ಬೆಂಗಳೂರು, ನವೆಂಬರ್ 23: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಸಿಬಿಐ ತನಿಖೆಯನ್ನು ವಾಪಸ್ ಪಡೆಯುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ (Karnataka Cabinet) ಗುರುವಾರ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಈ ವಿಚಾರವಾಗಿ ಸಚಿವ ಸಂಪುಟ ಸಭೆಯ ಬಳಿಕ ಸಚಿವ ಹೆಚ್ಕೆ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೆಚ್ಕೆ ಪಾಟೀಲ್ ತಿಳಿಸಿದರು.
ಡಿಕೆ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಸಿಎಂ ಮೌಖಿಕ ಆದೇಶ ನೀಡಿದ್ದರು. ಕಾನೂನಾತ್ಮಕವಾಗಿ ಸ್ಪೀಕರ್ರಿಂದ ನಿರ್ಣಯ ಪಡೆದುಕೊಳ್ಳಬೇಕಾಗಿತ್ತು. ಸ್ಪೀಕರ್ ಅನುಮತಿ ಪಡೆಯದೆ ಸಿಬಿಐ ತನಿಖೆಗೆ ಸಿಎಂ ಮೌಖಿಕ ಆದೇಶ ನೀಡಿದ್ದರು. ಹಿಂದಿನ ಎಜಿ, ನಮ್ಮ ಸರ್ಕಾರದ ಎಜಿ ಅಭಿಪ್ರಾಯ ಗಂಭೀರವಾಗಿ ಪರಿಗಣಿಸಿ, ಸ್ಪೀಕರ್ ಅನುಮತಿ ಪಡೆಯದೆ ನಿಯಮ ಬಾಹಿರವಾಗಿ ಕೈಗೊಂಡ ಕ್ರಮವಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೆಚ್ಕೆ ಪಾಟೀಲ್ ಹೇಳಿದರು.
ಡಿಕೆ ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಜಿ ಆಗಿದ್ದ ಪ್ರಭುಲಿಂಗ ನಾವದಗಿ ವರದಿ ಆಧರಿಸಿ ಹಾಲಿ ಎಜಿಯಿಂದ ಅಭಿಪ್ರಾಯ ಪಡೆಯಲಾಗಿತ್ತು. ಸಿಬಿಐ ತನಿಖೆಗೆ ನೀಡುವಂತಹ ಪ್ರಕರಣ ಇದಲ್ಲವೆಂದು ಅಂದಿನ ಎಜಿ ವಿರೋಧಿಸಿದ್ದರು. ಅದನ್ನು ಕಡೆಗಣಿಸಿ ಅಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮೋದನೆ ನೀಡಿತ್ತು. ಹಿಂದಿನ ಎಜಿ ವರದಿ ಅಸ್ತ್ರವಾಗಿಟ್ಟುಕೊಂಡು ಅಭಿಪ್ರಾಯ ಸಲ್ಲಿಸಿರುವ ಹಾಲಿ ಎಜಿ ಜನರಲ್ ಶಶಿಕಿರಣ್ ಶೆಟ್ಟಿ ಅಭಿಪ್ರಾಯ ಸಲ್ಲಿಸಿದ್ದರು.
ಕೋರ್ಟ್‌ನಲ್ಲಿ ಸಿಬಿಐ ಪ್ರಕರಣದ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆ ರದ್ದು ಅಥವಾ ತಡೆ ಹಿಡಿಯಲು ಸಾಧ್ಯವಿಲ್ಲ. ಹೀಗಾಗಿ ಕೇವಲ ತನಿಖೆಗೆ ಸಿಬಿಐಗೆ ನೀಡಿರುವ ಅನುಮತಿ ಮಾತ್ರ ಹಿಂಪಡೆಯುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಈ ಅಂಶವನ್ನು ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದ್ದರು ಎಂಬುದು ಗಮನಾರ್ಹ.
ಇದನ್ನೂ ಓದಿ: ಐಟಿ ದಾಳಿ ಪ್ರಕರಣ: ಡಿಸಿಎಂ ಡಿಕೆ ಶಿವಕುಮಾರ್ ದುಬೈಗೆ ತೆರಳಲು ವಿಶೇಷ ಕೋರ್ಟ್ ಅನುಮತಿ
ಇದುವರೆಗೂ ಒಟ್ಟು 577 ಆದಾಯ ಮೀರಿದ ಆಸ್ತಿ ಪ್ರಕರಣಗಳು ದಾಖಲಾಗಿವೆ. ಆದರೆ ಒಂದೇ ಒಂದು ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಿಲ್ಲ. ಸ್ಥಳೀಯ ಪೋಲಿಸರೇ ತನಿಖೆ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಯಡಿಯೂರಪ್ಪ, ಜನಾರ್ದನ ರೆಡ್ಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿರಲಿಲ್ಲ. ಬಿಜೆಪಿ ಅವಧಿಯಲ್ಲಿ ಜಮೀರ್ ಅಹ್ಮದ್ ಖಾನ್ ವಿರುದ್ದ ಕೂಡ ಪ್ರಕರಣ ದಾಖಲಾಗಿತ್ತು. ಆದರೆ ಅದನ್ನೂ ಸಿಬಿಐಗೆ ವಹಿಸಿಲ್ಲ. ಅಭಯ್ ಕುಮಾರ್ ಪಾಟೀಲ್ ವಿರುದ್ದ ಕೇಸ್ ದಾಖಲಾಗಿತ್ತು. ಆದರೆ, ಸ್ಪೀಕರ್ ವಾಪಸ್ ಮಾಡಿದ್ದರು. ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಸೂಕ್ತ ರೀತಿಯಲ್ಲಿ ಪ್ರೊಸಿಜರ್ ಫೊಲೋ ಮಾಡಿಲ್ಲ, ಕಾನೂನು ಮತ್ತು ನಿಯಮ ಪಾಲಿಸಿಲ್ಲ ಎಂಬ ವಾದ ಮುಂದಿಟ್ಟುಕೊಂಡು ಸರ್ಕಾರ ಈ ಸಿಬಿಐ ತನಿಖೆ ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:01 pm, Thu, 23 November 23