ಐಟಿ ದಾಳಿ ಪ್ರಕರಣ: ಡಿಸಿಎಂ ಡಿಕೆ ಶಿವಕುಮಾರ್ ದುಬೈಗೆ ತೆರಳಲು ವಿಶೇಷ ಕೋರ್ಟ್ ಅನುಮತಿ
ವಿಶ್ವಸಂಸ್ಥೆಯ ಪರಿಸರ ಸಮ್ಮೇಳನದಲ್ಲಿ ಭಾಗವಹಿಸಲು ದುಬೈಗೆ ತೆರಳಲು ಅನುಮತಿ ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.
ಬೆಂಗಳೂರು, ನವೆಂಬರ್ 23: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ದೆಹಲಿ ನಿವಾಸಗಳ ಮೇಲೆ ಐಟಿ ದಾಳಿ ಮಾಡಿದ್ದ ಪ್ರಕರಣದಲ್ಲಿ ವಿದೇಶ ಪ್ರಯಾಣಕ್ಕಿರುವ ನಿರ್ಬಂಧಕ್ಕೆ ಈಗ ವಿನಾಯಿತಿ ದೊರೆತಿದೆ. ದುಬೈಗೆ ತೆರಳಲು ಅನುಮತಿ ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special Court of Representatives), ಅನುಮತಿ ನೀಡಿದೆ.
ಐಟಿ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಕುಮಾರ್, ವಿಶ್ವಸಂಸ್ಥೆಯ ಪರಿಸರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಬೇಕಿದೆ. ಹೀಗಾಗಿ ನವೆಂಬರ್ 29ರಿಂದ ಡಿಸೆಂಬರ್ 3ರ ವರೆಗೆ ತೆರಳಲು ಅನುಮತಿ ನೀಡಬೇಕೆಂದು ಕೋರಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಧೀಶೆ ಜೆ. ಪ್ರೀತ್ ಅನುಮತಿಸಿ ಆದೇಶ ನೀಡಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ನಡೆಸಲು ಸರ್ಕಾರದ ಅನುಮತಿಗೆ ಹೈಕೋರ್ಟ್ ತಡೆ ನೀಡಿತ್ತು. ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಸಿಬಿಐನಿಂದ ಹೈಕೋರ್ಟ್‌ಗೆ ಇತ್ತೀಚೆಗಷ್ಟೇ ಅರ್ಜಿ ಸಲ್ಲಿಕೆಯಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ವಿದೇಶ ಪ್ರಯಾಣಕ್ಕೆ ಅನುಮತಿ ದೊರೆತಿದ್ದರಿಂದ ಡಿಕೆ ಶಿವಕುಮಾರ್ ನಿರಾಳರಾಗುವಂತಾಗಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್: ತಡೆಯಾಜ್ಞೆ ತೆರವಿಗೆ ಸಿಬಿಐನಿಂದ ಹೈಕೋರ್ಟ್‌ಗೆ ಅರ್ಜಿ
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಕ್ಟೋಬರ್ 20 ರಂದು ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದಕ್ಕೆ ಕಾರಣವೇನು ಎಂಬುದಕ್ಕೆ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿನ ವಿವರವನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಸಿಬಿಐ 84 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ