Karnataka Bus Strike: ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು, ಈ ಐದು ದಿನ ಬಸ್​​ಗಳು ಸರಿಯಾಗಿ ಸಂಚರಿಸೋದು ಅನುಮಾನ

Karnataka Transport Employees Strike: ವಿವಿಧ ಬೇಡಿಕೆಗಳ ಈಡರಿಕೆಗೆ ಆಗ್ರಹಿಸಿ ಆಗಸ್ಟ್​ನಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಮುಷ್ಕರ ಕೈಬಿಟ್ಟಿದ್ದರು. ಆದರೆ, ಇದೀಗ ಮತ್ತೆ ಮುಷ್ಕರಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಐದು ದಿನಗಳ ಕಾಲ ಉಪವಾಸ ಮಾಡಲು ಚಿಂತನೆ ನಡೆಸಲಾಗಿದೆ.

Karnataka Bus Strike: ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು, ಈ ಐದು ದಿನ ಬಸ್​​ಗಳು ಸರಿಯಾಗಿ ಸಂಚರಿಸೋದು ಅನುಮಾನ
ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು (ಸಾಂದರ್ಭಿಕ ಚಿತ್ರ)
Updated By: Ganapathi Sharma

Updated on: Oct 10, 2025 | 7:47 AM

ಬೆಂಗಳೂರು, ಅಕ್ಟೋಬರ್ 10: ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು (Karnataka Transport Employees) ಇದೀಗ ಮತ್ತೆ ಸಾರಿಗೆ ಮುಷ್ಕರಕ್ಕೆ (Bus Strike) ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿದ್ದು, ಮೊದಲ ಹಂತದಲ್ಲಿ ಅಕ್ಟೋಬರ್ 15 ರಿಂದ 19 ರ ವರೆಗೆ ಉಪವಾಸ ಸತ್ಯಾಗ್ರಹ ಮಾಡಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈ ಐದು ದಿನಗಳ ಕಾಲ ಪ್ರಯಾಣಿಕರಿಗೆ ಸರಿಯಾಗಿ ಬಸ್ ಸಿಗುವುದು ಅನುಮಾನವಾಗಿದೆ. ಆಗಸ್ಟ್‌- 5 ರಂದು ನಾಲ್ಕು ನಿಗಮದ ನೌಕರರು ಸಾರಿಗೆ ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಮುಷ್ಕರವನ್ನು ವಾಪಸ್ ಪಡೆಯಲಾಗಿತ್ತು. ಆದರೆ ಇಲ್ಲಿಯವರೆಗೆ ರಾಜ್ಯ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ ಮತ್ತು ಮಾತುಕತೆಗೆ ಕರೆಯುತ್ತಿಲ್ಲ. ಹೀಗಾಗಿ ಮತ್ತೆ ಮುಷ್ಕರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

38 ತಿಂಗಳ ಹಿಂಬಾಕಿ ಬಿಡುಗಡೆ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅ. 15 ರಿಂದ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ. ಅ. 15ರಿಂದ 19ರವರೆಗೆ ಬೆಂಗಳೂರು, ಹುಬ್ಬಳ್ಳಿ ಹಾಗೂ ಕಲಬುರಗಿ ನಗರಗಳಲ್ಲಿ ಐದು ದಿನಗಳ ಕಾಲ ನಾಲ್ಕು ಸಾರಿಗೆ ನಿಗಮಗಳ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.

ಸಾರಿಗೆ ನೌಕರರ ಬೇಡಿಕೆಗೆ ಕ್ಯಾರೇ ಅನ್ನದ ಸರ್ಕಾರ

ಆ. 5ರಂದು ಆರಂಭಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹೈಕೋರ್ಟ್ ಆದೇಶದ ಮೇರೆಗೆ ತಡೆಹಿಡಿಯಲಾಗಿತ್ತು. ಸರಕಾರ ಬೇಡಿಕೆಗಳ ಕುರಿತು ಮಾತುಕತೆ ಮುಂದುವರಿಸುವುದಾಗಿ ಹೈಕೋರ್ಟ್‌ಗೆ ತಿಳಿಸಿತ್ತು. ಅದರಂತೆ, ಜಂಟಿ ಕ್ರಿಯಾ ಸಮಿತಿಯು ಆಗಸ್ಟ್ 11 ಮತ್ತು ಸೆ. 15ರಂದು ರಾಜ್ಯ ಸರಕಾರಕ್ಕೆ ಪತ್ರ ಬರೆದು ಶೀಘ್ರವೇ ಸಭೆ ಕರೆದು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿತ್ತು. ಆದರೆ, ಸರಕಾರ ಈವರೆಗೂ ಮಾತುಕತೆ ಆರಂಭಿಸದೆ ಕಾರ್ಮಿಕ ವಿರೋಧಿ ಧೋರಣೆ ತಾಳಿದೆ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್‌.ವಿ. ಅನಂತ ಸುಬ್ಬರಾವ್‌ ಆರೋಪಿಸಿದ್ದಾರೆ.

ಇದನ್ನೂ ಓದಿ: ಮುಷ್ಕರ ನಡೆಸಲು ಮುಂದಾಗಿದ್ದ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ ಕೋರ್ಟ್

ಒಟ್ಟಿನಲ್ಲಿ ಸಾರಿಗೆ ನೌಕರರಿಗೆ ಸರ್ಕಾರ ನೀಡಬೇಕಿರುವ ಹಿಂಬಾಕಿ ನೀಡಲ್ಲ. ವೇತನ ಹೆಚ್ಚಳ ಮಾಡಿಲ್ಲ. ನೌಕರರ ಯಾವ ಬೇಡಿಕೆಯನ್ನೂ ಸರ್ಕಾರ ಈಡೇರಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ನೌಕರರು ಮತ್ತೆ ಮುಷ್ಕರಕ್ಕೆ ಮನಮಾಡುವಂತೆ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ