AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹಾಯ ಮಾಡೋ ನೆಪದಲ್ಲಿ ಮಂಚಕ್ಕೆ ಕರೆದ, ಮಹಿಳೆಯ ಜೀವಕ್ಕೆ ಕುತ್ತು ತಂದ ಸೋಶಿಯಲ್ ಮೀಡಿಯಾ ಫ್ರೆಂಡ್

ಸೋಶಿಯಲ್ ಮೀಡಿಯಾದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ರು ಅಂತ ಅಕ್ಸೆಪ್ಟ್​​​​​​​ ಮಾಡಿ ಚಾಟ್ ಮಾಡುವ ಹೆಣ್ಮಕ್ಳೇ ಹುಷಾರಾಗಿರಿ. ಯಾಕಂದ್ರೆ ಮಾನ ಮರ್ಯಾದೆ ಜೊತೆಗೆ ಸಂಸಾರ ಹಾಳುಮಾಡಿಕೊಂಡು ಜೀವನ ಬರ್ಬಾದ್ ಆಗುತ್ತೆ. ಕೆಲವರು ನಿಮ್ಮ ಜೊತೆ ಗೆಳೆತನ ನಾಟಕವಾಡಿ ಏನೇನೋ ಸ್ಕೆಚ್ ಹಾಕಿರುತ್ತಾರೆ. ಹೌದು...ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಆಗಿದ್ದೂ ಅದೆ.

ಸಹಾಯ ಮಾಡೋ ನೆಪದಲ್ಲಿ ಮಂಚಕ್ಕೆ ಕರೆದ, ಮಹಿಳೆಯ ಜೀವಕ್ಕೆ ಕುತ್ತು ತಂದ ಸೋಶಿಯಲ್ ಮೀಡಿಯಾ ಫ್ರೆಂಡ್
ಪರಿತೋಷ್ ಯಾದವ್
ರಮೇಶ್ ಬಿ. ಜವಳಗೇರಾ
|

Updated on:Dec 21, 2025 | 8:30 PM

Share

ಬೆಂಗಳೂರು, (ಡಿಸೆಂಬರ್ 21): ಇತ್ತೀಚೆಗೆ ಸೋಶಿಯಲ್ ಮೀಡಿಯಾ (Social Media)  ಕ್ರೇಜ್ ಜನರಲ್ಲಿ ವಿಪರೀತವಾಗಿದೆ. ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೂ ಏನೇನು ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಂಪ್ಲೀಟ್ ಅಪ್ಡೇಟ್ ಮಾಡುತ್ತಾರೆ. ಹಾಗೇ ಕೆಲವರು ಏನೇನು ಸ್ಕೆಚ್ ಹಾಕಿ ಕಂಡ ಕಂಡವರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾಗಳಿಂದಲೇ ಸಾಕಷ್ಟು ಕಷ್ಟು ನೋವು ಅನುಭವಿಸಿದ ಉದಾಹರಣೆಗಳು ಇವೆ.ಅದರಂತೆ ಸಾಮಾಜಿಕ ತಾಲಣದಲ್ಲಿ ಪರಿಚಯವಾದ ಗೆಳೆಯ, ಬೆಂಗಳೂರಿನ (Bengaluru) ಮಹಿಳೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಮಂಚಕ್ಕೆ ಕರೆದಿದ್ದಾನೆ. ಆಕೆ ನಿರಾಕರಿಸಿದ್ದಕ್ಕೆ ನಾನಾ ರೀತಿಯಾಗಿ ಬ್ಲ್ಯಾಕ್​ ಮೇಲ್ ಮಾಡಿದ್ದು, ಇದಕ್ಕೆ ಹೆದರಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸಾಲ ಕೊಟ್ಟು ಮಂಚಕ್ಕೆ ಕರೆದ ಗೆಳೆಯ

ಅಂದ್ಹಾಗೆ ಇಂತಹ ದುಸ್ಥಿತಿಗೆ ಬಂದಿದ್ದು ರಾಜಗೋಪಾಲ ನಗರ ಠಾಣೆ ವ್ಯಾಪ್ತಿಯ ಮಹಿಳೆ. ಸೋಶಿಯಲ್ ಮೀಡಿಯಾ ಮೂಲಕ ಸಂತ್ರಸ್ತೆಗೆ ಪರಿತೋಷ್ ಯಾದವ್ ಎನ್ನುವಾತ ಪರಿಚವಾಗಿದ್ದು, ಬಣ್ಣ ಬಣ್ಣದ ಮಾತುಗಳಿಂದ ಮಹಿಳೆಯನ್ನು ಕ್ಲೋಸ್ ಮಾಡಿಕೊಂಡಿದ್ದಾನೆ. ಹೀಗಾಗಿ ಮಹಿಳೆ, ಇತ್ತೀಚೆಗೆ ಗ್ಯಾಸ್ ಸಿಲಿಂಡ್ ಸ್ಫೋಟದಿಂದ ತನ್ನ ಮಗಳಿಗೆ ಗಾಯವಾಗಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ಹೀಗಾಗಿ ಪರಿತೋಷ್ ಯಾದವ್ ಚಿಕಿತ್ಸೆಗೆಂದು 30 ಸಾವಿರ ಹಣ ಸಾಲ ನೀಡಿದ್ದ. ಬಳಿಕ ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಗೆಳೆಯ, ಮಹಿಳೆಯನ್ನು ದೈಹಿಕವಾಗಿ ಸಹಕರಿಸುವಂತೆ ಮಂಚಕ್ಕೆ ಕರೆದಿದ್ದಾನೆ. ಸಾಲ ಕೊಟ್ಟ ನಂತರ ಮಹಿಳೆಗೆ ಪ್ರತಿನಿತ್ಯ ಮೆಸೇಜ್ ಮಾಡಿ ಕಿರುಕುಳ ನೀಡಿದ್ದಾನೆ. ಇದಕ್ಕೆ ಮಹಿಳೆ ಒಪ್ಪದಿದ್ದಾಗ ಅಶ್ಲೀಲ ವೀಡಿಯೊ ಕಳಿಸಿ ಫ್ಲ್ಯಾಟ್ ಗೆ ಬರುವಂತೆ ಬಲವಂತ ಮಾಡಿದ್ದಾನೆ.

ಇದನ್ನೂ ಓದಿ: ಪೂರ್ತಿ ವಿಡಿಯೋ ಬೇಕಾದ್ರೆ ಫಾಲೋ- ಲೈಕ್ ಮಾಡುವಂತೆ ಪೋಸ್ಟ್​ ಹಾಕುವವರೇ ಹುಷಾರ್

ನಾನು ಶ್ರೀಮಂತ, ಹಣವಂತ, ಒಂದೇ ಒಂದು ಸಲ ಅವಕಾಶ ಕೊಡು ನಿನ್ನ ಲೈಫ್ ಚೇಂಜ್ ಮಾಡುತ್ತೇನೆ. ನನ್ನದೇ ಕಂಪನಿಯಲ್ಲಿ ಒಂದೊಳ್ಳೆ ಕೆಲಸ ಕೊಡುತ್ತೇನೆ. ಅಂತೆಲ್ಲಾ ಬಣ್ಣ ಬಣ್ಣದ ಮೆಸೇಜ್​​ ಮೂಲಕ ಮಹಿಳೆಯನ್ನು ಮನವೊಲಿಸುವ ಕಸರತ್ತು ಮಾಡಿದ್ದಾನೆ. ಆದ್ರೆ, ಇದಕ್ಕೆ ಮಹಿಳೆ ಕರಗದಿದ್ದಕ್ಕೆ ಕೊನೆಗೆ ಅಶ್ಲೀಲ ಫೋಟೋ ವಿಡಿಯೋ ಹಾಕಿ ಬೇರೆ ಬೇರೆ ಮಾರ್ಗದಲ್ಲಿ ಬೆದರಿಕೆ ಹಾಕಿ ಆಕೆಯನ್ನು ಅನುಭವಿಸುವ ತಂತ್ರ ಮಾಡಿದ್ದಾನೆ.

ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಯತ್ನ

ಒಂದು ವೇಳೆ ಸಹಕರಿಸದಿದ್ದರೆ ಪೋರ್ನ್ ವೆಬ್ ಸೈಟ್, ಪಬ್ಲಿಕ್ ಟಾಯ್ಲೆಟ್ ನಲ್ಲಿ ವೇಶ್ಯಾವಾಟಿಕೆಗೆ ಸಂಪರ್ಕಿಸಿ ಎಂದು ನಿನ್ನ ನಂಬರ್ ಬರೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ಸಂತ್ರಸ್ತ ಮಹಿಳೆಯ ಗಂಡನಿಗೆ ತಿಳಿದು ಇಬ್ಬರ ಮದ್ಯೆ ಮನಸ್ಥಾಪ ಕೂಡ ಉಂಟಾಗಿದೆ‌. ಬಳಿಕ ಜಗಳ ಮಾಡಿಕೊಂಡು ಗಂಡನನ್ನು ತೊರೆದು ಸ್ನೇಹಿತೆಯರ ಮನೆಗೆ ಹೋಗಿದ್ದ ಸಂತ್ರಸ್ತೆ ಕೈ ಕುಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾಳೆ. ಸದ್ಯ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ರಾಜಗೋಪಾಲ ನಗರ ಠಾಣೆ ಪೊಲೀಸರು ಎಫ್​ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.

ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದರೂ ಅಂತ ಅಪರಿಚಿತರ ಜೊತೆ ಸ್ನೇಹ ಮಾಡುವ ಮುನ್ನ ಎಚ್ಚರದಿಂದ ಇರಬೇಕು. ಅದರಲ್ಲೂ ಹೆಣ್ಮಕ್ಳು ಹುಷಾರಾಗಿರಬೇಕು. ಇಲ್ಲವಾದ್ರೆ ಈ ರೀತಿ ಫಜೀತಿ ಅನುಭವಿಸಬೇಕಾಗುತ್ತದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Sun, 21 December 25