ಬೆಂಗಳೂರು: ಇಂದು (ಮಾರ್ಚ್ 8, 2021) ಕರ್ನಾಟಕ ಬಜೆಟ್ 2021- 22 ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡನೆ ಮಾಡಲಿದ್ದಾರೆ. ಬಜೆಟ್ ಗಾತ್ರದ ದೃಷ್ಟಿಯಿಂದ ದೇಶದಲ್ಲೇ ಯಾವ ರಾಜ್ಯ ಯಾವ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ. 2020- 21ನೇ ಸಾಲಿನಲ್ಲಿ ಟಾಪ್ 5 ಸ್ಥಾನದಲ್ಲಿರುವ ರಾಜ್ಯಗಳು ಹಾಗೂ ಅದರ ಬಜೆಟ್ ಗಾತ್ರ ಇಲ್ಲಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ದೇಶದ ಅತಿ ದೊಡ್ಡ ರಾಜ್ಯ (ಭೌಗೋಳಿಕವಾಗಿ) ಉತ್ತರಪ್ರದೇಶ. ಅಲ್ಲಿನ ಬಜೆಟ್ ಗಾತ್ರ 5,12,860 ಕೋಟಿ ರೂಪಾಯಿ.
ಆ ನಂತರದ ಸ್ಥಾನದಲ್ಲಿ ಇರುವುದು ಮಹಾರಾಷ್ಟ್ರ. ಅಲ್ಲಿನ ಬಜೆಟ್ ಗಾತ್ರ 4,04,794 ಕೋಟಿ ರೂಪಾಯಿ. ಆ ನಂತರದಲ್ಲಿ ಇರುವುದು ತಮಿಳುನಾಡು. ಅಲ್ಲಿನ ಬಜೆಟ್ ಗಾತ್ರ 3,00,390 ಕೋಟಿ ರೂಪಾಯಿ. ಇನ್ನು ಪಶ್ಚಿಮ ಬಂಗಾಲದಲ್ಲಿ ಮಂಡಿಸಿರುವ ಆಯವ್ಯಯ 2,55,677 ಕೋಟಿ ರೂಪಾಯಿ. ಅದಾದ ಮೇಲೆ ನಿಲ್ಲುವುದು ಕರ್ನಾಟಕ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕದ ಬಜೆಟ್ ಗಾತ್ರ 2,37,893 ಕೋಟಿ ರೂಪಾಯಿ ಇತ್ತು. ಬಜೆಟ್ ಗಾತ್ರದಲ್ಲಿ 2 ಲಕ್ಷ ಕೋಟಿ ದಾಟುವ ರಾಜ್ಯ ಅಂದರೆ, ರಾಜಸ್ಥಾನ 2,25,23 ಕೋಟಿ ರೂಪಾಯಿ ಇದ್ದರೆ, ಆಂಧ್ರಪ್ರದೇಶ, ಗುಜರಾತ್ ಹಾಗೂ ಬಿಹಾರ ಇವುಗಳ ಬಜೆಟ್ ಕ್ರಮವಾಗಿ 2,24,789 ಕೋಟಿ ರೂ., 2,17,287 ಕೋಟಿ ರೂ. ಮತ್ತು 2,11,761 ಕೋಟಿ ರೂಪಾಯಿಗಳಿವೆ. ದೇಶದಲ್ಲೇ ಅತ್ಯಂತ ಕಡಿಮೆ ಬಜೆಟ್ ಗಾತ್ರ ಇರುವ ರಾಜ್ಯ ಎಂದರೆ ಸಿಕ್ಕಿಂ. ಅಲ್ಲಿನ ಆಯವ್ಯಯದ ಲೆಕ್ಕ 7,051 ಕೋಟಿ ರೂಪಾಯಿ.
ಮಿಜೋರಾಂ, ಮಣಿಪುರ, ಅರುಣಾಚಲ ಪ್ರದೇಶ ರಾಜ್ಯಗಳ ಬಜೆಟ್ 20 ಸಾವಿರ ಕೋಟಿ ರುಪಾಯಿಯೊಳಗೇ ಇದೆ. ಇನ್ನು ಒಡಿಶಾ, ಮಧ್ಯಪ್ರದೇಶ, ಪಂಜಾಬ್, ತೆಲಂಗಾಣ ರಾಜ್ಯಗಳ ಬಜೆಟ್ 1.50 ಲಕ್ಷ ಕೋಟಿ ಮತ್ತು ಅದಕ್ಕೆ ಮೇಲ್ಪಟ್ಟು 2 ಲಕ್ಷ ಕೋಟಿ ರೂಪಾಯಿಯೊಳಗೆ ಇದ್ದರೆ, ಹರ್ಯಾಣ, ಕೇರಳ ಬಜೆಟ್ 1.50 ಲಕ್ಷ ಕೋಟಿಗೆ ಸ್ವಲ್ಪ ಕಡಿಮೆ ಇದೆ. ಅದೇ ರೀತಿ 90 ಸಾವಿರ ಕೋಟಿ ರೂ. ಮೇಲ್ಪಟ್ಟ 1 ಲಕ್ಷ ಕೋಟಿಯೊಳಗಿನ ಬಜೆಟ್ ಇರುವ ರಾಜ್ಯಗಳೆಂದರೆ, ಅಸ್ಸಾಂ, ಛತ್ತೀಸ್ಗಢ. ಜಾರ್ಖಂಡ್ ಬಜೆಟ್ 85,429 ಕೋಟಿ ಹಾಗೂ ಹಿಮಾಚಲ ಪ್ರದೇಶದ ಆಯವ್ಯಯ 50 ಸಾವಿರ ಕೋಟಿ ರೂಪಾಯಿಯೊಳಗೆ ಇದೆ.
ಇದನ್ನೂ ಓದಿ: Karnataka Budget 2021: ಜನ ಸಾಮಾನ್ಯರಿಗೂ ಗೊತ್ತಿರಬೇಕಾದ ಬಜೆಟ್ ಪಾರಿಭಾಷಿಕ ಪದಗಳು
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಕೊರೊನಾ ಕಾಲದಲ್ಲಿ ಯಡಿಯೂರಪ್ಪ ಅರ್ಥಶಾಸ್ತ್ರ ಹೇಗಿರಲಿದೆ?
ಇದನ್ನೂ ಓದಿ: BS Yediyurappa Profile: ಕರ್ನಾಟಕ ರಾಜಕಾರಣದಲ್ಲಿ ‘ಬ್ರ್ಯಾಂಡ್’ ಹುಟ್ಟುಹಾಕಿದ ಯಡಿಯೂರಪ್ಪ ವ್ಯಕ್ತಿಚಿತ್ರ