ಬೆಂಗಳೂರು: ಸಂಪುಟ ವಿಸ್ತರಣೆಗೆ ಕಾದು ಕೂತಿದ್ದ ಬಿಎಸ್ವೈರನ್ನ ಬಿಜೆಪಿ ಹೈಕಮಾಂಡ್ ಇನ್ನಿಲ್ಲದಂತೆ ಸತಾಯಿಸಿಬಿಡ್ತು. ನಂತರ ಕೊನೆಗೂ ಸಿಎಂಗೆ ಗ್ರೀನ್ಸಿಗ್ನಲ್ ಕೊಟ್ಟಿದೆ. ಇದೀಗ, ಅಳೆದು ತೂಗಿ, ಸಿಎಂ ಸಂಪುಟ ವಿಸ್ತರಣೆಗೆ ಮುಹೂರ್ತವನ್ನೂ ಫಿಕ್ಸ್ ಮಾಡಿದ್ದಾರೆ. ಆದ್ರೆ, ಅದಕ್ಕೂ ಮೊದಲು, ಸಿಎಂ ನಿರ್ಧಾರ ಮಿತ್ರಮಂಡಳಿಯಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ. ಹೀಗಾಗಿ, ಬಿಎಸ್ವೈಗೆ ಹೊಸ ಸಂಕಷ್ಟ ಎದುರಾಗಿದೆ.
ಗುರುವಾರ ಸಂಪುಟ ವಿಸ್ತರಣೆಗೆ ಸಿಎಂ ಮುಹೂರ್ತ:
ಗುರುವಾರ.. ಇದೇ ಗುರುವಾರ.. ಕೊಟ್ಟ ಮಾತು ಉಳಿಸಿಕೊಳ್ಳೋಕೆ.. ಹೆಗಲ ಮೇಲಿನ ಭಾರ ಇಳಿಸೋಕೆ.. ಚಾತಕಪಕ್ಷಿಗಳ ಜಾತಕ ಬರೆಯೋಕೆ.. ಸರ್ಕಾರವನ್ನ ಟ್ರ್ಯಾಕ್ಗೆ ಇಳಿಸೋಕೆ.. ಅಳೆದು-ತೂಗಿ, ಕಾದು-ಕಾಯಿಸಿ, ಸಂಪುಟ ವಿಸ್ತರಣೆ ಅನ್ನೋ ಸಂಕೋಲೆ ಬಿಡಿಸಲು ಗುರುವಾರದ, ಮೂಹರ್ತವನ್ನ ಸಿಎಂ ಫಿಕ್ಸ್ ಮಾಡಿದ್ದಾರೆ.
ಆದ್ರೆ, ಮುಖ್ಯಮಂತ್ರಿಯ ಸಂಪುಟ ಸೂತ್ರ, ಮಿತ್ರಮಂಡಳಿಯಲ್ಲಿ ತಲ್ಲಣ ಮೂಡಿಸಿದ್ರೆ, ಹಳೇ ತಲೆಗಳಿಗೂ ಆತಂಕ ಹುಟ್ಟಿಸಿದೆ. ಹೀಗಾಗಿ, ಬಾಕಿ ಇರೋ 3 ದಿನದೊಳಗೆ, ತಮ್ಮ ಕನಸುಗಳ ಸಾಕಾರಕ್ಕೆ ನಾಯಕರೆಲ್ಲ ರೇಸ್ಗೆ ಇಳಿದಿದ್ದಾರೆ. ಮಾತಲ್ಲೇ ಟಾಂಗ್ ಕೊಡ್ತಾ, ನಾಯಕರ ಜತೆ ಲಾಬಿ ಮಾಡ್ತಾ ಅಂತಿಮ ಹಂತದ ಕಸರತ್ತು ಮಾಡ್ತಿದ್ದಾರೆ. ಅದ್ರೆ, ಹೈಕಮಾಂಡ್ ಗೆರೆ ಒಳಗೆ ನಿಂತು, ಆಕಾಂಕ್ಷಿಗಳ ಸಾಲು ನೋಡ್ತಿರೋ ಬಿಎಸ್ವೈ ಸಚಿವರ ಪದಗ್ರಹಣಕ್ಕೆ ರೆಡಿಮಾಡ್ತಿದ್ದಾರೆ.
ಬೆಳಗ್ಗೆ 10.30ಕ್ಕೆ ಸಚಿವರ ಪ್ರತಿಜ್ಞಾವಿಧಿ ಕಾರ್ಯಕ್ರಮ:
ಸರ್ಕಾರ ರಚನೆಗೆ ಕಾರಣವಾಗಿರೋ, ಮಿತ್ರಮಂಡಳಿ ಗೆಳೆಯರಿಗೆ ಮಂತ್ರಿಗಿರಿ ಕೊಡಲು ಸಿಎಂ ಮುಂದಾಗಿದ್ದಾರೆ. ಇದೇ ಗುರುವಾರ ಅಂದ್ರೆ, 6ನೇ ತಾರೀಖು ಸಂಪುಟ ವಿಸ್ತರಣೆಗೆ ಬಿಎಸ್ವೈ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಮಾತನಾಡಿದ ಸಿಎಂ, ರಾಜಭವನದಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ಸಚಿವರಿಗೆ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಲಿದೆ. ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಅನ್ನೋದು ನಾಳೆ ನಿರ್ಧಾರ ಮಾಡ್ತೀವಿ ಅಂತಂದ್ರು.
ಸೋತ ವಿಶ್ವನಾಥ್, ಎಂಟಿಬಿಗೆ ಬಿಎಸ್ವೈ ಶಾಕ್!
ಇನ್ನು, ಗೆದ್ದವ್ರಿಗೆ ಮಾತ್ರ ಮಂತ್ರಿಸ್ಥಾನ ಅಂತ ಮತ್ತೊಮ್ಮೆ ಸ್ಪಷ್ಟಪಡಿಸಿದ ಸಿಎಂ, ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ಗೆ ಶಾಕ್ ಕೊಟ್ರು. ಸುಪ್ರೀಂಕೋರ್ಟ್ ಆದೇಶದಂತೆ ಸೋತವ್ರಿಗೆ ಸಚಿವ ಸ್ಥಾನ ನೀಡಲು ಬರಲ್ಲ. ಹಾಗೆ, ಆರ್.ಶಂಕರ್ಗೆ ಭರವಸೆ ನೀಡಿದಂತೆ ಎಂಎಲ್ಸಿ ಮಾಡ್ತಿವಿ ಅಂತಂದ್ರು.
ಆರಿದ್ರಾ ನಕ್ಷತ್ರದಲ್ಲಿ ಕಾರ್ಯಕ್ರಮ:
ಜ್ಯೋತಿಷಿಗಳ ಸಲಹೆ ಪಡೆದೇ ಸಿಎಂ, ಸಚಿವರ ಪದಗ್ರಹಣಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ. ಬಿಎಸ್ವೈ ಈಶ್ವರನ ಅನುಯಾಯಿಯಾಗಿದ್ದು, ಫೆಬ್ರವರಿ ಆರರ ಆರಿದ್ರಾ ನಕ್ಷತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಇನ್ನು, ಸಂಪುಟ ವಿಸ್ತರಣೆಗೆ ಕ್ಷಣಗಣನೆ ಶುರುವಾಗ್ತಿದ್ದಂತೆ, ಶಾಸಕರ ಅಸಮಾಧಾನ ಶಮನಕ್ಕೂ ಸಿಎಂ ಮುಂದಾಗಿದ್ದಾರೆ. ಸೋತವ್ರಿಗೆ ಸಚಿವ ಸ್ಥಾನವಿಲ್ಲ ಅನ್ನೋ ಬಿಎಸ್ವೈ ನಿರ್ಧಾರ ರಮೇಶ್ ಜಾರಕಿಹೊಳಿಗೆ ಬೇಸರ ಮೂಡಿಸಿತ್ತು. ಹೀಗಾಗಿ ಇಂದು ಧವಳಗಿರಿಯ ತಮ್ಮ ನಿವಾಸಕ್ಕೆ ಸಾಹುಕಾರ್ರನ್ನ ಕರೆಸಿಕೊಂಡಿದ್ರು. ಸಿ.ಪಿ.ಯೋಗೇಶ್ವರ್ ಜತೆ ಸಿಎಂ ಮನೆಗೆ ಹಿಂಬಾಗಿಲ ಮೂಲಕ ಬಂದ ರಮೇಶ್ ಜಾರಕಿಹೊಳಿ, ಕೆಲ ಹೊತ್ತು ಚರ್ಚೆ ನಡೆಸಿದ್ರು.
ಇನ್ನು, ಮಂತ್ರಿಗಿರಿ ಸಿಗಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಮಹೇಶ್ ಕುಮಟಳ್ಳಿ ಮಾತಿನ ಧಾಟಿ ಬದಲಾಗಿದೆ. ನನಗೆ ಸಚಿವ ಸ್ಥಾನ ಕೊಡದಿದ್ರೂ, ವಿಶ್ವನಾಥ್ಗೆ ಕೊಡಬೇಕು. ಒಂದೇ ಕ್ಷೇತ್ರದಲ್ಲಿ ಇಬ್ಬರಿಗೆ ಸಚಿವ ಸ್ಥಾನ ಕೊಡಲು ಆಗದಿದ್ರೆ, ಅದನ್ನ ಚುನಾವಣೆಗೂ ಮೊದಲೇ ಹೇಳಬೇಕಿತ್ತು ಅಂತ ಕಿಡಿಕಾರಿದ್ರು. ಇನ್ನು, ಸಚಿವ ಸ್ಥಾನದ ನಿರೀಕ್ಷೆಯಲ್ಲಿರೋ ಶಾಸಕ ಸೋಮಶೇಖರ್, ಬೆಂಗಳೂರು ಅಭಿವೃದ್ಧಿ ಖಾತೆಯನ್ನೇ ಮೊದಲು ಕೇಳ್ತೀನಿ ಅಂತಂದ್ರು. ಒಟ್ನಲ್ಲಿ, ಉಳಿದಿರೋ ಮೂರು ದಿನದಲ್ಲಿ ಎಲ್ಲರ ಕೋಪವನ್ನ ಸಿಎಂ ಶಮನ ಮಾಡ್ಬೇಕಿದ್ದು, ಇದು ನಿಜಕ್ಕೂ ದೊಡ್ಡ ಸವಾಲೇ ಸರಿ.
Published On - 9:07 pm, Sun, 2 February 20