೆಲಸ ಮಾಡಿದ್ದಾರೆ.

ಎರಡು ಸಾವಿರಕ್ಕೂ ಹೆಚ್ಚು ಬಾಲಕಾರ್ಮಿಕ ಹಾಗೂ ಮಹಿಳೆಯರ ಬಾಳಿಗೆ ಆಶಾ ಕಿರಣ
ಚಿತ್ರದುರ್ಗದಲ್ಲಿ ಶಾಲೆ ಬಿಟ್ಟು ಗ್ಯಾರೇಜ್, ಹೋಟೆಲ್​ಗಳಲ್ಲಿ ಸೇರಿದಂತೆ ಇತರೆಡೆ ಕೆಲಸ ಮಾಡುತ್ತಿದ್ದ ನೂರಾರು ಬಾಲಕಾರ್ಮಿಕರನ್ನು ರಕ್ಷಿಸಿ ಸಂಘಗಳ ಜೊತೆ ಈ ಬಗ್ಗೆ ಚರ್ಚಿಸಿ ಅವರ ಬಿಡುಗಡೆ ಮತ್ತು ಪುನರ್ವಸತಿಗಾಗಿ ತಮ್ಮದೇ ಶ್ರಿ ಭೂವಿತಾಯಿ ಸ್ವ-ಸಹಾಯ ಮಹಿಳಾ ಸಂಘಗಳ ಒಕ್ಕೂಟವನ್ನು ರಚಿಸಿಕೊಂಡು ಸಾವಿರಾರು ಮಹಿಳೆಯರನ್ನು ಸದಸ್ಯರಾಗಿ ಮಾಡಿಕೊಂಡು ಎರಡು ಸಾವಿರಕ್ಕೂ ಹೆಚ್ಚು ಬಾಲ ಕಾರ್ಮಿಕರು ಮತ್ತು ಶೋಷಣೆಗೆ ಒಳಗಾದ ಮಕ್ಕಳಿಗೆ ವಿಧ್ಯೆ ನೀಡಿ ತಮ್ಮ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ.

16ನೇ ವಯಸ್ಸಿನಲ್ಲೇ ಮದುವೆಯಾದ ಸುಶೀಲಮ್ಮ ಧೈರ್ಯವಂತ ಮಹಿಳೆ, ಕಳೆದ 25 ವರ್ಷಗಳಿಂದ  ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಸಂಘಟಿಸಿ, ಅವರ ಹಕ್ಕುಗಳಿಗಾಗಿ ಹೋರಾಟ-ಸಮಾವೇಶಗಳನ್ನು ಮಾಡುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಭೇಟಿ ಮಾಡಿ ಶೋಷಿತರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟೇ ಅಲ್ಲ ಧರಣಿ, ಉಪವಾಸ ಸತ್ಯಾಗ್ರಹ, ದಲಿತರು, ಬಡವರು, ಮಕ್ಕಳು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ವಿರೋಧಿ ಹೋರಾಟದಲ್ಲಿ ಭಾಗಿಯಾಗಿ ಸಫಲರಾಗಿದ್ದಾರೆ.

ಕುಡಿಯುವ ನೀರಿಗಾಗಿ ಹೋರಾಡಿ ಬರದ ನಾಡಿಗೆ ನೀರು ಹರಿಸಿದ್ರು
ಬರದನಾಡಾಗಿದ್ದ ಚಿತ್ರದುರ್ಗದಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಇತ್ತು. ಹನಿ ನೀರಿಗಾಗಿಯೂ ಪರದಾಡುತ್ತಿದ್ದ ಸ್ಥಿತಿ ಇತ್ತು. ಆಗ ಜಿಲ್ಲೆಯ ಹಲವಾರು ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಹೋರಾಟದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷರಾಗಿ ಭಾಗಿಯಾಗಿದ್ದು ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಯೋಜನೆಯಾದ ಸೂಳೆಕೆರೆಯಿಂದ ನೀರು ಪೂರೈಸಲು ಸತತವಾಗಿ ನಡೆದ ಹೋರಾಟದಿಂದಾಗಿ ಇಂದು ಚಿತ್ರದುರ್ಗದ ಜನ ಕುಡಿಯುವ ನೀರು ಪಡೆಯುತ್ತಿದ್ದಾರೆ. ಜೊತೆಗೆ ಪರಿಸರ ರಕ್ಷಣೆಗಾಗಿ ಜಿಲ್ಲಾಡಳಿತದ ಜೊತೆ ಸೇರಿ ಸಾವಿರಾರು ಗಿಡ-ಮರಗಳನ್ನು ಬಯಲು ಪ್ರದೇಶ ಸೇರಿದಂತೆ ಅನೇಕ ಕಡೆ ನೆಡಲು ಸಕ್ರಿಯವಾಗಿ ಭಾಗಿಯಾಗಿದ್ದಾರೆ.

Inspiring Women sushilamma 2

ಮಕ್ಕಳಿಗೆ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವ ಸುಶೀಲಮ್ಮ

ನಿನಗೆ ಎಷ್ಟು ಬೇಕಾದ್ರೂ ಕೊಡ್ತೀವಿ ಹೋರಾಟಕ್ಕೆ ಹೋಗಬೇಡಿ
ಕಳ್ಳಬಟ್ಟಿ ವಿಚಾರಕ್ಕೆ ಸಂಬಂಧಿಸಿ ಒಮ್ಮೆ ಹೋರಾಟ ನಡೆಸಿದ್ವಿ. ಆಗ ಕಳ್ಳಬಟ್ಟಿ ಮಾರಾಟ ಮಾಡುತ್ತಿದ್ದ ಕಡೆಯವರು ನನ್ನ ಬಳಿ ಬಂದು ನಿನಗೆ ಎಷ್ಟು ಬೇಕಾದ್ರೂ ಕೊಡ್ತೀವಿ ಹೋರಾಟಕ್ಕೆ ಹೋಗಬೇಡ ಎಂದಿದ್ರು. ಇನ್ನೊಮ್ಮೆ ಮೈಸೂರಿನಲ್ಲಿ ಓದುತ್ತಿದ್ದ ಹೆಣ್ಣು ಮಗಳ ಮೇಲೆ ಅತ್ಯಾಚಾರವಾಗಿತ್ತು. ಇದರ ಬಗ್ಗೆಯೂ ತೀವ್ರವಾಗಿ ಖಂಡಿಸಿದ್ವಿ. ಆಗ ಕೆಲವರು ನಮ್ಮ ಹಿಂದೆ ಬಿದ್ದಿದ್ರು. ನಮ್ಮನ್ನು ಬೆದರಿಸುವ ಪ್ರಯತ್ನ ಮಾಡಿದ್ರು. ಆದ್ರೆ ಯಾವು ಯಾವುದಕ್ಕೂ ಭಯ ಪಡಲಿಲ್ಲ. ನಮಗೆನಾದ್ರೂ ಆದ್ರೆ ಅದಕ್ಕೆ ನೀವೆ ಕಾರಣ ಎಂದು ಬರೆಯುತ್ತೇವೆ ಎಂದು ಅವರನ್ನೇ ಬೆದರಿಸುತ್ತಿದ್ವಿ. ಭಯಕ್ಕೆ ಸೋತ್ರೆ ನಮ್ಮ ನೆರಳೇ ನಮಗೆ ಭಯ ಪಡಿಸುತ್ತೇ.. ಅದೇ ಭಯಕ್ಕೆ ಗೆದ್ರೆ ಹುಲಿಯನ್ನೂ ಸೋಲಿಸುವ ಶಕ್ತಿ ನಮಗೆ ಬರುತ್ತೆ ಎಂದು ಸುಶೀಲಮ್ಮ ತಾವು ಎದುರಿಸಿದ ಕೆಲ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಕಲಬುರಗಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಚನ್ನಗಿರಿ, ದಾವಣಗೆರೆ ಸೇರಿದಂತೆ ಸುಮಾರು 800 ಸಂಘಗಳು ಈಗ ಕಾರ್ಯನಿರ್ವಹಿಸುತ್ತಿವೆ. ಇಡೀ ಕರ್ನಾಟಕದಲ್ಲಿ ಎಲ್ಲಾ ಕಡೆ ಓಡಾಡಿ ಆದಷ್ಟು ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸ ಮಾಡಿದ್ದೇವೆ. ನ್ಯಾಯಕ್ಕಾಗಿ ಹೋರಾಡಿದ್ದೇವೆ. ಈಗ ಶೋಭಾನ ಕಲಾವಿದರ ಮಹಿಳಾ ಸಂಘ ಮೂಲಕ ಹೋರಾಟ ಮುಂದುವರೆಸಿದ್ದೇವೆ.

ಮಕ್ಕಳಿಗೆ ಉಚಿತ ಊಟಕ್ಕಾಗಿ ಹೋರಾಟ ಮಾಡಿದ್ವಿ
1ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಊಟ, ಬಟ್ಟೆ, ಪುಸ್ತಕ ಯಾವುದೇ ವ್ಯವಸ್ಥೆ ಇರಲಿಲ್ಲ. ಆಗ ಮಹಿಳಾ ಸಂಘಗಳನ್ನು ಸೇರಿದಂತೆ ನಾನಾ ಸಂಘಗಳನ್ನು ಒಟ್ಟುಗೂಡಿಸಿ ಸುಮಾರು 8 ಸಾವಿರ ಜನ ಸತ್ಯಾಗ್ರಹ ಮಾಡಿ ಹೋರಾಟ ನಡೆಸಿದ್ವಿ. ಇದರ ಫಲವಾಗಿ ಇಂದು 1 ರಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಊಟ, ಪುಸ್ತಕ, ಬಟ್ಟೆ ಸಿಗುತ್ತಿದೆ. ಹೋರಾಟಗಾರರ ಜೀವನ ಸುಲಭವಲ್ಲ. ಯಾವುದೇ ಸಮಸ್ಯೆ ಇದ್ದರೂ, ಎಂತಹದೇ ಪರಿಸ್ಥಿತಿ ಇದ್ದರೂ, ಹೋರಾಟಕ್ಕೆ ಇಳಿದು ನಮ್ಮಿಂದಾಗುವ ಸಹಾಯಕ್ಕೆ ಮುಂದಾಗುತ್ತೇವೆ, ಎಲ್ಲಾ ರೀತಿಯ ಕಠಿಣ ಪರಿಸ್ಥಿತಿಯನ್ನು ಎದುರಿಸಿದಾಗಲೇ ನ್ಯಾಯ ಸಿಗೋದು.

ಕುಡಿತ ಬೇಡ.. ಮದ್ಯಪಾನ ನಿಲ್ಲಿಸಿ ಎಂದು ಹೋರಾಟ ಮಾಡಿದಾಗ ಇಡೀ ತಾಲೂಕು, ಜಿಲ್ಲೆ ನಮ್ಮೊಂದಿಗೆ ಕೈ ಜೋಡಿಸಿತ್ತು. ಹೋರಾಟ ಮಾಡುವಾಗ ಕೆಲವರು ಪ್ರೋತ್ಸಾಹ ಮಾಡಿದ್ರೆ ಮತ್ತೆ ಕೆಲವರು ವಿರೋಧ ಮಾಡ್ತಾರೆ. ಅಕ್ಕ ನೀವು ಪೊಲೀಸ್,  ತಹಸೀಲ್ದಾರ್​ರನ್ನು ಕರೆಸಿ ನ್ಯಾಯ ಒದಗಿಸಿದಿರಿ,  ತುಂಬ ಒಳ್ಳೇದ್ ಮಾಡಿದ್ರಿ ಎಂದು ಕೆಲವರು ಹೇಳಿದ್ರೆ.. ಮತ್ತೆ ಕೆಲವರು ಏನಪ್ಪ ಹಿಂಗೆಲ್ಲ ಮಾಡಿದ್ಳು ಎಂದು ಬೈಕೋತಿದ್ರು. ಇನ್ನು ಕೊಪ್ಪಳ, ಬಾಗಲಕೋಟೆ, ರಾಯಚೂರಿನಲ್ಲಿ ದೇವದಾಸಿ ಪದ್ಧತಿ ಹೆಚ್ಚಿತ್ತು. ಹುಟ್ಟುವ ಹೆಣ್ಣು ಮಕ್ಕಳನೆಲ್ಲ ದೇವದಾಸಿಗೆ ಬಿಡುತ್ತಿದ್ದರು. ಆಗ ಅವರನ್ನು ಅವರ ಪೋಷಕರನೆಲ್ಲ ಕರೆಸಿ ಅವರಿಗೆ ತಿಳಿ ಹೇಳುವ ಕೆಲಸ ಮಾಡ್ತಿದ್ವಿ ದೇವದಾಸಿಯರಿಗಾಗಿಯೇ ಹಾಸ್ಟೆಲ್​​ ಕಟ್ಟಿಸಿ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ವಿ. ಬಾಲ್ಯ ವಿವಾಹ ಆಗುವುದನ್ನು ನಿಲ್ಲಿಸಿ ಅದರ ವಿರುದ್ಧವೂ ಹೋರಾಟ ನಡೆಸಿದ್ದೇವೆ ಎನ್ನುತ್ತಾರೆ ಸುಶೀಲಮ್ಮ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಸಾಮಾಜ ಸೇವೆ
2000ಸಾಲಿನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಮಠದ ಕುರುಬರ ಹಟ್ಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಜನಪರ ಸೇವೆ ಸಲ್ಲಿಸಿರುವ ಕೀರ್ತಿ ಸುಶೀಲಮ್ಮನವರಿಗೆ ಸಲ್ಲುತ್ತದೆ. ಇವರ ಪ್ರಗತಿಪರ ಹೋರಾಟ ಗುಣಗಳನ್ನು ಕಂಡು 2006-07 ನೇ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವರ್ಷದ ಮಹಿಳಾ ಹೋರಾಟಗಾರ್ತಿ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2010ರಲ್ಲಿ ಮಾನವ ಧರ್ಮಪೀಠದ ವತಿಯಿಂದ ಮಾನವತಾ ಪ್ರಶಸ್ತಿಯನ್ನು ನೀಡಲಾಗಿದೆ. ಜಿಲ್ಲೆ ಮಟ್ಟ, ತಾಲೂಕು ರಾಜ್ಯ ಮಟ್ಟದಲ್ಲಿ ಬಹುತೇಕ ಸನ್ಮಾನ, ಪುರಸ್ಕಾರಗಳು ಲಭಿಸಿವೆ.

ಇದನ್ನೂ ಓದಿ: Women’s Day 2021: ಕೊರೊನಾ ಸೋಂಕು ವಿಜಯಪುರಕ್ಕೆ ಕಾಲಿಡುವುದಕ್ಕೂ ಮೊದಲೇ ಹೋರಾಟಕ್ಕೆ ಸಜ್ಜಾಗಿದ್ದರು ಡಾ.ಚೆನ್ನಮ್ಮಾ ಕಟ್ಟಿ..