ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ನೂತನ ಶ್ರೀರಾಮ ಮಂದಿರ ದರ್ಶನಕ್ಕೆ ಆಗಮಿಸುವ ಯಾತ್ರಾರ್ಥಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಳಿಲು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಿಂದ ನೂತನ ರಾಮ ಮಂದಿರ ದರ್ಶನಕ್ಕೆ ತೆರಳುವ ಭಕ್ತಾದಿಗಳ ವಸತಿಗೆ ಅನುಕೂಲವಾಗುವಂತೆ ಯಾತ್ರಿ ನಿವಾಸ ನಿರ್ಮಿಸಲು ಕರ್ನಾಟಕ ಬಜೆಟ್ 2021-22ರಲ್ಲಿ ₹ 10 ಕೋಟಿ ಅನುದಾನ ನೀಡಿದ್ದಾರೆ ಸಿಎಂ ಯಡಿಯೂರಪ್ಪ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 2020 ಆಗಸ್ಟ್ 5ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಿದ್ದರು. ಅಂದು ಕೊರೊನಾ ಸೋಂಕಿಗೊಳಗಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಎಂ ಯಡಿಯೂರಪ್ಪ ಬೆಡ್ ಮೇಲೆ ಕುಳಿತೇ ಕನ್ನಡಿಗರಿಗಾಗಿ ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಿಸುವ ಚಿಂತನೆ ನಡೆಸಿದ್ದರು. ಚಿಂತನೆಯನ್ನು ಕಾರ್ಯರೂಪಕ್ಕೂ ತಂದಿದ್ದ ಸಿಎಂ ಯಡಿಯೂರಪ್ಪ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಯಾತ್ರಿ ನಿವಾಸ ಕಟ್ಟಲು ಎರಡು ಎಕರೆ ಜಮೀನು ಮಂಜೂರು ಮಾಡುವಂತೆ ಕೋರಿದ್ದರು.
ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವುದನ್ನು ನೋಡಲು ಮತ್ತು ನಿರ್ಮಾಣ ಸಂಪೂರ್ಣಗೊಂಡು ಮಂದಿರದೊಳಗೆ ಭಗವಾನ್ ರಾಮ ಪ್ರತಿಷ್ಠಾಪನೆಗೊಂಡ ನಂತರ ಸಹಸ್ರಾರು ಕನ್ನಡಿಗರು ರಾಮನ ದರ್ಶನ, ತೀರ್ಥಯಾತ್ರೆಗೆ ಖಂಡಿತವಾಗಿಯೂ ಹೋಗುತ್ತಾರೆ ಎಂಬುದು ಸಿಎಂ ಯಡಿಯೂರಪ್ಪ ಅವರ ಗಮನದಲ್ಲಿತ್ತು. ಅಯೋಧ್ಯೆಯಲ್ಲಿ ಕನ್ನಡಿಗರು ವಸತಿಗೆ ಉತ್ತಮ ನಿವಾಸದ ಅವಶ್ಯಕತೆಯಿರುವುದನ್ನು ಮನಗಂಡಿದ್ದ ಮುಖ್ಯಮಂತ್ರಿ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಆದ ದಿನದಿಂದಲೇ ಈ ಕುರಿತು ಯೋಜನೆ ರೂಪಿಸಿದ್ದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಬಜೆಟ್ನಲ್ಲಿ ಅಯೋಧ್ಯಾ ಶ್ರೀ ರಾಮ ಮಂದಿರಕ್ಕೆ 600 ಕೋಟಿ ಅನುದಾನ ಮೀಸಲಿಟ್ಟಿದ್ದರು.
2021-22 ನೇ ಸಾಲಿನ ಕರ್ನಾಟಕ ಬಜೆಟ್ನಲ್ಲಿ ಅಯೋಧ್ಯಾ ಶ್ರೀರಾಮ ಮಂದಿರ ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಯಾತ್ರಾ ನಿವಾಸ ಕಟ್ಟಲು ₹ 10 ಕೋಟಿ ಅನುದಾನ ಒದಗಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಈ ಅಳಿಲು ಸೇವೆಗೆ ಲಕ್ಷಾಂತರ ಶ್ರೀರಾಮ ಭಕ್ತರಿಂದ ಶ್ಲಾಘನೆ ವ್ಯಕ್ತವಾಗಲಿದೆ.
ಇದನ್ನೂ ಓದಿ: Karnataka Budget 2021 LIVE: ಕರ್ನಾಟಕ ಬಜೆಟ್ 2021-22; ಇದೊಂದು ಟೊಳ್ಳು ಬಜೆಟ್ - ಸಿದ್ದರಾಮಯ್ಯ ಕಟು ಟೀಕೆ