Karnataka Budget 2021: ಮಠ-ಸಾಂಸ್ಕೃತಿಕ ಕೇಂದ್ರಗಳಿಗೆ ಅನುದಾನ; ಅಯೋಧ್ಯೆಯಲ್ಲಿ ಯಾತ್ರಿ ನಿವಾಸಕ್ಕೆ ₹ 10 ಕೋಟಿ
ವಿಜಯಪುರ ಜಿಲ್ಲೆ ಬಸನವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿರುವ ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ಧಿಗೆ ₹ 5 ಕೋಟಿ, ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ ₹ 10 ಕೋಟಿ ಅನುದಾನ ಘೋಷಿಸಲಾಗಿದೆ.
ಬೆಂಗಳೂರು: ಬಜೆಟ್ ಮಂಡನೆಗೆ ಶುಭ ಮುಹೂರ್ತ ಸಮಯ ನಿಗದಿಪಡಿಸಿಕೊಂಡ ಮತ್ತು ಬಜೆಟ್ ಮಂಡನೆಗೂ ಮೊದಲು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿಯೇ ವಿಧಾನಸೌಧಕ್ಕೆ ಬಂದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವರ್ಷವೂ ಮಠಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ ಘೋಷಿಸಿದ್ದಾರೆ.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 50 ಕೋಟಿ, ವಿಜಯಪುರ ಜಿಲ್ಲೆ ಬಸನವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿರುವ ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ಧಿಗೆ ₹ 5 ಕೋಟಿ, ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ ₹ 10 ಕೋಟಿ ಅನುದಾನ ಘೋಷಿಸಲಾಗಿದೆ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೂ ಕರ್ನಾಟಕ ಸರ್ಕಾರ ₹ 10 ಕೋಟಿ ಅನುದಾನ ಘೋಷಿಸಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್.ಬೈರಪ್ಪ ಅವರ ಪರ್ವ ನಾಟಕ ಪ್ರದರ್ಶನಕ್ಕೆ ₹ 1 ಕೋಟಿ ಅನುದಾನ ಘೋಷಿಸಲಾಗಿದೆ. ರಾಜ್ಯಾದ್ಯಂತ ರಂಗಾಯಣಗಳ ಮೂಲಕ ಪರ್ವ ನಾಟಕವನ್ನು ಪ್ರದರ್ಶಿಸಲಾಗುವುದು.
ಅಲ್ಪಸಂಖ್ಯಾತರಿಗೆ ಅನುದಾನ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೂ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುದಾನ ಘೋಷಿಸಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ₹200 ಕೋಟಿ, ಅಲ್ಪಸಂಖ್ಯಾತ ಸಮುದಾಯಗಳಿಗಾಗಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ₹ 1,500 ಕೋಟಿ ಮೊತ್ತವನ್ನು ಈ ಬಾರಿಯ ಬಜೆಟ್ನಲ್ಲಿ ಮೀಸಲಿಡಲಾಗಿದೆ.
ಇದನ್ನೂ ಓದಿ: ದೇಶದಲ್ಲೇ ಅತಿ ದೊಡ್ಡ ಗಾತ್ರದ ಬಜೆಟ್ ನೀಡಿರುವ ರಾಜ್ಯ ಯಾವುದು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
Published On - 12:40 pm, Mon, 8 March 21