AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಕಡೆಗಣನೆ, ಬಿಇಎಲ್ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗರಂ: ರಕ್ಷಣಾ ಸಚಿವ ರಾಜನಾಥ್ ಸಿಂಗ್​ಗೆ ದೂರು

ಭಾರತ ಸರ್ಕಾರದ ಇಲಾಖೆಗಳ ಅಧೀನದ ಹಲವು ಸಂಸ್ಥೆ, ನಿಗಮ ಹಾಗೂ ಮಂಡಳಿಗಳು ಬೆಂಗಳೂರಿನಲ್ಲೇ ನೆಲೆಯೂರಿರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವೇ. ಆದರೆ ಕನ್ನಡಿಗರಿಗೆ ಅಥವಾ ಸ್ಥಳೀಯರಿಗೆ ಮನ್ನಣೆ ಕೊಡಲು ಮಾತ್ರ ಹಿಂದೇಟು ಹಾಕುತ್ತಿವೆ. ಇದರ ಮುಂದುವರಿದ ಭಾಗವಾಗಿ ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್(ಬಿಇಎಲ್​) ಸಹ ಇದೇ ಮಾಡಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕುರಿತಾಗಿ ಕೇಂದ್ರ ಸರ್ಕಾರಕ್ಕೆ ದೂರು ನೀಡಿದೆ.

ಕನ್ನಡ ಕಡೆಗಣನೆ, ಬಿಇಎಲ್ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗರಂ: ರಕ್ಷಣಾ ಸಚಿವ ರಾಜನಾಥ್ ಸಿಂಗ್​ಗೆ ದೂರು
ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್
Ganapathi Sharma
|

Updated on: Oct 10, 2025 | 8:51 AM

Share

ಬೆಂಗಳೂರು, ಅಕ್ಟೋಬರ್ 10: ಕೇಂದ್ರ ಸರ್ಕಾರದ ಅಧೀನದ ಇಲಾಖೆಯ ಕಚೇರಿಗಳು ಕರ್ನಾಟಕದಲ್ಲಿ (Karnataka) ನಾಡಭಾಷೆ ಕನ್ನಡವನ್ನು ಕಡೆಗಣಿಸುತ್ತಿರುವುದು ಇಂದು ನಿನ್ನೆಯ ವಿಚಾರವಲ್ಲ. ಕೇಂದ್ರವೇ ಜಾರಿಗೆ ತಂದ ತ್ರಿಭಾಷಾ ನೀತಿಯನ್ನು ಕೇಂದ್ರದ ಅಧಿಕಾರಿಗಳೇ ಗಾಳಿಗೆ ತೂರುತ್ತಿದ್ದಾರೆ. ಇನ್ನು ನೇಮಕಾತಿ ವಿಚಾರದಲ್ಲೂ ಕನ್ನಡಿಗರಿಗೆ ಅನ್ಯಾಯ ಮೇಲಿಂದ ಮೇಲೆ ಆಗುತ್ತಿದೆ. ಬೆಂಗಳೂರಿನಲ್ಲೇ ನೆಲೆಯೂರಿರುವ ಕೇಂದ್ರ ರಕ್ಷಣಾ ಇಲಾಖೆಯ ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​​(BEL​) 500ಕ್ಕೂ ಹೆಚ್ಚು ಟ್ರೈನಿ ಇಂಜಿನಿಯರ್​ಗಳ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಇಂಗ್ಲಿಷ್​ ಹಾಗೂ ಹಿಂದಿಯಲ್ಲಿ ಮಾತ್ರ ಅಧಿಸೂಚನೆ ಹೊರಡಿಸಿರುವುಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಬಿಇಎಲ್​​ನ ಈ ಕನ್ನಡ ವಿರೋಧಿ ನಡೆ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರಹಾಕಿದ್ದು, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರಿಗೆ ಪತ್ರ ಬರೆದಿದೆ. ಸ್ಥಳೀಯ ಕನ್ನಡಿಗರ ಹಕ್ಕುಗಳನ್ನು ಪೂರ್ಣವಾಗಿ ಅಲಕ್ಷಿಸಿರುವ ಬಿಇಎಲ್ ಸಂಸ್ಥೆಯ ಟ್ರೈನಿ ಇಂಜಿನಿಯರುಗಳ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಮರು ಪರಿಶೀಲಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಅಧಿಸೂಚನೆ ಹಾಗೂ ಅರ್ಜಿಗಳನ್ನು ಕನ್ನಡದಲ್ಲಿ ಬಿಡುಗಡೆ ಮಾಡುವುದರ ಜೊತೆಗೆ ಸ್ಥಳೀಯರಿಗೆ ಶೇ 40ರಷ್ಟು ಹುದ್ದೆಗಳನ್ನ ಮೀಸಲಿಡಬೇಕು ಎಂದೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕೇಂದ್ರಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ರಾಜ್ಯವನ್ನ ಕೇಂದ್ರದಲ್ಲಿ ಪ್ರತಿನಿಧಿಸುವ ಸಂಸದರು ಈ ಬಗ್ಗೆ ದನಿಯೆತ್ತಬೇಕಿದ್ದು, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನ ಸರಿಪಡಿಸಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ